ಜಾಗೃತಿಯಿಂದ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ: ಡಾ. ರಮೀಲಾ ಶೇಖರ್

Shreya Hegde
0

 


ಮಂಗಳೂರು : ಅರಿವು ಮೂಡಿಸುವುದರಿಂದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯ ಹಾಗೂ ಜಾಗೃತಿಯು ಬದುಕಿನಲ್ಲಿ ಭರವಸೆ ಮೂಡಿಸುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞೆ ಮತ್ತು ತರಬೇತುದಾರ ಡಾ. ರಮೀಲಾ ಶೇಖರ್ ತಿಳಿಸಿದ್ದಾರೆ.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಮಾದಕದ್ರವ್ಯ ಜಾಗೃತಿ ಸಮಿತಿ, ಆಂತರಿಕ ಗುಣಮಟ್ಟ ಖಾತ್ರಿಕೋಶ, ಮನಃಶಾಂತಿ ಮಾರ್ಗದರ್ಶನ ಮತ್ತು ತರಬೇತಿ ಸಂಸ್ಥೆ ಹಾಗೂ ಮಂಗಳೂರಿನ ಸುಸೈಡ್‌ ಲೈಫ್‌ಲೈನ್‌ ಇವರ ಜಂಟಿ ಆಶ್ರಯದಲ್ಲಿ ಸಹಪಾಠಿಗಳ ನೇತೃತ್ವದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ವಿಷಯದ ಕುರಿತು ಈ ಉಪನ್ಯಾಸ ನಡೆಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಮೀಲಾ ಶೇಖರ್, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ. ಸಣ್ಣ ವಯಸ್ಸಿನ ಮಕ್ಕಳಲ್ಲೂ ಆಳವಾದ ನೋವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಲು ವಿಫಲವಾದಾಗ ಅನಾಹುತಗಳು ಸಂಭವಿಸುತ್ತವೆ. ಸಾಮಾನ್ಯವಾಗಿ ಉದ್ವೇಗ, ಒತ್ತಡ, ಮುಕ್ತ ಮಾತುಕತೆಗೆ ಅವಕಾಶವಿಲ್ಲದಿರುವುದು ಹಾಗೂ ವೈಫಲ್ಯದ ಭಯದಿಂದ ಯುವಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. 15 ರಿಂದ 20 ರ ವಯೋಮಾನದವರೇ ಹೆಚ್ಚಾಗಿ ಆತ್ಮಹತ್ಯೆಗೆ ತುತ್ತಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಮುನ್ಸೂಚನೆಗಳನ್ನು ಅರ್ಥೈಸಿಕೊಳ್ಳುವ ತಾಳ್ಮೆ ಮತ್ತು ಸಹಾನುಭೂತಿ ಅಗತ್ಯವಾಗಿದೆ. ಸಂಕಷ್ಟದಲ್ಲಿರುವವರನ್ನು ಹಾಸ್ಯ ಮಾಡದೆ ಗಂಭೀರವಾಗಿ ಪರಿಗಣಿಸಿ, ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, ಬದುಕಿನಲ್ಲಿ ಸಂತೋಷ ಅಥವಾ ದುಃಖ ಯಾವುದೂ ಶಾಶ್ವತವಲ್ಲ. ಎದುರಾಗುವ ಸವಾಲುಗಳನ್ನು ಸಂತಸದಿಂದ ಎದುರಿಸಬೇಕೇ ಹೊರತು ಆತ್ಮಹತ್ಯೆಯ ಆಲೋಚನೆ ಬಂದಾಗ ಜೀವನವನ್ನೇ ಮುಗಿಸಿಕೊಳ್ಳುವ ಹಂತಕ್ಕೆ ಹೋಗಬಾರದು. ಪ್ರತಿಯೊಬ್ಬರೂ ಸಬಲ ಹಾಗೂ ಶಾಂತಿಯುತ ಹೆಜ್ಜೆಗಳನ್ನು ಇಡಬೇಕು ಎಂದರು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಲಿಖಿತಾ ಜಿ.ಎನ್. ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top