ಬೆಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷ, ರಾಮಜನ್ಮಭೂಮಿ ಹೋರಾಟದ ನಾಯಕ ದಿವಂಗತ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವ ಉದ್ಘಾಟನಾ ಸಮಾರಂಭವು ಜಯನಗರದ ಎನ್‌ಎಂಕೆ ಆರ್‌ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಆರ್‌ಎಸ್‌ಎಸ್ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಸುಧೀರ್‌ಜಿ, "ಅಶೋಕ್ ಸಿಂಘಾಲ್ ಅವರು ತಮ್ಮ ಜೀವನಪೂರ್ತಿ ಬ್ರಹ್ಮಚಾರಿಯಾಗಿ, ಸಂನ್ಯಾಸಿಯಂತೆ ಬದುಕಿದ 'ಯೋಗಿ' ಹಾಗೂ ರಾಮಜನ್ಮಭೂಮಿ ಹೋರಾಟಕ್ಕೆ ದಿಟ್ಟ ನೇತೃತ್ವ ನೀಡಿದ ಅಪರೂಪದ 'ವೀರ ಯೋಧ'. ಪ್ರಚಂಡ ಆತ್ಮವಿಶ್ವಾಸ ಮತ್ತು ಧೈರ್ಯವೇ ಅವರ ಯಶಸ್ಸಿನ ಮೂಲ" ಎಂದು ಬಣ್ಣಿಸಿದರು.
ಸುಮಾರು 30 ವರ್ಷಗಳ ಕಾಲ ವಿಹಿಂಪ ಚುಕ್ಕಾಣಿ ಹಿಡಿದು, ಜಗತ್ತಿನ 40ಕ್ಕೂ ಹೆಚ್ಚು ದೇಶಗಳಲ್ಲಿ ಸಂಘಟನೆಯನ್ನು ವಿಸ್ತರಿಸಿದ್ದ ಸಿಂಘಾಲ್ ಅವರ ಸಂಘಟನಾತ್ಮಕ ಸಾಮರ್ಥ್ಯವನ್ನು ಸ್ಮರಿಸಿದ ಸುಧೀರ್‌ಜಿ, ಸ್ವಾತಂತ್ರ್ಯ ಹೋರಾಟದ ‘ವಂದೇ ಮಾತರಂ’ ಮಾದರಿಯಲ್ಲೇ ‘ಮಂದಿರ್ ವಹೀ ಬನಾಯೆಂಗೆ’ ಉದ್ಘೋಷವು ರಾಷ್ಟ್ರ ಜೀವನಕ್ಕೆ ದೊಡ್ಡ ತಿರುವು ನೀಡಿತು ಎಂದರು. ಯಾವುದೇ ಲಕ್ಷಣಗಳಿಲ್ಲದಿದ್ದಾಗಲೂ ಭವಿಷ್ಯದ ದೃಷ್ಟಿಯಿಂದ ಕಲ್ಲುಗಳನ್ನು ಕೆತ್ತಿಸುವ ಅವರ ಆತ್ಮವಿಶ್ವಾಸವೇ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿತು ಎಂದು ಪ್ರಾಣಪ್ರತಿಷ್ಠಾಪನೆ ವೇಳೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಸಿಂಘಾಲ್ ಅವರ ತ್ಯಾಗವನ್ನು ಸ್ಮರಿಸಿದ್ದನ್ನು ನೆನಪಿಸಿಕೊಂಡರು.
ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಯ ಹರಿಕಾರ
ಬೇಲಿಮಠ ಮಹಾ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿ, "ಹಿಂದೂ ಸಮಾಜದಲ್ಲಿನ ಮೇಲು-ಕೀಳು ಭಾವನೆ ಹಾಗೂ ಅಸ್ಪೃಶ್ಯತೆಯನ್ನು ತೊಲಗಿಸಿ, ಅಖಂಡ ಸಮಾಜವನ್ನು ಸಂಘಟಿಸುವಲ್ಲಿ ಸಿಂಘಾಲ್ ಅವರ ಕೊಡುಗೆ ಅನನ್ಯ" ಎಂದರು. 12ನೇ ಶತಮಾನದ ಬಸವಣ್ಣನವರ ತತ್ತ್ವ ಹಾಗೂ ಉಡುಪಿ ಹಿಂದೂ ಮಹಾಸಮ್ಮೇಳನದ ‘ಸಮಾನತೆ’ಯ ಧ್ವೇಯವನ್ನು ಉಲ್ಲೇಖಿಸಿದ ಅವರು, 1984ರ 'ರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ'ಯ ಜನಾಂದೋಲನ ಹಾಗೂ ಅಯೋಧ್ಯೆಯಲ್ಲಿ ದಲಿತ ಬಂಧು ಕಾಮೇಶ್ವರ್ ಚೌಪಾಲ್ ಅವರಿಂದ ಶಿಲಾನ್ಯಾಸ ಮಾಡಿಸಿದ್ದು ಸಾಮಾಜಿಕ ಸಾಮರಸ್ಯದ ದೊಡ್ಡ ಸಂದೇಶವಾಗಿತ್ತು ಎಂದರು. ಪಂಜಾಬ್‌ನಲ್ಲಿ ಉದ್ವಿಗ್ನತೆ ಉಂಟಾಗಿದ್ದಾಗ ಕೈಗೊಂಡ 'ಸದ್ಭಾವನಾ ಯಾತ್ರೆ'ಯನ್ನು ಮೆಲಕುಹಾಕಿದ ಶ್ರೀಗಳು, ಮಂದಿರ ನಿರ್ಮಾಣದ ನಂತರವೂ ಸಮಾಜ 'ರಿಲ್ಯಾಕ್ಸ್ ಮೋಡ್'ಗೆ ಜಾರದೆ ಸಾಂಸ್ಕೃತಿಕ ಮೌಲ್ಯಗಳನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, "ಕೇವಲ 'ಜೈ ಶ್ರೀರಾಮ್' ಘೋಷಣೆ ಕೂಗುವುದಷ್ಟೇ ಅಲ್ಲದೆ, ಅರ್ಧ ಶತಮಾನದ ಹಿಂದೆಯೇ ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಲು ಸಿಂಘಾಲ್ ಅವರು ಮಠಾಧೀಶರನ್ನು ಒಂದೇ ವೇದಿಕೆಗೆ ತಂದಿದ್ದರು" ಎಂದರು. 1989ರ ರಥಯಾತ್ರೆಯ ಸಂದರ್ಭದಲ್ಲಿ ಮುರುಘಾ ಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ನೀಡಿದ್ದ ಬೆಂಬಲವನ್ನು ಸ್ಮರಿಸಿದ ಅವರು, ಶೋಷಿತ ಸಮುದಾಯಗಳಲ್ಲಿ ಮತಾಂತರ ತಡೆದು ಮುಖ್ಯವಾಹಿನಿಯಲ್ಲಿ ಉಳಿಸಲು ಮಠಗಳು ಕೈಗೊಂಡಿರುವ ಶ್ರಮವನ್ನು ವಿವರಿಸಿದರು.
ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಉಪಾಧ್ಯಕ್ಷ ಶ್ರೀ ಚಂಪತ್ ರಾವ್, ಗೌಹಾಟಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಶ್ರೀಧರ್ ರಾವ್, ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.



