ಕವನ: ಕೃಷ್ಣಾರ್ಪಣ

Upayuktha
0



ವಿಷ್ಣುದೇವನು ಧರೆಗೆ ಬಂದನು 

ಕೃಷ್ಣನೆಂಬಭಿಧಾನ ಪಡೆಯುತ   

ವೃಷ್ಣಿಕುಲದಲಿ ದೇವಕೀ ವಸುದೇವ ಗರ್ಭದಲಿ |  

ಉಷ್ಣವಿಲ್ಲದ ವರ್ಷ ಋತುವಲಿ  

ಕೃಷ್ಣ ಜನನದಿ ಹರ್ಷವುಕ್ಕಿತು 

ಜಿಷ್ಣುವೆನಿಸುವ ಲೋಕಪಾಲಕ ಜಗದ ಗುರುವಂದ್ಯ || ೧ || 


ಕುಣಿದು ನಲಿಯುತ ಭಜಿಸಿರೆಲ್ಲರು 

ತೃಣವ ಪರ್ವತ ಗೈದ ಕೃಷ್ಣನ  

ಕಣದಿ ವಿಶ್ವವ ತೋರಿ ಮೆರೆದಿಹ ಪರಮ ಪಾವನನ |  

ಅಣುವ ಮಹತಿಯನೊಡನೆ ಸೇರಿಸಿ  

ಗುಣದ ರಾಶಿಯ ಜಗಕೆ ತೋರಿಸಿ 

ರಣದಿ ಜಯವನು ಧರ್ಮಪಕ್ಷದಿ ನೆಲೆಯ ಗೊಳಿಸಿದನ || ೨ ||  


ದುಷ್ಟ ಪೂತನಿ ಧೇನು ಶಕಟರ  

ಭ್ರಷ್ಟ ದಾನವ ಬಳಗವೆಲ್ಲವ 

ನಿಷ್ಠೆಯಿಂದಲಿ ವಧಿಸಿ ಗೊಲ್ಲರ ಕಾಯ್ದ ಗೋಪಸುತ |  

ಕಷ್ಟವಿಲ್ಲದೆ ಗಿರಿಯನೆತ್ತುತ  

ವೃಷ್ಟಿ ರಭಸವ ತಡೆದು ಹಸುಗಳ  

ನಷ್ಟವಾಗದ ತೆರದಿ ಸಲಹಿದ ದೇವಕೀ ಕಂದ || ೩ ||  


ಬೆಣ್ಣೆ ಮೆಲ್ಲುತ ತುಂಟ ನಗೆಯನು 

ತಿಣ್ಣನೋಟದ ಜತೆಗೆ ಹರಿಸಿದ 

ಬಣ್ಣಬಣ್ಣದ ವೇಷಭೂಷಣ ಹಾರ ಕೇಯೂರ | 

ಸಣ್ಣಬಾಲಕ ವಾಸುದೇವನು  

ಕಣ್ಣು ಮಿಟುಕಿಸಿ ಮುಗುಳು ನಗುವನು 

ಕಣ್ಣಮಣಿಯಿವ ಭಕುತಕೋಟಿಗೆ ಕರುಣೆ ವಾರಿಧಿಯು || ೪ || 


ಗೋವ ಸಲಹಿದ ಶಿಷ್ಟ ರಕ್ಷಕ 

ದೇವರಾಗುತ ಜಗವ ಪೊರೆಯುತ  

ಭಾವಿ ಪ್ರಜೆಗಳ ಬದುಕಿಗಾಸರೆಯಾಗಿ ಹರಸಿದನು |  

ಮಾವ ಕಂಸನ ಕೊಂದು ಕೆಡಹುತ  

ಭಾವ ಪಾಂಡವರನ್ನು ಸಲಹುತ 

ಕಾವ ಶ್ರೀಹರಿ ಬಾಲ ಕೃಷ್ಣನು ನಿಜಕು ಭಗವಂತ || ೫ || 


ಛಲವ ಪಿಡಿಯುತ ದನುಜ ಕುಲವನು 

ಕೆಲವೆ ಚಣದಲಿ ವಧಿಸಿ ಬಿಟ್ಟನು  

ತಲೆಯನೊತ್ತುತ ಬಲಿಯನಟ್ಟಿದ ಲೋಕ ಪಾತಾಳ | 

ತುಳಿದು ಕಾಳಿಯ ಹೊಡೆದು ಭಂಗಿಸಿ  

ಕುಲಕೆ ನಾಯಕನಾಗಿ ಮೆರೆಯುತ  

ತಿಲಕನೆನಿಸಿದ ಭಕುತ ವೃಂದಕೆ ಪೊರೆವ ಹರಿಯಾಗಿ || ೬ || 


ಗೀತೆ ಸಾರವ ಜಗಕೆ ತಿಳಿಸುತ 

ಸೋತು ಹೋಗುವ ಜನರನೆತ್ತುತ  

ಛಾತಿಯಿಂದಲಿ ಸುಜನರೆಲ್ಲರ ಮುಂದೆ ನಡೆಸುವನು | 

ಭೀತಿಯೇತಕೆ ದೇವ ಹರಸಲು  

ದಾತರನು ಬೇರೇಕೆ ಹುಡುಕುವೆ  

ಮಾತು ಮಾಣಿಕದಂತೆ ಹೊಳೆಯಲು ಭಯವು ನಮಗೇಕೆ || ೭ ||   


ಧರ್ಮ ರಕ್ಷಣೆ ಮಾಡಲೋಸುಗ 

ಕರ್ಮಯೋಗದ ಮಹಿಮೆ ಬೋಧಿಸಿ  

ನರ್ಮಕರಣದಿ ಸಾರಗುಣಗಳ ನೀಡಿ ಹರಸಿದನು |  

ಪೆರ್ಮೆಯಿಂದಲಿ ದೇವನಿತ್ತಿಹ 

ಮರ್ಮವೆಲ್ಲವ ನಮ್ಮದಾಗಿಸಿ 

ಚರ್ಮಚಕ್ಷುವ ಮುಚ್ಚಿ ಸಾಗಿರಿ ಧರ್ಮಮಾರ್ಗದಲಿ || ೮ ||  


(ಶ್ರೀ ಕೃಷ್ಣ ಜನ್ಮಾಷ್ಟಮಿಯ ಪರ್ವಕಾಲದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಆಶು ಅಷ್ಟಕ) 

- ವಿ.ಬಿ.ಕುಳಮರ್ವ, ಕುಂಬ್ಳೆ 

ಕಾಸರಗೋಡು


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top