ನಾನು ನಿನ್ನ ನೋಡುವೆ,
ನೀನು ನನ್ನ ಕಾಡುವೆ,
ಮೊರೆಯನಿಟ್ಟು ಬೇಡುವೆ,
ನೀನು ಒಲಿದು ನೀಡುವೆ
**
ಸಂಧಿಕಾಲದಲ್ಲಿ ಬಂದ ನೀನು
ನಗುತ ಲೀಲೆ ತೋರಿದೆ/
ಆರ್ತರನ್ನು ಪೊರೆದ ನೀನು, ಧೂರ್ತರನ್ನು ಮಣಿಸಿದೆ/
**
ಮಥುರೆಯಲ್ಲಿ ತೋರಿ ಮಾಯೆ, ಗೊಲ್ಲನಾಗಿ ಬಂದವ;/
ಆರ್ತ ಮೊರೆಗೆ ಕರಗಿ ನೀನು
ಕೃಷ್ಣೆಯನ್ನು ಪೊರೆದವ//
**
ಪಾಂಡು ಕುಲಕೆ ನೀನೇ ರಕ್ಷೆ,
ಕುರು ಕುಲಕ್ಕೆ ಕೊಟ್ಟೆ ಶಿಕ್ಷೆ;/
ನಿನ್ನ ಕೊಳಲಿನುಲಿಗೆ ಒಲಿದು
ಮೂಕವಾಯ್ತು ಲೋಕವು//
**
ಬಳಿಗೆ ಬಂದ ಗೋಪಿ ಕುಲಕೆ
ಸುರಿದೆ ಪ್ರೀತಿ ಒಸಗೆಯ/
ನಿನ್ನ ನೆಚ್ಚಿ ಬಂದ ಜನಕೆ ಕೊಟ್ಟೆ ಬಿಸುಪು ಬೆಸುಗೆಯ//
**
ಸಮರ ಭೂಮಿಯಲ್ಲಿ ನಿಂತು ನೀನುಸಿರಿದೆ ಗೀತೆಯ/;
ದ್ವಾಪರದಲಿ ಬಂದ ನೀನು
ಎತ್ತಿ ಹಿಡಿದೆ ನೀತಿಯ//
**
ಕತ್ತಲಲ್ಲಿ ಬಂದ ನೀನು, ವಿಶ್ವರೂಪದೊಡಲು;/
ಎಡರುತೊಡರ ಸರಿಸಿ ನಿಂತ, ಬೆರಗಿನೊಂದು ಕಡಲು//
**
ನೀನು ದೈವ, ನಾನು ಜೀವ,
ನಿನ್ನ ಧ್ಯಾನ ನಾಕವು;/
ನಿನ್ನ ಪಡೆದು ಧನ್ಯವಾಯ್ತು
ನಮ್ಮ ಮೂರು ಲೋಕವು//
********
- ಬಿ ಎಸ್ ಜಯಪ್ರಕಾಶ ನಾರಾಯಣ


