ಹುಬ್ಬಳ್ಳಿ: ನಗರದ ಚೇತನ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಚೇತನ ಕಾಲೇಜ್ ಆಫ್ ಕಾಮರ್ಸ್, ಬಿಬಿಎ ಮತ್ತು ಬಿಸಿಎ ಆವರಣದಲ್ಲಿ ಶಿಕ್ಷಕರ ದಿನಾಚರಣೆ–2026 ಅನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸೇವೆ, ಸಮರ್ಪಣಾ ಭಾವ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಮಹತ್ವದ ಪಾತ್ರವನ್ನು ಸ್ಮರಿಸಿ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು.
DKS ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಡಾ. ವಿ. ಎಂ. ಕೊರವಿ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ವಿದ್ಯಾರ್ಥಿಗಳ ಬದುಕಿಗೆ ದಿಕ್ಸೂಚಿಯಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು. ಶಿಕ್ಷಕರ ತ್ಯಾಗ, ಶ್ರಮ ಮತ್ತು ಸಮರ್ಪಣೆಯಿಂದಲೇ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರುಗಳ ಮಾರ್ಗದರ್ಶನವನ್ನು ಗೌರವಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ರಮಾ ಚಿದಾನಂದ ರೈಕರ್, ಕೃಷ್ಣಾನಂದ ನಾಯಕ್, ನಿಂಗಣ್ಣ ಕುಂಟಿ ಹಾಗೂ ಬಸವಂತಪ್ಪ ಮೊರಬ ಅವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಭಾಷಣಗಳಲ್ಲಿ ಶಿಕ್ಷಕರ ಮಹತ್ವ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಗುರುಗಳ ಪಾತ್ರ, ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಹಾಗೂ ವಿದ್ಯಾರ್ಥಿಗಳು ಶಿಸ್ತು, ಮೌಲ್ಯಗಳು ಮತ್ತು ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಳ್ಳುವ ಅಗತ್ಯ ಕುರಿತು ಮಾತನಾಡಿದರು. ಗುರು-ಶಿಷ್ಯರ ಬಾಂಧವ್ಯವನ್ನು ಗೌರವಿಸುವುದು ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ವಿದ್ಯಾರ್ಥಿಗಳ ಯಶಸ್ಸಿಗೆ ಪ್ರಮುಖ ಅಂಶ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ನಿರ್ದೇಶಕರಾದ ಡಾ. ವಿ. ಎಂ. ಕೊರವಿ, ಚೇರ್‌ಮನ್ ಜಗದೀಶ ದ್ಯಾವಪ್ಪನವರ್, ಕೆ.ಸಿ. ಪಾಂಗಿ, ಡಾ. ಎ.ಆರ್. ವಡಕಣ್ಣನವರ, ರಮಾಕಾಂತ ಕುಲಕರ್ಣಿ, ಡಾ. ಪವನ ಅಪರಂಜಿ, ಡಾ. ಭಾರತಿ ಬಡಿಗೇರ, ಪ್ರೊ. ಸ್ವಾತಿ ಕನಮಡಿ, ಸ್ವಾತಿ ಕ್ಯಾತನವರ, ವೀಣಾ ಕುಮಂಸಿ ಹಾಗೂ ಭಾಗ್ಯಶ್ರೀ ಬಳಿಗಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತೀಕ್ಷಾ ಹಾಗೂ ಪವಿತ್ರಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಅವರ ಶ್ರದ್ಧೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಯಶಸ್ಸಿಗೆ ಮೆರುಗು ನೀಡಿತು.
ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಮಾರ್ಗದರ್ಶಕರಾಗಿದ್ದು, ಅವರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.


