ನಿಮ್ಮ ಎರಡು ಕಣ್ಣುಗಳು ಇಬ್ಬರ ಬಾಳಿಗೆ ಬೆಳಕು ನೀಡಬಲ್ಲವು: ಡಾ. ಹೃಷಿಕೇಶ್ ಕುಲಕರ್ಣಿ

Upayuktha
0

 " ನೇತ್ರದಾನ ಶ್ರೇಷ್ಠ ದಾನ "



ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರೆಡ್ ಕ್ರಾಸ್ ಘಟಕ, ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಇಂದು (ಆ.28) ಕಾಲೇಜಿನ ಸಭಾಂಗಣದಲ್ಲಿ 'ನೇತ್ರದಾನದ ಪ್ರಾಮುಖ್ಯತೆ' ಕುರಿತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ಹೃಷಿಕೇಶ್ ಕುಲಕರ್ಣಿ, "ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಅವರ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಲು ಸಾಧ್ಯ. ಕಣ್ಣುಗಳ ರಚನೆ, ಕಾರ್ಯ ಹಾಗೂ ಅವುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ. ಅಪಘಾತ, ಸೋಂಕು ಹಾಗೂ ವಿಟಮಿನ್ 'ಎ' ಕೊರತೆಯಿಂದ ಕಾರ್ನಿಯಾಗೆ ಹಾನಿಯಾಗಿ ದೇಶಾದ್ಯಂತ ಸುಮಾರು 4.9 ಮಿಲಿಯನ್ ಜನರು ದೃಷ್ಟಿ ಕಳೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ನೇತ್ರಕಸಿ ಒಂದೇ ಪರಿಹಾರ" ಎಂದು ತಿಳಿಸಿದರು.


ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಡಾ. ಪ್ರಜಕ್ತ ಪವಾರ್ ಮಾತನಾಡಿ, "ಮರಣ ಹೊಂದಿದ 6 ಗಂಟೆಗಳ ಒಳಗೆ ಕಣ್ಣುಗಳನ್ನು ದಾನ ಪಡೆಯಲು ಅವಕಾಶವಿರುತ್ತದೆ. ಮರಣದ ನಂತರ ಕಣ್ಣುಗಳನ್ನು ಮಣ್ಣು ಮಾಡುವ ಬದಲು ಅಥವಾ ಸುಟ್ಟು ಹಾಳುಮಾಡುವ ಬದಲು, ಜೀವಿತಾವಧಿಯಲ್ಲೇ ನೇತ್ರದಾನದ ಪ್ರತಿಜ್ಞೆ ಮಾಡುವುದು ಅತ್ಯಂತ ಶ್ರೇಷ್ಠ. ದೇಶದಲ್ಲಿ ಸುಮಾರು 500 ಕಣ್ಣಿನ ಬ್ಯಾಂಕುಗಳಿದ್ದು, ಇವುಗಳ ಮೂಲಕ ನೇತ್ರದಾನ ಪ್ರಕ್ರಿಯೆ ಸುರಕ್ಷಿತವಾಗಿ ನಡೆಯುತ್ತದೆ" ಎಂದರು.


ಇದೇ ಸಂದರ್ಭದಲ್ಲಿ ನೇತ್ರದಾನದ ಕುರಿತಾದ ಹಲವು ಮೂಢನಂಬಿಕೆಗಳನ್ನು ವೈದ್ಯರು ನಿವಾರಿಸಿದರು. ರೂಪ ವಿಕಾರವಾಗುವುದಿಲ್ಲ: ನೇತ್ರದಾನದಿಂದ ಶರೀರಕ್ಕಾಗಲಿ ಅಥವಾ ಮುಖದ ರೂಪಕ್ಕಾಗಲಿ ಯಾವುದೇ ಹಾನಿಯಾಗುವುದಿಲ್ಲ. ಜೀವಂತ ವ್ಯಕ್ತಿಯಿಂದ ಸಾಧ್ಯವಿಲ್ಲ: ನೇತ್ರದಾನವನ್ನು ವ್ಯಕ್ತಿ ಮರಣ ಹೊಂದಿದ ನಂತರವೇ ಮಾಡಲಾಗುತ್ತದೆ ಎಂದರು.


ರಕ್ತ ಗ್ರೂಪ್/ಹೊಂದಾಣಿಕೆಯ ಅಗತ್ಯವಿಲ್ಲ: ಸೋಂಕು ರಹಿತ ಯಾವುದೇ ವ್ಯಕ್ತಿಯ ಕಾರ್ನಿಯಾವನ್ನು ಅಗತ್ಯವಿರುವ ಪೀಡಿತರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಬಹುದಾಗಿದೆ.


ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಪ್ರಶ್ನೋತ್ತರ ಕಲಾಪದ ಮೂಲಕ ತಜ್ಞ ವೈದ್ಯರಿಂದ ಪರಿಹರಿಸಿಕೊಂಡರು.


ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಶ್ರೀ ಮಂಜುನಾಥ ಸ್ವಾಮಿ, ಐ.ಕ್ಯೂ.ಎ.ಸಿ. ಯ ಡಾ. ಅರ್ಚನಾ ಹಾಗೂ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು. ಕಾಲೇಜಿನ ತೃತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಗಳು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top