ಉಡುಪಿ: ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶ್ರಾವಣ ಪೂರ್ಣಿಮಾ ಉಪಾಕರ್ಮ ಮತ್ತು ನೂತನ ಯಜ್ಞೋಪವೀತ ಧಾರಣೆ

Upayuktha
0


ಉಡುಪಿ: ಪರಾಭವ ನಾಮ ಸಂವತ್ಸರದ ಶ್ರಾವಣ ಮಾಸದ ಶುಭ ಪೌರ್ಣಮಿಯ ಪುಣ್ಯತಿಥಿಯಂದು ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಯಜುರ್ವೇದೀಯ ನೂತನ ಯಜ್ಞೋಪವೀತ ಧಾರಣಾವಿಧಿ ಮತ್ತು ಉಪಾಕರ್ಮ ಕಾರ್ಯಕ್ರಮವು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ನೆರವೇರಿತು.


ವೇದ ಶಿರೋಮಣಿ, ಋತ್ವಿಜ ಹಾಗೂ ಅರ್ಚಕರಾದ ಮನೋಹರ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ಸಂಪನ್ನಗೊಂಡವು.


ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳ ಸ್ವರೂಪವೂ, ಬ್ರಹ್ಮ-ವಿಷ್ಣು-ಮಹೇಶ್ವರರ ಸಾನಿಧ್ಯರೂಪವೂ ಆಗಿರುವ ಮೂರು ಎಳೆಗಳ ಪರಮ ಪವಿತ್ರ ಯಜ್ಞೋಪವೀತವನ್ನು ಗಾಯತ್ರಿ ಮಂತ್ರದ ಅಭಿಮಂತ್ರಣೆಯೊಂದಿಗೆ ಧರಿಸಲಾಯಿತು. ಮಂಡಲ ಮಧ್ಯದಲ್ಲಿ ದೇವ, ಋಷಿ ಹಾಗೂ ಪಿತೃಗಳನ್ನು ಆಹ್ವಾನಿಸಿ, ಆಸನಾದಿ ಪಂಚೋಪಚಾರ ಪೂಜೆಗಳನ್ನು ನೆರವೇರಿಸಲಾಯಿತು. ತದನಂತರ ಹವಿಸ್ಸು ಮತ್ತು ತರ್ಪಣಗಳನ್ನು ಅರ್ಪಿಸಿ, ಹೋಮ-ಹವನಾದಿ ಉಪಾಕರ್ಮದ ಸರ್ವ ವಿಧಿಗಳನ್ನು ನಡೆಸಲಾಯಿತು.


ಸುಮಾರು 80ಕ್ಕೂ ಹೆಚ್ಚು ವಿಪ್ರ ಬಂಧುಗಳು ಹಾಗೂ ವಟುಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದರು. ವೇದಾಧ್ಯಯನ ಮತ್ತು ದಿನನಿತ್ಯದ ಆಚರಣೆಗಳಲ್ಲಿ ತಿಳಿದೋ ತಿಳಿಯದೆಯೋ ಉಂಟಾದ ಲೋಪದೋಷಗಳ ನಿವಾರಣೆಗಾಗಿ ಅಗ್ನಿ ಮಧ್ಯದಲ್ಲಿ ಪ್ರಾರ್ಥಿಸಿ, ಶುದ್ಧೀಕರಣ ಹಾಗೂ ಪಾವಿತ್ರತೆಯ ನವೀಕರಣಕ್ಕಾಗಿ ಕರ್ಮಾನುಷ್ಠಾನಗಳನ್ನು ಗೈದರು.


ಕಾರ್ಯಕ್ರಮದ ಅಂತ್ಯದಲ್ಲಿ "ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯುಷ್ಯಂ ತೇಜಃ ಆರೋಗ್ಯಂ ದೇಹಿಮೇ ಹವ್ಯವಾಹನ ದೇಹಿಮೇ ಪುರುಷೋತ್ತಮ" ಎಂಬ ಮಂತ್ರೋಚ್ಚಾರಣೆಯೊಂದಿಗೆ ಅಗ್ನಿ ಉಪಸ್ಥಾನವನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಮಂಗಲ ಹಾಡಲಾಯಿತು.


- ರಾಜೇಶ್ ಭಟ್ ಪಣಿಯಾಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top