ಮಂಗಳೂರು: ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿನಲ್ಲಿ ಸರಸ್ವತಿ ನದಿ ತೀರದಿಂದ ಬಿಹಾರ, ಗೋವಾ ಆಗಿ ವಲಸೆ ಬಂದ ಸಾರಸ್ವತರು, ಮಹಾರಾಷ್ಟ್ರದಿಂದ ಚಿತ್ಪಾವನರು, ಮರಾಠಿಗರು, ಘಟ್ಟದ ಮೇಲಿನಿಂದ ಬಂದವರು, ಕೇರಳದಿಂದ ಬಂದ ಮಲಯಾಳಿಗಳು ಹೀಗೆ ಅನಾದಿ ಕಾಲದಿಂದ ವಿವಿಧ ಕಡೆಯಿಂದ ಇಲ್ಲಿ ವ್ಯಾಪಾರ, ವ್ಯವಹಾರಕ್ಕಾಗಿ ಬಂದು ನೆಲೆಸಿದ ಎಲ್ಲರನ್ನು ಈ ಪ್ರದೇಶ ಪ್ರೀತಿಯಿಂದ ಒಪ್ಪಿಕೊಂಡಿದೆ. ಹಾಗೆ ಬಂದವರು ಇಲ್ಲಿನ ದೈವಾರಾಧನೆ, ನಾಗಾರಾಧನೆಯನ್ನು ಅನುಸರಿಸಿ ಪುನೀತರಾಗಿದ್ದಾರೆ. ಇಲ್ಲಿನ ಜನರ ಭಾಷಾಶುದ್ಧಿಗೆ ಯಕ್ಷಗಾನದ ಕೊಡುಗೆಯೂ ಇದೆ. ಪ್ರತಿ ಐದು ಕಿಲೋ ಮೀಟರ್ ಗಳಿಗೆ ಬದಲಾಗುವ ಭಾಷಾ ವೈವಿಧ್ಯತೆಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಶ್ರೀಮಂತಗೊಂಡಿದೆ ಎಂದು ಕೃಷಿಕ, ಸಾಹಿತಿ ಪರೇಶ್ ಮಣಿಕ್ಕಾರ ತಿಳಿಸಿದರು.
ಅವರು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಇದರ ಕೆನರಾ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಕೊಡಿಯಾಲ್ ಬೈಲಿನಲ್ಲಿರುವ ಕೆನರಾ ಸಿಬಿಎಸ್ ಇ ಆವರಣದಲ್ಲಿರುವ ಕೆನರಾ ಮ್ಯೂಸಿಯಂನಲ್ಲಿ ಮಿತ್ರ ಮಂಡಳಿಯಿಂದ ಆಯೋಜಿಸಲಾದ "ನಮ್ಮ ಊರು, ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿ" ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಈ ಪ್ರದೇಶ ಪರಶುರಾಮನ ಸೃಷ್ಟಿಯಾಗಿದ್ದರೂ ಇಲ್ಲಿ ಪರಶುರಾಮನಿಗೆ ದೇವಾಲಯ ಇಲ್ಲ. ಆದರೆ ವಿಷ್ಣುವಿನ ಅವತಾರಗಳಾಗಿರುವ ಶ್ರೀರಾಮ, ಕೃಷ್ಣರಿಗೆ ದೇವಾಲಯಗಳಿವೆ. ಶೈವ ಸಂಪ್ರದಾಯ ಪಾಲಿಸುತ್ತಿದ್ದವರು ಶ್ರೀ ಕೃಷ್ಣದೇವರಾಯ ಅರಸನ ಕಾಲಾವಧಿಯಲ್ಲಿ ಇಲ್ಲಿ ವಲಸೆ ಬಂದ ಪರಿಣಾಮ ಕ್ರಮೇಣ ವೆಂಕಟರಮಣ ದೇವರ ಭಕ್ತರಾಗಿ ಅಲ್ಲಲ್ಲಿ ದೇವಾಲಯ ನಿರ್ಮಿಸಿದರು. ಇಲ್ಲಿ ಕನ್ನಡ ಭಾಷೆಗಿಂತ ತುಳು ಭಾಷೆ ಪ್ರಾಚೀನವಾದುದು ಎಂದು ಮಂಜೇಶ್ವರ ಗೋವಿಂದ ಪೈಯವರ ಸಾಹಿತ್ಯದ ಒಂದು ಗ್ರಂಥದಿಂದ ತಿಳಿಯುತ್ತದೆ. ಅಂತಹ ಶ್ರೀಮಂತ ಪರಂಪರೆಯ ಈ ನಾಡು ಎಲ್ಲರನ್ನು ಬೆಳೆಸಿದೆ ಎಂದು ಪರೇಶ್ ಮಣಿಕ್ಕಾರ ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪ್ರಮುಖರಾದ ಬಸ್ತಿ ಪುರುಷೋತ್ತಮ ಶೆಣೈ, ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ್ ಮಲ್ಯ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಮಿತ್ರ ಮಂಡಳಿಯ ಪ್ರಮುಖರಾದ ವಿಕ್ರಮ್ ರಾಜ್ ಉಪಸ್ಥಿತರಿದ್ದರು. ಶಿಕ್ಷಕ ಪ್ರದೀಪ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

