ಅದೃಶ್ಯ ಶಕ್ತಿಗಳೊಂದಿಗೆ ಮೋಹನಣ್ಣನ ಭೇಟಿಯ ಕತೆ- ಭಾಗ- 2: ಹಾಸ್ಟೆಲಲ್ಲಿ ತೆಯ್ಯಂ

Upayuktha
0


ನೋ
ಡಿ ಈ ಬೂತ ಪ್ರೇತಾದಿಗಳಿಗೆ ಚಿಕ್ಕಂದಿ‌ನಿಂದಲೇ ನನ್ನೊಡನೆ ತುಂಬಾ ಸ್ನೇಹಾಚಾರ. ಮಾವನೊಂದಿಗೆ ಗುಳಿಗನ ಸೂಟೆ ನೋಡಿದ ಕತೆ ಈಗಾಗಲೇ ತಿಳಿಸಿದ್ದೇನೆ. ಅದೇ ಪ್ರಥಮವಾಗಿ ಈ ಅದೃಶ್ಯ ಶಕ್ತಿಗಳೊಂದಿಗೆ ನನ್ನ ಮುಖಾಮುಖಿಯಾದ ಪ್ರಸಂಗ. ನನ್ನ ಅಪ್ಪ ನಂಬಿಕೆ ಬೇಕು ಮೂಢ ನಂಬಿಕೆಗಳು ಇರಬಾರದು ಎಂದು ಹೇಳುತ್ತಾ ನಮ್ಮನ್ನು ಬೆಳೆಸಿದ್ದರು. ಪ್ರತಿಯೊಂದನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡಿ ಖಚಿತ ಪಡಿಸಿಕೊಳ್ಳಬೇಕು ಎನ್ನುತ್ತಿದ್ದರು. ಅಲ್ಲದೆ ನಮ್ಮನ್ನು ಯಾರಾದರೂ ಗುಮ್ಮ, ಪ್ರೇತ, ಪಿಶಾಚಿ ಎಂದು ಹೆದರಿಸಿದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರಿಂದಲಾಗಿ ಸ್ವಾಭಾವಿಕವಾಗಿಯೇ ನಾವು ಅದೃಶ್ಯ ದುಷ್ಟಶಕ್ತಿಗಳಿಗೆ ಹೆದರುತ್ತಿರಲಿಲ್ಲ.  


ನಾನು SSLC ಆದ ಮೇಲೆ ಕೇರಳದ ಕಲ್ಲಿಕೋಟೆಯ(Kozhikode) ಸರ್ಕಾರೀ ಪಾಲಿಟೆಕ್ನಿಕ್, ವೆಸ್ಟ್ ಹಿಲ್ ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಡಿಪ್ಲೊಮ ಮಾಡಿದವ. ಈಗ ಅದು ಇಂಜಿನಿಯರಿಂಗ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿದೆ. ಅಲ್ಲಿ ಹಾಸ್ಟೆಲಲ್ಲಿ ನನ್ನ ವಾಸವಾಗಿತ್ತು. ಅಲ್ಲಿ ಎರಡು ಹಾಸ್ಟೆಲ್ ಇತ್ತು. ಒಂದು ನ್ಯೂ ಹಾಸ್ಟೆಲ್ ಅಲ್ಲಿ ಬಹುಪಾಲು ಮಾಂಸಾಹಾರಿ ಊಟ. ಸಸ್ಯಾಹಾರಿಗಳ ಸಂಖ್ಯೆ ಜಾಸ್ತಿ ಇದ್ದರೆ ಹಳೆ ಹೋಸ್ಟೆಲಿನಿಂದ ಹೊಸ ಹೋಸೈಲ್ ಗೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದರು. ಈ ಹೊಸ ಹಾಸ್ಟೆಲಿನಲ್ಲಿ ಎರಡು ಅಡುಗೆ ಮನೆ ಎರಡು ಊಟದ ಕೋಣೆ ಇತ್ತು. ಅದರಲ್ಲಿ ಒಂದು ಊಟದ ಮನೆ ಹಾಗೂ ಅಡುಗೆ ಮನೆಯನ್ನು ಸಸ್ಯಾಹಾರಿಗಳು ಜಾಸ್ತಿಯಾದ ಸಂದರ್ಭದಲ್ಲಿ ಅವರಿಗಾಗಿ ಕೊಟ್ಟು ಉಳಕೊಳ್ಳುವ ಕೋಣೆಗಳನ್ನೂ ಅಲ್ಲಿಯೇ ಕೊಡುತ್ತಿದ್ದರು. 


ಆ ಕಾಲದಲ್ಲಿ ಸಸ್ಯಾಹಾರಿ ಹಾಸ್ಟೆಲನ್ನು ಅಪೇಕ್ಷಿಸುವವರು ತುಂಬಾ ಜಾಸ್ತಿ ಇದ್ದರು. ಆದ್ದರಿಂದ ಮೊದಲ ವರ್ಷ ನನಗೆ ನ್ಯೂ ಹಾಸ್ಟೆಲ್‌ನಲ್ಲಿ ಕೋಣೆ ಸಿಕ್ಕಿತ್ತಷ್ಟೆ. ಈ ಹೊಸ ಹಾಸ್ಟೆಲ್ ನಮ್ಮ ಪಾಲಿಟೆಕ್ನಿಕ್ ನ ಕೇಂಪಸ್ ನಿಂದ ಹೊರಗೆ ಇದ್ದ ಕಾರಣ ಹಾಸ್ಟೆಲಿನಿಂದ ಅರ್ಧ ಕಿ.ಮಿ. ನಡೆಯ ಬೇಕಿತ್ತು. ಹಳೆ ಹಾಸ್ಟೆಲಲ್ಲಿ ಸಸ್ಯಾಹಾರಿ ಊಟ ಮಾತ್ರ ಇರುತ್ತಿತ್ತು. ಆದ್ದರಿಂದ ನನ್ನಂತ ಪುಳಿಚ್ಚಾರು ಭಟ್ಟರಿಗೆ ಹಳೆ ಹಾಸ್ಟೆಲ್ ಪ್ರೀತಿಯದ್ದಾಗಿತ್ತು. ಆದರೆ ಹಾಸ್ಟೆಲ್ ಕೋಣೆಗಳನ್ನು ಹಂಚುವ ಅಧಿಕಾರ "ಮೈನ್ ವಾರ್ಡನ್" ಎಂದು ಒಬ್ಬರು ಇದ್ದರು ಅವರದ್ದಾಗಿತ್ತು. ಅವರ ಬಳಿ ನಮ್ಮ ಅಪೇಕ್ಷೆಯನ್ನು ಹೇಳಬಹುದಿತ್ತು. ಆದರೆ ತೀರ್ಮಾನ ಅವರದ್ದೇ ಆಗಿರುತ್ತಿತ್ತು. 


ಮೊದಲ ವರ್ಷ ಸಂಪೂರ್ಣ ನಾನು ಹೊಸ ಹಾಸ್ಟೆಲಲ್ಲೇ ವಾಸ ಮಾಡಬೇಕಾಗಿ ಬಂದಿತ್ತು. ಎರಡನೇ ವರ್ಷ ನಮಗೆ ಆಧ್ಯತೆ ಇತ್ತು. ಆದ್ದರಿಂದ ಹಳೆಯ ಹಾಸ್ಟೆಲಲ್ಲೇ ನಮಗೆ ಕೋಣೆ ಕೊಟ್ಟಿದ್ದರು. ಹಳೆ ಹಾಸ್ಟೆಲ್ ಕ್ಯಾಂಪಸ್ ಒಳಗಡೆ ಮುಖ್ಯ ಕಟ್ಟಡಕ್ಕೆ ಹತ್ತಿರವೇ ಇದ್ದ ಕಾರಣ ಬೆಲ್ ಹೊಡೆದ ಮೇಲೆ ಕೂಡಾ ತರಗತಿಗೆ ತಲಪಲು ಸಾಧ್ಯವಾಗುತ್ತಿತ್ತು. 


ನಾವು ಕಲಿಯುವಾಗ ಪೋಲಿಟೆಕ್ನಿಕ್‌ ಅಂದರೆ ತುಂಬಾ ಜಾಸ್ತಿ ಸಮಯ ಪ್ರಾಕ್ಟಿಕಲ್ ಹಾಗೂ ಸಾಮಾನ್ಯ ತರಗತಿಗಳು ಇರುತ್ತಿದ್ದವು. ವಾರದ ಮೂರು ದಿನ ಪ್ರಾಕ್ಟಿಕಲ್ ಮತ್ತು ಡ್ರಾಯಿಂಗ್ ಕ್ಲಾಸುಗಳು; ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ವರೆಗೆ ಇರುತ್ತಿತ್ತು. ಉಳಿದ ಮೂರು ದಿನ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಥಿಯರಿ ತರಗತಿಗಳು. ವಾರಕ್ಕೆ ಒಂದೇ ದಿನ ರಜೆ ಇರುತ್ತಿತ್ತು. ಅಪರೂಪಕ್ಕೆ ಡ್ರಾಯಿಂಗ್ ಕ್ಲಾಸನ್ನು ಎಂಟು ಗಂಟೆಯಿಂದ ಎರಡು ಗಂಟೆಯ ವರೆಗೆ ಮಾಡಿ ಬಿಡುವ ಕ್ರಮವೂ ಇತ್ತು. ಮನೆಯಲ್ಲಿ ಹಾಯಾಗಿ ತಿಂದುಂಡು ತಿರುಗಾಡುತ್ತಿದ್ದ ನಾವು ಇಲ್ಲಿ ಸಂಜೆಯಾಗುತ್ತಿದ್ದಂತೆ ಸಾಕಷ್ಟು ಸುಸ್ತಾಗುತ್ತಿದ್ದೆವು. 


ಆ ಸುಸ್ತು ಕಳೆಯಲು ದಿನಾ ಸಂಜೆ ಬೀಚಿಗೆ ಹೋಗುತ್ತಿದ್ದೆವು. ನಮ್ಮ ಹಾಸ್ಟೆಲಿನಿಂದ ಬೀಚಿಗೆ ಕೇವಲ ಒಂದು ಕಿ.ಮೀ. ಇತ್ತಷ್ಟೆ. ಸಂಜೆ ಏಳು ಗಂಟೆಗೆ ಹಾಸ್ಟೆಲಲ್ಲಿ‌ ಇರಬೇಕಾದುದು ಮಾತ್ರ ಕಡ್ಡಾಯವಾಗಿತ್ತು. 7:30 ರ ಒಳಗೆ ರಾತ್ರಿಯ ಆಹಾರ ಮುಗಿಸ ಬೇಕಿತ್ತು. 7:30 ಕಳೆದು ಹೋದರೆ ಆಹಾರ ಇಲ್ಲ. ಆಗ ರಾತ್ರಿಗೆ ಚಪಾತಿ ಮತ್ತು ಅದಕ್ಕೆ ಒಂದೊಂದು ದಿನ ಒಂದೊಂದು ರೀತಿಯ ಸೈಡ್ ಡಿಶ್ ಮಾಡುತ್ತಿದ್ದರು. ಆ ಕಾಲದಲ್ಲಿ ನಾನು ಅತೀ ಪ್ರೀತಿಸುತ್ತಿದ್ದ ಆಹಾರ ಈ ರಾತ್ರಿಯ ಚಪಾತಿ + ಕೂಟು.


(ಹೊರಗೆ ಹೇಳ ಬೇಡಿ ಸ್ವಾಮಿ, ಒಂದನೇ ವರ್ಷ ಎರಡು ಚಪಾತಿ ತಿನ್ನಲು ಕಷ್ಟ ಪಡುತ್ತಿದ್ದ ನಾನು ಅವರು ಕೊಡುತ್ತಿದ್ದ ಆರರಲ್ಲಿ ನಾಲ್ಕನ್ನು ಅಪೇಕ್ಷಿತರಿಗೆ ಹಂಚುತ್ತಿದೆ. ಎರಡನೇ ವರ್ಷದ ಸುರುವಿಗೆ "ಮಾಮಿನಾಕ್ಲೆ ಪಟ್ಟಲಾ ನುಪ್ಪೊ ಅಡ್ಯಲಾ ಚಮೋ ಚಮೊ" ಎಂದು ಆರಕ್ಕೆ ಆರನ್ನೂ ಕಬಳಿಸುತ್ತಿದ್ದೆ. ವರ್ಷದ ಕೊನೆಗೆ ಈ ಸಂಖ್ಯೆ 10 ಕ್ಕೆ ಏರಿತ್ತು. ದಾನಿಗಳನ್ನು ಮೊದಲೇ ಹುಡುಕಿ ಇಡುವ ಚತುರತೆಯನ್ನೂ ಗಳಿಸಿ ಕೊಂಡಿದ್ದೆ. ಕೊನೆಯ ವರ್ಷ 12 ಚಪಾತಿ ಅದರ ಕೂಟುಗಳೊಂದಿಗೆ ಒಳಗೆ ಹೋದರೆ ಒಂದು ರೀತಿಯ ತೃಪ್ತ ಭಾವ ಬರುತ್ತಿತ್ತು. ತಿಂದುದು ಕರಗಲು ದಿನಾ ಬೆಳಗ್ಗೆ  ಸೂರ್ಯನಮಸ್ಕಾರ ಮಾಡುತ್ತಿದ್ದೆ. ಇನ್ನು ಒಂದೆರಡು ಹೆಚ್ಚು ಹೋಗುತ್ತಿತ್ತೋ ಏನೊ ಏನು ಮಾಡಲಿ ಸ್ವಾಮಿ ದಾನಿಗಳ ಸಂಖ್ಯೆ ಕಡಿಮೆ ಇತ್ತು.)


ಏಳೂವರೆಯ ನಂತರ ಓದುವ  ಸಮಯ. ಹತ್ತು ಗಂಟೆ ಆಗುವಾಗ ಮಲಗಲೇ ಬೇಕೆಂಬ ನಿಯಮ ಇದ್ದರೂ ವಾರ್ಡನ್ ಅಪರೂಪಕ್ಕೆ ಬಂದರೆ  ಓದುತ್ತಾ ಕುಳಿತಿದ್ದರೆ ನಿದ್ದೆ ಮಾಡಿ ಎಂದು ಹೇಳಿ ಹೋಗುತ್ತಿದ್ದರಷ್ಟೆ. 


ನಾನು ಈಗ ಹೇಳುತ್ತಿರುವುದು ನನ್ನ ಎರಡನೇ ವರ್ಷದಲ್ಲಿ ನಡೆದ ಘಟನೆಯನ್ನು. ಆ ವರ್ಷ ನಾನು ಹಳೇ ಹೋಸ್ಟೆಲಲ್ಲಿ ಕೋಣೆ ಪಡೆದಿದ್ದೆ ಎಂದು ಈಗಾಗಲೇ ತಿಳಿಸಿದ್ದೇನೆ. ಆ ಹಾಸ್ಟೆಲಿನ ವಿವರವನ್ನೂ ಕೇಳಿ ಮುಂದೆ ಹೋಗೋಣ.


200ಕ್ಕೂ ಜಾಸ್ತಿ ವಿದ್ಯಾರ್ಥಿಗಳು ವಾಸವಿರಲು ವ್ಯವಸ್ಥೆ ಇದ್ದ ದೊಡ್ಡ ಹಾಸ್ಟೆಲ್‌ ಆಗಿತ್ತು ಅದು. ಈ ಹೋಸ್ಟೆಲಲ್ಲಿ  "ಮೂಲೆಯ ಕೋಣೆಗಳು" ನಾಲ್ಕು ಇತ್ತು. ಈ ಮೂಲೆಯ ಕೋಣೆಗಳ  ವಿಶೇಷತೆ ಎಂದರೆ ಇದಕ್ಕೆ ಮೂರು ಕಿಟಿಕಿಗಳು ಇರುತ್ತಿತ್ತು. ಹಾಸ್ಟೆಲಲ್ಲಿ ಎಲ್ಲಾ ಕೋಣೆಗಳೂ ಮೂರು ಜನರ ವಾಸಕ್ಕಾಗಿಯೇ ಇದ್ಧುದಾಗಿತ್ತು. ಈ ಮೂಲೆಯ ಕೋಣೆ ಬಿಟ್ಟರೆ ಉಳಿದವುಗಳಿಗೆ ಎರಡೇ ಕಿಟಿಕಿ. ಅದರಲ್ಲಿಯೂ ಒಂದು ಕಿಟಿಕಿ ವರಾಂಡದ ಬದಿಗೆ. ಜನಗಳು ನಡೆದಾಡುವ ವರಾಂಡ ಅದು. ಅದೇ ಮೂಲೆಯ ಕೋಣೆಯಲ್ಲಿ ಎರಡೂ ಕಿಟಿಕಿ ಹೊರ ಭಾಗಕ್ಕೆ ತೆರೆದಿದ್ದರೆ ಮೂರನೇ ಕಿಟಿಕಿ ವರಾಂಡಕ್ಕೆ ತೆರೆದಿದ್ದರೂ ಅಲ್ಲಿ ಯಾರೂ ಓಡಾಡುತ್ತಿರಲಿಲ್ಲ. ಆದ್ದರಿಂದ ಈ ಮೂಲೆ ಕೋಣೆಗಳನ್ನೇ ಎಲ್ಲರೂ ಕೇಳುತ್ತಿದ್ದರು. ಕಾಲೇಜ್ ಸುರುವಾಗುವುದಕ್ಕೆ ಮೂರು ದಿನ ಮೊದಲೇ ಹಾಸ್ಟೆಲಿಗೆ ಬರಬಹುದಿತ್ತು. ಆದರೆ ಆಹಾರದ ವ್ಯವಸ್ಥೆ ಒಂದು ದಿನ ಮೊದಲಷ್ಟೇ ಮಾಡುತ್ತಿದ್ದರು. ಈ ಕೋಣೆ ಪಡೆಯುವ ಆಶೆಗಾಗಿ ಮೂರು ದಿನ ಮೊದಲೇ  ಬರುವವರು ಇದ್ದರು. ಹೆಚ್ಚಾಗಿ ಮೊದಲು ಬಂದವರಿಗೆ ಅವರ ಅವಶ್ಯದ ಕೋಣೆ ಸಿಗುತ್ತಿತ್ತು. ಅದೂ ಅಲ್ಲದೆ ಗುಂಪಾಗಿ ಕೇಳಿದರೆ ಒಂದೇ ತರಗತಿಯವರಾಗಿದ್ದರೆ ಅವರಿಗೆ ಮೊದಲ ಆಯ್ಕೆಯೂ ಇತ್ತು. ಆದರೆ ಮುಖ್ಯವಾರ್ಡನ್ ಅವರದ್ದೇ ಅಂತಿಮ ತೀರ್ಮಾನವಾಗಿತ್ತು. 


ಎರಡನೇ ವರ್ಷ ನಾನು ಕಾಲೇಜ್ ಸುರುವಾಗುವ ಹಿಂದಿನ ದಿನವಷ್ಟೇ ತಲಪಿದ್ದೆ. ಆಶ್ಚರ್ಯ ಎಂಬಂತೆ ಮೂಲೆಯ ಕೋಣೆಯಲ್ಲೂ ಅತೀ ಉತ್ತಮ ಅನ್ನಿಸಿದ ಕೋಣೆ ನಂಬರ್ 34 ಖಾಲಿಯಾಗಿತ್ತು. ನಾನು ವಳಕ್ಕುಂಜ ವೆಂಕಟ್ರಮಣ ಭಟ್ಟರು, ಕಬೆಕ್ಕೋಡು ನಾರಾಯಣ ಭಟ್ಟರು ಗುಂಪಾಗಿ 34 ನೇ ಸಂಖ್ಯೆಯ ಕೋಣೆಯನ್ನು ಕೇಳಿದೆವು. ಅಲ್ಲಿರುವ ಗುಮಾಸ್ತರು ನಮ್ಮನ್ನು ನೋಡಿ ಪುನ: ಆಲೋಚನೆ ಮಾಡಿ‌ ಒಮ್ಮೆ ಕೊಟ್ಟಮೇಲೆ ಕೋಣೆಯನ್ನು ಯಾವ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದಿದ್ದರು. ಅಯ್ಯೊ! ಅದನ್ನು ಬದಲಾಯಿಸಿ ಎಂದು ಕೇಳುವ ಸಂದರ್ಭವೇ ಬರಲಾರದು ಎಂದು ನಾವು ಮೂವರೂ ಒಕ್ಕೊರಲಿನಿಂದ ಹೇಳಿದ್ದೆವು. ನಮ್ಮಲ್ಲಿ ವೆಂಕಟ್ರಮಣ ಭಟ್ಟರು ಮೆಕೇನಿಕಲ್ ಇಂಜಿನಿಯರಿಂಗ್ ಆದರೆ ನಾವಿಬ್ಬರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿಯುವವರಾಗಿದ್ದೆವು.


ಒಂದು ವಾರ ತುಂಬಾ ಚೆನ್ನಾಗಿಯೇ ನಡೆಯಿತು. ಒಂದು ವಾರ ಕಳೆದು ಸಂಜೆ ನಾವು ಬೀಚಿಗೆ ಹೋಗುವಾಗ ವೆಂಕಟ್ರಮಣ ಭಟ್ಟರು ನಾವು ಇರುವ ಕೋಣೆ ಯಾಕೆ ಖಾಲಿ ಉಳಿದಿತ್ತು ಗೊತ್ತಾ? ಎಂದು ಕೇಳಿದರು. ನಮಗೆ ಗೊತ್ತಿರಲಿಲ್ಲ ಆದ್ದರಿಂದ ಏನು? ಎಂಬಂತೆ ಅವರ ಮುಖ ನೋಡಿದೆವು. ವೆಂಕಟ್ರಮಣ ಭಟ್ಟರು ಕಳೆದ ವರ್ಷ ಆ ರೂಮಿನಲ್ಲಿ ಒಬ್ಬ ಮೆಕೇನಿಕಲ್ ಇಂಜಿನಿಯರಿಂಗ್ ಕೊನೆಯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಆದ್ದರಿಂದ ಕಳೆದ ವರ್ಷ ಆ ಪ್ರಕರಣದ ನಂತರ ಆ ಕೋಣೆಯನ್ನು ಖಾಲಿ ಬಿಟ್ಟಿದ್ದರಂತೆ ಎಂದರು. ಈ ವರ್ಷ ಆ ಕಾರಣಕ್ಕೇ ಯಾರೂ ಆ ಕೋಣೆಯನ್ನು ಪಡೆದುಕೊಳ್ಳಲಿಲ್ಲವಂತೆ ಎಂದರು. ವಾವ್! ಲಕ್ ಅಂದರೆ  ಇದು. ಇಷ್ಟು ಒಳ್ಳೆ ಕೋಣೆ ಆ ಕಾರಣದಿಂದಲಾದರೂ ನಮಗೆ ಅನಾಯಾಸವಾಗಿ ಸಿಕ್ಕಿತಲ್ಲ ಎಂದಿದ್ದೆ ನಾನು. ಆದರೆ ವೆಂಕಟ್ರಮಣ ಭಟ್ಟರು ನಾವು ವಾರ್ಡನ್ ಅವರ ಬಳಿ ಕೇಳಿ ಕೋಣೆ ಬದಲಾಯಿಸುವನಾ? ಎಂದು ಕೇಳಿದರು. ಆದರೆ ನಾನೂ ನಾರಾಯಣ ಭಟ್ಟರೂ ಅಷ್ಟು ಒಳ್ಳೆ ಕೋಣೆ ಬಿಡಲು ತಯಾರಿರಲಿಲ್ಲ. ಆದ್ದರಿಂದ ನಿಮಗೆ ಹೆದರಿಕೆ ಆಗುವುದಿದ್ದರೆ ನಿಮ್ಮ ಬದಲು ಬೇರೆಯವರನ್ನು ತೆಗೆದುಕೊಳ್ಳುತ್ತೇವೆ ಎಂದೆವು. ಅದೆಲ್ಲಾ ಬೇಡ ನೀವು ಇರುವಲ್ಲೇ ನಾನು ಎಂದರು ಅವರು.


ಆದರೆ ಆ ರಾತ್ರಿಯ ನಂತರ ಉಳಿದಿಬ್ಬರೂ ಕಿಟಿಕಿಯ ಬಾಗಿಲು ಹಾಕಿ ಮಲಗುತ್ತಿದ್ದರು. ನಾನು ಮಾತ್ರ ಕಿಟಿಕಿ‌ ತೆರೆದಿಟ್ಟು ಮೊದಲಿನಂತೆಯೇ ಕಿಟಿಕಿಯ ಬದಿಗೇ ತಲೆ ಇಟ್ಟು ಮಲಗುತ್ತಿದ್ದೆ.

 

ನಮ್ಮ ಹಾಸ್ಟೆಲಿನ ಮೇಲೆ ಒಂದು ಚಿಕ್ಕ ಟೆರೇಸ್ ಇತ್ತು ಅದಕ್ಕೆ ಹೋಗಲು ಒಂದೇ ದಾರಿ ಹಾಗೂ ಬಾಗಿಲು ಇತ್ತು. (ಅದು‌ ಮಂಗಳೂರು ಹಂಚು ಹೊದ್ದ ಮಾಡಾಗಿದ್ದರೂ ಸ್ವಲ್ಪ ಸ್ಥಳ ಕಾಂಕ್ರೀಟ್ ಮಾಡು ಇತ್ತು.) ಟೆರೇಸಿನಲ್ಲಿ‌ ಒಂದೇ ಒಂದು ಲೈಟು ಮಾತ್ರ ಇತ್ತು. ರಾತ್ರಿ ಹತ್ತು ಗಂಟೆಯ  ಮೇಲೆ ನಿದ್ರೆ ಮಾಡುವ ಸಮಯವಾಗಿದ್ದರೂ ಪರಿಕ್ಷಾ ಸಮಯ ಅಥವಾ ಜಾಸ್ತಿ ಓದಬೇಕಾದ ಸಂದರ್ಭಗಳಲ್ಲಿ ಕೆಲವರು ಟೆರೇಸಲ್ಲಿ‌ ಕುಳಿತು ಓದುತ್ತಿದ್ದರು. ತುಂಬಾ ಸೆಖೆ ಇದ್ದರೆ ನಾನೂ ಟೆರೇಸಲ್ಲಿ ಕುಳಿತು ಓದುತ್ತಿದ್ದೆ. ಆಗ ನಮಗೆ ಹಾಸ್ಟೆಲಲ್ಲಿ ಫೇನ್ ಇರಲಿಲ್ಲ. 


ನಮ್ಮ ರೂಮಿನ ಎದುರು ಬದಿಯ ಮೂರನೇ ಕೋಣೆಯಲ್ಲಿ  ವಿಜಯನ್ ಎಂಬ ಪಯ್ಯನ್ನೂರಿನ ಹುಡುಗ; ಮೆಕೇನಿಕಲ್ ಇಂಜಿನಿಯರಿಂಗ್ ಕಲಿಯುವವ ಇದ್ದ. NCC ಯಲ್ಲಿ ನಿಷ್ಟೆಯಿಂದ ಹಾಗೂ ತುಂಬಾ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಕಪ್ಪು ಆಜಾನು ಬಾಹು, ದೃಢಕಾಯದ ವ್ಯಕ್ತಿ 6 ಅಡಿಗಿಂತಲೂ ಜಾಸ್ತಿ ಎತ್ತರ ಇದ್ದ. ಆದರೆ ತುಂಬಾ ಮುಗ್ಧ. ಎಲ್ಲರನ್ನೂ ಪ್ರೀತಿಯಿಂದಲೇ ಮಾತನಾಡಿಸುವವ. ಅವನು  ಮುಂದೆ ಡೆಲ್ಲಿಯಲ್ಲಿ ರಿಪಬ್ಲಿಕ್ ಡೇ ಪೆರೇಡಲ್ಲೂ ಭಾಗವಹಿಸಿದ್ದ.


ಪಾಠ ಮತ್ತು NCC ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ ಅವನಿಗೆ. ಸಾಮಾನ್ಯ ಜ್ಞಾನವಂತೂ ತುಂಬಾ ಕಡಿಮೆ ಇತ್ತು. ನಾವು  ಕನ್ನಡಿಗರು ಅಂದರೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದ. ಅಲ್ಲೇ ಬದಿಯ ಕೋಣೆಯಲ್ಲಿ ಅರೆಯನಡ್ಕ ಶಂಕರ ನಾರಾಯಣ ಭಟ್ಟರು, ಪೈವಳಿಕೆಯ ಇಸ್ಮಾಯಿಲ್ ಹಾಗೂ ಮತ್ತೊಬ್ಬರು ಇದ್ದರು. ಅವರ ಹೆಸರು ನೆನಪು ಬರುತ್ತಿಲ್ಲ. ಎಲ್ಲಾ ಕನ್ನಡಿಗರೆ. ಇಸ್ಮಾಯಿಲ್ ಕೂಡಾ ಕನ್ನಡದಲ್ಲೇ ಕಲಿತವ ಮಾತ್ರವಲ್ಲ ಮಾಂಸಾಹಾರ ಕೂಡಾ ಸೇವಿಸುತ್ತಿರಲಿಲ್ಲ. ಶಂಕರ ನಾರಾಯಣ ಭಟ್ಟರು ಇಲ್ಲಿ FB ಯಲ್ಲಿ ನನ್ನ ಸ್ನೇಹಿತರಾಗಿ ಈಗಲೂ ಇದ್ದಾರೆ. ನಾರಾಯಣ ಭಟ್ಟರು ಮತ್ತು ಇಸ್ಮಾಯಿಲ್ ಇಬ್ಬರೂ ಈಗ ಈ ಲೋಕದಲ್ಲಿಯೇ ಇಲ್ಲ. ವೆಂಕಟ್ರಮಣ ಭಟ್ಟರ ಸಂಪರ್ಕ ಇಲ್ಲದೆ ಈಗ ತುಂಬಾ ಸಮಯವೇ ಆಗಿ ಹೋಗಿದೆ. ಈಗಾಗಲೇ ಹೇಳಿದಂತೆ ನಾನು ಮೊದಲಿನಿಂದಲೂ ಸ್ವಲ್ಪ ವಾಚಾಳಿ ಒಟ್ಟಿಗೆ ಸ್ವಲ್ಪ ಹುಂಬತನದ ಧೈರ್ಯವೂ ಇತ್ತು. 


ಮಲೆಯಾಳ ಬಾರದ ಕಾರಣ ಕಾಸರಗೋಡು ಭಾಗದವರೊಂದಿಗೇ ಜಾಸ್ತಿ ಸಂಪರ್ಕ ಇಟ್ಟುಕೊಂಡಿದ್ದೆ. ಆದರೆ ಪಯ್ಯನ್ನೂರಿನ ಗೋಪಾಲ ಎಂಬವ ಹಾಗೂ ಈ ವಿಜಯನ್ ನನ್ನ ಸ್ನೇಹಿತರಾಗಿದ್ದರು. ಈ ಗೋಪಾಲನ್ ಗೆ ಕನ್ನಡ ಬಾರದಿದ್ದರೂ ತುಳು ಚೆನ್ನಾಗಿ‌ ಮಾತನಾಡುತ್ತಿದ್ದ. ಅವನ ಮಾವ ಮಂಗಳೂರಲ್ಲಿ‌ ಕೆಲಸದಲ್ಲಿ ಇದ್ದುದರಿಂದ ಇವ ರಜೆ ಸಿಕ್ಕಿದಾಗೆಲ್ಲಾ ಅಲ್ಲಿ‌ ಹೋಗಿ‌ ಉಳಿದು ಕೊಳ್ಳುತ್ತಿದ್ದ. ಇದರಿಂದಲಾಗಿ ತುಳು ಚೆನ್ನಾಗಿ‌ ಮಾತನಾಡಲು ಕಲಿತಿದ್ದ.


ಆ ವರ್ಷ ಡಿಸೆಂಬರಿನಲ್ಲಿ ಕ್ರಿಸ್ಮಸ್ ಗೆ ಮೊದಲೇ ಪರೀಕ್ಷೆಗಳಿತ್ತು. ನಾವೆಲ್ಲಾ ರಾತ್ರೆ 11 ರಿಂದ 12 ರ ವರೆಗೂ ಓದುತ್ತಿದ್ದೆವು. ಪರೀಕ್ಷೆಗೆ ಮೂರು ನಾಲ್ಕು ದಿನ ಇದ್ದಿರಬಹುದು. ರಾತ್ರಿ ಹೆಚ್ಚು ಕಡಮೆ ಎರಡು ಗಂಟೆಗೆ ಟೆರೇಸ್ ನಿಂದ ವಿಕಾರವಾದ ಸ್ವರ ಕೇಳಲು ಸುರುವಾಯಿತು. ಅದು ಮತ್ತೆ ಮತ್ತೆ ಬರುತ್ತಾನೇ ಇತ್ತು. ನಾನು ಆಗ ತಾನೇ ಮಲಗಿದ್ದೆ. ನಾನು ಹೊರಗೆ ಹೋಗಲು ಹೊರಟರೆ ವೆಂಕಟ್ರಮಣ ಭಟ್ರು ಬೇಡ ಹೋಗಬೇಡ  ಯಾವುದೋ ಪಿಶಾಚಿ‌ ಇರಬಹುದು ಅಂದರು.‌ ವಿಷಯ ಏನು ಎಂದಾದರೂ ನೋಡೋಣ ಎಂದು ಹೊರಟಿದ್ದೆ. ಅಷ್ಟರಲ್ಲೇ  ಗೋಪಾಲ ಮತ್ತೊಬ್ಬ ಸಂಜೀವ, ವೇಣುಗೋಪಾಲ್ (ಇವರು ಹೋಸ್ಟೆಲ್ ಲೀಡರ್ ಆಗಿದ್ದರು) ಎಂಬವರೆಲ್ಲಾ ಎದ್ದು ಓಡಿ ಬಂದರು. ನಾವೆಲ್ಲಾ ಒಟ್ಟು ಟೆರೇಸಿಗೆ  ಓಡಿದೆವು. ಸ್ವಿಚ್ ಹಾಕಿ ನೋಡಿದರೆ ಲೈಟ್ ಉರಿಯುತ್ತಿಲ್ಲ. ಅಷ್ಟರಲ್ಲಿ ಯಾರೋ ಕೇಂಡಲ್ ತೆಕ್ಕೊಂಡು ಬಂದರು. ಇನ್ಯಾರೋ ಟೋರ್ಚ್ ತರಲು ಓಡಿದರು. ಮೇಲೆ ಹೋದಂತೆ ಚೀರಾಟ ಜೋರಾಗಿ ಕೇಳುತ್ತಿತ್ತು.


ನಾವೆಲ್ಲಾ ಹೋಗಿ ನೋಡಿದರೆ  ಟೆರೇಸಿನ ಬದಿಗೆ ಕಟ್ಟಿದ ತಡೆ ಗೋಡೆಯ ಮೇಲೆ ಈ ವಿಜಯನ್ ಮಲಗಿದ್ದ ಅರ್ಧ ಶರೀರ ಕೆಳಗೆ ಜೋತಾಡುತ್ತಿದ್ದರೆ ಒಂದು ಕೈಯಲ್ಲಿ ಗೋಡೆ ಹಿಡಿದು ಕೊಂಡು ಚೀರಾಡುತ್ತಿದ್ದ. ಎಲ್ಲರೂ ಸೇರಿ ಅವನನ್ನು ಹೇಗೋ ಹಿಡಿದೆತ್ತಿ ಮೇಲೆ ತರುವಾಗ ಅವನಿಗೆ ಸ್ಮೃತಿ ತಪ್ಪಿತ್ತು. ಎಲ್ಲರೂ ಸೇರಿ ಮುಖಕ್ಕೆ ನೀರುಹಾಕುವುದು ನಮಗೆ ತಿಳಿದ ಇತರ ಉಪಚಾರಗಳನ್ನು ಮಾಡುತ್ತಿದ್ದಂತೆ ಮೆಲ್ಲನೆ ಕಣ್ಣು ಬಿಟ್ಟಿದ್ದ. ಕಣ್ಣು ಬಿಟ್ಟವನೇ ತೆಯ್ಯಂ- ತೆಯ್ಯಂ- ಪಿಶಾಚಂ- ಪಿಶಾಚಂ (ಭೂತ ಭೂತ ಪಿಶಾಚಿ ಪಿಶಾಚಿ) ಎಂದು ಬೊಬ್ಬೆ ಹೊಡೆಯಲು ಸುರು ಮಾಡಿದ. ಮೈಯೆಲ್ಲಾ ಬೆವರುತ್ತಿತ್ತು, ಒಂದಿಗೆ ಗಡ ಗಡ ಎಂದು ಚಳಿ ಜ್ವರ ಬಂದವರಂತೆ ಸಂಪೂರ್ಣ ಶರೀರ  ನಡುಗುತ್ತಿತ್ತು. ನಾವೆಲ್ಲಾ ಧೈರ್ಯ ಹೇಳುತ್ತಾ ಇದ್ದೆವು. ತುಂಬಾ ಹೊತ್ತಾದ ಮೇಲೆ ಸ್ವಲ್ಪ ನೀರು ಕುಡಿದು ಮಾತನಾಡ ತೊಡಗಿದ.


ಅವನು ಏನು‌ ಮಾತನಾಡಿದ? ಅವನು ಅಲ್ಲಿಗೆ ಹೇಗೆ ತಲಪಿದ ಎಂದು ತಿಳಿಯ ಬೇಕಿದ್ದರೆ ಭಾಗ- 3 ನ್ನು ಓದಲೇ ಬೇಕು.


- ಎಡನಾಡು ಕೃಷ್ಣ ಮೋಹನ ಭಟ್ಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top