ತೊಕ್ಕೊಟ್ಟು ರೈಲ್ವೆ ನಿಲ್ದಾಣ ಮರುಆರಂಭ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಕೂಗು: ರೈಲ್ವೆ ಸಚಿವಾಲಯಕ್ಕೆ ಸ್ಥಳೀಯರ ಮನವಿ

Upayuktha
0


ಮಂಗಳೂರು: ಮಂಗಳೂರು ರೈಲ್ವೆ ವಲಯವನ್ನು ಕೊನೆಗೂ ನೈಋತ್ಯ ರೈಲ್ವೆಯ (SWR) ಸುಪರ್ದಿಗೆ ಒಪ್ಪಿಸಲು ರೈಲ್ವೆ ಮಂಡಳಿ ಹಸನ್ಮುಖಿ ತೀರ್ಮಾನ ತಳೆದ ಬೆನ್ನಲ್ಲೇ, ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರ ತೊಕ್ಕೊಟ್ಟು ಮತ್ತು ಉಳ್ಳಾಲ ಭಾಗದ ನಿವಾಸಿಗಳಲ್ಲಿ ಹೊಸ ಆಸೆ ಚಿಗುರೊಡೆದಿದೆ. ದಶಕದಿಂದ ನೆನಗುದಿಗೆ ಬಿದ್ದಿರುವ ತೊಕ್ಕೊಟ್ಟು ರೈಲ್ವೆ ನಿಲ್ದಾಣ ಪುನರಾರಂಭ ಹಾಗೂ ನಿತ್ಯ ಜೀವ ಕೈಯಲ್ಲಿ ಹಿಡಿದು ಹಳಿ ದಾಟುವ ಸಾರ್ವಜನಿಕರಿಗೆ ‘ಪಾದಚಾರಿ ಮೇಲ್ಸೇತುವೆ’ (FOB) ಭಾಗ್ಯ ಕಲ್ಪಿಸಬೇಕೆಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ.


65 ವರ್ಷಗಳ ಇತಿಹಾಸವನ್ನೇ ಅಳಿಸಿ ಹಾಕಿದ ಪಾಲಕ್ಕಾಡ್ ವಿಭಾಗ:

ಅಂದಹಾಗೆ, ತೊಕ್ಕೊಟ್ಟು ರೈಲ್ವೆ ನಿಲ್ದಾಣವೇನೂ ಹೊಸತಲ್ಲ. ಸತತ 65 ವರ್ಷಗಳ ಕಾಲ ಚೆರುವತ್ತೂರು-ಮಂಗಳೂರು ನಡುವೆ ಸಂಚರಿಸುತ್ತಿದ್ದ ಸಾಲು ಸಾಲು ಪ್ಯಾಸೆಂಜರ್ ರೈಲುಗಳಿಗೆ ಇದು ಪ್ರಮುಖ ತಾಣವಾಗಿತ್ತು. ಬಡ, ಮಧ್ಯಮ ವರ್ಗದ ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಇದು ಅತ್ಯಂತ ಅಗ್ಗದ ಪ್ರಯಾಣದ ದಾರಿಯಾಗಿತ್ತು.


ಆದರೆ, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಲ್ಲಿದ್ದ ರೈಲುಗಳ ನಿಲುಗಡೆಯನ್ನು ಒಂದೊಂದಾಗಿ ಕಡಿತಗೊಳಿಸಲಾಯಿತು. ಅಂತಿಮವಾಗಿ ಸುಮಾರು 10 ವರ್ಷಗಳ ಹಿಂದೆ ಈ ನಿಲ್ದಾಣಕ್ಕೇ ಬೀಗ ಜಡಿದು, ಇತಿಹಾಸದ ಪುಟ ಸೇರಿಸಲಾಯಿತು. ಈ ಕುರಿತು ಆಕ್ರೋಶ ಹೊರಹಾಕಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಕುಮಾರ್ ಉಳ್ಳಾಲ, "ಸ್ಥಳೀಯರ ಹೊಟ್ಟೆಗೆ ಹೊಡೆದ ಪಾಲಕ್ಕಾಡ್ ವಿಭಾಗದ ಕ್ರಮ ಖಂಡನೀಯ. ಈಗ ನೈಋತ್ಯ ರೈಲ್ವೆಗೆ ವಲಯ ಹಸ್ತಾಂತರವಾಗಿರುವುದರಿಂದ ಕೇಂದ್ರ ರೈಲ್ವೆ ಸಚಿವಾಲಯ ತಕ್ಷಣವೇ ಈ ನಿಲ್ದಾಣಕ್ಕೆ ಮರುಜೀವ ನೀಡಬೇಕು" ಎಂದು ಆಗ್ರಹಿಸಿದ್ದಾರೆ.


ಹಳಿ ದಾಟಲು ನಿತ್ಯ ಜೀವಭಯ: ಒಳಪೇಟೆ ಸಂಪರ್ಕಕ್ಕೆ ಬೇಕಿದೆ ಮೇಲ್ಸೇತುವೆ

ಇನ್ನೊಂದೆಡೆ, ಉಳ್ಳಾಲದ ಶತಮಾನಗಳ ಇತಿಹಾಸವಿರುವ 'ಒಳಪೇಟೆ'ಗೆ ಸಂಪರ್ಕ ಕಲ್ಪಿಸಲು ಸರಿಯಾದ ದಾರಿಯಿಲ್ಲದೆ ನಿತ್ಯ ಸಾವಿರಾರು ಸಾರ್ವಜನಿಕರು, ಶಾಲಾ ಮಕ್ಕಳು ರೈಲ್ವೆ ಹಳಿಗಳ ಮೇಲೆಯೇ ಅಪಾಯಕಾರಿಯಾಗಿ ನಡೆದಾಡುವ ಸ್ಥಿತಿ ಇದೆ.


"ಕಾನೂನು ಪ್ರಕಾರ ಹಳಿ ದಾಟುವುದು ಅಪರಾಧವೆಂದು ಗೊತ್ತಿದ್ದರೂ ಬೇರೆ ಮಾರ್ಗವಿಲ್ಲದೆ ಜನ ಅನಿವಾರ್ಯವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕೂಡಲೇ ರೈಲ್ವೆ ಇಲಾಖೆ ಇಲ್ಲೊಂದು ಪಾದಚಾರಿ ಮೇಲ್ಸೇತುವೆ (FOB) ಅಥವಾ ರಸ್ತೆ ಕೆಳಸೇತುವೆ (RUB) ನಿರ್ಮಿಸಿ ಸಾರ್ವಜನಿಕರ ಜೀವ ರಕ್ಷಿಸಬೇಕು" ಎಂಬುದು ಸ್ಥಳೀಯ ನಿವಾಸಿಗಳ ಒಕ್ಕೊರಲ ಒತ್ತಾಯ.


ರೈಲ್ವೆ ಅಭಿವೃದ್ಧಿಗೆ ಇಲ್ಲಿದೆ ಸುವರ್ಣ ಅವಕಾಶ:

ಸ್ಥಳಾವಕಾಶದ ಲಭ್ಯತೆ: ತೊಕ್ಕೊಟ್ಟು ನಿಲ್ದಾಣದ ಎರಡೂ ಬದಿಗಳಲ್ಲಿ ರೈಲ್ವೆ ಇಲಾಖೆಗೆ ಸೇರಿದ ಯಥೇಚ್ಛ ಜಾಗವಿದ್ದು, ಮೂಲಸೌಕರ್ಯ ವೃದ್ಧಿಗೆ ಜಾಗದ ಅಭಾವವಿಲ್ಲ.


ಡೆಮು (DEMU) ರೈಲು ಸೇವೆ: ನಿಲ್ದಾಣ ಅಭಿವೃದ್ಧಿಗೊಂಡರೆ ಮುಂದಿನ ದಿನಗಳಲ್ಲಿ ಕುಂದಾಪುರದಿಂದ ಉಳ್ಳಾಲದವರೆಗೆ ತಡೆರಹಿತ ಡೆಮು ರೈಲು ಓಡಿಸಲು ಹಾದಿ ಸುಗಮವಾಗಲಿದೆ.


ಮೂರು ಹಳಿಗಳ ಬಲ: ನೇತ್ರಾವತಿಯಿಂದ ತೊಕ್ಕೊಟ್ಟು ನಡುವೆ ಈಗಾಗಲೇ ಮೂರು ರೈಲು ಹಳಿಗಳಿದ್ದು, ಕ್ರಾಸಿಂಗ್ ಸೌಲಭ್ಯಕ್ಕೆ ಪೂರಕ ವಾತಾವರಣವಿದೆ.


ಧಾರ್ಮಿಕ ಪ್ರವಾಸೋದ್ಯಮಕ್ಕೆ ಆಸರೆ: ಈ ನಿಲ್ದಾಣ ಪುನರಾರಂಭಗೊಂಡರೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಉಳ್ಳಾಲ ಶ್ರೀ ಭಗವತಿ ಕ್ಷೇತ್ರ, ವಿಶ್ವಪ್ರಸಿದ್ಧ ಉಳ್ಳಾಲ ದರ್ಗಾ ಹಾಗೂ ಸೈಂಟ್ ಸೆಬಾಸ್ಟಿಯನ್ ಚರ್ಚ್‌ಗೆ ಆಗಮಿಸುವ ದೇಶ-ವಿದೇಶಗಳ ಸಾವಿರಾರು ಯಾತ್ರಿಕರಿಗೆ ನೇರ ಅನುಕೂಲವಾಗಲಿದೆ.


ಈ ಎಲ್ಲಾ ತಾಂತ್ರಿಕ ಪೂರಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ತೊಕ್ಕೊಟ್ಟು ನಿಲ್ದಾಣವನ್ನು ಮತ್ತೆ ಜನಸೇವೆಗೆ ಮುಕ್ತಗೊಳಿಸಬೇಕಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top