ಕೆಲವು ಗೆಳೆತನಗಳು ಮಾತುಗಳಿಂದ ಶುರುವಾಗುತ್ತವೆ, ಇನ್ನೂ ಕೆಲವು ಗೆಳೆತನಗಳು ಯಾವುದೇ ಮಾತಿಲ್ಲದೇ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ನನ್ನ ಪಾಲಿಗೆ ಅಂತಹ ಒಂದು ಗೆಳೆಯ ಎಂದರೆ ಅದು ಚಹಾ.ಅದ್ರಲ್ಲೂ ಮಳೆಗಾಲ ಬಂದಮೇಲೆ ಚಹಾ ಇಲ್ಲ ಅಂದ್ರೆ ಹೇಗಾಗತ್ತೆ ಅಲ್ವಾ. ಮಳೆಗಾಲದಲ್ಲಿ ಚಹಾ ಸವಿಯೋ ಖುಷಿನೇ ಬೇರೆ.
ಚಹಾ ಎಂದರೆ ನನಗೆ ಕೇವಲ ಕುಡಿಯುವ ಒಂದು ಪಾನೀಯವಲ್ಲ. ಅದು ನನ್ನ ದಿನದ ಒಂದು ಸಣ್ಣ ಸಂತೋಷ, ಮನಸ್ಸಿಗೆ ಸಿಗುವ ನೆಮ್ಮದಿ ಮತ್ತು ಕೆಲವೊಮ್ಮೆ ನನ್ನ ಜೊತೆಗಿರುವ ಒಬ್ಬ ಮೌನ ಗೆಳೆಯ. ಬೆಳಗ್ಗೆ ಎದ್ದಾಗ ಒಂದು ಕಪ್ ಚಹಾ ಸಿಕ್ಕರೆ ದಿನ ಚೆನ್ನಾಗಿ ಆರಂಭವಾದಂತೆ ಅನಿಸುತ್ತದೆ. ದಿನ ಎಷ್ಟೇ ಬ್ಯುಸಿಯಾಗಿರಲಿ, ಮನಸ್ಸು ಎಷ್ಟೇ ಗೊಂದಲದಲ್ಲಿರಲಿ, ಚಹಾದ ಒಂದು ಕಪ್ ಕೈಗೆ ಸಿಕ್ಕಾಗ ಕೆಲವು ನಿಮಿಷಗಳಾದರೂ ಎಲ್ಲವನ್ನೂ ಮರೆತು ಸುಮ್ಮನೆ ಕುಳಿತುಕೊಳ್ಳಬಹುದು.
ಚಹಾ ಕುಡಿಯುವಾಗ ಅದರ ರುಚಿಗಿಂತಲೂ ಅದರ ಜೊತೆ ಸಿಗುವ ಆ ಕ್ಷಣ ನನಗೆ ಹೆಚ್ಚು ಇಷ್ಟ. ಕೆಲವೊಮ್ಮೆ ಒಬ್ಬಳೇ ಕುಳಿತು ಚಹಾ ಕುಡಿಯುತ್ತಾ ಯೋಚನೆಗಳಲ್ಲಿ ಮುಳುಗುತ್ತೇನೆ. ಕೆಲವೊಮ್ಮೆ ಸ್ನೇಹಿತರ ಜೊತೆ ಕುಳಿತು ಚಹಾ ಕುಡಿಯುತ್ತಾ ನಗುತ್ತಾ ಮಾತನಾಡುತ್ತೇನೆ. ಹೀಗೆ ನೋಡಿದರೆ ನನ್ನ ಹಲವು ಸಣ್ಣ ಸಂತೋಷಗಳಲ್ಲೂ ಚಹಾ ಒಂದು ಭಾಗವಾಗಿದೆ.
ಬಹುಶಃ ಅದಕ್ಕೇ ಚಹಾದೊಂದಿಗಿನ ನನ್ನ ಸಂಬಂಧವನ್ನು ನಾನು “ಗೆಳೆತನ” ಎಂದು ಕರೆಯುತ್ತೇನೆ. ಏಕೆಂದರೆ ಗೆಳೆಯ ಎಂದರೆ ನಮ್ಮ ಖುಷಿಯಲ್ಲಿ ಮಾತ್ರವಲ್ಲ, ಬೇಸರದಲ್ಲೂ ನಮ್ಮ ಜೊತೆ ಇರುವವನು. ನನ್ನ ಪಾಲಿಗೆ ಚಹಾ ಕೂಡ ಹಾಗೆಯೇ. ಖುಷಿಯಾಗಿದ್ದಾಗಲೂ ಚಹಾ ಬೇಕು, ಬೇಸರವಾಗಿದ್ದಾಗಲೂ ಚಹಾ ಬೇಕು.
ಹೀಗಾಗಿ ಚಹಾ ನನ್ನ ದಿನಚರಿಯ ಒಂದು ಭಾಗವಾಗಿರುವುದಕ್ಕಿಂತ, ನನ್ನ ಬದುಕಿನ ಪುಟ್ಟ ಸಂತೋಷವಾಗಿ ಮಾರ್ಪಟ್ಟಿದೆ.
ಮನೆಯಲ್ಲಿ ಇದ್ದಾಗಂತೂ ಬೇಕಾದಾಗಲೆಲ್ಲ ಬಿಸಿ ಬಿಸಿ ಚಹಾ ಮಾಡಿಕೊಂಡು ಕುಡಿಯುತ್ತಿದ್ದೆ. ಬೆಳಗ್ಗೆ ಆಗಲಿ, ಸಂಜೆ ಆಗಲಿ, ಮನಸ್ಸಿಗೆ ಚಹಾ ಬೇಕು ಅನ್ನಿಸಿದ ತಕ್ಷಣ ಅಡುಗೆಮನೆಗೆ ಹೋಗಿ ಚಹಾ ಮಾಡಿಕೊಳ್ಳುತ್ತಿದ್ದೆ. ಅಷ್ಟು ಇಷ್ಟವಾಗಿತ್ತು ನನಗೆ ಚಹಾ.
ಆದರೆ ಈಗ ಹಾಸ್ಟೆಲ್‌ಗೆ ಬಂದ ಮೇಲೆ ಬೇಕಾದಾಗ ಚಹಾ ಕುಡಿಯಲು ಸಾಧ್ಯವಾಗುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಮಾತ್ರ ಚಹಾ ಸಿಗುತ್ತದೆ. ಅದೂ ಕೂಡ ಕೆಲವೊಮ್ಮೆ ನಾನು ಇಷ್ಟಪಡುವಷ್ಟು ಬಿಸಿಯಾಗಿರುವುದಿಲ್ಲ. ಕೆಲವೊಮ್ಮೆ ರುಚಿಯೂ ಅಷ್ಟೇನೂ ಚೆನ್ನಾಗಿರುವುದಿಲ್ಲ. ಆದರೂ ಚಹಾ ಕುಡಿಯುವುದನ್ನು ಮಾತ್ರ ನಾನು ಬಿಟ್ಟಿಲ್ಲ.
ಕೆಲವೊಮ್ಮೆ ಮನಸ್ಸಿನಲ್ಲಿ ಏನೋ ಬೇಸರವಿದ್ದಾಗ, ಯಾರ ಜೊತೆಯೂ ಮಾತನಾಡಬೇಕು ಅನಿಸದಿದ್ದಾಗ ಒಂದು ಕಪ್ ಚಹಾ ಜೊತೆ ಕುಳಿತುಕೊಳ್ಳುತ್ತೇನೆ. ಆ ಕ್ಷಣದಲ್ಲಿ ಚಹಾ ನನಗೆ ಒಂದು ರೀತಿಯ ನೆಮ್ಮದಿ ನೀಡುತ್ತದೆ.
ಒಂದು ನಗು ತರಿಸುವ ಸಂಗತಿ ಏನೆಂದರೆ, ಕೆಲವೊಮ್ಮೆ ನನ್ನ ಜೊತೆ ಯಾರೂ ಇಲ್ಲದಿದ್ದರೂ ಚಹಾ ಮಾತ್ರ ಯಾವಾಗಲೂ ನನ್ನ ಜೊತೆ ಇರುತ್ತದೆ. ನನ್ನ ಖುಷಿಯಲ್ಲೂ, ಬೇಸರದಲ್ಲೂ, ಒಂಟಿತನದಲ್ಲೂ ಅದು ನನ್ನ ಪುಟ್ಟ ಸಂಗಾತಿ. ಅದಕ್ಕೇ ಚಹಾದೊಂದಿಗಿನ ನನ್ನ ಗೆಳೆತನ ನನಗೆ ಯಾವಾಗಲೂ ವಿಶೇಷ.
- ರಮ್ಯಾ ನಾಯ್ಕ್

