ಕಾಸರಗೋಡಿನಲ್ಲಿ ಆಗಸ್ಟ್ 15ರಿಂದ 'ಗಮಕ ಶ್ರಾವಣ' ಸಾಂಸ್ಕೃತಿಕ ಹಬ್ಬ

Upayuktha
0


ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು- ಕೇರಳ ಗಡಿನಾಡು ಘಟಕ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆ (ರಿ.) ಬೆಂಗಳೂರು- ಕೇರಳ ಗಡಿನಾಡು ಘಟಕ, ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ 'ಗಮಕ ಶ್ರಾವಣ' (ಗಮಕ ಮಾಸಾಚರಣೆ- 2026) ಕಾರ್ಯಕ್ರಮಗಳ ಸರಣಿಯು ಈ ಬಾರಿಯೂ ಅದ್ದೂರಿಯಾಗಿ ನೆರವೇರಲಿದೆ. ಕನ್ನಡದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಯುವ ಕಲಾವಿದರು ಗಮಕ ವಾಚನ ಹಾಗೂ ವ್ಯಾಖ್ಯಾನ ನೀಡಲಿದ್ದು, ಕಾಸರಗೋಡು ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ಈ ಸರಣಿ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.


ಈ ಬೃಹತ್ ಸಾಂಸ್ಕೃತಿಕ ಸಂಭ್ರಮದ ಉದ್ಘಾಟನಾ ಸಮಾರಂಭವು 2026ರ ಆಗಸ್ಟ್ 15ರ ಶನಿವಾರದಂದು ಅಪರಾಹ್ನ 2:30ಕ್ಕೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತಾಚರಣೆಯ ಸಭಾಂಗಣದಲ್ಲಿ ನಡೆಯಲಿದೆ. ಎಡನೀರು ಮಠಾಧೀಶರ ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆಯೊಂದಿಗೆ ಚಾಲನೆ ಸಿಗಲಿರುವ ಈ ಕಾರ್ಯಕ್ರಮದಲ್ಲಿ ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ ಪದ್ಯಾಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾದ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದು, ಶುಭಾಶಂಸನೆ ಮತ್ತು ಪ್ರಸ್ತಾವನೆಗಳ ನಂತರ ಕು| ಪ್ರಣಮ್ಯ  ಕೆ.ಎಸ್. ಅವರಿಂದ ‘ತೊರವೆ ರಾಮಾಯಣ’ದ ಗಮಕ ವಾಚನ ಹಾಗೂ ಚಿನ್ಮಯಕೃಷ್ಣ ಎಂ. ಅವರಿಂದ ವ್ಯಾಖ್ಯಾನ ನೆರವೇರಲಿದೆ.


ಸರಣಿ ಕಾರ್ಯಕ್ರಮಗಳ ಭಾಗವಾಗಿ ಸೆಪ್ಟೆಂಬರ್ 1ರಂದು ಕಾರಡ್ಕ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ, ಸೆಪ್ಟೆಂಬರ್ 3ರಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಯಲ್ಲಿ, ಸೆಪ್ಟೆಂಬರ್ 7ರಂದು ಮೀಯಪದವಿನ ಶ್ರೀ ವಿದ್ಯಾವರ್ಧಕ ಶಾಲೆಯಲ್ಲಿ, ಸೆಪ್ಟೆಂಬರ್ 8ರಂದು ಧರ್ಮತ್ತಡ್ಕದ SDPHSS ಶಾಲೆಯಲ್ಲಿ, ಸೆಪ್ಟೆಂಬರ್ 11ರಂದು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಹಾಗೂ ಸೆಪ್ಟೆಂಬರ್ 17ರಂದು ಸೂರಂಬೈಲು ಸರಕಾರಿ ಹೈಸ್ಕೂಲಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತೊರವೆ ರಾಮಾಯಣ ಹಾಗೂ ಪ್ರೊ. ವಿ. ನರಹರಿ ವಿರಚಿತ ಕಾವ್ಯಭಾಗಗಳನ್ನು ವಾಚಿಸಿ ವ್ಯಾಖ್ಯಾನಿಸಲಿದ್ದಾರೆ.


ಈ ಸರಣಿಯ ಮಹತ್ವದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 21ರ ಸೋಮವಾರದಂದು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ "ಕಾಸರಗೋಡಿನ ಕನ್ನಡಿಗರ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳು – ಸಮಸ್ಯೆ– ಪರಿಹಾರೋಪಾಯಗಳು" ಎಂಬ ವಿಷಯದ ಕುರಿತು ಉಚಿತ ಮಾಹಿತಿ ಶಿಬಿರ ನಡೆಯಲಿದ್ದು, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ ಪ್ರಸಾದ್ ಪಾಣೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 2:30ಕ್ಕೆ ನಡೆಯುವ ಗಮಕ ಶ್ರಾವಣದ ಸಮಾರೋಪ ಸಮಾರಂಭವನ್ನು ಕರ್ನಾಟಕ ಸಮಿತಿಯ ಅಧ್ಯಕ್ಷ ಕೆ.ಎಂ. ಬಳ್ಳಕ್ಕುರಾಯ ಉದ್ಘಾಟಿಸಲಿದ್ದು, ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರೋಪ ಭಾಷಣ ಮಾಡಲಿದ್ದಾರೆ. ಕೊನೆಯಲ್ಲಿ ಕು| ಮೇಧಾ ಭಟ್ ಮತ್ತು ಶ್ರೀ ದುರ್ಗಾಶಂಕರ ಅಡಿಗ ಕೆ. ಅವರಿಂದ 'ವಾಲಿ ವಧೆ' ಭಾಗದ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಲಿದೆ.


ಈ ಎಲ್ಲಾ ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳಲ್ಲಿ ಗಮಕ ಕಲಾಪ್ರೇಮಿಗಳು, ಕನ್ನಡಿಗರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರಾದ ಡಾ. ವಿ.ವಿ. ಪ್ರಸನ್ನ, ವಿ.ಬಿ. ಕುಳಮರ್ವ, ಎಸ್.ವಿ. ಪ್ರಸಾದ್ ಹಾಗೂ ತೆಕ್ಕೆಕೆರೆ ಶಂಕರನಾರಾಯಣ ಭಟ್ ವಿನಂತಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top