ಆರು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿಯು ಜಗತ್ತನ್ನೆಲ್ಲ ನಡುಗಿಸಿದ್ದಾಗ ಹುಟ್ಟಿದ ’ಭರವಸೆಯ ಆಶಾಕಿರಣ’ಗಳಲ್ಲೊಂದು ಗೀತಾಪರಿವಾರದ ಮೂಲಕ ಆನ್‌ಲೈನ್‌ನಲ್ಲಿ ಭಗವದ್ಗೀತೆ ಕಲಿಕೆ. ಈ ಆರು ವರ್ಷಗಳಲ್ಲಿ ಗೀತಾಪರಿವಾರ ಮತ್ತು ಗೀತೆ ಕಲಿಕೆಯು ಸಾಧಿಸಿರುವ ವ್ಯಾಪ್ತಿ-ವಿಸ್ತಾರ ಊಹಿಸಲಿಕ್ಕೂ ಅಸದಳವಾದುದು. 180ಕ್ಕಿಂತಲೂ ಹೆಚ್ಚು ದೇಶಗಳಿಂದ, ಭಾರತದ ವಿವಿಧ ಭಾಷೆಗಳಲ್ಲಷ್ಟೇ ಅಲ್ಲದೆ ಜಪಾನೀಸ್‌ನಂತಹ ವಿದೇಶೀಯ ಭಾಷೆಯಲ್ಲೂ, ದಿನದ ವಿವಿಧ ಸಮಯಗಳಲ್ಲಿ ಲಕ್ಷಾಂತರ ಆಸಕ್ತರು ಭಗವದ್ಗೀತೆಯನ್ನು ಸಂಸ್ಕೃತದ ಶುದ್ಧ ಉಚ್ಚಾರಸಹಿತ ಕಲಿತಿದ್ದಾರೆ, ಮತ್ತಷ್ಟು ಜನರು ಕಲಿಯುವಂತೆ ಪ್ರೇರಣೆಯಾಗಿದ್ದಾರೆ, ಗೀತೆಯ ಸಾರ್ವಕಾಲಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದೀಗ ಅಕ್ಟೋಬರ್‌ನಲ್ಲಿ ಗೀತೆ ಕಲಿಕೆಯ 50ನೆಯ ಬ್ಯಾಚ್ ಆರಂಭವಾಗುತ್ತಿದೆ!
ಭಗವದ್ಗೀತೆಯ ಸಂದೇಶವನ್ನೂ, ಗೀತಾ ಪರಿವಾರದ ಚಟುವಟಿಕೆಗಳನ್ನೂ ವೈವಿಧ್ಯಮಯ ಹಾಗೂ ನೂತನ ಪ್ರಯತ್ನಗಳ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ, ಗೀತಾ ಪರಿವಾರದ ಉಡುಪಿ ಶಾಖೆಯು ಒಂದು ವಿಶಿಷ್ಟ ಪರಿಕಲ್ಪನೆಯನ್ನು ರೂಪಿಸಿದೆ. ಕರ್ನಾಟಕದ ಯಕ್ಷಗಾನ ಪರಂಪರೆಯ ವಿಶಿಷ್ಟ ಕಲಾರೂಪವಾದ ತಾಳಮದ್ದಳೆಯನ್ನು ಈ ಸದುದ್ದೇಶಕ್ಕೆ ಬಳಸಿಕೊಂಡಿದೆ.
ನಮಗೆಲ್ಲ ತಿಳಿದೇ ಇರುವಂತೆ ಯಕ್ಷಗಾನವು ಕರ್ನಾಟಕದ ಸಾಂಪ್ರದಾಯಿಕ ಹಾಗೂ ಅತ್ಯಂತ ಪರಿಷ್ಕೃತ ರಂಗಕಲೆಯಾಗಿದ್ದು, ಸಂಗೀತ, ನೃತ್ಯ, ಸಂಭಾಷಣೆ ಮತ್ತು ನಾಟಕೀಯ ಅಭಿವ್ಯಕ್ತಿಗಳ ಸುಂದರ ಸಮನ್ವಯವನ್ನು ಹೊಂದಿದೆ. ತಾಳಮದ್ದಳೆಯು ಯಕ್ಷಗಾನದ ವಿಶಿಷ್ಟ ವಾಚಿಕ ಹಾಗೂ ಅರ್ಥವ್ಯಾಖ್ಯಾನ ಪ್ರಧಾನ ಕಲಾರೂಪವಾಗಿದೆ. ಸಾಮಾನ್ಯ ಯಕ್ಷಗಾನ ಪ್ರದರ್ಶನದಂತೆ ಇದರಲ್ಲಿ ನೃತ್ಯ, ವೈಭವೋಪೇತ ವೇಷಭೂಷಣ ಅಥವಾ ರಂಗಚಲನೆ ಇರುವುದಿಲ್ಲ. ಭಾಗವತರ ಗಾಯನ ಹಾಗೂ ಕಲಾವಿದರ ಆಶುಸಂಭಾಷಣೆ, ಅರ್ಥವಿವರಣೆ ಮತ್ತು ಸಂವಾದ-ಚರ್ಚೆಗಳ ಮೂಲಕ ಪ್ರದರ್ಶನವು ರೂಪುಗೊಳ್ಳುತ್ತದೆ.
ಇಂತಹ ತಾಳಮದ್ದಳೆ ಕಲೆಯನ್ನು ಗೀತಾಪ್ರಚಾರಕ್ಕೆ ಬಳಸಬಹುದೆಂಬ ವಿಶಿಷ್ಟ ಪರಿಕಲ್ಪನೆ ಗೀತಾಪರಿವಾರದ ಕರ್ನಾಟಕ ಪ್ರಚಾರಕ ವಿಭಾಗದ ಸಂಯೋಜಕರಾಗಿರುವ ಕಸ್ತೂರಿ ಕೆ. ಅವರದು. ತನ್ನ ಮನದ ಈ ಸಂಕಲ್ಪವನ್ನು ಗಟ್ಟಿಗೊಳಿಸಿ, ಇದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಬಡಾನಿಡಿಯೂರಿನ ಕೇಶವ ರಾವ್ ಅವರಿಂದ ಇದಕ್ಕಾಗಿಯೇ ಒಂದು ಪ್ರಸಂಗವನ್ನು ಬರೆಯಿಸಿದ್ದಾರೆ. ಉಡುಪಿ ಯಕ್ಷಗಾನ ಕಲಾಕೇಂದ್ರದ ಯಕ್ಷಗಾನ ಗುರುಗಳಾದ ಉಮೇಶ್ ಸುವರ್ಣ ಗೋಪಾಡಿ ಅವರಿಂದ ಭಾಗವತಿಕೆ ಗಾಯನದ ಕಲೆಯನ್ನು ಕಲಿತಿದ್ದಾರೆ. ತಾಳಮದ್ದಳೆ ಪ್ರಸಂಗಕ್ಕೆ ಸೂಕ್ತವಾದ ರಾಗಗಳನ್ನು ಉಮೇಶ್ ಸುವರ್ಣ ಸಂಯೋಜಿಸಿದರಲ್ಲದೇ ಉಡುಪಿ ಗೀತಾ ಪರಿವಾರದ ಸದಸ್ಯರಿಗೆ ತರಬೇತಿಯನ್ನೂ ನೀಡಿದ್ದಾರೆ.
ಮೊನ್ನೆ 20 ಆಗಸ್ಟ್ 2026ರಂದು, "ಯಕ್ಷಗೀತಾಮೃತ" ಎಂಬ ಹೆಸರಿನಲ್ಲಿ, ಈ ವಿಶಿಷ್ಟ ತಾಳಮದ್ದಳೆ ಕಾರ್ಯಕ್ರಮವನ್ನು ಉಡುಪಿಯ ಉದ್ಯಾವರದ ಶ್ರೀ ಶಂಭುಶೈಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪ್ರಸ್ತುತಪಡಿಸಲಾಗಿದೆ. ಅದರ ವಿಡಿಯೊ ರೆಕಾರ್ಡಿಂಗ್ ಇಲ್ಲಿದೆ.
ಒಳ್ಳೆಯ ಮನಸ್ಸುಗಳು ಒಳ್ಳೆಯದೊಂದು ಉದ್ದೇಶಕ್ಕಾಗಿ ಒಟ್ಟುಸೇರಿದರೆ ಎಷ್ಟು ಒಳ್ಳೆಯ ಕಾರ್ಯಕ್ರಮವನ್ನು ರೂಪಿಸಿ ಪ್ರಸ್ತುತಪಡಿಸಬಹುದು ಎಂಬುದನ್ನು ನೀವು ಈ ಒಂದು ಗಂಟೆ ಅವಧಿಯ ಯಕ್ಷಗಾನ ತಾಳಮದ್ದಳೆಯನ್ನು ನೋಡಿ/ಕೇಳಿ ಸವಿದು ತಿಳಿದುಕೊಳ್ಳಬೇಕು. ಇದರಲ್ಲಿ ಭಾಗವಹಿಸಿರುವ ಅರ್ಥಧಾರಿಗಳು ವೃತ್ತಿಪರರೇನಲ್ಲ ಹವ್ಯಾಸಿಗಳೂ ಅಲ್ಲ, ಇದೇ ಮೊದಲಬಾರಿಗೆ ಇಂಥದೊಂದು ಕಲಾಪ್ರಕಾರದಲ್ಲಿ ಹೆಜ್ಜೆಯಿಟ್ಟವರು. ಹಾಗಿದ್ದರೂ ಅದೆಷ್ಟು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದ್ದಾರೆಂದರೆ ಕೇಳುಗರಿಗೆ ಭಾವೋತ್ಕರ್ಷವಾಗುವಷ್ಟು! ಇವರೆಲ್ಲರಿಗೂ ಅಭಿನಂದನೆಯಷ್ಟೇ ಅಲ್ಲ, ಧನ್ಯವಾದಗಳೂ ಸಲ್ಲಬೇಕು. ಗೀತೆ ಮತ್ತು ಗೀತಾಪರಿವಾರದ ಬಗೆಗಿನ ಅರಿವು ಇನ್ನಷ್ಟು ಮತ್ತಷ್ಟು ಜನರನ್ನು ತಲುಪಬೇಕು. ಅದಕ್ಕೆ ನಿಮ್ಮ ಸಹಾಯವೂ ಅವಶ್ಯವಾಗಿ ಬೇಕು.
- ಶ್ರೀವತ್ಸ ಜೋಶಿ.


