ಮಂಗಳೂರು: ಬದಲಾಗುತ್ತಿರುವ ಪ್ರೇಕ್ಷಕರ ಮನರಂಜನಾ ಅಭಿರುಚಿಗೆ ತಕ್ಕಂತೆ ದಕ್ಷಿಣ ಭಾರತದ ಪ್ರಮುಖ ಮಾಧ್ಯಮ ಸಮೂಹವಾದ ಸನ್ ಟಿವಿ ನೆಟ್‌ವರ್ಕ್, ಮೈಕ್ರೋ ಡ್ರಾಮಾಗಳ ಹೊಸ ಲೋಕಕ್ಕೆ ಕಾಲಿಟ್ಟಿದೆ. ತನ್ನ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ಸನ್ ನೆಕ್ಸ್ಟ್ ಆ್ಯಪ್‌ನಲ್ಲಿ ಸನ್ ನೆಕ್ಸ್ಟ್ ಶಾರ್ಟ್ಸ್ ಎಂಬ ನೂತನ ವಿಭಾಗವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ವೀಕ್ಷಕರಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಮನರಂಜನೆ ನೀಡುವ ಕಿರು ಧಾರಾವಾಹಿ ಸರಣಿಯನ್ನು ತಲುಪಿಸಲು ಸಂಸ್ಥೆ ಮುಂದಾಗಿದೆ.
ವೇಗವಾಗಿ ಬೆಳೆಯುತ್ತಿರುವ ಮೈಕ್ರೋ-ಎಂಟರ್‌ಟೈನ್‌ಮೆಂಟ್ ಮಾರುಕಟ್ಟೆಯಲ್ಲಿ ಸನ್ ನೆಕ್ಸ್ಟ್ ಶಾರ್ಟ್ಸ್ ಮಹತ್ವದ ಹೆಜ್ಜೆಯಾಗಿದೆ. ಕೆಲವೇ ನಿಮಿಷಗಳಲ್ಲಿ ವೀಕ್ಷಿಸಿ ಮುಗಿಸಬಹುದಾದ 150ಕ್ಕೂ ಹೆಚ್ಚು ಹೊಸ ಸರಣಿಗಳು, ಅಂತರರಾಷ್ಟ್ರೀಯ ಡಬ್ಬಿಂಗ್ ಶಾರ್ಟ್ಸ್ ಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು ಹಾಗೂ ಸನ್ ನೆಕ್ಸ್ಟ್ ಲೈಬ್ರರಿಯ ಜನಪ್ರಿಯ ಧಾರಾವಾಹಿಗಳು ಇದರಲ್ಲಿ ಲಭ್ಯವಿರಲಿವೆ. ಇವುಗಳನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವೇಗದ ಕಂತುಗಳಾಗಿ ಮರು-ಸಂಪಾದಿಸಿ (ರೀ-ಎಡಿಟ್) ಪ್ರಸ್ತುತಪಡಿಸಲಾಗುತ್ತಿದೆ.
ವಿಶೇಷವಾಗಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಅಣ್ಣ-ತಂಗಿ, ಜನನಿ ಮತ್ತು ಕನ್ಯಾದಾನ ಸೇರಿದಂತೆ ಹಲವು ಧಾರಾವಾಹಿಗಳನ್ನು ಡಿಜಿಟಲ್ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸೃಜನಾತ್ಮಕವಾಗಿ ಮರುರೂಪಿಸಲಾಗಿದೆ. ಸನ್ ನೆಕ್ಸ್ಟ್ ನ ಸಾಂಪ್ರದಾಯಿಕ ಕುಟುಂಬ ಪ್ರೇಕ್ಷಕರನ್ನು ಉಳಿಸಿಕೊಳ್ಳುವುದರ ಜೊತೆಗೆ, ಇಂದಿನ ಜೆನ್-ಝೀ ಸೇರಿದಂತೆ ಯುವ ಸಮುದಾಯವನ್ನು ಸೆಳೆಯುವಂತಹ ಹೊಸ ಮತ್ತು ತಾಜಾ ಕಂಟೆಂಟ್ ಅನ್ನೂ ಸಹ ಈ ವೇದಿಕೆಯಲ್ಲಿ ಅಳವಡಿಸಲಾಗಿದೆ.
ಮಲ್ಟಿ-ಸ್ಕ್ರೀನ್ ವೀಕ್ಷಣಾ ಸೌಲಭ್ಯವು ಈ ಶಾರ್ಟ್ಸ್‌ನ ಪ್ರಮುಖ ಆಕರ್ಷಣೆಯಾಗಿದೆ. ಮೊಬೈಲ್ ಪರದೆಗಾಗಿ ಕ್ಲೋಸ್-ಅಪ್ ದೃಶ್ಯಗಳು ಹಾಗೂ ಟೆಲಿವಿಷನ್ ವೀಕ್ಷಣೆಗಾಗಿ ಹಿನ್ನೆಲೆಯನ್ನು ವಿಸ್ತಾರವಾಗಿ ತೋರಿಸುವ 4:3 ಫಾರ್ಮ್ಯಾಟ್‌ನಲ್ಲಿ ಕಂಟೆಂಟ್ ಅನ್ನು ರೂಪಿಸಲಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮೈಕ್ರೋ ಡ್ರಾಮಾಗಳ ವೀಕ್ಷಣಾ ಅನುಭವವನ್ನು ಟಿವಿ ಪರದೆಗಳಿಗೂ ತಂದ ಹೆಗ್ಗಳಿಕೆಗೆ ಈ ವೇದಿಕೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಾವ್ಯಾ ಮಾರನ್, "ಇಂದಿನ ಪ್ರೇಕ್ಷಕರು ಕಂಟೆಂಟ್ ಅನ್ನು ವಿಭಿನ್ನ ಪರದೆಗಳಲ್ಲಿ, ಕಡಿಮೆ ಸಮಯದಲ್ಲಿ ವೀಕ್ಷಿಸಲು ಇಷ್ಟಪಡುತ್ತಿದ್ದಾರೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸನ್ ನೆಕ್ಸ್ಟ್ ಶಾರ್ಟ್ಸ್ ರೂಪಿಸಲಾಗಿದೆ. ನಮ್ಮ ಬಳಿ 65,000 ಗಂಟೆಗಳ ಬೃಹತ್ ಕಂಟೆಂಟ್ ಸಂಗ್ರಹ ಹಾಗೂ ದಶಕಗಳ ಕಥೆ ಹೇಳುವ ಅನುಭವವಿದೆ. ಆ ಬಲವನ್ನು ಹೊಸ ಪೀಳಿಗೆಯ ವೀಕ್ಷಣಾ ಹವ್ಯಾಸಕ್ಕೆ ತಕ್ಕಂತೆ ಮರುರೂಪಿಸುವುದೇ ನಮ್ಮ ಗುರಿ" ಎಂದರು.
ಸನ್ ನೆಕ್ಸ್ಟ್ ಮುಖ್ಯಸ್ಥ ರಾಕೇಶ್ ಸಿ.ಕೆ ಮಾತನಾಡಿ, "ಪ್ರೇಕ್ಷಕರು ಆಳವಾದ ಕಥೆಗಳನ್ನು ಬಯಸಿದರೂ, ಸುದೀರ್ಘ ಆರಂಭಿಕ ಸನ್ನಿವೇಶಗಳಿಗೆ ಹೆಚ್ಚು ಸಮಯ ನೀಡಲು ಹಿಂಜರಿಯುತ್ತಾರೆ. ಸನ್ ನೆಕ್ಸ್ಟ್ ಶಾರ್ಟ್ಸ್ ನಮ್ಮ ಹಳೆಯ ಜನಪ್ರಿಯ ಕಂಟೆಂಟ್ ಮತ್ತು ಈ ಮಾಧ್ಯಮಕ್ಕಾಗಿಯೇ ರಚಿಸಲಾದ ಹೊಸ ಕಥೆಗಳನ್ನು ಒಂದೆಡೆ ಸೇರಿಸಿ ಮೊಬೈಲ್ ಮತ್ತು ಟಿವಿ ಎರಡರಲ್ಲೂ ವಿಶಿಷ್ಟ ವೀಕ್ಷಣಾ ಅನುಭವ ನೀಡಲಿದೆ" ಎಂದು ಹೇಳಿದರು.
ಈಗಾಗಲೇ ಸನ್ ನೆಕ್ಸ್ಟ್ ಆ್ಯಪ್‌ನಲ್ಲಿ ಈ ಸೇವೆ ಲಭ್ಯವಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ವೇಗದ ಮತ್ತು ಗುಣಮಟ್ಟದ ಮನರಂಜನೆಯನ್ನು ಬಯಸುವ ಪ್ರೇಕ್ಷಕರಿಗೆ ಹೊಸ ಅನುಭವವನ್ನು ಒದಗಿಸುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

