ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಜೆನ್ ಜಿಗಳು ಅಟ್ಟಾಡಿಸಿ ಹೊಡೆಯುತ್ತಾರೆ ಎಂಬುದಾಗಿ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಹೇಳಿಕೆ ಯುವಕರನ್ನು ಪ್ರಚೋದಿಸುವ ಕೆಲಸ ಮತ್ತು ಖಂಡನೀಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರವಾಗಿ ಕಿಡಿಕಾರಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕು ವಾಡಿಯ ಬಿಜೆಪಿ ಕಚೇರಿಯಲ್ಲಿ ಸೋಮವಾರ (ಆಗಸ್ಟ್ 24ರಂದು) ಸುದ್ದಿಗಾರರ ಜೊತೆ ಮಾತನಾಡಿ ಕಲಬುರ್ಗಿಯಲ್ಲಿ ಇತ್ತೀಚೆಗೆ ನಡೆದ ಧೀಮಂತ ಧುರೀಣ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಾತಿನ ಭರದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರನ್ನು ಯುವಕರು ಅಟ್ಟಾಡಿಸಿ ಹೊಡೆಯುತ್ತಾರೆ ಎಂದು ಹೇಳುವ ಮೂಲಕ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಇದು ಅವರಿಗೆ ಒಪ್ಪುವ ಭಾಷೆಯಲ್ಲ. ನಿಮ್ಮ ಕಡೆಯಿಂದ ಯುವಕರಿಗೆ ನೀವು ಯಾವ ಸಂದೇಶ ರವಾನೆ ಮಾಡುತ್ತಿದ್ದೀರಿ. ಇಂತಹ ಹೇಳಿಕೆ ನೀಡಿ ಯುವಕರನ್ನು ಪ್ರಚೋದಿಸುವ ಭಾಷಣ ಖಂಡನೀಯ ಪ್ರಜಾಪ್ರಭುತ್ವದಲ್ಲಿ ಅರಿತು ಮಾತನಾಡಬೇಕು. 9 ಸಲ ಶಾಸಕರಾಗಿ ಎರಡು ಸಲ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರೂ ತಮ್ಮ ಘನತೆಗೆ ತಕ್ಕಂತೆ ವರ್ತಿಸಬೇಕು ಹೊರತು ಉದ್ರೇಕಿಸುವ ಹೇಳಿಕೆ ನೀಡಿ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡಿರುವುದು ತಮಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಮೋದಿ ಅವರು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿನ ನಾಯಕನಾಗಿ ಬೆಳೆದು ನಿಂತವರು ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿ ಅಸಹಿಷ್ಣುತೆ ತೋರುತ್ತಿರುವುದು ಖಂಡನೀಯ. ನಿಮ್ಮ ವ್ಯಕ್ತಿ ತ್ವಕ್ಕೆ ಅದು ಸಂಸ್ಕೃತಿ ಹಾಗೂ ಶೋಭೆ ತರುವಂತದ್ದಲ್ಲ ಭಾರತವನ್ನು ನಶಾಮುಕ್ತ ಭಾರತ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಜಾರಿ, ಅಂತರಾಷ್ಟ್ರೀಯ ಸಂಬಂಧ ವೃದ್ಧಿಗೊಳಿಸಿ ಮೋದಿ ವಿಶ್ವ ನಾಯಕರಾಗಿ ಬೆಳೆದು ನಿಂತಿದ್ದಾರೆ. ಅವರ ಬಗ್ಗೆ ತುಚ್ಚವಾಗಿ ಆಡಿರುವ ಮಾತು ಕ್ಷಮಿಸಲಾಗದು. ಅಮಿತ್ ಶಾ ಭಯೋತ್ಪಾದನಾ ನಿರ್ಮೂಲನೆ, ಎಐ ಮೂಲಕ ಡಿಜಿಟಲ್ ತಪಾಸಣೆ, ಸುಭದ್ರ ಭಾರತ ನಿರ್ಮಾಣಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಭಾರತ ಸರ್ಕಾರವು ಯುವಕರಿಗಾಗಿ ಒಳ್ಳೆಯ ಕೆಲಸ ಮಾಡಿ ಜನಪ್ರಿಯರಾದ ಮೋದಿ ಅವರ ಬಗ್ಗೆ ಅಸಹನೆಯ ಮಾತುಗಳನ್ನಾಡಿ ಖರ್ಗೆಯವರು ಎಲ್ಲರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಇಂತಹ ಕೆಟ್ಟ ಸಂದೇಶ ನೀಡಿದ ಅವರು ತಮ್ಮ ಮಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಕಟುವಾಗಿ ಜಾಧವ್ ಟೀಕಿಸಿದ್ದಾರೆ.
ಚಿತಾಪುರ ಮತಕ್ಷೇತ್ರದ ದುರವಸ್ಥೆಯ ಬಗ್ಗೆ ಪ್ರಸ್ತಾಪಿಸಿ ಈ ಭಾಗದಲ್ಲಿ ಸರಿಯಾದ ರಸ್ತೆಗಳಿಲ್ಲ ಗಣಿಗಳು ಬಂದಾಗಿ ಕೆಲಸವಿಲ್ಲದೆ ರೈಲು ನಿಲ್ದಾಣಗಳ ಮೂಲಕ ಜನ ವಲಸೆ ಹೋಗುತ್ತಿದ್ದಾರೆ. ಮೀಸಲಾತಿ ಕ್ಷೇತ್ರದಿಂದ ಗೆದ್ದು ಬಂದರೂ, ಸರಿಯಾದ ರಸ್ತೆಗಳಿಲ್ಲದೆ ಇಲ್ಲಿನ ಶಾಸಕರು ಅಭಿವೃದ್ಧಿಯನ್ನು ಮರೆತಿದ್ದಾರೆ. ಪ್ರಿಯಾಂಕ ಖರ್ಗೆ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ವತಹ ತನ್ನ ಕಣ್ಣಿನಿಂದ ಜನರ ಸಂಕಷ್ಟವನ್ನು ನೋಡಿ ಸ್ಪಂದಿಸಬೇಕು. ಮೀಸಲು ಕ್ಷೇತ್ರದಿಂದ ಗೆದ್ದು ಬಂದು ಯಾವುದೇ ಅಭಿವೃದ್ಧಿಯನ್ನು ಕೈಗೊಳ್ಳದೆ ತೀವ್ರ ವಾಗಿ ಹಿಂದುಳಿದಿದೆ.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಸೌಲಭ್ಯವನ್ನು ಕೊಟ್ಟು ಜನರ ಕಷ್ಟವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,ಜಿಲ್ಲಾ ಎಸ್ ಸಿ. ಮೋರ್ಚಾ ಉಪಾಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ಮಾಜಿ ಅಧ್ಯಕ್ಷ ಭಗವತ್ ಸುಳೆ, ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಅಶೋಕ ಪವಾರ, ರವಿಕುಮಾರ ರಾಠೋಡ ಮಳಖೇಡ, ರಿಚರ್ಡ್ ಮಾರೆಡ್ಡಿ, ವಿನೋದ ಚವ್ಹಾಣ ಯಾಗಾಪುರ, ಮಲ್ಲಿಕಾರ್ಜುನ ಸಾತಖೇಡ ಮತ್ತಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

