ಪ್ರತಿಭೆಯೊಂದಿಗೆ ಪರಿಶ್ರಮ, ಶಿಸ್ತು ಸೇರಿದಾಗ ಯಶಸ್ಸು ಸಾಧ್ಯ: ಡಾ. ಮಹಾಂತೇಶ ಕಡಪಟ್ಟಿ

Upayuktha
0


ಹುನಗುಂದ: "ಮೇಜರ್ ಧ್ಯಾನ್ ಚಂದ್ ಅವರು ತಮ್ಮ ಅದ್ಭುತ ಹಾಕಿ ಕೌಶಲ್ಯ, ಶಿಸ್ತು ಮತ್ತು ಪರಿಶ್ರಮದಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ಅಪಾರ ಗೌರವ ತಂದುಕೊಟ್ಟರು. ಅವರ ಜೀವನವು ಪ್ರತಿಭೆಯೊಂದಿಗೆ ಪರಿಶ್ರಮ ಮತ್ತು ಶಿಸ್ತು ಸೇರಿದಾಗ ಮಾತ್ರ ಯಶಸ್ಸು ಸಾಧ್ಯ ಎಂಬ ಮಹತ್ವದ ಸಂದೇಶವನ್ನು ನೀಡುತ್ತದೆ" ಎಂದು ವಿ.ಮ.ವಿ.ವ. ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಎಸ್. ಕಡಪಟ್ಟಿ ತಿಳಿಸಿದರು.


ಸ್ಥಳೀಯ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾ ವಿಭಾಗ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.


1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರು ಚಿನ್ನದ ಪದಕಗಳನ್ನು ತಂದುಕೊಟ್ಟ ಧ್ಯಾನ್ ಚಂದ್ ಅವರ ಆಟದ ನೈಪುಣ್ಯತೆಯನ್ನು ಸ್ಮರಿಸಿದ ಅವರು, ಕ್ರೀಡೆಯು ಕೇವಲ ದೇಹವನ್ನು ಸದೃಢಗೊಳಿಸುವುದಲ್ಲದೆ ಆತ್ಮವಿಶ್ವಾಸ, ನಾಯಕತ್ವ ಹಾಗೂ ಸಮಯಪಾಲನೆಯನ್ನು ಕ ಕಲಿಸುತ್ತದೆ ಎಂದರು.


ಕ್ರೀಡೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದ ಲೆಪ್ಟಿನೆಂಟ್ ಎಸ್. ಬಿ. ಚಳಗೇರಿ, "ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಮೊಬೈಲ್‌ನಿಂದ ಹೊರಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಕೇವಲ ಪದಕಗಳಿಗಾಗಿ ಅಲ್ಲ, ಬದಲಾಗಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು" ಎಂದು ಕರೆ ನೀಡಿದರು.


ಹುನಗುಂದ ತಾಲೂಕಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರೇಸೂರ ಮಾತನಾಡಿ, ವಿದ್ಯಾರ್ಥಿಗಳು ದಿನನಿತ್ಯ ಯೋಗ ಹಾಗೂ ವ್ಯಾಯಾಮದ ಮೂಲಕ ದೇಹವನ್ನು ದೃಢಗೊಳಿಸಿಕೊಂಡು ದೇಶ ರಕ್ಷಣೆಯ ಜವಾಬ್ದಾರಿಯೊಂದಿಗೆ ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು. ಪ್ರಾಚಾರ್ಯ ಡಾ. ಎಸ್. ಆರ್. ಗೋಲಗೊಂಡ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.


ಸಾಂಸ್ಕೃತಿಕ ಹಾಗೂ ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮಾಜಿ ಯೋಧ ವಿಜಯ ದಳವಾಯಿ ದೇಶಭಕ್ತಿ ಗೀತೆ ಹಾಡಿದರು. ವೇದಿಕೆಯಲ್ಲಿ ಮಾಜಿ ಯೋಧ ಶರಣಪ್ಪ ಹಳ್ಳೂರ, ಐಕ್ಯೂಎಸಿ ಸಂಚಾಲಕ ಡಾ. ಎಲ್. ಎನ್. ಕುಲಕರ್ಣಿ, ಡಾ. ತಿಪ್ಪೇಸ್ವಾಮಿ ಡಿ.ಎಸ್. ಹಾಗೂ ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ವಿ. ಪಿ. ರಾಯರ ಉಪಸ್ಥಿತರಿದ್ದರು.


ಡಾ. ಎಸ್. ಆರ್. ನಾಗಣ್ಣವರ ಸ್ವಾಗತಿಸಿದರು, ವಿದ್ಯಾರ್ಥಿ ಮಾರುತಿ ಪ್ರಾರ್ಥಿಸಿದರು. ಕ್ರೀಡಾ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ವಾಹಿದ್ ಕಡಿವಾಲ ವಂದಿಸಿದರೆ, ಡಾ. ಸಂತೋಷ ನಾಯಿಕ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top