ಈ ಮೋಹಿನಿಯ ಸಹವಾಸದ ವಿಷಯ ಇಲ್ಲಿ ಬರೆಯ ಬಹುದೇ? ಬರೆಯ ಬಾರದೇ? ಎಂಬ ದ್ವಂದ್ವದಲ್ಲಿ ಇದ್ದೆ. ಎಲ್ಲಿ ವಿಷಯ ಸಭ್ಯತೆಯ ಎಲ್ಲೆಯನ್ನು ಮೀರಿ ಬಿಡಬಹುದೇನೋ ಎಂಬ ಭೀತಿ ನನ್ನನ್ನು ಎರಡು ಮೂರುದಿನಗಳಿಂದ ಒಂದು ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದೆ ತಳ್ಳುತ್ತಾನೇ ಇತ್ತು.
ಹಿಂದೆ ಹಿರಿಯರೊಬ್ಬರು ಒಂದು ಮಾತು ಹೇಳಿದ್ದರು. ನಿನ್ನ ಮಾತು ನಡೆ ಕ್ರಿಯೆಗಳು ನಿಷ್ಕಲ್ಮಶವಾಗಿರುವಲ್ಲಿಯ ವರೆಗೂ ನೀನು ವಾಸ್ತವವನ್ನು ಅಡಗಿಸ ಬೇಕಾಗಿಲ್ಲ. ಆ ಮಾತು ನೆನಪಾದ ಮೇಲೆ ಇನ್ನು ನಾನು ಮೋಹಿನಿಯ ಕತೆ ಹೇಳದಿದ್ದರೆ ನನ್ನ ಮನಸ್ಸು ಕಲ್ಮಶವಾಗಿದೆ ಎಂದು ಅರ್ಥವಲ್ಲವೇ? ಎಂದು ಅಂದುಕೊಂಡೆ. ಆದ್ದರಿಂದ ಈಗ ನೀವು ಕೇಳುವಂತಾಗಲಿ ನಾನು ಹೇಳುವಂತಾಗಲಿ ಈ ಮೋಹಿನೀ ಪ್ರಸಂಗ.
ನಾನು ಮಂಗಳೂರಿನ ಯೆಯ್ಯಾಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪೆನಿಯ ಒಡೆಯರು ಪುತ್ತೂರಿನ ಕೊಂಕಣಿ ಬ್ರಾಹ್ಮಣರಾಗಿದ್ದರು. ಅವರು ಪ್ರತೀ ವಾರದ ಕೊನೆಗೆ ಬಂದು ಎಲ್ಲಾ ಲೆಕ್ಕಾಚಾರ ನೋಡಿ ಹೋಗುತ್ತಿದ್ದರು. ಅಲ್ಲಿ ಆ ಕಾಲಕ್ಕೇ ಲಕ್ಷಗಳ ವ್ಯವಹಾರ ನಡೆಯುತ್ತಿತ್ತು. ಆದ್ದರಿಂದ ಶನಿವಾರ ಬೇಂಕಿನ ಸಮಯದ ನಂತರ ಅಲ್ಲಿ ಜಮೆಯಾದ ಹಣ ಅವರಿಗೆ ಒಪ್ಪಿಸಬೇಕಿತ್ತು. ಅವರಿಗೆ ತೊಂದರೆಗಳಿದ್ದರೆ ನಾನೇ ಪುತ್ತೂರಿಗೆ ಹೋಗಿ ಅವರೊಡನೆ ಅಥವಾ ಅವರ ಮನೆಯಲ್ಲಿ ಲೆಕ್ಕಾಚಾರ ಹಾಗೂ ಉಳಿಕೆ ಹಣಕೊಟ್ಟು ಬರಬೇಕಿತ್ತು. ಹಾಗೆ ಹೋಗುವ ದಿನ ನಾನು ಹೊರಟ ಮೇಲೆ ಬಂದ ಹಣ ಇದ್ದರೆ ಬಂದರಿನಲ್ಲಿ ಅವರ ಸಂಬಂಧಿಕರಲ್ಲಿ ನನ್ನ ಸಹಾಯಕ ದಾಮೋದರ ಕೊಡಬೇಕಿತ್ತು. ಹೀಗೆ ಅಲ್ಲಿ ಆಗ ಇದ್ದ ವ್ಯವಸ್ಥೆ.
ಈಗ ನಾನು ಹೇಳಲು ಹೊರಟ ಘಟನೆ ನಡೆದ ದಿನ ಶುಕ್ರವಾರವಾಗಿತ್ತು. ಶನಿವಾರ ರಜೆಯಾಗಿದ್ದ ಕಾರಣ ನನ್ನನ್ನು ಪುತ್ತೂರಿಗೇ ಹೋಗಿ ಲೆಕ್ಕಾಚಾರ ಒಪ್ಪಿಸಲು ಹೇಳಿದ್ದರು. ಆ ಆದಿತ್ಯವಾರ ನಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮ ಇತ್ತು. ಅಪ್ಪ ಅರ್ಧ ಹೊತ್ತು ರಜೆ ಹಾಕಿ ಬಾ ತುಂಬಾ ಕೆಲಸ ಇದೆ ಎಂದು ಹೇಳಿದ್ದರು. ಆದರೆ ನಾನು ನನ್ನ ಜವಾಬ್ಧಾರಿಯನ್ನು ಬಿಟ್ಟು ರಜೆ ಹಾಕಿ ಬರುವುದು ಕಷ್ಟ. ಹೇಗಿದ್ದರೂ ನಾನು ತುಂಬಾ ರಾತ್ರಿಯಾಗುವುದಕ್ಕೆ ಮೊದಲು ಮನೆಗೆ ತಲಪುತ್ತೇನ ಎಂದು ಅಪ್ಪನಿಗೆ ಭರವಸೆ ಕೊಟ್ಟೇ ಬಂದಿದ್ದೆ. ಅಂತೂ ಲೆಕ್ಕಾಚಾರ ಮುಗಿಸಿ ದಾಮೋದರನಿಗೆ ಜವಾಬ್ಧಾರಿ ವಹಿಸಿ ಕೊಟ್ಟು ಪುತ್ತೂರಿಗೆ ಪ್ರಯಾಣ ಬೆಳೆಸಿ ನನ್ನ ಒಡೆಯರ ಮನೆಗೆ ತಲಪಿದಾಗ ಗಂಟೆ ಸಂಜೆ ನಾಲ್ಕಾಗಿತ್ತು.
ಈ ಅನುಭವದ ಕತೆ ನಡೆದ ಹಿಂದಿನ ದಿನ ರಾತ್ರಿ ಪಾಲಿಟೆಕ್ನಿಕ್ ಹಾಗೂ ಯೆಯ್ಯಾಡಿ ಇಂಡಸ್ಟ್ರಿಯಲ್ ಎಸ್ಟೇಟ್ ನಡುವೆ ಒಬ್ಬ ನಡು ಪ್ರಾಯಸ್ಥರು ಮಾರ್ಗದ ಬದಿಯಲ್ಲಿ ಸತ್ತು ಬಿದ್ದಿದ್ದರು. ಅವರ ಬಾಯಿಯಲ್ಲಿ ರಕ್ತ ಕಾರಿದ ಲಕ್ಷಣಗಳು ಕಾಣುತ್ತಿತ್ತು. ಆ ಸಾವಿನ ಬಗ್ಗೆ ಅಲ್ಲಿ ಇದ್ದವರು ತಲೆಗೊಂದು ಮಾತು ಹೇಳುತ್ತಿದ್ದರು. ನಾನು ಅದನ್ನು ನೋಡಿ ಸುಮ್ಮನೇ ಬಂದಿದ್ದೆ. ನನ್ನ ಸಹಾಯಕ ದಾಮೋದರ ನನ್ನ ನಂತರ ಬಂದವ ಹತ್ತಿರ ಬಂದು ಮೆಲ್ಲನೆ "ಸಾರ್, ಅಲ್ಲಿ ಒಂದು ಹೆಣ ಬಿದ್ದಿದೆ ನಿಮಗೆ ಗೊತ್ತಾಗಲಿಲ್ಲವೇ?" ಎಂದು ಕೇಳಿದ. ನಾನು 'ಇಲ್ವಲ್ಲಾ' ಅಂದಿದ್ದೆ. "ಅದು ನೋಡಿ ಸಾರ್, ಆ ಸತ್ತವರಿದ್ದಾರಲ್ಲಾ ಅವರು ಆ ಮೋಹಿನಿಯೊಟ್ಟಿಗೆ ಆಟ ಆಡಲು ಹೋದುದರ ಪರಿಣಾಮ ಇದು" ಅಂದ. 'ಮೋಹಿನಿಯ ಯಾವ ಮೋಹಿನಿ? ಇಲ್ಲಿ ಈ ಎಸ್ಟೇಟ್ ನ ಒಳಗೆ ಆ ಎಲುಮಿನಿಯಂ ಫೇಕ್ಟರಿಯಲ್ಲಿ ಕೆಲಸ ಮಾಡುತ್ತಾಳಲ್ಲ ಅವಳಾ? ಎಂದು ಕೇಳಿದ್ದೆ. "ಬೇಡ ಸಾರ್ ಇದೆಲ್ಲಾ ತಮಾಷೆಯ ವಿಷಯ ಅಲ್ಲ" ಅಂದಿದ್ದ ಅವ. 'ಅವಳಲ್ವಾ ಹಾಗಿದ್ದರೆ ಬಿಟ್ಟು ಬಿಡು ಏನಾಯಿತು? ಹೇಳು' ಅಂದಿದ್ದೆ. "ಅದು ಸ್ವಾಮಿ ರಾತ್ರಿ 12 ಗಂಟೆ ಕಳೆದು ಆ ರಸ್ತೆಯಲ್ಲಿ ಹೋದರೆ ಅಪಾಯವೆ; ಅಲ್ಲಿ ಒಂದು ಮೋಹಿನಿ ಸುಳಿದಾಡುತ್ತಾನೇ ಇರುತ್ತಾಳೆ ಇಲ್ಲಿ ಎಲ್ಲರಿಗೂ ಗೊತ್ತು" ಅಂದ. ಮುಂದುವರಿದು "ಅದು ಚಂದದ ಹುಡುಗಿಯರ ರೂಪದಲ್ಲಿ ಬರುತ್ತದೆ. ಅದು ಬಾ ಎಂದು ಕರೆದಾಗ ಹೋದರೆ ಅವನ ಕತೆ ಮುಗಿಯಿತು ಎಂದೇ ಲೆಕ್ಕ; ಅವರ ರಕ್ತ ಕುಡಿದು ಹೆಣ ಮಾಡಿಯೇ ಬಿಡುತ್ತದೆ" ಅಂದಿದ್ದ. "ಈಗ ಹೆಣ ಆಗಿದ್ದಾರಲ್ಲ ಅವರಿಗೆ ಈ ಮೋಹಿನಿಯನ್ನು ಹುಡುಕಿ ಕೊಂಡು ಹೋಗುವ ಚಟ ಇತ್ತಂತೆ; ಹಾಗೆ ಏನೋ ಮಾಡಲು ಹೋಗಿ ಆ ಮೋಹಿನಿಯ ಕೈಯ್ಯಲ್ಲಿ ಸಿಕ್ಕಿ ಬಿದ್ಧು ಈಗ ರಕ್ತಕಾರಿ ಹೆಣವಾಗಿ ಬಿದ್ದಿದ್ದಾರೆ" ಎಂದ.
'ನೀನು ಹೇಳಿದ್ದೆಲ್ಲಾ ಸರಿ ಎಂದು ಒಪ್ಪಿಕೊಳ್ಳುತ್ತೇನೆ. ಈಗ ಒಂದು ಸಂಶಯ ಒಂದು ಹುಡುಗಿ ಕರೆದರೆ ಅದು ಮೋಹಿನಿಯೇ ಹುಡುಗಿಯೇ? ತಿಳಿಯಲು ಏನಾದರೂ ದಾರಿ ಇದೆಯಾ?' ಎಂದು ಕೇಳಿದೆ. "ಅದು ತುಂಬಾ ಸುಲಭ ಸಾರ್, ಅವುಗಳ ಕಾಲಿನ ಕಡೆ ನೋಡಬೇಕು. ಅದರ ಕಾಲು ನೆಲಕ್ಕೆ ತಾಗದೇ ಇದ್ದಲ್ಲಿ ಅದು ಮೋಹಿನಿಯೆ. ಇನ್ನು ಕಾಲು ನೆಲಕ್ಕೆ ತಾಗಿದ್ದರೂ ನೋಡಬೇಕು ಪಾದ ಎರಡೂ ಬದಿಗೆ ಇರುವ ಮೋಹಿನಿಗಳೂ ಇದೆಯಂತೆ. ಆದ್ದರಿಂದ ಪಾದ ನೋಡುವುದು ಮುಖ್ಯ, ಉಳಿದ ಯಾವ ಭಾಗ ನೋಡಿದರೂ ಕಂಡು ಹಿಡಿಯಲು ಸಾಧ್ಯವಿಲ್ಲವಂತೆ" ಅಂದ. "ಇಷ್ಟೂ ಅಲ್ಲ ಸಾರ್ ಅವುಗಳ ಪಾದಗಳಲ್ಲಿ ಬೆರಳುಗಳು ಮರಕ್ಕೆ ಗೆಲ್ಲುಗಳು ಬಂದಂತೆ ಇರುತ್ತದಂತೆ. ಹಾಗೆ ಮೋಹಿನಿಯನ್ನು ಕಂಡು ಹಿಡಿಯ ಬೇಕಿದ್ದರೆ ಅದರ ಪಾದಗಳನ್ನು ಸೂಕ್ಷ್ಮವಾಗಿ ಗಮನಿಸಲೇ ಬೇಕು" ಅಂದಿದ್ದ. "ಮತ್ತೆ ಮೋಹಿನಿಯನ್ನು ಮುಟ್ಟಿದರೆ ಐಸ್ ಗಟ್ಟಿ ಮುಟ್ಟಿದಂತೆ ಶೀತ ಇರುತ್ತದಂತೆ. ಆದರೆ ಅದು ನಮ್ಮನ್ನು ಅಥವಾ ನಾವು ಅದನ್ನು ಒಮ್ಮೆ ಮುಟ್ಟಿ ಬಿಟ್ಟರೆ ಮತ್ತೆ ಏನೂ ಮಾಡಲು ಸಾಧ್ಯವಿಲ್ಲ ನಾವು ಅದರ ಕೈವಶವಾಗುತ್ತೇವೆ, ಪ್ರಾಣ ಕಳೆದುಕೊಳ್ಳುತ್ತೇವೆ ಅಷ್ಟೇ" ಎಂದ.
'ಹಾಗಿದ್ದರೆ ಅದನ್ನು ಮುಟ್ಟಿದರೆ ಐಸ್ ಗಟ್ಟಿ ಮುಟ್ಟಿದ ಹಾಗಾಗುತ್ತದೆ ಎಂದು ಹೇಳಿದವರು ಯಾರು?' ಎಂಬ ಪ್ರಶ್ನೆಯನ್ನು ಕೇಳದೇ ಬಿಟ್ಟೆ.
ನನಗೆ ಅವ ಹೇಳುವುದೆಲ್ಲಾ ತಮಾಷೆ ಅನ್ನಿಸುತ್ತಿತ್ತು ಅದಕ್ಕೆ ಅವನೊಡನೆ 'ನಾನು ನೋಡೋದಕ್ಕೆ ಹೇಗಿದ್ದೇನೆ?' ಎಂದು ಕೇಳಿದೆ. "ಚೆನ್ನಗಿದ್ದೀರಿ ಸಾರ್ ಯಾಕೆ ?" ಎಂದು ಕೇಳಿದ. 'ನೋಡಯ್ಯ ಮೋಹಿನಿಗೆ ಈಗ ರಕ್ತ ಕುಡಿದು ಹೊಟ್ಟೆ ತುಂಬಿರ ಬಹುದು. ಎರಡು ದಿನ ಕಳೆದರೆ ಅದಕ್ಕೆ ಹಸಿವಾಗಲು ಸುರುವಾಗಬಹುದು. ಆಗ ನಾನೂ ನೀನು ಒಟ್ಟಿಗೆ ಹೋಗುವ ನಾನು ಮೋಹಿನಿಯನ್ನು ಹಿಡಿಯುತ್ತೇನೆ. ಅದು ಎಲ್ಲಾದರೂ ನನ್ನ ರಕ್ತ ಕುಡಿಯಲು ಸುರುಮಾಡಿದರೆ ನೀನು ಓಡಿಬಿಡು. ಇಲ್ಲದಿದ್ದರೆ ಇಬ್ಬರೂ ಅದನ್ನು ಹಿಡಿದು ಒಂದು ಗೂಡಿನಲ್ಲಿ ಇಡೋಣ. ಅದನ್ನು ನೋಡಲು ಬಂದವರಿಗೆ ಟಿಕೇಟಿಗಿಷ್ಟು ಎಂದು ಹಣ ತೆಗೆದುಕೊಳ್ಳೋಣ. ಬಂದ ಹಣವನ್ನು ಸಮಾನ ಪಾಲು ಮಾಡಿಕೊಳ್ಳೋಣ ಅಂದೆ. ಅವ ತುಂಬಾ ಗಂಭೀರನಾಗಿ ಬಿಟ್ಟಿದ್ದ. "ಸಾರ್, ಎಲ್ಲವೂ ತಮಾಷೆಯ ವಿಷಯವಲ್ಲ. ನೀವು ತಮಾಷೆ ಎಂದು ಎಲ್ಲಿಯಾದರೂ ಹೋದರೆ ಜೀವವೇ ಹೋದೀತು ಈಗ ಸತ್ತರಲ್ಲ ಅವರೂ ಹೀಗೆಲ್ಲಾ ಹೇಳುತ್ತಿದ್ದರಂತೆ" ಎಂದ.
ಆ ಮೇಲೆ "ಇದೆಲ್ಲಾ ಸುಳ್ಳಲ್ಲ ನಿಜವಾಗಿಯೂ ಇದೆ. ನನ್ನ ಮಾವನನ್ನು ಹಿಡಿಯಲು ಒಮ್ಮೆ ಬಂದಿತ್ತಂತೆ ಅವರು ಹೇಗೋ ತಪ್ಪಿಸಿ ಕೊಂಡು ಬಂದಿದ್ದರಂತೆ" ಅಂದ. ಪಾಪ ಅವನು ತುಂಬಾ ಗಂಭೀರವಾಗಿ ವಿಷಯವನ್ನು ನಂಬಿ ಹೇಳುತ್ತಿರುವಾಗ ನಾನು ತಮಾಷೆ ಮಾಡುವುದು ಸರಿಯಲ್ಲ ಅನ್ನಿಸಿ ವಿಷಯವನ್ನು ಅಲ್ಲಿಗೇ ಬಿಟ್ಟೆ. ಈಗ ಅವನಿಗೆ ಅವ ಮಾಡಬೇಕಾದ ಕೆಲಸಗಳನ್ನು ತಿಳಿಸಿಕೊಟ್ಟು ನಾನು ಪುತ್ತೂರಿನ ಕಡೆ ಹೊರಟಿದ್ದೆ.
ಈಗಾಗಲೇ ಪುತ್ತೂರಿಗೆ ತಲಪುವಾಗ ನಾಲ್ಕುಗಂಟೆ ಆದುದನ್ನು ತಿಳಿಸಿದ್ದೇನೆ. ಅಲ್ಲಿ ವಾರದ ಲೆಕ್ಕಾಚಾರ ಒಪ್ಪಿಸಿ ಅವರು ಮುಂದಿನ ವಾರಕ್ಕೆ ಹೇಳಿದ ಕೆಲಸಗಳನ್ನೆಲ್ಲಾ ಕೇಳಿಕೊಂಡು ಹೊರಡುವಾಗ ಗಂಟೆ 4:30 ಆಗಿತ್ತು. ಅಲ್ಲಿಂದ ಓಡಿ ಓಡಿ ಪುತ್ತೂರು ಬಸ್ ಸ್ಟೇಂಡ್ ಗೆ ತಲಪಿದಾಗ ಕಾಸರಗೋಡಿಗೆ ಹೋಗುವ ಕೊನೆಯ ಕೆ.ಬಿ.ಟಿ.ಬಸ್ ಕೂಡಾ ಹೋಗಿ ಆಗಿತ್ತು. ಆಗ ಪುತ್ತೂರಿನಿಂದ 4:30ಕ್ಕೆ ಕಾಸರಗೋಡಿಗೆ ಹೋಗುವ ಕೊನೆಯ ಬಸ್ ಇತ್ತು. ಅದು ಕಳೆದರೆ ಮಂಜೇಶ್ವರಕ್ಕೆ ಕನ್ಯಾನ ದಾರಿಯಾಗಿ ಹೋಗುವ ಬಸ್ಸು ಒಂದು ಇತ್ತು. ಅದು ಐದು ಗಂಟೆಗೆ ಹೊರಡುತ್ತಿತ್ತು ಎಂದು ನೆನಪು. ಹೇಗಿದ್ದರೂ ಮನೆಗೆ ಹೋಗಿಯೇ ಆಗಬೇಕು; ಇಲ್ಲವಾದರೆ ಅಪ್ಪ ರಾತ್ರಿ ಇಡೀ ಶತಪಥ ಹಾಕಿಯೇ ಬೆಳಗು ಮಾಡಿಯಾರು ಆದುದರಿಂದ ಎಷ್ಟು ಕಷ್ಟವಾದರೂ ಮನೆಗೆ ಹೋಗಿಯೇ ಆಗಬೇಕು ಎಂದು ನಿಶ್ಚಯ ಮಾಡಿದೆ.
ಏನು ಮಾಡಲಿ? ಎಂದು ಆಲೋಚಿಸುತ್ತಾ ಇದ್ದಂತೆ "ಪೆರ್ಲ- ಪೆರ್ಲ" ಎಂದು ಕರೆಯುತ್ತಾ ಎಂಬಾಸೆಡರ್ ಸರ್ವೀಸ್ ಕಾರೊಂದು ಬಂದಿತ್ತು. ಸೀದಾ ಕಾರಿನ ಬಳಿ ಹೋದೆ ಡ್ರೈವರೊಡನೆ 'ಪೆರ್ಲದಿಂದ ಕಾಸರಗೋಡಿಗೆ ಹೋಗುವ ಬಸ್ ಸಿಗಬಹುದೇ?' ಎಂದು ಕೇಳಿದೆ. "ಧಾರಾಳ 7:30ಕ್ಕೆ ಪೆರ್ಲದಿಂದ ಕಾಸರಗೋಡಿಗೆ ಬಸ್ಸಿದೆ" ಅಂದ. ಬಚಾವು ಎಂದು ಕಾರನ್ನು ಏರಿದೆ.
ಮತ್ತೂ ಒಂದು ಅರ್ಧ ಗಂಟೆ "ಪೆರ್ಲ ಪೆರ್ಲ" ಎಂಬ ರಾಗ ಹಾಡಿದಾಗ ಮೂರು ನಾಲ್ಕು ಜನ ನಡು ನಡುವೆ ಇಳಿಯುವರು ಸಿಕ್ಕಿದರು. ಅಂತೂ ಇಂತೂ 7:30 ಕ್ಕೆ ಮೊದಲು ಪೆರ್ಲ ತಲಪಿದೆ. ಕಾರಿನಿಂದ ಇಳಿದು ಬಸ್ ಸ್ಟೇಂಡಿಗೆ ಬಂದರೆ ಇಡೀ ಬಸ್ ಸ್ಟೇಂಡ್ ಖಾಲಿ. (ಅವನು ಕಾರನ್ನು ಸ್ವಲ್ಪ ಹಿಂದೆಯೇ ನಿಲ್ಲಿಸಿದ್ದ) ಅಲ್ಲಿರುವ ಗೂಡಂಗಡಿಯಲ್ಲಿ ಕೇಳಿದರೆ "ಪುತ್ತೂರಿನಿಂದ ಬರುವ ಕೆ.ಬಿ.ಟಿ. ಬಸ್ಸೇ ಕೊನೆಯ ಬಸ್ ಮತ್ತೆ ಬೇರೆ ಬಸ್ ಇಲ್ಲ" ಅಂದ. ಪಿತ್ತ ನೆತ್ತಿಗೆ ಏರಿತ್ತು. ಅದೇ ಸಿಟ್ಟಿನಲ್ಲಿ ಕಾರಿನವನ ಬಳಿ ಹೋಗಿ 'ಯಾಕೆ ಸುಳ್ಳು ಹೇಳಿದೆ?' ಎಂದು ಕೇಳಿದರೆ "ನಿಮಗೆ ಈಗ ಅಷ್ಟು ಹತ್ತಿರ ಆಯಿತಲ್ಲಾ ಮತ್ಯಾಕೆ ಸಿಟ್ಟು ಮಾಡಿಕೊಳ್ಳುತ್ತೀರಾ?" ಎಂದು ಕೇಳಿದ.
"ನಿಮಗೆ ಹೋಗಲೇ ಬೇಕಿದ್ದರೆ ನಾನೇ ಮಾಯಿಪ್ಪಾಡಿಗೆ ಬಿಡುವ 200 ರುಪಾಯಿ ಕೊಟ್ಟರೆ ಸಾಕು" ಅಂದ. 'ಎಲಾ ಪಾಪಿ! ಅದು ನನ್ನ ಒಂದು ತಿಂಗಳ ಸಂಬಳ' ಅಂದೆ. "ತೊಂದರೆ ಇಲ್ಲ ಸಾರ್ ಯಾವಾಗಲೂ ಕೊಡೋದಿಲ್ಲವಲ್ಲಾ?" ಅಂದ. ತಲೆಗೆ ಏರಿದ ಸಿಟ್ಟಿಗೆ "ತೊಂದರೆ ಇಲ್ಲ, ಯಾರಿಗೆ ಬಾಡಿಗೆ ಕೊಟ್ಟರೂ ನಿನಗೆ ಮಾತ್ರ ಬಾಡಿಗೆ ಕೊಡುವುದೇ ಇಲ್ಲ' ಅಂದೆ. ನನ್ನ ಕಾಲಿಗೆ ಸಾಕಷ್ಟು ಶಕ್ತಿ ಇದೆ ನಡೆದೇ ಹೋಗುತ್ತೇನೆ' ಎಂದು ಹೇಳಿದೆ. "ನೋಡಿ ಸ್ವಾಮಿ ಸಿಟ್ಟು ಮಾಡಬೇಡಿ 16 ಮೈಲು ಇದೆ (24 ಕಿ.ಮಿ.) ಅಷ್ಟನ್ನು ಈ ರಾತ್ರಿ ಟೋರ್ಚೂ ಕೂಡಾ ಇಲ್ಲದೆ ನಡೆಯುತ್ತೀರಾ? ಹುಣ್ಣಿಮೆಗೆ ಇನ್ನೂ 8 ದಿನ ಇದೆ" ಅಂದ. ಆ ಮೇಲೆ "ನಾನು ಸುಳ್ಳು ಹೇಳಿಲ್ಲ 7:30 ಕ್ಕೆ ಬಸ್ ಇದೇ ಎಂದು ತಿಳಿದಿದ್ದೆ" ಅಂದ. ನಾನು ಪರವಾಗಿಲ್ಲ 'ಮಾರ್ಗದಲ್ಲಿಯೇ ನಡೆಯುವಾಗ ಬೆಳಕು ಇಲ್ಲದಿದ್ದರೂ ನಡೆಯುತ್ತದೆ' ಅಂದೆ.
ಅವ ಕ್ಷಮೆ ಕೇಳುತ್ತಾ ನನ್ನ ಹಿಂದೆಯೇ ಬಂದು "ನೀವು ಪೆಟ್ರೋಲಿನ ದುಡ್ಡು ಕೊಟ್ಟರೆ ಸಾಕು ನಿಮ್ಮನ್ನು ಮಾಯಿಪ್ಪಾಡಿಗೆ ಬಿಟ್ಟು ಬರುತ್ತೇನೆ" ಅಂದ. 'ಪರವಾಗಿಲ್ಲ ನನಗೆ ನಡೆದು ಅಭ್ಯಾಸ ಇದೆ ನೀನು ಹೋಗು' ಅಂದೆ.
ಮುಂದೇನಾಯಿತು? 16 ಮೈಲನ್ನೂ ನಡೆದೆನೇ? ದಾರಿಯಲ್ಲಿ ಮೋಹನನೊಂದಿಗೆ ಆಡಲು ನಡೆದಾಡಲು ಮೋಹಿನಿ ಸಿಕ್ಕಿದಳೇ? ಎಲ್ಲಾ ತಿಳಿಯಲು ಓದಲೇ ಬೇಕು - ಭಾಗ - 6 - ನ್ನು.
- ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

