ಗುರುವಿಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಬೇಕು. ಗುರುಗಳು ನಮ್ಮ ದಾರಿದೀಪವಾಗಿ ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿ ಜೊತೆಗಿರುತ್ತಾರೆ.
ಮಾನವನ ಜೀವನದಲ್ಲಿ ತಾಯಿ-ತಂದೆಯ ನಂತರ ಅತ್ಯಂತ ಪ್ರಮುಖ ಸ್ಥಾನ ಹೊಂದಿರುವವರು ಗುರುಗಳು. "ಗು" ಎಂದರೆ ಕತ್ತಲೆ, "ರು" ಎಂದರೆ ಅದನ್ನು ನಿವಾರಿಸುವವನು. ಹೀಗಾಗಿ ನಮ್ಮ ಜೀವನದ ಅಜ್ಞಾನದ ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕನ್ನು ತೋರಿಸುವವನೇ ಗುರು.
ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನವಿದೆ. "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ" ಎಂದು ಹೇಳುವ ಮೂಲಕ ಗುರುಗಳೇ ಸೃಷ್ಟಿ, ಸ್ಥಿತಿ, ಲಯಕಾರಕರೆಂದು ಪರಿಗಣಿಸಲಾಗಿದೆ. ಗುರುಗಳು ಕೇವಲ ಪಾಠ ಹೇಳಿಕೊಡುವವರಲ್ಲ. ಅವರು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳು.
ಗುರುಗಳಲ್ಲಿ ಹಲವು ವಿಧವನ್ನು ಕಾಣಬಹುದು. ನಮ್ಮ ಮೊದಲ ಗುರುಗಳು ನಮ್ಮ ತಾಯಿ-ತಂದೆ. ಅವರು ನಮಗೆ ಮಾತನಾಡಲು, ನಡೆಯಲು, ಒಳ್ಳೆಯ-ಕೆಟ್ಟದರ ವ್ಯತ್ಯಾಸವನ್ನು ಕಲಿಸುತ್ತಾರೆ. ಎರಡನೆಯವರು ಶಾಲಾ-ಕಾಲೇಜಿನ ಶಿಕ್ಷಕರು ಅವರು ನಮಗೆ ಅಕ್ಷರ ಕಲಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಲ್ಲದೆ, ಜೀವನದಲ್ಲಿ ಹೇಗೆ ಮುನ್ನಡೆಯಬೇಕು ಎಂದು ಕಲಿಸುತ್ತಾರೆ.
ಮೂರನೆಯವರು ಜೀವನ ಗುರುಗಳು ಕಷ್ಟದ ಸಮಯದಲ್ಲಿ ನಮಗೆ ಸರಿಯಾದ ಸಲಹೆ ಕೊಟ್ಟು ದಾರಿ ತೋರಿಸುವ ಹಿರಿಯರು, ಸ್ನೇಹಿತರು ಇವರು. ನಾಲ್ಕನೆಯವರು ಆಧ್ಯಾತ್ಮಿಕ ಗುರುಗಳು. ಅವರು ನಮಗೆ ಧ್ಯಾನ, ಭಕ್ತಿ ಮತ್ತು ಮೋಕ್ಷದ ದಾರಿಯನ್ನು ತೋರಿಸುತ್ತಾರೆ.
ಗುರುವಿನ ಮುಖ್ಯ ಕರ್ತವ್ಯವೆಂದರೆ ಜ್ಞಾನವನ್ನು ನೀಡುವುದು. ಆದರೆ ಅದು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಒಳ್ಳೆಯ ಗುರು ಶಿಸ್ತು, ಪ್ರಾಮಾಣಿಕತೆ, ಕಷ್ಟಪಟ್ಟು ದುಡಿಯುವ ಗುಣ, ಇತರರಿಗೆ ಸಹಾಯ ಮಾಡುವ ಮನಸ್ಸನ್ನು ಕೂಡ ಕಲಿಸುತ್ತಾನೆ. ನಾವು ತಪ್ಪು ದಾರಿಗೆ ಹೋದಾಗ ನಮ್ಮನ್ನು ತಿದ್ದಿ ಸರಿ ದಾರಿಗೆ ತರುವ ಕೆಲಸವನ್ನು ಗುರುಗಳು ಮಾಡುತ್ತಾರೆ. ಅವರ ಒಂದು ಮಾತು ನಮಗೆ ಸಾವಿರ ಪುಸ್ತಕ ಓದಿದಷ್ಟು ಧೈರ್ಯವನ್ನು ಕೊಡುತ್ತದೆ.
ಇತಿಹಾಸದಲ್ಲಿ ಅರ್ಜುನ-ಕೃಷ್ಣ, ಏಕಲವ್ಯ-ದ್ರೋಣಾಚಾರ್ಯ, ರಾಮ-ವಶಿಷ್ಠ, ವಿವೇಕಾನಂದ-ರಾಮಕೃಷ್ಣ ಪರಮಹಂಸರ ಗುರು-ಶಿಷ್ಯ ಸಂಬಂಧಗಳು ನಮಗೆ ಮಾದರಿಯಾಗಿವೆ. ಇಂದಿನ ಕಾಲದಲ್ಲಿ ಗೂಗಲ್ ಯುಟ್ಯೂಬ್, ಇದ್ದರೂ ಒಬ್ಬ ಗುರುಗಳ ಪ್ರೀತಿ, ಪ್ರೋತ್ಸಾಹ ಮತ್ತು ವೈಯಕ್ತಿಕ ಮಾರ್ಗದರ್ಶನಕ್ಕೆ ಬೇರೆ ಪರ್ಯಾಯವಿಲ್ಲ.
ಗುರು ಇಲ್ಲದೆ ನಾವು ಏನೂ ಅಲ್ಲ. ಒಂದು ಅಕ್ಷರ ಕಲಿಸಿದವರಿಗೂ ನಾವು ಋಣಿಯಾಗಿದ್ದೇವೆ. ಆದ್ದರಿಂದ ಗುರುಗಳನ್ನು ಗೌರವಿಸುವುದು, ಅವರ ಮಾತನ್ನು ಕೇಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
- ಶಿವಾನಿ ಕೊಡಂಗಾಯಿ
ದ್ವಿತೀಯ ಬಿಎ ಪತ್ರೀಕೋಧ್ಯಮ ವಿಭಾಗ

