ಕಲಿಕೆಗೆ ಗಡಿಗಳಿಲ್ಲ, ಸ್ವ-ಸಾಮರ್ಥ್ಯದಿಂದ ಯಶಸ್ಸು ಸಾಧ್ಯ: ಡಾ. ಶಶಾಂಕ್ ಕುಳಮರ್ವ

Upayuktha
0


ಉಜಿರೆ: ವಿದ್ಯಾರ್ಥಿಗಳು ತಮ್ಮ 'ಸುರಕ್ಷಿತ ವಲಯ'ದಿಂದ ಹೊರಬರದೆ ಹೋದರೆ ಜೀವನದಲ್ಲಿ ಹೊಸತನ ಹಾಗೂ ದೊಡ್ಡ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫೋರ್ಮೆಟಿಕ್ಸ್‌ನ ಪ್ರೋಗ್ರಾಮ್ ಸ್ಪೆಸಿಫಿಕ್ ರಿಸರ್ಚರ್ ಆಗಿರುವ ಡಾ. ಶಶಾಂಕ ಕುಳಮರ್ವ ಅವರು ಹೇಳಿದರು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಸ್ವಾಯತ್ತ ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿದ್ದ ಶೈಕ್ಷಣಿಕ ಚಟುವಟಿಕಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಶಾಂಕ ಕುಳಮರ್ವ ಅವರು, ವಿದ್ಯಾರ್ಥಿಗಳು ತಾವು ಮಾಡುವ ಕಲಿಕೆ, ಆಯ್ಕೆ ಮಾಡಿಕೊಳ್ಳುವ ವೃತ್ತಿ ಮತ್ತು ಅದರಿಂದ ದೊರೆಯುವ ಪರಿಣಾಮಗಳ ನಡುವೆ ನಿರ್ದಿಷ್ಟ ಗುರಿ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಜಪಾನ್‌ನಂತಹ ಮುಂದುವರಿದ ದೇಶಗಳಲ್ಲಿ ಈ ರೀತಿಯ ಜೀವನ್ಮುಖಿ ಚಿಂತನೆಗಳನ್ನು ಬದುಕಿನ ಮುಖ್ಯ ಚೌಕಟ್ಟಾಗಿ ಪಾಲಿಸಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.


ಯಾವುದೇ ಕಾರಣಕ್ಕೂ ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡದೆ, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸಮಾಜಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕೆಂದು ಕರೆ ನೀಡಿದ ಅವರು, ತಮ್ಮ ಸಾಧನೆಯ ಹಾದಿಯ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.


ಕಾರ್ಯಕ್ರಮವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವ ಸಮುದಾಯದ ನಡುವೆ ಅತಿ ಹೆಚ್ಚು ಚರ್ಚೆಯಲ್ಲಿರುವ ಸಂಗತಿ ಎಂದರೆ ಮೊಬೈಲ್, ಕೃತಕ ಬುದ್ಧಿಮತ್ತೆ ಮತ್ತು ಝೆನ್ ಜೀ. ಈಗಿನ ವಿದ್ಯಾರ್ಥಿ ಸಮೂಹ ವಿಶೇಷ ಕೌಶಲ್ಯಗಳ ಜೊತೆಗೆ ಹೊಸ ಯೋಚನೆ ಮತ್ತು ಯೋಜನೆಯನ್ನು ರೂಪಿಸುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ನಾವು ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಮತ್ತು ಹೇಗೆ ಸಾಧನೆಯ ಹಾದಿಯಲ್ಲಿ ಸಾಗುತ್ತೇವೆ ಎಂಬುದನ್ನು ನಮ್ಮೊಳಗಿನ ನಿರಂತರವಾದ ಪ್ರಯತ್ನ ಶೀಲತೆ, ದೃಡತೆ, ನಂಬಿಕೆ ಮತ್ತು ಸ್ವ ಸಾಮರ್ಥ್ಯ ನಿರ್ಧರಿಸುತ್ತದೆ. ಪ್ರತಿ ವಿದ್ಯಾರ್ಥಿ ಸಂಘಗಳು ಹಾಗು ಈ ಮೂಲಕ ನಿರಂತರವಾಗಿ ನಡೆಯುವ ಪಠ್ಯೇತರ ಚಟುವಟಿಕೆಗಳು ನಮ್ಮೊಳಗಿನ ಪ್ರತಿಭೆ ಮತ್ತು ಕೌಶಲ್ಯಗಳ ಬೆಳವಣಿಗೆ ಮತ್ತು ಅನಾವರಣಕ್ಕೆ ಇರುವ ಬಹುದೊಡ್ಡ ವೇದಿಕೆ ಎಂದು ನುಡಿದರು.


ಪ್ರತಿ ಸಾಧನೆಯ ಹಾದಿಯಲ್ಲಿ ಸವಾಲು ಮತ್ತು ಸಮಸ್ಯೆಗಳು ಸಹಜ. ಹಾರುವ ಹಕ್ಕಿಯು ಮರದ ರೆಂಬೆಗಳನ್ನು ಅವಲಂಬಿಸಿ ಕೂರುವುದಕ್ಕಿಂತಲೂ ಯಾವುದೇ ಗಾಳಿ ಮಳೆ ಬಂದರೂ ಎತ್ತರಕ್ಕೆ ನಾನು ಹಾರಬಲ್ಲೆ ಎಂಬ ಸ್ವ ನಂಬಿಕೆ ಮತ್ತು ಧೈರ್ಯದಿಂದ ಕೂರುತ್ತದೆ. ಅಂತಹ ಆತ್ಮವಿಶ್ವಾಸ ನಮ್ಮಲ್ಲಿ ಬೆಳೆಯಬೇಕು. ಪ್ರತಿಭೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ನಮ್ಮ ರೆಕ್ಕೆಗಳಾಗಿ ರೂಪಿಸಿಕೊಂಡು ಎತ್ತರಕ್ಕೆ ಹಾರಬೇಕು. ಕ್ರೀಯಾ ಶೀಲತೆ, ಸಂವಹನ ಕೌಶಲ್ಯ, ನಾಯಕತ್ವದ ಗುಣ ಹಾಗು ಹೊಸತನದಿಂದ ಗುರುತಿಸಿಕೊಂಡಾಗ ಸಕರಾತ್ಮಕವಾಗಿ ಬೆಳೆಯುತ್ತವೆ. ತರಗತಿಗಳು ಜ್ಞಾನವನ್ನು ಪರಿಚಯಿಸಿದರೆ ಪಠ್ಯೇತರ ಚಟುವಟಿಕೆಗಳು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದರು.


ಇದೇ ವಿಶೇಷ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ 'ಚಿಗುರು' ವಿಶೇಷ ಸಂಚಿಕೆ ಹಾಗು ಹಾಗೂ ಛಾಯಾಚಿತ್ರಗಳ ಭಿತ್ತಿಪತ್ರಿಕೆಯನ್ನು ಡಾ. ಶಶಾಂಕ ಕುಳಮರ್ವ ಅವರು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳ ಸೃಜನಶೀಲ ಪ್ರಯತ್ನಕ್ಕೆ ಶುಭ ಹಾರೈಸಿದರು.


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿಶ್ವನಾಥ್ ಪಿ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೇಯಸ್ ಬಿ., ವಿವಿಧ ವಿದ್ಯಾರ್ಥಿ ಸಂಘಗಳ ಅಧ್ಯಕ್ಷರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top