ಸುರತ್ಕಲ್: ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್ಐಟಿಕೆ) ಸುರತ್ಕಲ್, ಭಾರತ ಸರ್ಕಾರದ 'ನಶಾ ಮುಕ್ತ ಭಾರತ ಅಭಿಯಾನ (NMBA)–2026'ಕ್ಕೆ ಸಕ್ರಿಯ ಬೆಂಬಲ ವ್ಯಕ್ತಪಡಿಸಿದ್ದು, ಮಾದಕವಸ್ತು ಮುಕ್ತ ಕ್ಯಾಂಪಸ್ ನಿರ್ಮಾಣದ ಉದ್ದೇಶದಿಂದ ನಿಗಾವಳಿ ಹಾಗೂ ಶಿಸ್ತು ಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ.
ಈ ಅಭಿಯಾನದ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾದ 'ನಶಾ ಮುಕ್ತ ಯುವಾ ಫಾರ್ ವಿಕ್ಸಿತ್ ಭಾರತ ಅಭಿಯಾನ–2026' ಕಾರ್ಯಕ್ರಮದಲ್ಲಿ ಎನ್ಐಟಿಕೆ ಭಾಗವಹಿಸಿತು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವಜನತೆಗೆ ಆನ್‌ಲೈನ್ ಮೂಲಕ ಸಂದೇಶ ನೀಡಿದರು. ಎನ್ಐಟಿಕೆ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಏರ್ಪಡಿಸಲಾಗಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಮಿಷನ್‌ನ ಭಾಗವಾಗಿ ಎನ್ಐಟಿಕೆ ಆಡಳಿತ ಮಂಡಳಿ (BOG) 'ಸೇಫ್, ಸೆರೀನ್ ಅಂಡ್ ಇನ್‌ಕ್ಲೂಸಿವ್ ಕ್ಯಾಂಪಸ್' ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯು ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಮಾದಕ ದ್ರವ್ಯಗಳು ಮತ್ತು ಮನೋವಿಕಾರಕಾರಿ ಪದಾರ್ಥಗಳ ಕಾಯ್ದೆ (NDPS Act), 1985ರ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡುತ್ತದೆ. ಇದರಡಿ ಕ್ಯಾಂಪಸ್‌ನಲ್ಲಿ ತಂಬಾಕು, ಮದ್ಯ ಹಾಗೂ ಇತರ ಮಾದಕ ಪದಾರ್ಥಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ಮಾದಕ ದ್ರವ್ಯ ಹೊಂದಿದ್ದ ಆರೋಪದಡಿ ಎನ್ಐಟಿಕೆಯ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಂಬಂಧಿತ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮಗಳ ಜೊತೆಗೆ ಸಂಸ್ಥೆಯ ಶಿಸ್ತು ನಿಯಮಗಳ ಅಡಿಯಲ್ಲಿ ಅಗತ್ಯ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎನ್ಐಟಿಕೆ ಆಡಳಿತ ತಿಳಿಸಿದೆ.
ಮಾದಕವಸ್ತು ಮುಕ್ತ ಕ್ಯಾಂಪಸ್ ನಿರ್ಮಾಣದ ಉದ್ದೇಶದಿಂದ ಎನ್ಐಟಿಕೆಯ ಮಾದಕ ದ್ರವ್ಯ ವಿರೋಧಿ ಸಮಿತಿ (Anti-Drug Committee - ADC) ಹಾಸ್ಟೆಲ್‌ಗಳು ಹಾಗೂ ಕ್ಯಾಂಪಸ್ ಆವರಣದಲ್ಲಿ ನಿಯಮಿತ ತಪಾಸಣೆಗಳನ್ನು ನಡೆಸುತ್ತಿದೆ. ಮೇಲ್ವಿಚಾರಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಜೊತೆಗೆ, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ನೀತಿ ಸಂಹಿತೆಯ ಪ್ರಕಾರ, ಕ್ಯಾಂಪಸ್‌ನಲ್ಲಿ ಮಾದಕವಸ್ತು ಬಳಕೆ ಮತ್ತು ಅದರ ಸ್ವಾಧೀನಕ್ಕೆ 'ಶೂನ್ಯ ಸಹಿಷ್ಣುತೆ (Zero Tolerance)' ನೀತಿಯನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ, ಪಾರದರ್ಶಕತೆ ಹಾಗೂ ಆರೋಗ್ಯಕರ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಈ ಬೆಳವಣಿಗೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಎನ್ಐಟಿಕೆ ಆಡಳಿತ ಸ್ಪಷ್ಟಪಡಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

