ನಮ್ಮ ಹಳ್ಳಿಯಲ್ಲಿ ಹಿರಿಯರು ಹುಷಾರಿಲ್ಲದ ಸಮಯದಲ್ಲಿ ಒಂದು ಔಷಧಿಯನ್ನು ಬಳಸುತ್ತಿದ್ದರು. ಅದರಲ್ಲಿ ಒಂದು ಪ್ರಮುಖ ಸಸ್ಯವೇ ಕಿರಾತಕಡ್ಡಿ. ಕಹಿ ರುಚಿ ಇದ್ದರೂ ನೂರಾರು ರೋಗಗಳಿಗೆ ರಾಮಬಾಣ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ನಮ್ಮ ಪುತ್ತೂರು ಸುತ್ತಮುತ್ತಲೂ ಅದನ್ನು ಕಾಣಬಹುದು.
ಕನ್ನಡ ಹೆಸರು ಕಿರಾತಕಡ್ಡಿ, ಕಟು ಕಡ್ಡಿ. ಸಸ್ಯದ ಲಕ್ಷಣ 30-60 ಸೆಂ.ಮೀ ಎತ್ತರ ಬೆಳೆಯುತ್ತದೆ. ಇಡೀ ಸಸ್ಯವೇ ತುಂಬಾ ಕಹಿ. ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ.
ಮುಖ್ಯವಾಗಿ ಹಿಮಾಲಯದಲ್ಲಿ, ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಕಾಡುಗಳಲ್ಲಿ ಸಿಗುತ್ತದೆ.
ಕಿರಾತಕಡ್ಡಿಯ ಔಷಧೀಯ ಗುಣಗಳು: ಆಯುರ್ವೇದದಲ್ಲಿ ಇದನ್ನು "ಜ್ವರಘ್ನ" ಅಂದರೆ ಜ್ವರವನ್ನು ಇಳಿಸುವ ಸಸ್ಯ ಎಂದು ಕರೆಯುತ್ತಾರೆ.
ಜ್ವರ ನಿವಾರಣೆಯನ್ನು ಮಾಡುತ್ತದೆ. ಮಲೇರಿಯಾ, ಟೈಫಾಯಿಡ್, ಸಾಮಾನ್ಯ ಜ್ವರಕ್ಕೆ ಕಿರಾತಕಡ್ಡಿ ಕಷಾಯ ಅತ್ಯುತ್ತಮ. ರಕ್ತವನ್ನು ಶುದ್ಧಿ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಮಾಡುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣ, ಹಸಿವಾಗದ ಸಮಸ್ಯೆಗೆ ಇದರ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿಯುತ್ತಾರೆ. ಲಿವರ್ ಗೆ ತುಂಬಾ ಒಳ್ಳೆಯದು.
ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣವಿದೆ. ಮಧುಮೇಹಿಗಳಿಗೆ ವೈದ್ಯರ ಸಲಹೆಯ ಮೂಲಕ ಬಳಸಬಹುದು.
ಚರ್ಮ ರೋಗಗಳಿಗೆ ಬಳಸುತ್ತಾರೆ. ಕಜ್ಜಿ, ತುರಿ, ಮೊಡವೆಗಳಿಗೆ ಇದರ ನೀರಿನಲ್ಲಿ ಸ್ನಾನ ಮಾಡಿದರೆ ಗುಣವಾಗುತ್ತದೆ. ಹೊಟ್ಟೆಯಲ್ಲಿರುವ ಹುಳುಗಳನ್ನು ಕೊಲ್ಲುವ ಶಕ್ತಿ ಇದೆ.
ರೋಗ ನಿರೋಧಕ ಶಕ್ತಿಯನ್ನು ಕಿರಾತಕಡ್ಡಿ ಹೊಂದಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ಧ ಮಾಡುತ್ತದೆ.
ಕಿರಾತಕಡ್ಡಿಯನ್ನು ಕಷಾಯ ಮಾಡಿ ಕುಡಿಯಲು ಆಗುತ್ತದೆ.
1 ಚಮಚ ಕಿರಾತಕಡ್ಡಿ ಪುಡಿ + 2 ಲೋಟ ನೀರು. ಅರ್ಧ ಲೋಟ ಆಗುವವರೆಗೆ ಕಾಯಿಸಿ, ದಿನಕ್ಕೆ 2 ಬಾರಿ ಕುಡಿದರೆ ಕಡಿಮೆಯಾಗುತ್ತದೆ ಎಂಬ ಹಿರಿಯರ ನಂಬಿಕೆ.
ಒಣಗಿದ ಸಸ್ಯವನ್ನು ಪುಡಿ ಮಾಡಿ, ಜೇನುತುಪ್ಪದ ಜೊತೆ ಸೇವಿಸಬಹುದು. ತಲೆನೋವು ಮತ್ತು ಚರ್ಮ ರೋಗಗಳಿಗೆ ಎಣ್ಣೆಯಲ್ಲಿ ಕುದಿಸಿ ಹಚ್ಚಿದರೆ ಕಡಿಮೆಯಾಗುತ್ತದೆ.
ಅತಿಯಾಗಿ ಸೇವಿಸಿದರೆ ಹೊಟ್ಟೆನೋವು, ವಾಂತಿ ಬರುತ್ತದೆ. ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ವೈದ್ಯರ ಸಲಹೆ ಇಲ್ಲದೆ ಬಳಸಬಾರದು ಎಂದು ಹೇಳುತ್ತಾರೆ.
ಇಂದಿನ ದಿನಗಳಲ್ಲಿ ನಾವು ಆಂಟಿಬಯೋಟಿಕ್ ಮಾತ್ರೆ ಗಳನ್ನು ಕುಡಿಯುತ್ತೇವೆ. ಆದರೆ ಕಿರಾತಕಡ್ಡಿಯಂತಹ ಸಸ್ಯಗಳು ಯಾವುದೇ ಅಡ್ಡಪರಿಣಾಮವಿಲ್ಲದೆ ರೋಗವನ್ನು ಗುಣಪಡಿಸುತ್ತವೆ. ಆಯುರ್ವೇದ, ಹೋಮಿಯೋಪತಿ ಔಷಧ ಕಂಪನಿಗಳು ಇದನ್ನು ವ್ಯಾಪಕವಾಗಿ ಬಳಸುತ್ತಿವೆ. ಕಾಡು ಕಡಿತದ ಕಾರಣ ಈ ಸಸ್ಯ ನೋಡಲು ಅಪರೂಪವಾಗಿವೆ. ಆದ್ದರಿಂದ ಇದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
"ಕಹಿ ಮದ್ದು ತಿಂದರೆ ರೋಗ ಹೋಗುತ್ತದೆ"ಎಂಬುದಕ್ಕೆ ಕಿರಾತಕಡ್ಡಿ ಉದಾಹರಣೆಯಾಗಿದೆ. ಪ್ರಕೃತಿ ನಮಗೆ ಕೊಟ್ಟ ಉಚಿತ ಔಷಧಾಲಯವೇ ಈ ಸಸ್ಯ. ನಮ್ಮ ಪೂರ್ವಜರ ಜ್ಞಾನವನ್ನು ಉಳಿಸಿಕೊಂಡು, ಈ ಕಹಿ ಔಷಧಿಯನ್ನು ಬಳಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಶಿವಾನಿ ಕೊಡಂಗಾಯಿ
ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು.

