ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ
ಪುತ್ತೂರು: ನಮ್ಮ ದೇಶದ ಕ್ರಾಂತಿಕಾರಿಗಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಅಡಗಿಸಿಟ್ಟು ಅಹಿಂಸೆಯಿಂದಲೇ ಸ್ವಾತಂತ್ರ್ಯ ದೊರಕಿತು ಎಂಬ ಭಾವನೆಯನ್ನು ದೇಶದಾದ್ಯಂತ ತುಂಬುವ ಪ್ರಯತ್ನಗಳಾಗಿವೆ. ಹಾಗಾಗಿಯೇ ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಿದ ನಿಜ ಹೋರಾಟಗಾರರ ಬಗೆಗೆ ನಮಗೆ ಏನೇನೂ ತಿಳಿದಿಲ್ಲ ಎಂದು ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಎಂಬತ್ತನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಹಿಂಸೆಯಿಂದ ಶತ್ರುಗಳನ್ನು ಒದ್ದೋಡಿಸಬಹುದು ಎಂದಾದರೆ ತ್ರೇತಾಯುಗದಲ್ಲಿ ಶ್ರೀರಾಮನೂ ರಾವಣನ ವಿರುದ್ಧ ಶಸ್ತ್ರ ಎತ್ತಬೇಕಿರಲಿಲ್ಲ. ಕಪಿ ಸೈನ್ಯಕ್ಕೆಲ್ಲಾ ಚರಕಗಳನ್ನು ನೀಡಿ ರಾವಣನನ್ನು ಬಗ್ಗುಬಡಿಯಬಹುದಿತ್ತು. ಅದು ಅಸಾಧ್ಯವಾದ ಕಾರಣದಿಂದಲೇ ಶ್ರೀರಾಮ ಬಿಲ್ಲನ್ನೆತ್ತಿದ. ಹಾಗಾಗಿ ತಮ್ಮ ಭವಿಷ್ಯವನ್ನು ಲೆಕ್ಕಿಸದೆ ದೇಶಕ್ಕಾಗಿ ಸಮರ್ಪಿಸಿಕೊಂಡವರನ್ನು ನೆನೆಯುವ ಕಾರ್ಯಗಳಾಗಬೇಕಿದೆ. ಕ್ರಾಂತಿಕಾರಿಗಳಿಂದಾಗಿ ನಮಗೆ ಸ್ವಾತಂತ್ರ್ಯ ದಕ್ಕಿದೆ ಎಂದರು.
ಬಲಿದಾನ ಮಾಡಿದವರ ನೆನಪಿಗಾಗಿ, ತ್ಯಾಗ ಮಾಡಿದವರ ನೆನಪಿಗಾಗಿ ಸ್ವಾತಂತ್ರ್ಯ ಆಚರಣೆಯನ್ನು ನಡೆಸಬೇಕು ಎಂದರಲ್ಲದೆ ದೇಶದ ಭವಿಷ್ಯವಾದ ಝೆನ್ ಜಿ ಗಳು ಜಂತರ್ ಮಂತರ್ ನಲ್ಲಿ ದೇಶದ್ರೋಹಿ ಘೋಷಣೆ ಕೂಗುವ ಮಟ್ಟಕ್ಕೆ ಬಂದಿರುವುದು ಆತಂಕಕಾರಿಯಾದರೆ ಅದೇ ಝೆನ್ ಜಿಗಳಲ್ಲಿ ಬಹುದೊಡ್ಡ ಸಂಖ್ಯೆ ದೇಶಪ್ರೇಮಿಗಳಾಗಿಯೂ ಇದ್ದಾರೆ ಎಂಬುದು ಸಮಾಧಾನತರುವ ವಿಚಾರ ಎಂದು ನುಡಿದರು.
ಜಗತ್ತಿನ ಉಳಿದೆಲ್ಲಾ ದೇಶಗಳು ಕೇವಲ ನಕ್ಷೆಗಳಾದರೆ ನಮ್ಮ ದೇಶ ಭಾವನೆಗಳನ್ನೊಳಗೊಂಡ ಭಾರತ ಮಾತೆಯಾಗಿ ಕಾಣಿಸಿದೆ. ನಮ್ಮ ಮಾತೆಯನ್ನು ಭಕ್ತಿಯಿಂದ ಆರಾದಧಿಸುವ ವಂದೇ ಮಾತರಂ ಗೀತೆ ಕೆಂಪುಕೋಟೆಯಲ್ಲಿ ಮೊಳಗಲು ನಾವು ಸ್ವಾತಂತ್ರ್ಯ ಬಂದ ನಂತರವೂ ಎಂಬತ್ತು ವರ್ಷ ಕಾಯಬೇಕಾಯಿತು. ವಂದೇ ಮಾತರಂ ಮೊಳಗುವ ಹೊತ್ತಿಗೆ ನಾವೆಲ್ಲಾ ಇರುವುದು ನಮ್ಮ ಪುಣ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಂಹಸದೃಶರಾಗಿ ತೊಡಗಿಸಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಆ ಮಾದರಿಯನ್ನು ನಮ್ಮ ಮಕ್ಕಳಿಗೆ ನನಪಿಸಿಕೊಡುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಝೀ ಕನ್ನಡ ವಾಹಿನಿಯ ಲಿಟ್ಲ್ ಚಾಂಪಿಯನ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿ ಸನ್ಮಯ್ ಹಾಗೂ ಹೆತ್ತವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯರಾದ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ್ ಶೆಟ್ಟಿ ಕೆ., ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ. ರೈ, ಅಂಬಿಕಾ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ - ಬೋಧಕೇತರ ವೃಂದದವರು , ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಳಾದ ಸನ್ಮಯ್ ಪ್ರಾರ್ಥಿಸಿ, ಶ್ರೇಯಾ ಎಂ.ಎಸ್. ಸ್ವಾಗತಿಸಿದರು. ವಿದ್ಯಾರ್ಥಿನಿ ಲಾವಣ್ಯ ಎಸ್.ಬಿ.ಅತಿಥಿ ಪರಿಚಯ ನಡೆಸಿದರೆ ವಿದ್ಯಾರ್ಥಿ ತನುಷ್ ವಂದಿಸಿದರು. ಉಪನ್ಯಾಸಕಿಯರಾದ ಚೈತ್ರಾ ಹಾಗೂ ಜಯಂತಿ ಹೊನ್ನಮ್ಮ ಮತ್ತು ಶಿಕ್ಷಕಿಯರಾದ ವಿದ್ಯಾ ಸರಸ್ವತಿ ಹಾಗೂ ಅನುಪಮ ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ಅಙ್ಯಾ ವಿ.ಕೆ., ಸಿಂಚನಾ ಎ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೀಧರ್ಯ ಸನ್ಮಾನಿತರನ್ನು ಪರಿಚಯಿಸಿದರು.
ಧ್ವಜಾರೋಹಣ ಹಾಗೂ ಮೆರವಣಿಗೆ : ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಗ್ಗೆ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಕ್ಯಾಂಪಸ್ ಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ತದನಂತರ ಎರಡೂ ಕ್ಯಾಂಪಸ್ ಗಳಿಂದ ಕಿಲ್ಲೆ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಿ, ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಯ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸರಕಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

%20(2).png)
