ಗಡಿನಾಡ ಧೀರೆ ಪ್ರೇಮ ಕೆ. ಭಟ್ ಬದುಕು ಸಮಾಜಕ್ಕೆ ಆದರ್ಶ: ಕಾಸರಗೋಡು ಚಿನ್ನಾ

Upayuktha
0


ಮಣಿಪಾಲ: ತಮ್ಮ 27ನೇ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು, ನಾಲ್ವರು ಮಕ್ಕಳನ್ನು ಒಬ್ಬಂಟಿಯಾಗಿ ಸಾಕಿ-ಸಲಹಿದ ಕಾಸರಗೋಡು ಮೀಯಪದವಿನ 'ಗಡಿನಾಡ ಧೀರೆ ಪ್ರೇಮ ಕೆ. ಭಟ್' ಅವರ ಜೀವನ ಮತ್ತು ಸಾಧನೆಗಳ ಕುರಿತು ಮಣಿಪಾಲದ ಸರಿಗಮಭಾರತಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ 'ಅಮ್ಮನ ಸವಿ ನೆನಪು' ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ, ನಟ ಹಾಗೂ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿದರು.


"ಪ್ರೇಮ ಕೆ. ಭಟ್ ಅವರು ಬದುಕಿದ ರೀತಿ, ಅನುಸರಿಸಿದ ಮೌಲ್ಯಗಳು ಮತ್ತು ಸಮಾಜಮುಖಿ ಕಾರ್ಯಗಳು ಅವರ ನಿಧನದ ನಂತರವೂ ಅವರ ಬದುಕನ್ನು ಜನಮನದಲ್ಲಿ ಜೀವಂತವಾಗಿರಿಸಿವೆ. ತಮ್ಮ ಎಳೆಯ ಮಕ್ಕಳೊಂದಿಗೆ ಏಕಾಂಗಿಯಾಗಿ ಬದುಕನ್ನು ಕಟ್ಟಿಕೊಂಡ ಅವರು, ಊರಿನಲ್ಲಿ ಶಾಲೆಗಳ ನಿರ್ಮಾಣ ಮತ್ತು ಬೆಳವಣಿಗೆಗೆ ಅಪಾರ ಶ್ರಮ ವಹಿಸಿದರು. ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದರ ಜೊತೆಗೆ ಅನೇಕ ಮಂದಿಗೆ ವಿದ್ಯಾದಾನ ನೀಡಿ ಮಾದರಿಯಾದರು. ಉತ್ತಮ ಕೃಷಿಕೆಯಾಗಿಯೂ, ಧಾರ್ಮಿಕ ಮುಖಂಡೆಯಾಗಿಯೂ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಅವರು 'ಗಡಿನಾಡ ಧೀರೆ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕಾಸರಗೋಡಿನ ಹೆಮ್ಮೆಯಾಗಿದ್ದಾರೆ" ಎಂದು ಹೇಳಿದರು.


ಕಾರ್ಯಕ್ರಮದ ಆರಂಭದಲ್ಲಿ ಪ್ರೇಮ ಕೆ. ಭಟ್ ಅವರ ಪುತ್ರಿ, ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರ ಕವನಗಳನ್ನು ಉಡುಪಿಯ ವಿದುಷಿ ಸಂಗೀತಾ ಬಾಲಚಂದ್ರ ಅತ್ಯಂತ ಭಾವಪೂರ್ಣವಾಗಿ ಹಾಡಿದರು. ಬಳಿಕ ಪ್ರಮೀಳಾ ಚುಳ್ಳಿಕ್ಕಾನ ಅವರು ತಾಯಿಯ ನೆನಪಿನಲ್ಲಿ ಆಶುಕವಿತೆಯನ್ನು ವಾಚಿಸಿ ಸಭಿಕರ ಮನಸ್ಸನ್ನು ಸ್ಪರ್ಶಿಸಿದರು.


ಸಭೆಯ ಅಧ್ಯಕ್ಷತೆಯನ್ನು ಡಾ. ಜಯಪ್ರಕಾಶ್ ನಾರಾಯಣ ವಹಿಸಿದ್ದರು. ವಿದುಷಿ ಉಮಾಶಂಕರಿ ಸ್ವಾಗತಿಸಿದರು. ಡಾ. ಎಚ್. ಎನ್. ಉದಯಶಂಕರ್ ವಂದನಾರ್ಪಣೆಗೈದರು. ಜಿ.ಪಿ. ಪ್ರಭಾಕರ್ ಹಾಗೂ ಶಿಲ್ಪ ಜೋಷಿ ಕಾರ್ಯಕ್ರಮವನ್ನು ನಿರೂಪಿಸಿದರು.


ಬಳಿಕ ಬೆಂಗಳೂರಿನ ವಿದುಷಿ ಚಾರುಲತಾ ರಾಮಾನುಜಂ ಅವರಿಂದ 'ನಾದ ನಮನ' ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಅವರಿಗೆ ವಿದುಷಿ ಸಿಂಧು ಸುಚೇತನ್ ವಯೋಲಿನ್‌ನಲ್ಲಿ ಹಾಗೂ ವಿದ್ವಾನ್ ಅರ್ಜುನ ಕುಮಾರ್ ಮೃದಂಗದಲ್ಲಿ ಸೊಗಸಾಗಿ ಸಹಕರಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top