ಬೆಂಗಳೂರು: ಸಾವರ್ಕರ್ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ರಾಷ್ಟ್ರೀಯ ವಿಚಾರಧಾರೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ದು. ಗು. ಲಕ್ಷ್ಮಣ ಮತ್ತು ಖ್ಯಾತ ಲೇಖಕ ಹಾಗೂ ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ್ ಅವರು ಸಾವರ್ಕರ್ ಸಾಹಿತ್ಯ ಸಂಘ (ರಿ.) ನೀಡುವ ಪ್ರತಿಷ್ಠಿತ 'ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಸಾಹಿತ್ಯ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು, ಈ ಹಿಂದೆ ದಿವಂಗತ ಶಿವರಾಮು, ಬಿ.ಪಿ. ಪ್ರೇಮ್ ಕುಮಾರ್ ಹಾಗೂ ಬಾಬು ಕೃಷ್ಣಮೂರ್ತಿ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.
ಇದೀಗ 2025ನೇ ಸಾಲಿನ (4ನೇ ವರ್ಷದ) ಪ್ರಶಸ್ತಿಯನ್ನು ಹಿರಿಯ ಲೇಖಕ ಹಾಗೂ ಪತ್ರಕರ್ತ ದು. ಗು. ಲಕ್ಷ್ಮಣ ಅವರಿಗೆ ಹಾಗೂ 2026ನೇ ಸಾಲಿನ (5ನೇ ವರ್ಷದ) ಪ್ರಶಸ್ತಿಯನ್ನು 25ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿರುವ ಹಿರಿಯ ಪತ್ರಕರ್ತ ಬಿ.ಎಸ್. ಜಯಪ್ರಕಾಶ ನಾರಾಯಣ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಯು ತಲಾ 25,000 ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಈ ಎರಡೂ ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಆಗಸ್ಟ್ 29, 2026ರ ಶನಿವಾರದಂದು ಸಂಜೆ 5.30ಕ್ಕೆ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಜರುಗಲಿದೆ. ಇದೇ ವೇದಿಕೆಯಲ್ಲಿ ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷ ಹಾಗೂ ಇತಿಹಾಸ ತಜ್ಞ ಡಾ. ಜಿ.ಬಿ. ಹರೀಶ ಅವರು ದಾಖಲೆಗಳ ಆಧಾರದ ಮೇಲೆ ರಚಿಸಿರುವ 'ವೀರ ಸಾವರ್ಕರ್ ಮತ್ತು ಸರ್ದಾರ್ ಭಗತ್ ಸಿಂಗ್ ಭೇದವು ಏಕೆ?' ಎಂಬ ಸಂಶೋಧನಾತ್ಮಕ ಕೃತಿಯ ಲೋಕಾರ್ಪಣೆಯೂ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ 'ಅದಮ್ಯ ಚೇತನ' ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಭಾಗವಹಿಸಲಿದ್ದಾರೆ. ಜೊತೆಗೆ ಮಾಜಿ ವಿಧಾನ ಪರಿಷತ್ ಸದಸ್ಯೆ ಡಾ. ಎಸ್.ಆರ್. ಲೀಲಾ ಹಾಗೂ ಸಮೃದ್ಧ ಸಾಹಿತ್ಯದ ಪ್ರಕಾಶಕರಾದ ಹರ್ಷ ಸಮೃದ್ಧ ಅವರು ಉಪಸ್ಥಿತರಿರಲಿದ್ದಾರೆ ಎಂದು ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷರಾದ ಡಾ. ಜಿ.ಬಿ. ಹರೀಶ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

