ಜಠರಾಗ್ನಿಯೇ ದೈವಿಕ ಶಕ್ತಿ; ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ - ರಾಮಚಂದ್ರಾಪುರ ಶ್ರೀ

Upayuktha
0

* ನಿಂತು ತಿಂದರೆ ರಾಕ್ಷಸ ಗುಣ, ಕುಳಿತು ಸಮಾಧಾನದಿಂದ ತಿಂದರೆ ದೇವತಾ ಭಾವ


* ಬೆಲೆಬಾಳುವ ಅಕ್ಕಿಗಿಂತ ಆಯುರ್ವೇದದಲ್ಲಿ ತಿಳಿಸಿರುವ 'ಶಾಷ್ಟಿಕ', 'ರಕ್ತಶಾಲಿ' ಅಕ್ಕಿಗಳೇ ಶ್ರೇಷ್ಠ.


* ನಕಾರಾತ್ಮಕ ಭಾವನೆಗಳೊಂದಿಗೆ ಆಹಾರ ಸೇವನೆ ಬೇಡ

ಗೋಕರ್ಣ: ಶರೀರವು ತ್ರಿಮೂರ್ತಿಗಳಿಂದ ಆವೃತವಾಗಿದ್ದು, ಬ್ರಹ್ಮ - ವಿಷ್ಣು - ರುದ್ರರೇ ಕ್ರಮವಾಗಿ ವಾತ - ಕಫ ಹಾಗೂ ಪಿತ್ತ ರೂಪದಲ್ಲಿ ನೆಲೆನಿಂತಿದ್ದಾರೆ. ಶರೀರವು ತ್ರಿಮೂರ್ತಿಮಯವಾಗಿದ್ದು, ವಾತ, ಪಿತ್ತ ಮತ್ತು ಕಫಗಳಿಂದಲೇ ಶರೀರ ಕಾರ್ಯಾಚರಿಸುತ್ತಿದೆ. ಜಠರಾಗ್ನಿ ಕೇವಲ ಆಹಾರವನ್ನು ಜೀರ್ಣಿಸುವ ಶಕ್ತಿಯಲ್ಲ. ಅದು ದೈವಿಕ ಶಕ್ತಿಯ ಪ್ರತೀಕ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 14.08.2026 ರಂದು 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ 'ಜಠರಾಗ್ನಿ'ಯ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹಸಿವು ಎಂಬುದು ಸಾಕ್ಷಾತ್ ಪರಮಾತ್ಮನೇ ಆಗಿದ್ದು, ಜಠರಾಗ್ನಿಯು ಪಿತ್ತರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅದರ ಮೂಲ ಸ್ವರೂಪ ದೈವಿಕವಾಗಿದೆ. ಜಠರಾಗ್ನಿಯು ಜೀವಶಕ್ತಿಯ ಕೇಂದ್ರವಾಗಿದ್ದು, ಈ ಕುರಿತಾಗಿ ಶೃತಿಸ್ಮೃತಿಗಳ ಉಲ್ಲೇಖಗಳಿವೆ. ಸುಶೃತ ಹಾಗೂ ಚರಕ ಮಹರ್ಷಿಗಳ ಆಯುರ್ವೇದ ಗ್ರಂಥಗಳಲ್ಲಿಯೂ ಈ ಕುರಿತಾಗಿ ವಿಮರ್ಶೆಗಳು ನಡೆದಿದ್ದು, ಅಗ್ನಿ ಹಾಗೂ ಪಿತ್ತ ಇವೆರಡರ ಕುರಿತಾದ ಸುದೀರ್ಘ ವಿಮರ್ಶೆಯೂ ಇದ್ದು, ಪಿತ್ತವೆಂದರೆ ಶಿವ ಎಂದು ಪ್ರತಿಪಾದಿತವಾಗಿದೆ. ಇದು ಜಠರಾಗ್ನಿಯ ಮಹತ್ವ ಹಾಗೂ ಅದಕ್ಕಿರುವ ಆಧ್ಯಾತ್ಮಿಕತೆಯನ್ನು ತಿಳಿಸುತ್ತದೆ ಎಂದರು.


ಊಟಮಾಡುವಾಗ ಸಿಟ್ಟು, ದ್ವೇಷ, ಅಸೂಯೆ, ಭಯಗಳಿಂದ ಆಹಾರವನ್ನು ಸ್ವೀಕರಿಸಿದರೆ ನಮ್ಮಲ್ಲಿ ರಾಕ್ಷಸ ಭಾವ ಉತ್ಪತ್ತಿಯಾಗುತ್ತದೆ. ಆಹಾರ ಸೇವನೆಯ ಸಮಯದಲ್ಲಿ ದಯೆ, ಕರುಣೆಗಳಂತಹ ಸದ್ಭಾವ ಇದ್ದಾಗ ದೇವತಾ ಭಾವ ಉತ್ಪತ್ತಿಯಾಗಲಿದ್ದು, ತಿನ್ನುವ ಸಮಯದ ಮನಸ್ಥಿತಿ ಜೀವಿಯ ಮನಸ್ಸಿಗೆ ಕಾರಣವೂ ಆಗುತ್ತದೆ ಎಂದು ಆಯುರ್ವೇದ ಗ್ರಂಥಗಳ ಆಧಾರದಲ್ಲಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.


ಏನು ತಿನ್ನುತ್ತೇವೆ? ಎಂಬಷ್ಟೇ ಪ್ರಾಮುಖ್ಯತೆಯು ತಿನ್ನುವ ಸಮಯದ ಭಾವ - ಭಂಗಿ ಹಾಗೂ ಸ್ಥಳಗಳಿಗೂ ಮಹತ್ವವಿದ್ದು, ಊಡಾದುತ್ತಾ ತಿನ್ನುವುದು, ನಿಂತುಕೊಂದು ಆಹಾರ ಹಾಗೂ ಪಾನೀಯವನ್ನು ಸ್ವೀಕರಿಸಿದರೆ ಅದು ರಾಕ್ಷಸರಿಗೆ ಸಲ್ಲುತ್ತದೆ ಎಂದು ಹೇಳಲಾಗಿದ್ದು, ಕ್ರಮಬದ್ಧವಾಗಿ ಕುಳಿತುಕೊಂಡು ಆಹಾರ ಸ್ವೀಕರಿಸಿದರೆ ಸತ್ವಗುಣ ವೃದ್ಧಿಯಿಂದಾಗಿ ಆ ಆಹಾರವು ದೇವತೆಗಳಿಗೆ ಸಲ್ಲುತ್ತದೆ ಎಂದು ಹೇಳಲಾಗಿದ್ದು, ಸತ್ವ - ರಜಸ್ಸು ಹಾಗೂ ತಮೋ ಗುಣಗಳ ಹಿನ್ನೆಲೆಯ ಸಂಶೋಧನೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಸಾತ್ವಿಕ ಆಹಾರವೇ ಆದರೂ, ಅಶುಚಿಯಾದ ಸ್ಥಳದಲ್ಲಿ ಸೇವಿಸಿದರೆ ಅದು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದರು.


ಯಾವ ಅಕ್ಕಿ ಶ್ರೇಷ್ಠ? : ಬೆಲೆ ಹೆಚ್ಛಿರುವ ಅಕ್ಕಿಗಳೆಲ್ಲಾ ಶ್ರೇಷ್ಠವೆಂದೇನಲ್ಲ. ಬಾಸುಮತಿ ಅಕ್ಕಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿದೆ. ಆ ಕಾರಣಕ್ಕೆ ಅದೇ ಶ್ರೇಷ್ಠ ಎಂದು ಹೇಳಲಾಗದು. ಶಾಷ್ಟಿಕ, ರಕ್ತಶಾಲಿ ಅಕ್ಕಿಗಳನ್ನು ಆಯುರ್ವೇದವು ಶ್ರೇಷ್ಠ ಎಂದು ಹೇಳಿದೆ. ಜನರಿಗೆ ಅವುಗಳ ನಿಜವಾದ ಮೌಲ್ಯ ತಿಳಿದಿಲ್ಲ. ನಿಜವಾಗಿ ಯಾವುದು ಪ್ರಶಸ್ತವೋ ಅದನ್ನು ಶ್ರೇಷ್ಠವೆಂದು ಪರಿಗಣಿಸಿ ಸ್ವೀಕರಿಸಬೇಕು ಎಂದು ತಿಳಿಸಿದರು.


ಬೆಂಗಳೂರಿನ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಶ್ರೀಶ್ರೀ ಡಾ|| ಆರೂಢ ಭಾರತಿ ಸ್ವಾಮಿಗಳು ಗೋಕರ್ಣದ ಅಶೋಕೆಗೆ ಭೇಟಿನೀಡಿ, ಶ್ರೀಗಳನ್ನು ಸಂದರ್ಶಿಸಿದರು. ಆಹಾರದ ಕುರಿತಾಗಿ ಭಾರತೀಯ ಚಿಂತನೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಅಂಗಸಂಸ್ಥೆ ಗೋಫಲ ಟ್ರಸ್ಟ್ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಟ್ರಸ್ಟಿನ ಪ್ರಮುಖರು, ವಿತರಕರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಗೋಫಲ ಟ್ರಸ್ಟ್'ನ ನೂತನ ಉತ್ಪನ್ನ 'ಸ್ವರ್ಗಸಾರ ಸವಿಶೇಷ'ವನ್ನು ಲೋಕಾರ್ಪಣೆ ಮಾಡಲಾಯಿತು. ಶಿರಸಿಯ ಬಾಲಚಂದ್ರ ಕೃಷ್ಣ ಹೆಗಡೆ ಕುಟುಂಬದವರಿಂದ ಗುರುಭಿಕ್ಷಾಸೇವೆ ನೆರವೇರಿತು. ದಿನಪ್ರಧಾನರಾಗಿ ನಾರಾಯಣ ಹೆಗಡೆ ವಂದೂರು ದಂಪತಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top