ಸೇವೆಗೊಂದು ಮಾದರಿ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು

Upayuktha
0


 ಚೊಕ್ಕಾಡಿ ಎನ್ನುವುದು ಸುಪರಿಚಿತ ಪುಟ್ಟ ಗ್ರಾಮ. ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ ಹೀಗೆ ಬಹುಮುಖಿ ಚಟುವಟಿಕೆಗಳಿಗೆ ಮುಡಿಪಿಟ್ಟ ಹಲವು ಮಹನೀಯರನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಇಲ್ಲಿಯದು. ಈ ಪುಟ್ಟ ಗ್ರಾಮದಲ್ಲಿ ಚೂಂತಾರು ಎನ್ನುವುದು ಒಂದು ಸಣ್ಣ ಬೈಲು. ಸಣ್ಣ ಬೈಲಿನಲ್ಲಿ ವೈದಿಕ ಮನೆತನಕ್ಕೆ ಸೇರಿದ ನಾಲ್ಕಾರು ಕುಟುಂಬಗಳು ಈ ಪ್ರತಿಷ್ಠಾನದ ರೂವಾರಿಗಳು.


ಮನುಷ್ಯನಿಗೆ ವಿವಿಧ ರೀತಿಯ ಋಣ ಭಾರಗಳಿವೆ. ಅಂತಹ ಋಣ ಭಾರವನ್ನು ಇಳುಹಲು ಸಾಮಾಜಿಕವಾಗಿ, ಕೌಟುಂಬಿಕವಾಗಿ ತನ್ನ ಕರ್ತವ್ಯಗಳನ್ನು ಪಾಲಿಸಬೇಕಾದ್ದು ಮತ್ತು ಪೂರೈಸಬೇಕಾದ್ದು ವೃತ್ತಿ ಧರ್ಮ. ಆ ನೆಲೆಯಲ್ಲಿ ಚೂಂತಾರು  ಶ್ರೀ ಲಕ್ಷ್ಮೀ ನಾರಾಯಣ ಭಟ್ಟ ಮತ್ತು ಶ್ರೀಮತಿ ಸರೋಜಿನಿ ಭಟ್ಟರ ಮಕ್ಕಳು ತಮ್ಮ ತಾಯಿಯವರ ಹೆಸರಿನಲ್ಲಿ ಪ್ರತಿಷ್ಠಾನದ ಮೂಲಕ ಅನುಸರಣೀಯ ಕೆಲಸಕ್ಕೆ ಮುಂದಾಗಿದ್ದಾರೆ. 


2006 ಡಿಸೆಂಬರ್ 07ರಂದು ಅಕಾಲಿಕವಾಗಿ ಮರಣ ಹೊಂದಿದ ಸರೋಜಿನಿ ಭಟ್ಟರು ತನ್ನ ಮಕ್ಕಳನ್ನು ಅನಾಥವಾಗಿಸಲಿಲ್ಲ. ಆದರೆ ಮಕ್ಕಳಿಗೆ ಆ ಕೊರತೆ ಬಾಧಿಸಿತು. ಬಡತನದ ಬೇಗೆ, ಮನೆ ತುಂಬಾ ಮಕ್ಕಳು. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಜವಾಬ್ದಾರಿಯ ನಿರ್ವಹಣೆ ಪೂರ್ತಿಯಾಗಿ ತಾಯಿಯವರ ಹೆಗಲಲ್ಲಿತ್ತು. ತಂದೆ ಲಕ್ಷ್ಮೀ ನಾರಾಯಣ ಭಟ್ಟರು ಖ್ಯಾತ ಪುರೋಹಿತರಾದ ಚೂಂತಾರು ಮಹಾಲಿಂಗೇಶ್ವರ ಭಟ್ಟರ ಹಿರಿಯ ಮಗ, ಕುಲವೃತ್ತಿಯನ್ನೇ ಮಾಡುತ್ತಿದ್ದರು. ಕುಟುಂಬ ನಿರ್ವಹಣೆಗೆ ಕಷ್ಟ ಸಾಧ್ಯವಾದ ಆದಾಯ, ಬೇರೆ ಆದಾಯ ಮೂಲಗಳಿಲ್ಲದಿದ್ದರೂ ಮಕ್ಕಳ ವಿದ್ಯಾಭ್ಯಾಸವನ್ನೆಂದೂ ಕುಂಠಿತಗೊಳಿಸದೆ ಭವಿಷ್ಯದ ಭವ್ಯ ಹೊಂಗನಸನ್ನು ಕಾಣುತ್ತಿದ್ದರು. 


ಆ ಸುಖ ಅನುಭವಿಸುತ್ತಿರುವ ಹೊತ್ತಲ್ಲೇ ಸರೋಜಿನಿಯವರ ಮರಣ ಪತಿಗೆ ಮತ್ತು ಮಕ್ಕಳಿಗೆ ತೀವ್ರ ಅಘಾತ ನೀಡಿತು. ಜೊತೆಗೆ ಹೊಸ ಪಾಠವನ್ನು ಕಲಿಸಿತು. ಅದರ ಫಲವಾಗಿ ಮಗಳು ಶ್ರೀಮತಿ ಗೀತಾದೇವಿ, ಪುತ್ರರಾದ ಮಹೇಶ್‌ಭಟ್, ಡಾ| ಮುರಲೀ ಮೋಹನ್ ಚೂಂತಾರು ಮತ್ತು ನಾಕೇಶ್ ಇವರೆಲ್ಲರೂ ಸೇರಿ ತಾಯಿಯವರ ಹೆಸರಿನಲ್ಲಿ ಋಣಭಾರ ಇಳುಹಲು ಹುಟ್ಟುಹಾಕಿದ ಸಂಸ್ಥೆಯೇ “ಚೂಂತಾರು ಸರೋಜಿನಿ ಭಟ್ಟ ಪ್ರತಿಷ್ಠಾನ”. ಸದ್ಯ ಅವರೆಲ್ಲರೂ ಉನ್ನತ ವ್ಯಾಸಂಗ ಮುಗಿಸಿ ವಿವಿಧೆಡೆಯಲ್ಲಿ ವೃತ್ತಿನಿರತರಾಗಿದ್ದಾರೆ. 


ಇವರು ಹಳ್ಳಿಯ (ಪಿ.ಯು.ಸಿ ವರೆಗೆ) ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದಿದವರೆನ್ನುವುದು ಇಂದಿನ ಕಾಲಘಟ್ಟದಲ್ಲಿ ಗುರುತಿಸುವಂತಾದ್ದು. ತಾವು ಬೆಳೆದು ಬಂದ ಕಠಿಣ ಹಾದಿಯ ನೆನಪಿನೊಂದಿಗೆ ಮೈಗೂಡಿಸಿಕೊಂಡ ಸೇವಾಪರತೆ, ಕರ್ತವ್ಯ ಪರಾಯಣತೆಯ ಪ್ರತೀಕವಾಗಿ ಈ ಪ್ರತಿಷ್ಠಾನವನ್ನು ಮುನ್ನಡೆಸಿಕೊಂಡು ಹೋಗುವ ಧ್ಯೇಯ-ಧೋರಣೆಗಳನ್ನು ಹಾಕಿಕೊಂಡು ದಿನಾಂಕ ೨೩.೦೬.೨೦೧೩ರಂದು ತಾವು ಹುಟ್ಟಿದ, ಬೆಳೆದ, ಓಡಾಡಿದ ಊರಾದ ಚೊಕ್ಕಾಡಿಯ ಶ್ರೀರಾಮನ ಸನ್ನಿಧಿಯಲ್ಲಿ ಪ್ರತಿಷ್ಠಾನವು ಉದ್ಘಾಟನೆಗೊಂಡಿತು.


ಪ್ರತಿಷ್ಠಾನದ ಪ್ರಮುಖ ರೂವಾರಿಗಳಲ್ಲೊಬ್ಬರಾದ ಡಾ| ಮುರಲೀಮೋಹನ ಚೂಂತಾರ್‌ರವರುತನ್ನ ವೈದ್ಯ ವೃತ್ತಿಯ ಜೊತೆಗೆ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆ, ರಾಷ್ಟ್ರೀಯ ಸೇವಾ ಯೋಜನೆ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ನಿರಂತರವಾಗಿ  ತೊಡಗಿಸಿಕೊಂಡು ಜನಾನುರಾಗಿ ವೈದ್ಯರಾಗಿ ಹೆಸರು ಗಳಿಸಿರುತ್ತಾರೆ. ಇದರ ಜೊತೆಗೆ ಚೂಂತಾರು ಸರೋಜಿನಿ ಪ್ರತಿಷ್ಟಾನದ ಮುಖಾಂತರ ವನಮಹೋತ್ಸವ, ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಶಿಬಿರ, ವೈದ್ಯಕೀಯ, ದಂತಚಿಕಿತ್ಸೆ ಮೊದಲಾದ ಉಚಿತ ಶಿಬಿರಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಾ ಬರುತ್ತಿದ್ದಾರೆ. 


ಪ್ರತಿಷ್ಠಾನವು ಏನು ಮಾಡುತ್ತಿದೆ? 


ಮೂರು ಮುಖ್ಯ ಉದ್ದೇಶ ಅದರದು- ಒಂದು ಆಶ್ರಯ; ನಿರ್ಗತಿಕರಿಗೆ, ಅಗತ್ಯವುಳ್ಳವರಿಗೆ, ಸಾಧ್ಯತೆಗಳಿಗನುಗುಣವಾಗಿ ಮನೆ ಕಟ್ಟಿಕೊಡುವುದು. ಎರಡು ಆಸರೆ; ಶಿಕ್ಷಣಕ್ಕೆ ಸಹಾಯ ಮತ್ತು ಪರಿಸರ ಸಂರಕ್ಷಣೆಯ ಚಟುವಟಿಕೆಗಳು, ಮೂರನೆಯದು ಆರೋಗ್ಯ; ಇದು ಪ್ರತಿಷ್ಠಾನದ ಪ್ರಧಾನ ಉದೇಶವಾಗಿದ್ದು, ಯಾವುದೇ ಸಂದರ್ಭದಲ್ಲಿ ಯಾರಿಗೇ ಆಗಲಿ ಆರೋಗ್ಯ ಸಂಬಂಧಿಯಾದ ಸಮಸ್ಯೆಗಳಿಗೆ ಪ್ರಾಥಮಿಕದಿಂದ ತೊಡಗಿ ಉನ್ನತ ಚಿಕಿತ್ಸೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಒದಗಿಸಿಕೊಡುವುದು. 


ಜೊತೆಗೆ ಸರಕಾರದ ಹಲವು ಆರೋಗ್ಯ ಯೋಜನೆಗಳನ್ನು ಅರ್ಹರಿಗೆ ದೊರಕುವಂತೆ ಮಾಡುವುದು. ಇಂತಹ ಜನಮುಖಿ ಮತ್ತು ಸಮಾಜಮುಖಿ ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು ನಮ್ಮ ತಾಲೂಕಿಗೆ ಮಾತ್ರವಲ್ಲ ಇಡೀ ಜಿಲ್ಲೆಗೇ ಒಂದು ವರದಾನವಾಗಿದೆ. ಸ್ವತಃ ವೈದ್ಯರಾಗಿರುವ ಡಾ| ಮುರಲೀ ಮೋಹನ್‌ರವರು ಎಲ್ಲರಲ್ಲೂ ಆಶಾಭಾವನೆ ಮೂಡಿಸಿದ್ದಾರೆ. ಕಳೆದ ಹದಿಮೂರು ವರುಷದಲ್ಲಿ ಇನ್ನೂರಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸರೋಜಿನಿ ಪ್ರತಿಷ್ಟಾನ ಜನಮಾನಸದಲ್ಲಿ  ಹೊಸ ಭರವಸೆ ಮತ್ತು ಆಶಾವಾದವನ್ನು  ಹುಟ್ಟಿಸಿದೆ.


ಸದ್ಯ ಪ್ರತಿಷ್ಟಾನದ ಗೌರವಾಧ್ಯಕ್ಷರಾಗಿ ಮಹೇಶ್‌ಭಟ್, ಕಾರ್ಯದರ್ಶಿಗಳಾಗಿ ಡಾ| ಮುರಲೀಮೋಹನ ಚೂಂತಾರು, ಕಾನೂನು ಸಲಹೆಗಾರರಾಗಿ ಗಣೇಶ್ ಸುಂದರ್ ಕೆ.ಜಿ., ನಿರ್ದೇಶಕರಾಗಿ ನಾಕೇಶ್, ಶ್ರೀಮತಿ ರಾಜಶ್ರೀ ಮೋಹನ್, ಗಂಗಾಲಕ್ಷ್ಮಿ ಮಹೇಶ್, ಪರಮೇಶ್ವರಿ ನಾಕೇಶ್ ಹಾಗೂ ಸಲಹೆಗಾರರಾಗಿ ಆನೆಕಾರ್ ಗಣಪಯ್ಯ, ಹೆಬ್ಬಾರ್ ಸತ್ಯ ವೆಂಕಟೇಶ ಶೇಣಿ, ಅಶೋಕ್ ಚೂಂತಾರು, ಸಿದ್ದಿವಿ ನಾಯಕ ಭಟ್, ರಾಮಕೃಷ್ಣ ಭಟ್,ವಕೀಲರಾದ ಶ್ರೀ ಶಂಕರ ಭಟ್ ನೀರಬಿದಿರೆ, ಪ್ರದೀಪ್ ರೈ ಪನ್ನೆ ಇವರು ಪ್ರತಿಷ್ಠಾನವನ್ನು ಮುನ್ನಡೆಸುತ್ತಿದ್ದಾರೆ. 


- ರಾಮಕೃಷ್ಣ ಭಟ್ ಚೊಕ್ಕಾಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top