ಬಿ ಸಿ ನಾಗೇಶ್ ಮತ್ತು ಉಡುಪಿ ಒಂದು ಅನೂಹ್ಯ ನಂಟು

Upayuktha
0


ರಾಜ್ಯದ ಮಾಜಿ ಶಿಕ್ಷಣ ಸಚಿವ ಶ್ರೀ ಬಿ ಸಿ ನಾಗೇಶ್ ಅವರು ನಿಧನರಾದ ವಾರ್ತೆ ತಿಳಿದು ತೀವ್ರ ವಿಷಾದವಾಗಿದೆ. ಶ್ರೀ ಬಿ ಸಿ ನಾಗೇಶ್ ರಾಜ್ಯ ಕಂಡ ಓರ್ವ ಅತ್ಯಂತ ಸರಳ ಸಜ್ಜನ ಪ್ರಾಮಾಣಿಕ ರಾಜಕಾರಣಿ. ಶಾಸಕರಾಗಿದ್ದಾಗಲೂ ರೈಲಿನಲ್ಲೇ ಪ್ರಯಾಣಮಾಡ್ತಾ ಇದ್ದವರು! ಇವತ್ತಿನ ಕಾಲಕ್ಕೆ ಇದು ತೀರಾ ಅಪರೂಪ.


ಕೊರೊನ ವಿಪತ್ತಿನ ಕಾಲಘಟ್ಟದಂಥಹ ಅತ್ಯಂತ ಕಠಿಣ ಕಾಲಘಟ್ಟದಲ್ಲಿ ಶಿಕ್ಷಣ ಇಲಾಖೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ತಿಪಟೂರಿನಿಂದ ಶಾಸಕರಾಗಿದ್ದವರು. ಆದರೆ ಕಳೆದ ಚುನಾವಣೆಯಲ್ಲಿ ಸೋಲು ಕಂಡರು. ಆ ಬಳಿಕ ಅನಾರೋಗ್ಯಕ್ಕೊಳಗಾದರು. ಬಹಳ ಬೇಗ ನಿರ್ಗಮಿಸಿದರು. ಇನ್ನೂ ಬಹಳ ಕಾಲ ಅಂಥ ಸಜ್ಜನರ ಅವಶ್ಯಕತೆ ರಾಜ್ಯ ರಾಜಕಾರಣಕ್ಕೆ ಇತ್ತು.


ಕೊರೊನಾ ವಿಪತ್ತಿನ ಕಾಲದಲ್ಲಿ ರಾಜ್ಯದ ಶಿಕ್ಷಣ ಸಚಿವರಾಗಿದ್ದರು ಬಿ ಸಿ ನಾಗೇಶ್

ಆಗ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೆಂಗಳೂರಿನ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸ್ತಾ ಇದ್ರು. ಒಂದು ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವಂತೆ ಫೋನ್ ಕರೆ ಮಾಡಿ ತಿಳಿಸಿದ್ದೆ ಅಷ್ಟೆ. ಒಂದು ದಿನ ಕರೆ ಮಾಡಿ ಇವತ್ತು ಸಾಯಂಕಾಲ ಬರ್ತೇನೆ ಅಂದ್ರು. ರಾತ್ರಿ 8/8.30 ಸುಮಾರಿಗೆ ಕುಟುಂಬ ಸಮೇತ ಬಂದ್ರು. ಅವರು ಇಲಾಖೆಯ ಕಾರಲ್ಲಿ ಬರ್ಲಿಲ್ಲ. ಎಸ್ಕಾರ್ಟ್ ಕೂಡಾ ಇರ್ಲಿಲ್ಲ! ಅವರನ್ನು ಎದುರುಗೊಂಡವನೇ (ವಿದ್ವಾನ್ ಕೇಶವಾಚಾರ್ಯರೂ ಇದ್ರು) ಏನ್ ಸಾರ್ ಇದು ಅಂದೆ? ಇದು ಸರ್ಕಾರಿ ಭೇಟಿ ಅಲ್ಲ... ಖಾಸಗಿ ಅಲ್ವಾ? ಅದಕ್ಕೆ ಸರ್ಕಾರಿ ವಾಹನದಲ್ಲಿ ಎಸ್ಕಾರ್ಟ್ ಇಟ್ಕೊಂಡು ಬಂದಿಲ್ಲ ಅಂದ್ರು. ಇದು ಬಿ ಸಿ ನಾಗೇಶ್ ಅವರ ವ್ಯಕ್ತಿತ್ವದ ಸಣ್ಣ ಝಲಕ್. ಹೋಗಿ ಬನ್ನಿ ಸರ್. ನಿಮ್ಮ ಸರಳತೆ ಸಜ್ಜನಿಕೆಯೇ ನಿಮಗೆ ಸದ್ಗತಿಯನ್ನು ಕೊಡುತ್ತದೆ.


ಅತ್ಯಂತ ಉಲ್ಲೇಖನೀಯ ಸಂಗತಿ ಒಂದು ಇದೆ: 

"ಉಡುಪಿಗೂ ಅವರಿಗೂ ಒಂದು ನಂಟು ಇರುವ ವಿಚಾರ ಅದು"


ದಿವಂಗತ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ನಿಧನದ ನಂತರ ಅವರ ಹೆಸರನ್ನು ಸ್ಥಾಯಿಯಾಗಿಸುವ ಒಂದು ಸ್ಮರಣೀಯ ಪ್ರಯತ್ನ ಆಗಿನ ಶಾಸಕ ರಘುಪತಿ ಭಟ್ಟರ ನೇತೃತ್ವದಲ್ಲಿ ಆಯ್ತು. ಶಿಕ್ಷಣ ಇಲಾಖೆಯ ಆಗಿನ ಮಂತ್ರಿಗಳಾಗಿದ್ದ ಎಸ್ ಸುರೇಶ್ ಕುಮಾರ್ ಅವರಲ್ಲಿ (ಗ್ರಂಥಾಲಯ ಇಲಾಖೆ ಅದರ ಅಧೀನಕ್ಕೆ ಬರ್ತದೆ) ಪ್ರಸ್ತಾವವನ್ನೂ ಸಲ್ಲಿಸಲಾಯಿತು. ಆದರೆ ಅದು ಆದೇಶವಾಗುವಾಗ ಮಂತ್ರಿಗಳಾಗಿ ಇದ್ದವರು ಬಿ ಸಿ ನಾಗೇಶ್ ಅವರು! ಉಡುಪಿಯ ಜಿಲ್ಲಾ ಕೇಂದ್ರ ಮತ್ತು ನಗರ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಬಂದಿದ್ರೂ ನಾಗೇಶ್ ಅವರು ಬಂದಿರಲಿಲ್ಲ. ಆದ್ರೆ ಈ ಮೂಲಕ ಅವರು ಉಡುಪಿಗೆ ಹಾಗೂ ದೇಶದ ಶ್ರೇಷ್ಠ ವಿದ್ವಾಂಸರ ಹೆಸರನ್ನು ಸ್ಥಾಯಿಗೊಳಿಸುವಲ್ಲಿ ವಹಿಸಿದ ಒಂದು ಪಾತ್ರ ನಾಡಿನ ಎಲ್ಲ ಆಸ್ತಿಕ ಮಹನೀಯರಿಗೆ ಬನ್ನಂಜೆಯವರ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಸದಾ ಸ್ಮರಣೀಯ.


ಬನ್ನಂಜೆಯವರ ಕುಟುಂಬ ಹಾಗೂ ಅವರ ಸಮಸ್ತ ಅಧ್ಯಾತ್ಮ ಬಂಧುಗಳ ಪರವಾಗಿ ಬಿ ಸಿ ನಾಗೇಶ್ ಅವರಿಗೆ ಸದ್ಗತಿಯನ್ನು ಉಡುಪಿ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ


-ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top