ನಿನ್ನೆ ಬುಧವಾರ (ಆಗಸ್ಟ್ 19, 2026) ನಮ್ಮನ್ನು ಅಗಲಿದ ಶ್ರೀ ಕೇಶವರಾಯ ಪ್ರಭುಗಳು ಉಡುಪಿ ಕಂಡ ಓರ್ವ ಶ್ರೇಷ್ಠ ರಾಷ್ಟ್ರನಿಷ್ಠ ಸ್ವಯಂಸೇವಕರು. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ತಮ್ಮ ಇಡೀ ಜೀವನವನ್ನು ರಾಷ್ಟ್ರ ಮತ್ತು ಧರ್ಮ ಕಾರ್ಯಗಳಿಗೆ ಸಮರ್ಪಿಸಿಕೊಂಡವರು.
ಮಾರ್ಗದರ್ಶಕ ಜ್ಯೋತಿ
ನನಗೂ ಅವರಿಗೂ ವಯಸ್ಸಿನಲ್ಲಿ ತಲೆಮಾರಿನ ಅಂತರವಿತ್ತು. ಆದರೆ ಅನೇಕ ವರ್ಷಗಳಿಂದ ಅವರು ರಾಷ್ಟ್ರ ಮತ್ತು ಧರ್ಮಕಾರ್ಯಗಳಲ್ಲಿ ನಮಗೆ ನೀಡಿದ ಪ್ರೀತಿ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಎಂದಿಗೂ ಚೇತೋಹಾರಿ. ನಾನು 'ಸಂಸ್ಕಾರ ಭಾರತಿ'ಯಲ್ಲಿ ಕೆಲಸ ಮಾಡಲು ಆರಂಭಿಸಿದ ದಿನಗಳಿಂದಲೂ, ನಮ್ಮ ಎಲ್ಲ ವಿಶಿಷ್ಟ ಕಾರ್ಯಕ್ರಮಗಳಿಗೂ ತಪ್ಪದೇ ಬಂದು, ಮಾರ್ಗದರ್ಶನ ನೀಡಿ, ತಿದ್ದಿ ತೀಡಿ, ಒಳ್ಳೆಯ ಅಂಶಗಳನ್ನು ಪ್ರಶಂಸಿಸುತ್ತಿದ್ದ ಅಪರೂಪದ ಸಜ್ಜನರವರು.
ಪ್ರಚಾರ ಬಯಸದ ನಿಃಸಂಗ ಸೇವಕ
ಉಡುಪಿಯ ಅನೇಕ ಪರ್ಯಾಯೋತ್ಸವಗಳಲ್ಲಿ ಪ್ರಭುಗಳದ್ದು ಗಣನೀಯವಾದ ಪಾತ್ರ. ಆದರೆ ಎಂದಿಗೂ ಮುಂಭಾಗದಲ್ಲಿ ಕಾಣಿಸಿಕೊಂಡವರಲ್ಲ. ಪ್ರಚಾರದ ಹಂಬಲವಿಲ್ಲದೆ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡುವ ಅವರ ಶ್ರಮ ಯಾರ ಗಮನಕ್ಕೂ ಬರುವುದು ಸುಲಭವಿರಲಿಲ್ಲ. ಅನೇಕ ಪರ್ಯಾಯ ಸ್ವಾಗತ ಸಮಿತಿಗಳಲ್ಲಿ 'ವಸತಿ ಸಮಿತಿ'ಗೆ ಕೇಶವರಾಯ ಪ್ರಭುಗಳೇ ಅವಿರೋಧ ಆಯ್ಕೆಯಾಗಿ ಸಂಚಾಲಕರಾಗುತ್ತಿದ್ದರು.
ವಸತಿ ಸಮಿತಿಯ ನಿರ್ವಹಣೆ ಹೊರನೋಟಕ್ಕೆ ಅಷ್ಟಾಗಿ ಎದ್ದುಕಾಣದಿದ್ದರೂ, ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಹೊಣೆಗಾರಿಕೆ. ಹೊರಊರುಗಳಿಂದ ಬರುವ ಗಣ್ಯರು, ಅತಿಥಿಗಳು, ಸಾಮಾನ್ಯ ಭಕ್ತರು ಹಾಗೂ ಕಲಾವಿದರಿಗೆ ಅವರವರ ಅರ್ಹತೆಗೆ ತಕ್ಕಂತೆ ವಸತಿ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸ. ಪರ್ಯಾಯಕ್ಕೂ ಸಾಕಷ್ಟು ಮುಂಚಿತವಾಗಿ ಉಡುಪಿ ನಗರದ ಆಸುಪಾಸಿನ ವಸತಿಗೃಹಗಳನ್ನು ಸಂಪರ್ಕಿಸಿ, ಲಭ್ಯವಿರುವ ಕೊಠಡಿಗಳು, ದಿನವಹಿ ಶುಲ್ಕ, ಸೌಲಭ್ಯಗಳು ಹಾಗೂ ವಾಹನ ಅಗತ್ಯತೆಗಳನ್ನು ಪಟ್ಟಿ ಮಾಡಿ ಸ್ವಾಗತ ಸಮಿತಿಯ ಮುಂದಿಡುತ್ತಿದ್ದರು.
ಉತ್ಸವಕ್ಕೆ ವಾರ-ಹತ್ತು ದಿನಗಳಿರುವಾಗಲೇ ಸಮಿತಿ ಕಾರ್ಯಾಲಯದ ಹೊರಭಾಗದಲ್ಲಿ ಸ್ವತಃ ತಾವೇ ನಿಂತು, ಅಗತ್ಯವಿರುವ ಟೇಬಲ್-ಕುರ್ಚಿಗಳನ್ನು ಜೋಡಿಸಿಕೊಂಡು, ಚಾರ್ಟ್, ಪೆನ್ನು ಹಾಗೂ ಫೈಲ್ ಹಿಡಿದು ಭಕ್ತರಿಗೆ ಅಚ್ಚುಕಟ್ಟಾಗಿ ವಸತಿ ಕಲ್ಪಿಸುತ್ತಿದ್ದರು. ಉತ್ಸವ ಮುಗಿದ ಬಳಿಕ ಲಾಡ್ಜ್‌ಗಳಿಗೆ ಶುಲ್ಕ ಪಾವತಿಯನ್ನು ಚುಕ್ತಾ ಮಾಡಿ, ಅಂತಿಮ ವರದಿಯನ್ನು ಸಮಿತಿಗೆ ಒಪ್ಪಿಸಿ, ಶ್ರೀಪಾದರುಗಳಿಂದ ಸಾರ್ಥಕ ಭಾವನೆಯಿಂದ ಫಲ-ಮಂತ್ರಾಕ್ಷತೆ ಸ್ವೀಕರಿಸುತ್ತಿದ್ದ ಅವರ ಶಿಸ್ತು ಮತ್ತು ಬದ್ಧತೆ ಅನೇಕ ಮಠಾಧಿಕಾರಿಗಳಿಗೆ ಹಾಗೂ ಗಣ್ಯರಿಗೆ ಸದಾ ವಿಸ್ಮಯ ಮೂಡಿಸುತ್ತಿತ್ತು.
ಬೃಹತ್ ಕಾರ್ಯಕ್ರಮಗಳ ಯಶಸ್ಸಿನ ಸೂತ್ರಧಾರ
ಶ್ರೀ ಪೇಜಾವರ ಶ್ರೀಗಳ ಪಂಚಮ ಪರ್ಯಾಯೋತ್ಸವ ಹಾಗೂ ಆ ಸಂದರ್ಭದಲ್ಲಿ ವೈಭವದಿಂದ ನೆರವೇರಿದ ಅಖಿಲ ಭಾರತ ಸಂಸ್ಕೃತ ಸಮ್ಮೇಳನ, ಧರ್ಮ ಸಮ್ಮೇಳನ ಮತ್ತು ವನವಾಸಿ ಸಮ್ಮೇಳನಗಳಲ್ಲಿ ವಸತಿ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯಲ್ಲಿ ಅವರ ಪಾತ್ರ ಅತ್ಯಂತ ಗಣನೀಯ. ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಗಣ್ಯರು ಹಾಗೂ ಕಲಾವಿದರಿಗೆ ವಸತಿ ಕಲ್ಪಿಸುವ ಸವಾಲಿನ ಕೆಲಸವನ್ನು ಅವರೊಂದಿಗೆ ಸೇರಿ ನಿರ್ವಹಿಸಿದ ಅನುಭವ ಎಂದಿಗೂ ಸ್ಮರಣೀಯ. ದಶಕಗಳಿಂದಲೂ ಅವರು ಈ ರೀತಿಯ ಸೇವೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಎರಡನೇ ಪರ್ಯಾಯದ ಅವಧಿಯಲ್ಲಿ ನಡೆದ ಚಾರಿತ್ರಿಕ ವಿ.ಹಿಂ.ಪ. ಪ್ರಾಂತೀಯ ಸಮ್ಮೇಳನ ಹಾಗೂ 2007ರ ಉಡುಪಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ವಸತಿ ಸಮಿತಿಯ ಪ್ರಮುಖ ಹೊಣೆಗಾರಿಕೆಯನ್ನು ಅವರೇ ಹೊರಬೆಕ್ಕಾಗಿತ್ತು.
ಸಂಘ ಜೀವನ ಹಾಗೂ ಉದಾರ ಆತಿಥ್ಯ
ಸಂಘದ ಚಾವಡಿಯಲ್ಲಿ ಅವರ ನಿರ್ಲಿಪ್ತ ಹಾಗೂ ಉತ್ಸಾಹಿ ಮನಸ್ಥಿತಿಯನ್ನು ಅನೇಕ ಬಾರಿ ಕಂಡಿದ್ದೇನೆ. ಅವರ ಮನೆಯಲ್ಲಿ ನಡೆಯುತ್ತಿದ್ದ ದತ್ತ ಜಯಂತಿ ಉತ್ಸವಕ್ಕೆ ನಮಗೆ ಸದಾ ಖಾಯಂ ಆಹ್ವಾನವಿರುತ್ತಿತ್ತು. ಹಿರಿಯರಾದ ಸೀತಾರಾಮ ಕೆದಿಲ್ಲಾಯರು 'ಭಾರತ ಪರಿಕ್ರಮಣ ಯಾತ್ರೆ' ಕೈಗೊಂಡಿದ್ದಾಗ, ಯಾತ್ರೆಯ ಹಿಂದಿನ ದಿನ ರಾತ್ರಿ ಅವರ ಮನೆಯಲ್ಲಿ ಶಂಭುಶೆಟ್ಟರೊಂದಿಗೆ ಭೇಟಿ ಮಾಡಿ, ಅವರ ಸಂಘ ಜೀವನದ ಸವಿ ನೆನಪುಗಳನ್ನು ನವಿರುಗೊಳಿಸಿದ ಸಂದರ್ಭ ಇಂದಿಗೂ ಕಣ್ಣಮುಂದಿದೆ.
ಕೇಶವರಾಯ ಪ್ರಭುಗಳು ಮತ್ತು ಜಯಂತಿ ಅಕ್ಕ ದಂಪತಿಯ ಉದಾರ ಆದರಾತಿಥ್ಯಕ್ಕೆ ಪಾತ್ರರಾದ ಸಂಘನಿಷ್ಠರ ಸಂಖ್ಯೆಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರಾರು ಸ್ವಯಂಸೇವಕರಿಗೆ ಅವರು ನೀಡಿದ ಮಾರ್ಗದರ್ಶನ ಅಪ್ರತಿಮ.
ತಮ್ಮ ಸೌಜನ್ಯಪೂರ್ಣ ವ್ಯಕ್ತಿತ್ವ ಮತ್ತು ಕರ್ತವ್ಯ ನಿಷ್ಠೆಯಿಂದಲೇ ಎಲ್ಲರ ಆದರ-ಅಭಿಮಾನಕ್ಕೆ ಪಾತ್ರರಾದ ಶ್ರೀ ಕೇಶವರಾಯ ಪ್ರಭುಗಳು, ರಾಷ್ಟ್ರದೀವಿಗೆಗೆ ಕರ್ತವ್ಯದ ತೈಲಧಾರೆಯೆರೆದು ಉಡುಪಿಯಲ್ಲಿ ಅದನ್ನು ದೇದೀಪ್ಯಮಾನವಾಗಿ ಪ್ರಕಾಶಿಸುವಂತೆ ಮಾಡಿದ ಹಿರಿಯ ಚೇತನ.
ಅವರ ಆಶೀರ್ವಾದ ಅನುಗಾಲವೂ ನಮ್ಮ ಮೇಲಿರಲಿ. ಅವರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ.
- ಜಿ. ವಾಸುದೇವ ಭಟ್, ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

