ಮಠ ಹಾಗೂ ಅಮೃತ ವಿದ್ಯಾಲಯಂನಲ್ಲಿ ಧಾರ್ಮಿಕ ಮತ್ತು ‘ಸಂಸ್ಕೃತಿ ಪೂಜೆ’ ಕಾರ್ಯಕ್ರಮ
ಮಂಗಳೂರು: ಇಲ್ಲಿನ ಬೋಲೂರು ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ 41 ದಿನಗಳ ಗುರುಪೂಜಾ ಮಹೋತ್ಸವದ ಸಮಾರೋಪ ಸಮಾರಂಭ ಮತ್ತು ಗುರುಪೂರ್ಣಿಮೆ ಆಚರಣೆಯು ಶ್ರದ್ಧಾ-ಭಕ್ತಿಯಿಂದ ಮಂಗಳವಾರ ಯಶಸ್ವಿಯಾಗಿ ನೆರವೇರಿಯಿತು.
ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರ ತನಕ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಕಾರ್ಯಕ್ರಮದ ಭಾಗವಾಗಿ ಶ್ರೀ ಗುರು ಪಾದುಕಾ ಪೂಜೆ, ಗುರು ಹೋಮ, ಮಹಾ ಮೃತ್ಯುಂಜಯ ಹೋಮ, ಸರ್ವೈಶ್ವರ್ಯ ಪೂಜೆ, ಮಹಾಮಂಗಳಾರತಿ, ಕ್ಷೀರಾಭಿಷೇಕ ಹಾಗೂ ಅನ್ನಸಂತರ್ಪಣೆ ನೆರವೇರಿತು. ಬ್ರಹ್ಮಚಾರಿ ರತೀಶ್ ಮತ್ತು ತಂಡದವರು ಧಾರ್ಮಿಕ ಹೋಮ-ಹವನಗಳ ವಿಧಿವಿಧಾನಗಳನ್ನು ನಡೆಸಿ ಕೊಟ್ಟರು.
ಸಮಾಜಮುಖಿ ಸೇವೆ ಹಾಗೂ ಆಧ್ಯಾತ್ಮಿಕ ಸಾಧನೆಯಲ್ಲಿ ಆಸಕ್ತಿ ಹೊಂದಿರುವ ಭಕ್ತರಿಗಾಗಿ ‘ಅಮೃತ ಫ್ಯಾಮಿಲಿ’ ನೂತನ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅನೇಕ ಆಸಕ್ತರು ಸದಸ್ಯತ್ವವನ್ನು ಸ್ವೀಕರಿಸಿದರು. ಮಠದ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ‘ಅಮೃತ ಸಂಗಮ’ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಆಶ್ರಮದ ವಿವಿಧ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಅಮೃತ ವಿದ್ಯಾಲಯಂನಲ್ಲಿ ಭಕ್ತಿಪೂರ್ವಕ 'ಸಂಸ್ಕೃತಿ ಪೂಜೆ'
ಗುರುಪೂರ್ಣಿಮೆ ಪ್ರಯುಕ್ತ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಪ್ರೇರಣೆಯಂತೆ ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ 'ಸಂಸ್ಕೃತಿ ಪೂಜೆ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೇದಮಂತ್ರ ಪಠಣ ಹಾಗೂ ಸಾಂಪ್ರದಾಯಿಕ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್.ಪಿ.ಸಿ.ಎಲ್ (HPCL) ರಿಟೇಲ್ ಔಟ್‌ಲೆಟ್‌ನ ವ್ಯವಸ್ಥಾಪಕ ಪಾಲುದಾರ ಹಾಗೂ ಸನಾತನ ಸಂಸ್ಥೆಯ ಕಾರ್ಯಕರ್ತ ಭರತ್ ಪ್ರಭು ಮಾತನಾಡಿ, "ಜೀವನದಲ್ಲಿ ಎದುರಾಗುವ ಧನಾತ್ಮಕ ಹಾಗೂ ಋಣಾತ್ಮಕ ಅನುಭವಗಳಿಂದ ಪಾಠ ಕಲಿತು, ಅವುಗಳನ್ನು ಆತ್ಮೋನ್ನತಿಗೆ ಬಳಸಿಕೊಳ್ಳಬೇಕು. ಪವಿತ್ರ ಗುರು-ಶಿಷ್ಯ ಪರಂಪರೆಯನ್ನು ಗೌರವಿಸಿ ಆದರ್ಶ ಶಿಷ್ಯರಾಗುವುದು ಇಂದಿನ ಅಗತ್ಯವಾಗಿದೆ" ಎಂದರು.
ಸ್ವಾಮಿನಿ ಮಂಗಳಾಮೃತ ಪ್ರಾಣ ಆಶೀರ್ವಚನ ನೀಡಿ, "ಗುರುವು ಜ್ಞಾನ ಮತ್ತು ವಿವೇಕದ ಮೂಲಕ ವ್ಯಕ್ತಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಶ್ರೀಕೃಷ್ಣ ಮತ್ತು ಅರ್ಜುನರ ಸಂಬಂಧವೇ ಇದಕ್ಕೆ ಸಾಕ್ಷಿ" ಎಂದು ಉದಾಹರಿಸಿದರು. ಅಲ್ಲದೆ, ಪೋಷಕರ ಪಾದಪೂಜೆ ಮಾಡುವ ‘ಸಂಸ್ಕೃತಿ ಪೂಜೆ’ಯ ಮಹತ್ವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಮೃತಾ ಸಂಸ್ಥೆಯ ಕೊಡುಗೆಗಳನ್ನು ಸ್ಮರಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಶ್ರೀ ಶೇಷಂ ಶಯನ ಕುಣಿತ ಭಜನಾ ತಂಡದ ಸಂಸ್ಥಾಪಕ ಹಾಗೂ ತರಬೇತುದಾರರಾದ ಶ್ರೀ ರಂಜಿತ್ ಕಾಂಚನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. 'ಆಯುಧ್' (AYUDH) ತಂಡ ಹಾಗೂ ವಿದ್ಯಾರ್ಥಿಗಳಿಂದ ಗುರು ಸ್ತೋತ್ರ, ಅಷ್ಟೋತ್ತರ ಪಠಣ ಹಾಗೂ ಭಜನೆಗಳು ಜರುಗಿದವು. ಪೋಷಕರ ಪರವಾಗಿ ಭವಾನಿ ಪ್ರಭು ಹಾಗೂ ಚೇತನಾ ತಮ್ಮ ಅನಿಸಿಕೆ ಹಂಚಿಕೊಂಡರು.
ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲೆ ಮಧುಲಿಕ, ಉಪ ಪ್ರಾಂಶುಪಾಲೆ ರೇಖಾ ಕಾಮತ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ವನಮಾಲ ಶೆಣೈ ಹಾಗೂ ಮಿನಲ್ ರಾವ್ ಸ್ವಾಗತಿಸಿದರು. ಮಂಗಳ ಪ್ರಭಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



