ವಿಕಸಿತ ಭಾರತದ ಕನಸು ಯುವಜನರ ಸಂಕಲ್ಪವಾಗಬೇಕು - ಕ್ಯಾಪ್ಟನ್ ಬ್ರಿಜೇಶ್ ಚೌಟ

Upayuktha
0

 ವಿವೇಕಾನಂದ ಪದವಿ ಕಾಲೇಜಿನಲ್ಲಿ ʻ ಕಾರ್ಗಿಲ್ ವಿಜಯ ದಿವಸ್ʼ


ಪುತ್ತೂರು: ವಿಶ್ವದಲ್ಲಿಯೇ ಭಾರತ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಪ್ರಗತಿಯನ್ನು ಹೊಂದಿರುವ ದೇಶವಾಗಿದೆ. ವಿಕಸಿತ ಭಾರತದ ಕನಸು ಹೊಂದಿರುವ ನಾವು ದೇಶದ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ದಕ್ಷತೆ ಹಾಗೂ ಜ್ಞಾನದ ಮೂಲಕ ರಾಷ್ಟ್ರ ಸೇವೆಗೆ ಸಜ್ಜುಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.  


ವಿವೇಕಾನಂದ ಪದವಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ ʻಕಾರ್ಗಿಲ್ ವಿಜಯ್ ದಿವಸ್ ʼ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಈ ದೇಶ ಇಂದು ಪ್ರಜಾಸತ್ತಾತ್ಮಕ ದೇಶವಾಗಿ ಉಳಿದಿದೆ ಎಂದಾದರೆ ಅದಕ್ಕೆ ಹಿಂದು ಬಹುಸಂಖ್ಯಾತವಾಗಿರುವಂತಹ ನಮ್ಮ ಸಾಂಸ್ಕೃತಿಕ ಬುನಾದಿಯೇ ಕಾರಣ. ದೇಶ ಎಂದರೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ಪ್ರತಿಯೊಬ್ಬ ಯೋಧನ ರಾಷ್ಟ್ರಪ್ರೇಮ ಹಾಗೂ ಆತನ ಬಲಿದಾನದಿಂದಲೇ ಇಂದು ದೇಶ ಸುಭದ್ರವಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿ ಅಲಂಕರಿಸಲು ಬೇಕಾದ ಕೆಲಸ ಕಾರ್ಯಗಳು ನಮ್ಮಿಂದ ಸಾಧ್ಯವಾಗಲಿ ಎಂದು ಅವರು ಈ ಸಂದರ್ಭದಲ್ಲಿ ಆಶಿಸಿದರು, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

 

ಅಭ್ಯಾಗತರಾದ ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡುತ್ತಾ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯ ಹಾಗೂ ನೆಮ್ಮದಿಯ ಜೀವನದ ಹಿಂದೆ ನಮ್ಮ ಯೋಧರ ಅಮೂಲ್ಯ ತ್ಯಾಗ ಅಡಗಿದೆ. ದೇಶದ ಸೈನಿಕರ ನಿರಂತರ ಶ್ರಮ, ತ್ಯಾಗದಿಂದ ದೇಶಕ್ಕಾಗಿ ಮಡಿದ ಸೈನಿಕರು ಹಾಗೂ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಪ್ರತಿಯೊಬ್ಬ ಭಾರತೀಯನು ಗೌರವಿಸಬೇಕು  ಎಂದರು. 


ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳ ವೀರಗಾಥೆಯನ್ನು ಹಾಡಿನ ಮೂಲಕ ಸ್ಮರಿಸಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ವೀರಯೋಧರ ಭಾವಚಿತ್ರಕ್ಕೆ ಹಣತೆ ಬೆಳಗಿಸಿ ಗೌರವ ನಮನ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರು, ಪ್ರಾಂಶುಪಾಲರುಗಳು, ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು, ಎನ್.ಸಿ.ಸಿ ಕೆಡೆಟ್‌ಗಳು, ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು  ಭಾಗವಹಿಸಿದರು. 


ಕಾರ್ಯಕ್ರಮವನ್ನು ಯೋಧ ನಮನ ಗೀತೆಯೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪದವಿಪೂರ್ವ  ಕಾಲೇಜಿನ  ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top