ವೈಭವದ ಮೆರವಣಿಗೆ; ತುಂಗಭದ್ರೆಯಂತೆ ಹರಿದ ವಿದ್ಯಾರ್ಥಿಗಳ ಜನಸಾಗರ
ಬಳ್ಳಾರಿ: ಬಳ್ಳಾರಿ ನಗರದ ಇತಿಹಾಸದ ಪುಟಗಳಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಸೇರ್ಪಡೆಯಾದ ದಿನವಿದು. ವೀರಶೈವ ವಿದ್ಯಾವರ್ಧಕ ಸಂಘದ ಚೊಚ್ಚಲ ಶಾಲೆ, ಕನ್ನಡದ ಡಿಂಡಿಮವನ್ನು ಮೊಳಗಿಸಿದ ಪ್ರಥಮ ವಿದ್ಯಾಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆ ತನ್ನ ಸಾರ್ಥಕ ನೂರು ವಸಂತಗಳನ್ನು ಪೂರೈಸಿದ ಸಂಭ್ರಮಕ್ಕೆ ಸಾಕ್ಷಿಯಾದದ್ದು ಇಂದಿನ ವೈಭವದ ಉತ್ಸವ.
ಶತಮಾನೋತ್ಸವದ ಅಧಿಕೃತ ಉದ್ಘಾಟನೆಗೂ ಮುನ್ನ ಬಳ್ಳಾರಿ ನಗರದ ಪ್ರಮುಖ ರಸ್ತೆಗಳು ಹಬ್ಬದ ವಾತಾವರಣದಿಂದ ಕಂಗೊಳಿಸಿದವು. ಕಣ್ಣು ಹಾಯಿಸಿದಷ್ಟೂ ಕಾಣಿಸಿದ್ದು ವಿದ್ಯಾರ್ಥಿಗಳ ಉತ್ಸಾಹದ ಅಲೆ. ಅದು ಕೇವಲ ಮೆರವಣಿಗೆಯಾಗಿರಲಿಲ್ಲ; ವೀರಶೈವ ವಿದ್ಯಾವರ್ಧಕ ಸಂಘದ ಶತಮಾನಗಳ ಶೈಕ್ಷಣಿಕ ಪರಂಪರೆಯ ಜೀವಂತ ಪ್ರದರ್ಶನವಾಗಿತ್ತು. ಸಾವಿರಾರು ಮಕ್ಕಳ ನಗು, ಸಂಭ್ರಮ, ಹೆಜ್ಜೆ ಮತ್ತು ಘೋಷಣೆಗಳ ನಡುವೆ ಇಡೀ ನಗರವೇ ಶತಮಾನೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿತು.
ಮರಿಸ್ವಾಮಿ ಮಠದಿಂದ ಆರಂಭವಾದ ಶತಮಾನೋತ್ಸವದ ಮೆರವಣಿಗೆಯಲ್ಲಿ ಕೆ.ಜಿ.ಯಿಂದ ಹಿಡಿದು ಪಿ.ಜಿ.ವರೆಗಿನ ವಿವಿಧ ವಯೋಮಾನದ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಸಂಸ್ಥೆಗಳ ಬ್ಯಾನರ್‌ಗಳನ್ನು ಹಿಡಿದು ತಂಡೋಪತಂಡವಾಗಿ ಸಾಗುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಬಣ್ಣಬಣ್ಣದ ಸಮವಸ್ತ್ರದಲ್ಲಿ ಸಾಲಾಗಿ ಸಾಗುತ್ತಿದ್ದ ವಿದ್ಯಾರ್ಥಿಗಳ ಸಮೂಹವನ್ನು ನೋಡಿದಾಗ, ಬಳ್ಳಾರಿಯ ಮಾರ್ಕೆಟ್ ರಸ್ತೆಯಲ್ಲಿ ತುಂಗಭದ್ರೆಯೇ ಜನಸಾಗರದ ರೂಪದಲ್ಲಿ ಹರಿದು ಬರುತ್ತಿದೆಯೇನೋ ಎಂಬ ಭಾವ ಮೂಡುತ್ತಿತ್ತು.
ಹೀರದ ಸೂಗಮ್ಮನವರ ಸುಂದರ ಭಾವಚಿತ್ರ, ಹೀರದ ಸೂಗಮ್ಮ ಚೌಕಿ ಸೇರಿದಂತೆ ಹಲವು ಐತಿಹಾಸಿಕ ಚಿತ್ರಗಳನ್ನು ಒಳಗೊಂಡ ಆಕರ್ಷಕ ಟ್ಯಾಬ್ಲೋ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ವೀರಶೈವ ವಿದ್ಯಾವರ್ಧಕ ಸಂಘದ ಲಾಂಛನವನ್ನು ಹೊತ್ತು ಬಂದಿದ್ದ ಟ್ರ್ಯಾಕ್ಟರ್‌ನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಅದು ಮೈಸೂರು ದಸರೆಯ ಆನೆಯಂತೆ ಎಲ್ಲರ ಗಮನ ಸೆಳೆಯುತ್ತಿತ್ತು. ದೊಡ್ಡ ಮಾರ್ಕೆಟ್‌ನಿಂದ ಆರಂಭವಾದ ಮೆರವಣಿಗೆಗೆ ಕಲ್ಯಾಣ ಸ್ವಾಮಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರು, ಆಜೀವ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ತಾಷಾರಾಂಡೋಲು ನಂದಿಕೋಲು, ಹಗಲು ವೇಷ, ಸಂಭಾಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಸಾವಿರಾರು ವಿದ್ಯಾರ್ಥಿಗಳ ಜೊತೆಗೆ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು, ಪಾಲಕ-ಪೋಷಕರು ಹಾಗೂ ವೀರಶೈವ ಸಮಾಜದ ಮುಖಂಡರು ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಕೇಳಿಬಂದ ಡೊಳ್ಳು, ಸಂಭಾಳದ ಝೇಂಕಾರ, ಮಕ್ಕಳ ಕುಣಿತ, ಹರ್ಷೋದ್ಗಾರಗಳು ಶತಮಾನೋತ್ಸವದ ಸಂಭ್ರಮಕ್ಕೆ ಹೊಸ ಆಯಾಮ ನೀಡಿದವು.
ಬಳ್ಳಾರಿಯ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದ ಈ ಜನಸಾಗರ ಮೋತಿ ವೃತ್ತದಿಂದ ಹೀರದ ಸೂಗಮ್ಮ ಶಾಲೆಯವರೆಗೆ ಸಾಗಿತು. ದಾರಿಯುದ್ದಕ್ಕೂ ಪಟಾಕಿಗಳ ಸದ್ದು, ಬಾಣಗಳ ಚಿತ್ತಾರ, ಡೊಳ್ಳು-ಸಂಭಾಳದ ನಾದ, ಮಕ್ಕಳ ಕುಣಿತ ಮತ್ತು ಕೇಕೆಗಳಿಂದ ವಾತಾವರಣವೇ ಹಬ್ಬದ ಸೊಬಗಿನಿಂದ ತುಂಬಿತ್ತು. ಅಂತಿಮವಾಗಿ ಮೆರವಣಿಗೆ ಹೀರದ ಸೂಗಮ್ಮ ಶಾಲೆಯ ಆವರಣವನ್ನು ತಲುಪಿ ಸಂಭ್ರಮದಿಂದ ಸಂಪನ್ನಗೊಂಡಿತು.
ನೂರು ವರ್ಷಗಳ ಶೈಕ್ಷಣಿಕ ಸೇವೆಗೆ ಸಾಕ್ಷಿಯಾದ ಹೀರದ ಸೂಗಮ್ಮ ಶಾಲೆ, ತನ್ನ ಶತಮಾನೋತ್ಸವದ ಮೊದಲ ಹೆಜ್ಜೆಯಲ್ಲೇ ಸಾವಿರಾರು ಮಕ್ಕಳ ಉತ್ಸಾಹದ ಮೂಲಕ ತನ್ನ ಭವ್ಯ ಪರಂಪರೆಯನ್ನು ಸಾರಿತು. ಇದು ಕೇವಲ ಒಂದು ಶಾಲೆಯ ಶತಮಾನೋತ್ಸವವಲ್ಲ; ಒಂದು ಶತಮಾನದ ಶಿಕ್ಷಣ ಪರಂಪರೆಯ ಉತ್ಸವ, ಮಕ್ಕಳ ಉತ್ಸಾಹದ ಪಥ ಮತ್ತು ಬಳ್ಳಾರಿಯ ಸಾಂಸ್ಕೃತಿಕ-ಶೈಕ್ಷಣಿಕ ಹೆಮ್ಮೆಯ ಸಂಭ್ರಮ.
- ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ


