ಮಂಗಳೂರು: ಇಲ್ಲಿನ ಬಿಕರ್ನಕಟ್ಟೆಯ ಬಾಲ ಯೇಸು ದೇವಾಲಯವು ತನ್ನ ಪ್ರಮುಖ ಶೈಕ್ಷಣಿಕ ಯೋಜನೆಯಾದ 'ಕಾರ್ಮೆಲ್ ಇಗ್ನೈಟ್' ಅಡಿಯಲ್ಲಿ ಭಾನುವಾರ (ಆ. 2) ರಂದು ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ₹25 ಲಕ್ಷ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಿತು.
ಈ ವರ್ಷ ಒಟ್ಟು 275 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನ ಪಡೆದರು. ಸಾಂಕೇತಿಕವಾಗಿ 50 ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ವಿತರಣಾ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಕೊಂಕಣಿ ಕವಿ ಹಾಗೂ ಲೇಖಕ ಆಂಡ್ರ್ಯೂ ಎಲ್. ಡಿ'ಕುನ್ಹಾ ಇದು ಪ್ರೀತಿ, ತ್ಯಾಗ, ಸಂತೋಷ ಮತ್ತು ಆಶಯದ ದಿನವಾಗಿದೆ. ವಿದ್ಯಾರ್ಥಿವೇತನವು ಕೇವಲ ಹಣದ ಮೊತ್ತವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಭರವಸೆಯ ಅಭಿವ್ಯಕ್ತಿಯಾಗಿದೆ. ಇಂದು ಇದನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮತ್ತೊಬ್ಬರಿಗೆ ಇದೇ ರೀತಿಯ ನೆರವು ನೀಡುವವರಾಗಬೇಕು. ಪ್ರೀತಿಯನ್ನು ಹಣದ ಮೂಲಕ ಮಾತ್ರವಲ್ಲ, ಒಂದು ನಗು, ಸಹಾಯದ ಹಸ್ತ ಅಥವಾ ಪ್ರೋತ್ಸಾಹದ ಮಾತಿನ ಮೂಲಕವೂ ಹಂಚಿಕೊಳ್ಳಬಹುದು ಎಂದು ತಿಳಿಸಿದರು.
ನನ್ನ ಜೀವನದಲ್ಲಿ ಅನೇಕ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆದರೆ ವಿದ್ಯಾರ್ಥಿಯಾಗಿದ್ದಾಗ ಪಡೆದ ವಿದ್ಯಾರ್ಥಿವೇತನವೇ ನನಗೆ ಅತ್ಯಂತ ದೊಡ್ಡ ಗೌರವವಾಗಿದೆ, ಏಕೆಂದರೆ ಅದು ನನಗೆ ಅಪಾರ ಸಂತೋಷ ನೀಡಿತ್ತು. ಆಗ ನನ್ನ ತಂದೆ, 'ಒಂದು ದಿನ ನೀನು ಮತ್ತೊಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡುವ ವ್ಯಕ್ತಿಯಾಗಬೇಕು' ಎಂದು ಹೇಳಿದ್ದರು. ಆ ಮಾತುಗಳು ಇಂದಿಗೂ ನನಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೈಂಟ್ ಜೋಸೆಫ್ ಮಠದ ಸುಪೀರಿಯರ್ ವ. ಫಾ. ಮೆಲ್ವಿನ್ ಡಿಕುನ್ಹಾ, ಒಸಿಡಿ, ಈ ಯೋಜನೆ ಯಶಸ್ವಿಯಾಗಲು ನೆರವಾದ ಎಲ್ಲ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ದಾನಿಗಳ ಉದಾರತೆ ಮತ್ತು ತ್ಯಾಗದಿಂದಲೇ ಈ ವಿದ್ಯಾರ್ಥಿಗಳ ಕನಸುಗಳು ನನಸಾಗುತ್ತಿವೆ. ಅವರ ಕೊಡುಗೆ ಸಮಾಜದ ಭವಿಷ್ಯಕ್ಕೆ ಮಾಡಿದ ಅಮೂಲ್ಯ ಹೂಡಿಕೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜ್ಞಾನ, ವಿವೇಕ ಮತ್ತು ನೈತಿಕತೆಯಲ್ಲಿ ಬೆಳೆಯಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
ಸಭೆಯನ್ನು ಸ್ವಾಗತಿಸಿದ ಬಾಲ ಯೇಸು ದೇವಾಲಯದ ನಿರ್ದೇಶಕ ವ. ಫಾ. ಸ್ಟಿಫನ್ ಪೆರೆರಾ, ಒಸಿಡಿ, ದೇವಾಲಯದ ಸಮಗ್ರ ಸಾಮಾಜಿಕ ಸೇವಾ ಧ್ಯೇಯವನ್ನು ವಿವರಿಸಿದರು. ದೇವಾಲಯದ ಸೇವೆ ಭಕ್ತರ ಆಧ್ಯಾತ್ಮಿಕ ಅಗತ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಶೈಕ್ಷಣಿಕ, ವೈದ್ಯಕೀಯ ಮತ್ತು ಸಾಮಾಜಿಕ ಅಗತ್ಯಗಳಿಗೂ ನಾವು ಸ್ಪಂದಿಸುತ್ತಿದ್ದೇವೆ. ಕಾರ್ಮೆಲ್ ಇಗ್ನೈಟ್, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ, ಸಮಾಲೋಚನೆ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ದೃಷ್ಟಿಹೀನ ಮಕ್ಕಳಿಗಾಗಿ ರೂಪಿಸಿರುವ 'ವಿಷನ್ ಫಾರ್ ದ ಫ್ಯೂಚರ್' ಯೋಜೆಗಳ ಮೂಲಕ ಅಗತ್ಯವಿರುವವರಿಗೆ ಆಶಾಭರವಸೆ ಮತ್ತು ಗೌರವಯುತ ಬದುಕು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ, ಕಲಬುರಗಿ, ಹೂವಿನಹಡಗಲಿ ಹಾಗೂ ಜಗಳೂರು ಪ್ರದೇಶಗಳಲ್ಲಿರುವ ಮಿಷನ್ ಕೇಂದ್ರಗಳ ಮೂಲಕ ಹೊಲಿಗೆ ತರಬೇತಿ, ವಾಹನ ಚಾಲನಾ ತರಬೇತಿ ಸೇರಿದಂತೆ ವಿವಿಧ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆರ್ಥಿಕವಾಗಿ ದುರ್ಬಲ ಕುಟುಂಬಗಳ ಸಬಲೀಕರಣಕ್ಕೆ ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು 'ನಮಾನ್ ಬಾಳೊಕ್ ಜೆಜು' ಕೊಂಕಣಿ ಮಾಸಪತ್ರಿಕೆಯ ಸಂಪಾದಕರಾದ ವ. ಫಾ. ಜೋಸಿ ಸಿದ್ದಕಟ್ಟೆ, ಒಸಿಡಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


