ಯೋಜನೆಯೂ ಸಾಮಾಜಿಕ ಬಾಂಧವ್ಯ ಹಾಗೂ ಸಾಮಾಜಿಕ ಬದ್ಧತೆಯನ್ನು ಹೆಚ್ಚಿಸುತ್ತದೆ : ಡಾ. ಶೇಷಪ್ಪ ಕೆ
* ವಿದ್ಯಾರ್ಥಿ ರಚನೆಯ ಭಿತ್ತಿ ಪತ್ರಿಕೆ ಅನಾವರಣ
* ಹಿರಿಯ ಸ್ವಯಂ ಸೇವಕರು, ಯೋಜನಾಧಿಕಾರಿಗೆ ಬೀಳ್ಕೊಡುಗೆ
* ನೂತನ ಸ್ವಯಂ ಸೇವಕರು, ಯೋಜನಾಧಿಕಾರಿಗಳ ಪದಗ್ರಹಣ
ಉಜಿರೆ: ತರಗತಿಗಳು ನಮಗೆ ಅಕ್ಷರ ಜ್ಞಾನವನ್ನು ಕಲಿಸಿಕೊಟ್ಟರೆ, ರಾಷ್ಟ್ರೀಯ ಸೇವಾ ಯೋಜನೆಯು ಶಿಸ್ತು, ಗೌರವ ಹಾಗೂ ಮೌಲ್ಯಯುತವಾಗಿ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ನಾಯಕತ್ವ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಲು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬಾಂಧವ್ಯವನ್ನು ಹಾಗು ಸಮಾಜದ ಮೇಲಿನ ಬದ್ದತೆಯನ್ನು ಹೆಚ್ಚಿಸುತ್ತದೆ. ಯೋಜನೆಯೂ ನಮ್ಮೊಳಗೆ ವಿನೂತನವಾದ ಬದಲಾವಣೆಗೆ ಸಾಕ್ಷಿಯಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಶೇಷಪ್ಪ ಕೆ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಹಿತ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಿದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸೇವಾ ಮನೋಭಾವ ಹಾಗೂ ಆಸಕ್ತಿಯ ಹಂಬಲ ನಮ್ಮೊಳಗಿದ್ದರೆ ಸಾಧನೆಯದಾರಿ ಸದಾ ತೆರೆದಿರುತ್ತದೆ. ರಾಷ್ಟ್ರೀಯ ಸೇವಾ ಯೋಜನೆ ಪ್ರತಿಯೊಂದು ಚಟುವಟಿಕೆಗಳು ಹೊಸ ಅನುಭವವನ್ನು ನೀಡುವುದರ ಜೊತೆಗೆ ಸವಾಲುಗಳನ್ನು ಎದುರಿಸುವ ಚೈತನ್ಯವನ್ನು ಗಟ್ಟಿಗೊಳಿಸುತ್ತದೆ. ಸಮುದಾಯಗಳ ಅಭಿವೃದ್ಧಿ, ಆರೋಗ್ಯ ಜಾಗೃತಿ, ಪರಿಸರ ಕಾಳಜಿ ಸೇರಿದಂತೆ ರಕ್ತದಾನದಂತಹ ಮಹಾನ್ ಸೇವ ಕಾರ್ಯಗಳನ್ನು ಪ್ರತಿ ವರ್ಷ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಯೋಜನೆಯು ಮಾನವೀಯ ಸಂಬಂಧ ಹಾಗು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳೊಳಿಗಿನ ಪ್ರತಿಭಾ ಅನಾವರಣಕ್ಕೂ ವೇದಿಕೆನ್ನು ಕಲ್ಪಿಸಿಕೊಡುತ್ತದೆ. ಇದನ್ನು ಸಕ್ರೀಯವಾಗಿ ಬಳಸಿಕೊಂಡು ಸಾಧನೆಯ ಹಾದಿಯನ್ನು ಕಂಡುಕೊಳ್ಳಬೇಕು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೂರು ವರ್ಷಗಳ ಕಾಲ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಮಹೇಶ್ ಶೆಟ್ಟಿರವರನ್ನು ಕಾಲೇಜು ಹಾಗು ಸ್ವಯಂ ಸೇವಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ಕಾಲೇಜಿನ ಸಹಕಾರ ಹಾಗೂ ಸ್ವಯಂ ಸೇವಕರ ಸಕ್ರೀಯ ಬೆಂಬಲದಿಂದಾಗಿ ಕಳೆದ ಮೂರು ವರ್ಷಗಳಲ್ಲಿ 400 ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಹಲವು ರಾಷ್ಟ ಮಟ್ಟದ ಸೇವಾ ಕಾರ್ಯ ಹಾಗೂ ಸಾಧನೆಗಳು ನಮ್ಮ ಕಾಲೇಜಿಗೆ ಬಂದಿವೆ. ಸೇವಾ ಯೋಜನೆ ಎಂಬುವುದೇ ತೆರೆದ ವಿಶ್ವವಿದ್ಯಾಲಯ ಇದ್ದಂತೆ. ಇಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಲವು ಅವಕಾಶಗಳು ದೊರೆಯುವ ಜೊತೆಗೆ ಸಮಾಜ ಜೀವಿಯಾಗಿ ಬದುಕುವ ಕೌಶಲ್ಯವನ್ನು ಬೆಳೆಸುತ್ತದೆ. ಈ ಸಾಧನೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಎನ್.ಎಸ್.ಎಸ್. ಸಂಯೋಜನಧಿಕಾರಿಯಾಗಿ ನೂತನವಾಗಿ ಅಧಿಕಾರ ಸ್ವೀಕಾರಿಸಿದ ಉಪನ್ಯಾಸಕ ಡಾ. ಸುಧೀರ್ ಕೆ.ವಿ ಮಾತನಾಡಿ ಕಾಲೇಜು ಈ ಹಿಂದೆ ನೀಡಿದ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಈಗ ಯೋಜನೆಯ ಜವಾಬ್ದಾರಿ ನನಗೆ ನೀಡಿರುವುದು ಅತ್ಯಂತ ಸಂತಸ ತಂದಿದೆ. ಸರ್ವರ ಸಹಕಾರ ಮತ್ತು ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾ, ನಾವೆಲ್ಲ ಸೇವಾ ಮನೋಭಾವದಿಂದ ತೊಡಗಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಹಾಗು ಸಮಾಜಮುಖಿಯಾಗಿ ಬೆಳೆಯಲು ಹಲವು ಅವಕಾಶ ಮತ್ತು ವ್ಯವಸ್ಥೆಗಳನ್ನು ನಿರಂತರವಾಗಿ ಕಲ್ಪಿಸಿಕೊಡುತ್ತಾ ಬಂದಿದೆ. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಜೇನು ನೊಣದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು. ಒಳ್ಳೇಯ ಆಲೋಚನೆ ಮತ್ತು ಅವ್ಯಾಸಗಳು ನಮ್ಮನ್ನು ಸಾಧನಾ ಹಾದಿಯಲ್ಲಿ ಸಾಗಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಬಳಿಕ ನೂತನವಾಗಿ ಅಧಿಕಾರ ಸ್ವೀಕಾರಿಸಿದ ಸ್ವಯಂ ಸೇವಕರಿಗೆ ಮಂಗಳೂರು ವಿಶ್ವವಿದ್ಯಾಲಯ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಶೇಷಪ್ಪ ಕೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿ ರಚನೆಯ ಭಿತ್ತಿ ಪತ್ರಿಕೆ ಅನಾವರಣ ಗೊಳಿಸಿದರು. ವಿದ್ಯಾರ್ಥಿನಿ ಮಾನ್ಯ ಕಳೆದ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್ ಕಾರ್ಯ ಚಟುವಟಿಕೆ ಮತ್ತು ಸಾಧನೆಯ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಎನ್.ಎಸ್.ಎಸ್ ಯೋಜನಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಉಪನ್ಯಾಸಕರು ಭಾಗಿಯಾಗಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಕೆ.ಎನ್ ಧನುಶ್ ಹಾಗು ಕುಮಾರಿ ಸಾಕ್ಷಿ ಎಮ್ ಎಸ್ ನಿರೂಪಿಸಿ, ಸ್ವಯಂ ಸೇವಕಿ ತೃಥಿ ವಂದಿಸಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಂಯೋಜಿಸಿದರು.
" ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯೂ ಅತ್ಯಂತ ಸಕ್ರೀಯವಾಗಿ ಹಾಗು ಕ್ರೀಯಾಶೀಲತೆಯಿಂದ ಕೂಡಿರುವ ಯೋಜನೆ. ಈ ಮೂಲಕ ನೂರಾರು ಸಮಾಜಮುಖಿ ಹಾಗು ಜಾಗೃತಿ ಕಾರ್ಯಕ್ರಮಗಳನ್ನು ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಕಾಲೇಜಿನ ಯೋಜನೆಗೆ ಸಂದಿಸಿವೆ. ಇಲ್ಲಿನ ಸ್ವಯಂ ಸೇವಕರು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು ರಾಷ್ಟ್ರ ಕಟ್ಟುವಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತೇನೆ. "
- ಡಾ. ಶೇಷಪ್ಪ ಕೆ
ಎನ್.ಎಸ್. ಎಸ್ ಸಂಯೋಜಕರು,
ಮಂಗಳೂರು ವಿಶ್ವವಿದ್ಯಾಲಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

