ಎಐ ಚಿತ್ರ
ಶ್ರೀಗೌರಿಗೆ ಬಾಲ್ಯದಿಂದಲೂ ಹೂವಿನ ಗಿಡಗಳ ಮೇಲೆ ತುಂಬಾ ಇಷ್ಟ. ಅದರಲ್ಲೂ ಹಳದಿ ಬಣ್ಣದ ಗುಲಾಬಿ ಹೂವಿನ ಮೇಲೆ ಅತಿಯಾದ ಪ್ರೀತಿ. ಆದರೆ, ಇತ್ತೀಚೆಗೆ ಅವಳ ಅಪ್ಪನಿಗೆ ಉದ್ಯೋಗದಿಂದ ನಿವೃತ್ತಿಯಾದ ಮೇಲೆ, ಹೊಸದಾಗಿ ಕಟ್ಟಿಸಿದ ಮನೆಗೆ ಅವರೆಲ್ಲರೂ ವಾಸ್ತವ್ಯ ಬದಲಾಯಿಸಿದ್ದರು. ಇಲ್ಲಿಗೆ ಬಂದ ನಂತರ ಅವಳು ಇಲ್ಲಿಯೂ ಹೂವಿನ ಗಿಡಗಳನ್ನು ಬೆಳೆಸ ತೊಡಗಿದ್ದಳು. ಆದರೆ ಇಲ್ಲಿ ಬಂದು ಎರಡು ತಿಂಗಳಾದರೂ, ಅವಳ ಹೂದೋಟದಲ್ಲೇ ಇಲ್ಲದ ಏಕೈಕ ಹೂವು ಎಂದರೆ ಹಳದಿ ಗುಲಾಬಿಯಾಗಿತ್ತು.
ತಮ್ಮ ಹಳೆಯ ಮನೆಯಲ್ಲಿ ಹಳದಿ ಗುಲಾಬಿ ಗಿಡ ಇದ್ದರೂ, ಅದನ್ನು ಅವಳಿಗೆ ತರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪ್ರತಿದಿನವೂ ಅವಳು ಹಳದಿ ಗುಲಾಬಿ ಹೂವಿನ ಗಿಡದ ಅನ್ವೇಷಣೆಯಲ್ಲಿ ನಿರತಳಾಗಿದ್ದಳು.
ಈ ಊರಿಗೆ ಬಂದ ಮೇಲೆ ಅವಳು ಫಲ ಪುಷ್ಪ ಪ್ರದರ್ಶನ ಒಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಒಂದು ಹಳದಿ ಗುಲಾಬಿ ಗಿಡವನ್ನು ನೋಡಿದ್ದಳು. ಅದನ್ನು ಖರೀದಿಸಬೇಕೆಂದು ಬಯಸಿ ಹತ್ತಿರ ಹೋದಾಗಲೇ ಯುವಕನೊಬ್ಬ ಅದನ್ನು ಖರೀದಿಸಿಕೊಂಡು ಹೋಗಿಯಾಗಿತ್ತು.. ಅಲ್ಲಿ ಬೇರೆ ಬಣ್ಣದ ಗುಲಾಬಿ ಗಿಡಗಳಿದ್ದರೂ ಅವಳು ಬಯಸಿದ ಬಣ್ಣದ ಗುಲಾಬಿ ಗಿಡ ದೊರಕಿರಲಿಲ್ಲ. ಅಂದಿನಿಂದಲೇ ಆ ಅಪರೂಪದ ಸೌಂದರ್ಯ ಮತ್ತು ಮೋಹಕ ಪರಿಮಳದ ಹಳದಿ ಗುಲಾಬಿ ಗಿಡಕ್ಕಾಗಿ ಅವಳ ಹುಡುಕಾಟ ಆರಂಭವಾಗಿತ್ತು.
ಊರಿನ ಎಲ್ಲ ಹೂವಿನ ಅಂಗಡಿಗಳಿಗೂ ಅವಳು ಅಲೆದಾಡಿದಳು. ಆದರೆ, ಎಲ್ಲಿಯೂ ಅವಳು ಬಯಸಿದ ಹಳದಿ ಗುಲಾಬಿ ಗಿಡ ಸಿಗಲೇ ಇಲ್ಲ.
"ಈ ಊರಿನ ಜನರಿಗೆ ಹಳದಿ ಗುಲಾಬಿಯೆಂದರೆ ಅಲರ್ಜಿಯೋ ಏನೋ?" ಎಂದು ಅವಳಿಗೆ ಹಲವು ಬಾರಿ ಅನಿಸಿದ್ದೂ ಉಂಟು.
ಆದರೆ ಕಾಲೇಜಿಗೆ ಹೋಗುವ ದಾರಿಯಲ್ಲಿದ್ದ ಒಂದು ಮನೆಯ ಹೂದೋಟದಲ್ಲಿ ಪ್ರತಿದಿನವೂ ಹಳದಿ ಗುಲಾಬಿ ಹೂಗಳು ಅರಳಿ ಕಂಗೊಳಿಸುವುದನ್ನು ಅವಳು ಕಾಣುತ್ತಿದ್ದಳು. ಆದರೆ ಆ ಮನೆಗೆ ಹೋಗಿ ಹೂವು ಕೇಳಲು ಅವಳ ಕೀಳರಿಮೆ ಬಿಡಲಿಲ್ಲ. ಹೊಸದಾಗಿ ಬಂದವರಾದ್ದರಿಂದ ನೆರೆಹೊರೆಯವರ ಪರಿಚಯ ಇನ್ನೂ ಆಗಿರಲಿಲ್ಲ. ಇದರ ಮಧ್ಯೆ ತಾನಾಗಿಯೇ ಹೋಗಿ ಹೂವು ಕೇಳುವುದು ಸರಿ ಕಾಣುವುದಿಲ್ಲ ಎಂಬ ಆಲೋಚನೆ ಅವಳನ್ನು ಕಾಡಿತು.
ಆದರೆ,ಅವಳ ಮುಖ್ಯ ವಿಚಾರ ಅದಾಗಿರಲಿಲ್ಲ. ಪುರುಷರೆಂದರೆ ಅವಳಿಗೆ ಅಪಾರ ಭಯವಿತ್ತು. ಅವರನ್ನು ಕಂಡರೆ ಮಾತನಾಡಲು ಅಳುಕುತ್ತಿದ್ದಳು ಅವಳು. ಗಂಡಸರು ಹೆಣ್ಣುಮಕ್ಕಳಿಗೆ ತೊಂದರೆ ನೀಡುವವರು ಎಂಬ ಮಿಥ್ಯಾ ಕಲ್ಪನೆ ಬಾಲ್ಯದಿಂದಲೇ ಅವಳ ಮನಸ್ಸಿನಲ್ಲಿ ಬೇರೂರಿತ್ತು. ಚಿಕ್ಕಂದಿನಲ್ಲಿ ನಡೆದ ಒಂದು ದುರನುಭವವೇ ಆ ಭಯಕ್ಕೆ ಕಾರಣವಾಗಿತ್ತು. ಅದಕ್ಕಾಗಿಯೇ ಅವಳ ಶಿಕ್ಷಣವೆಲ್ಲವೂ ಗರ್ಲ್ಸ್ ಸ್ಕೂಲ್ ಮತ್ತು ವುಮೆನ್ಸ್ ಕಾಲೇಜಿನಲ್ಲೇ ಮುಗಿದಿತ್ತು.
ಕೊನೆಗೆ, ಆ ಮನೆಯ ಬಗ್ಗೆ ಅವಳು ಕೆಲವು ಮಾಹಿತಿಗಳನ್ನು ಯಾರಿಂದಲೋ ವಿಚಾರಿಸಿ ತಿಳಿದುಕೊಂಡಳು. ಒಬ್ಬ ತಾಯಿ ಮತ್ತು ಮಗ ಅಲ್ಲಿ ವಾಸವಾಗಿದ್ದಾರೆ. ಮಗ ಯಾವುದೋ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ.
ತನ್ನ ಹಳದಿ ಗುಲಾಬಿಯ ಮೇಲಿನ ಅತಿಯಾದ ಆಸೆಯಿಂದಾಗಿ, ಭಯವನ್ನೆಲ್ಲ ಬದಿಗಿಟ್ಟು ಅವಳು ಕೊನೆಗೆ ಧೈರ್ಯ ಮಾಡಿ ಆ ಮನೆಯತ್ತ ಹೆಜ್ಜೆ ಹಾಕಿದಳು.
ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ವಿವಿಧ ಬಗೆಯ ಹೂವುಗಳ ಸುವಾಸನೆ ಅವಳನ್ನು ಸ್ವಾಗತಿಸಿತು. ತಂಪಾದ ಗಾಳಿಯೊಂದು ಅವಳನ್ನು ಆವರಿಸಿತು. ಹಿಂಜರಿಯುತ್ತಲೇ ಅವಳು ಕಾಲಿಂಗ್ ಬೆಲ್ ಒತ್ತಿದಳು. ಸ್ವಲ್ಪ ಸಮಯದ ನಂತರ ಒಬ್ಬ ಮಹಿಳೆ ಬಾಗಿಲು ತೆಗೆದು, "ಯಾರು, ಏನು ಬೇಕಿತ್ತು?" ಎಂಬಂತೆ ಅವಳನ್ನು ನೋಡಿದರು.
ಶ್ರೀಗೌರಿ ಮೆಲ್ಲನೆ ತನ್ನ ಪರಿಚಯ ಹೇಳಿದಳು. "ಅತ್ತೆ, ನಾನು ಸ್ವಲ್ಪ ದೂರದ ಹೊಸ ಮನೆಯಲ್ಲಿ ವಾಸವಾಗಿದ್ದೇನೆ. ನನಗೂ ನಿಮ್ಮಂತೆಯೇ ಗಿಡಗಳೆಂದರೆ ತುಂಬಾ ಇಷ್ಟ.... ನಿಮ್ಮ ಗಿಡಗಳನ್ನು ನೋಡಲು ಬಂದಿದ್ದೇನೆ"
"ಹೋ... ಹೌದೇ.... ಒಳಗೆ ಬಾರಮ್ಮಾ..ನನ್ನ ಹೆಸರು ಹೇಮಾ..." ಹೇಮಾ ನಗುತ್ತಾ ಅವಳನ್ನು ಒಳಗೆ ಕರೆದರು.
"ನನಗೆ ಹೂವಿನ ಗಿಡಗಳೆಂದರೆ ತುಂಬಾ ಇಷ್ಟ. ನಿಮ್ಮ ಹೂದೋಟ ತುಂಬಾ ಚೆನ್ನಾಗಿದೆ" ಶ್ರೀಗೌರಿ ಮೆಲುವಾಗಿ ಹೇಳಿದಾಗ ಹೇಮಾ ನಕ್ಕರು.
"ಓಹ್.. ಗಿಡಗಳಾ! ಇದ್ಯಾವುದೂ ನನ್ನ ಕೆಲಸವಲ್ಲ ಮಗಳೇ, ಇದೆಲ್ಲಾ ನನ್ನ ಮಗ ಸುಧರ್ಮನ ಹುಚ್ಚು. ಅವನೇ ಇದೆಲ್ಲವನ್ನೂ ನೋಡಿಕೊಳ್ಳುವುದು. ಗಿಡಗಳೆಂದರೆ ಅವನಿಗೆ ಜೀವ. ಎಲ್ಲಿ ಕಂಡರೂ ತಂದು ನೆಡುತ್ತಾನೆ. ಆಫೀಸಿಗೆ ಹೋಗುವಾಗ, ಬರುವಾಗಲೂ ಈ ಹೂವುಗಳ ಪಕ್ಕದಲ್ಲೇ ಇರುತ್ತಾನೆ. ಅವುಗಳಿಗೆ ನೀರು ಹಾಕುವ ಗಡಿಬಿಡಿಯಲ್ಲಿ ಬೆಳಗ್ಗೆ, ಸಂಜೆ ಟೀ ಕುಡಿಯುವುದು ಕೂಡ ಈ ಗಿಡಗಳ ನಡುವೆಯೇ!"
ಗಿಡಗಳನ್ನು ಆರೈಕೆ ಮಾಡುವುದು ಮಗನೆಂದು ತಿಳಿದಾಗ ಶ್ರೀಗೌರಿಯ ಎದೆಯಲ್ಲಿ ಮಿಂಚೊಂದು ಹಾದುಹೋದಂತಾಯಿತು!
ಹಳದಿ ಗುಲಾಬಿಯ ಮೇಲಿನ ಆಸೆಯ ಕೊನೆಯ ನಿರೀಕ್ಷೆ ಆ ಮನೆಯ ಮೇಲಿತ್ತು ಅವಳಿಗೆ. ಆದರೆ, ಹೂದೋಟದ ಜವಾಬ್ದಾರಿ ಅವರ ಮಗನದ್ದಾದರೆ ತಾನು ಕೇಳುವುದು ಸರಿಯಲ್ಲ. ಇನ್ನು ಇಲ್ಲಿ ನಿಲ್ಲವುದರಲ್ಲಿ ಅರ್ಥವಿಲ್ಲ ಎಂದು ಅವಳು ತೀರ್ಮಾನಿಸಿದಳು.
'ಆನ್‌ಲೈನ್ ಮೂಲಕ ಆರ್ಡರ್ ಮಾಡೋಣ, ತಾನು ಬಯಸಿದ ಬಣ್ಣ ಸಿಕ್ಕಿದರೆ ತನ್ನ ಚಾನ್ಸ್ ಇಲ್ಲದಿದ್ದರೆ ಸಿಕ್ಕಿದ್ದು ಸಾಕು' ಎಂದುಕೊಂಡು ಅವಳು ಆ ಮಹಿಳೆಗೆ ವಿದಾಯ ಹೇಳಲು ಮುಂದಾದಳು.
"ಓಹ್.. ಹಾಗಾದರೆ ಸರಿ ಅತ್ತೆ, ನಾನು ಆಮೇಲೆ ಬರುತ್ತೇನೆ."
"ಅಯ್ಯೋ ಮಗೂ, ಬಂದ ದಾರಿಯಲ್ಲೇ ಹಾಗೆ ಹೋಗಬೇಡ... ಮನೆಗೆ ಬಂದು ಒಂದು ಹೆಜ್ಜೆ ಒಳಗಿಡದೆ ಹೋಗುವುದೇ? ಇಂದು ಶುಕ್ರವಾರ ಬೇರೆ, ಮಹಾಲಕ್ಷ್ಮಿಯಂತೆ ಮನೆಗೆ ಬಂದಿರುವೇ ಕೂತ್ಕೋ, ನಾನು ಅವನನ್ನು ಕರೆಯುತ್ತೇನೆ. ಅವನು ಈಗಷ್ಟೇ ಆಫೀಸಿನಿಂದ ಬಂದು ಬಟ್ಟೆ ಬದಲಾಯಿಸಲು ಕೋಣೆಗೆ ಹೋಗಿದ್ದಾನೆ..." ಹೇಮಾ ಹೇಳಿದಾಗ ಶ್ರೀಗೌರಿಗೆ ಅಲ್ಲಿ ನಿಲ್ಲದೆ ವಿಧಿ ಇರಲಿಲ್ಲ.
ಹಳದಿ ಗುಲಾಬಿ ಹೇಗಾದರೂ ಸಿಗಬಹುದೆಂಬ ಸಣ್ಣ ಭರವಸೆಯಲ್ಲಿ ಅವಳು ಒಲ್ಲದ ಮನಸ್ಸಿನಿಂದಲೇ ನಿಧಾನವಾಗಿ ಆ ಮನೆಯೊಳಗೆ ಕಾಲಿಟ್ಟಳು. ಮನೆಯ ವಿವಿಧ ಮೂಲೆಗಳಲ್ಲಿ ಅಲಂಕರಿಸಿಟ್ಟಿದ್ದ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಗಳನ್ನು ಅವಳು ಆಶ್ಚರ್ಯದಿಂದ ನೋಡುತ್ತಾ ಮೈ ಮರೆತು ನಿಂತುಬಿಟ್ಟಳು.
'ತಮ್ಮ ಹೊಸ ಮನೆಯನ್ನೂ ಇದೇ ರೀತಿಯ ಹೂವಿನ ಗಿಡಗಳಿಂದ ಅಲಂಕರಿಸಬೇಕು ಎಂದು ಅವಳು ಮನದಲ್ಲೇ ಯೋಚಿಸುತ್ತಿರುವಾಗ, ಸುಧರ್ಮ ಅಲ್ಲಿಗೆ ಬಂದ. ತಮ್ಮ ಮನೆಯ ಒಳಗೆ ನಿಂತು ಬೆರಗಿನಿಂದ ಹೂವಿನ ಗಿಡಗಳನ್ನು ನೋಡುತ್ತಿರುವ ಸುಂದರ ತರುಣಿಯನ್ನು ಕಂಡು ಅವನ ಮುಖದಲ್ಲಿ ನಗು ಅರಳಿತು.
ಆಕರ್ಷಕ ವ್ಯಕ್ತಿತ್ವದ ಅವನು ಮುಗುಳ್ನಗುತ್ತಾ ತನ್ನ ಪರಿಚಯವನ್ನು ಹೇಳಿಕೊಂಡ. "ಹಲೋ, ನಾನು ಸುಧರ್ಮ. ನಿಮ್ಮ ಹೆಸರೇನು?"
ಗಿಡಗಳನ್ನು ನೋಡುತ್ತಾ ಮೈ ಮರೆತಿದ್ದ ಅವಳು ಅವನ ಆ ಪ್ರಶ್ನೆಗೆ ಕೊಂಚ ತಡಬಡಾಯಿಸಿದಳು. ಅವಳಿಗೆ ಇದುವರೆಗೆ ಯಾವುದೇ ಯುವಕರ ಬಳಿ ಮಾತನಾಡಿ ಅಭ್ಯಾಸವಿರಲಿಲ್ಲ.
ಆದರೂ ಹಳದಿ ಗುಲಾಬಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ನಡುಗುವ ಧ್ವನಿಯಲ್ಲಿ ತನ್ನ ಪರಿಚಯ ಹೇಳಿದಳು "ನಾನು ಶ್ರೀಗೌರಿ... ನನಗೆ ನಿಮ್ಮ ಹೂದೋಟ ತುಂಬಾ ಇಷ್ಟವಾಯಿತು. ವಿಶೇಷವಾಗಿ ಆ ಹಳದಿ ಗುಲಾಬಿ..."
'ಹಳದಿ ಗುಲಾಬಿ' ಎಂದೊಡನೆ ಅವನ ಹಣೆಯಲ್ಲೊಂದು ಸಣ್ಣ ಗೆರೆ ಮೂಡಿತು. ನಂತರ ಮೃದುವಾಗಿ ನಗುತ್ತಾ ಹೇಳಿದ.
"ಹೊರಗೆ ಗಾರ್ಡನ್ನಲ್ಲಿ ಕಾಣುವ ಹಳದಿ ಗುಲಾಬಿ ಮಾತ್ರವಲ್ಲ. ಬೇರೆ ಬೇರೆ ವಿನ್ಯಾಸಗಳ ಆರು ಜಾತಿಯ ಆ ಹಳದಿ ಗುಲಾಬಿ ಗಿಡಗಳು ನನ್ನ ಬಳಿ ಇವೆ" ಎಂದಾಗ ಅವಳ ಕಂಗಳು ಅರಳಿದವು.
"ಹೌದೇ? ನಾನು ಇದುವರೆಗೆ ಅಷ್ಟು ಜಾತಿಯ ಹಳದಿ ಗುಲಾಬಿಗಳನ್ನು ನೋಡಿಯೇ ಇಲ್ಲವಲ್ಲ " ಹೂವಿನ ಗಿಡದ ಬಗ್ಗೆ ಹೇಳಿದಾಗ ಅವನ ಬಳಿ ಮಾತನಾಡಲು ಅವಳಿಗೆ ಸ್ವಲ್ಪ ಧೈರ್ಯ ಬಂತು.
ಅವಳ ಸುಂದರ ಮುಖವನ್ನು ನೋಡುತ್ತಾ ಅವನು ಮುಗುಳ್ನಕ್ಕ.
"ಹಳದಿ ಗುಲಾಬಿ ಗಿಡಗಳು ತುಂಬಾ ಸೂಕ್ಷ್ಮ ಹಾಗಾಗಿ ಅವುಗಳನ್ನು ಟೆರೇಸ್ ಮೇಲೆ ಇರಿಸಿದ್ದೇನೆ" ಎಂದಾಗ ಶ್ರೀ ಗೌರಿಗೆ ಅವುಗಳನ್ನು ನೋಡಬೇಕೆಂಬ ಅಭಿಲಾಷೆ ಹೆಚ್ಚಾಯಿತು.
"ನನ್ನ ಮನೆಯಲ್ಲೂ ಸಣ್ಣ ಹೂದೋಟವಿದೆ. ಆದರೆ, ನನಗೆ ಅತ್ಯಂತ ಇಷ್ಟವಾದ ಹಳದಿ ಗುಲಾಬಿ ಮಾತ್ರ ಅದರಲ್ಲಿಲ್ಲ. ಈ ಊರಿಗೆ ಬಂದ ಮೇಲೆ ಹಲವೆಡೆ ವಿಚಾರಿಸಿದೆ, ಎಲ್ಲಿಯೂ ಸಿಗಲೇ ಇಲ್ಲ..." ಅವಳ ದನಿಯಲ್ಲಿ ಬೇಸರವಿತ್ತು.
"ಅದು ಬೇರೇನೂ ಅಲ್ಲ ಶ್ರೀಗೌರಿ" ಸುಧರ್ಮ ಶಾಂತನಾಗಿ ವಿವರಿಸಿದ.
"ಹಳದಿ ಗುಲಾಬಿ ಅತ್ಯಂತ ಸೂಕ್ಷ್ಮವಾದ ತಳಿ. ಇತರ ಗುಲಾಬಿಗಳಿಗಿಂತ ಇದಕ್ಕೆ ಹೆಚ್ಚಿನ ಆರೈಕೆ ಬೇಕು. ಹವಾಮಾನ ವೈಪರೀತ್ಯ ಹಾಗೂ ಕ್ರಿಮಿಕೀಟಗಳ ಕಾಟದಿಂದಾಗಿ ಇದನ್ನು ಬಯಲು ಜಾಗದಲ್ಲಿ ಬೆಳೆಸುವುದು ಕಷ್ಟ. ಅದಕ್ಕೇ ಊರಿನ ಜನರು ಇದನ್ನು ಹೆಚ್ಚಾಗಿ ನೆಡಲು ಹೋಗುವುದಿಲ್ಲ. ಆದರೆ ನನಗೆ ಇದರ ಸೌಂದರ್ಯ ಮತ್ತು ಸುವಾಸನೆ ತುಂಬಾ ಇಷ್ಟವಾದ್ದರಿಂದ, ಟೆರೇಸ್‌ನಲ್ಲಿ ವಿಶೇಷ ಮುಂಜಾಗ್ರತೆ ವಹಿಸಿ, ಸಾವಯವ ಗೊಬ್ಬರ ನೀಡಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದೇನೆ ಅಷ್ಟೇ." ಅವನ ಮಾತುಗಳನ್ನು ಕೇಳಿದಾಗ ಶ್ರೀಗೌರಿಗೆ ಸ್ವಲ್ಪ ನೆಮ್ಮದಿಯಾಯಿತು.
ತಾನು ಭಯಪಟ್ಟಂತೆ ಅವನು ಕ್ರೂರಿಯಾಗಲಿ ಅಥವಾ ಕೆಟ್ಟವನಾಗಲಿ ಅಲ್ಲ ಎಂಬ ಕಾರಣದಿಂದಾಗಿ ಅವನ ಬಳಿ ಮಾತನಾಡಲು ಸ್ವಲ್ಪ ಸಲಿಗೆ ಬಂತು. ಅವನ ನಗುಮುಖದ ಆಕರ್ಷಕ ವ್ಯಕ್ತಿತ್ವ, ಸಂಭಾಷಣೆಯಲ್ಲಿದ್ದ ಸೌಮ್ಯತೆ ಅವಳೊಳಗಿದ್ದ ಗಂಡಸರ ಬಗೆಗಿನ ಭಯದ ಹಿಮಪಾತವನ್ನು ಕರಗಿಸಲು ಪ್ರಾರಂಭಿಸಿತು.
"ಬನ್ನೀ, ಟೆರೇಸ್‌ಗೆ ಹೋಗಿ ಆ ಹಳದಿ ಗುಲಾಬಿಯನ್ನು ನೋಡೋಣ" ಸುಧರ್ಮ ಮನಮೋಹಕ ನಗೆಯೊಂದಿಗೆ ಅವಳನ್ನು ಆಹ್ವಾನಿಸಿದ.
ಜೀವನದಲ್ಲೇ ಮೊದಲ ಬಾರಿಗೆ ಒಬ್ಬ ಪುರುಷನ ಜೊತೆ ಮೇಲಕ್ಕೆ ನಡೆಯುವಾಗ ಶ್ರೀಗೌರಿಯ ಹೃದಯ ಜೋರಾಗಿ ಬಡೆದುಕೊಳ್ಳುತ್ತಿತ್ತು. ಆದರೂ ಹಳದಿ ಗುಲಾಬಿಯ ಮೇಲಿನ ಅತಿಯಾದ ಪ್ರೀತಿ ಮತ್ತು ಸುಧರ್ಮ ತನ್ನಲ್ಲಿ ಮೂಡಿಸಿದ ಆ ವಿಶೇಷ ಸುರಕ್ಷತೆಯ ಭಾವನೆ ಅವಳ ಭಯವನ್ನು ಸಂಪೂರ್ಣವಾಗಿ ಮೆಟ್ಟಿ ನಿಂತಿತು.
ಟೆರೇಸ್‌ಗೆ ತಲುಪಿದ ಅವಳು ಆಶ್ಚರ್ಯದಿಂದ ವಿಸ್ಮಯಗೊಂಡಳು! ಅಲ್ಲಿ ಹಸಿರು ಎಲೆಗಳ ನಡುವೆ, ಮುಂಜಾನೆಯ ಸೂರ್ಯನ ಕಿರಣಗಳಂತೆ ಕಂಗೊಳಿಸುವ ಸುಂದರವಾದ ಹಳದಿ ಗುಲಾಬಿಗಳು ಅರಳಿನಿಂತಿದ್ದವು. ಅವುಗಳ ದಳಗಳು ರೇಷ್ಮೆಯಂತೆ ಮೃದುವಾಗಿದ್ದು, ಅಂಚುಗಳಲ್ಲಿ ಸಣ್ಣ ಹನಿಗಳಂತೆ ಇಬ್ಬನಿ ಹೊಳೆಯುತ್ತಿತ್ತು. ಪ್ರತಿಯೊಂದು ಹೂವೂ ತನ್ನದೇ ಆದ ವಿಶಿಷ್ಟ ಮಧುರ ಸುಗಂಧವನ್ನು ವಾತಾವರಣದಲ್ಲೆಲ್ಲಾ ಪಸರಿಸುತ್ತಿತ್ತು.
ಸುಧರ್ಮ ಅತ್ಯಂತ ಎಚ್ಚರಿಕೆಯಿಂದ ಮುಳ್ಳು ತಾಗದಂತೆ ಒಂದು ಹಳದಿ ಗುಲಾಬಿಯನ್ನು ಕೊಯ್ದು ಅವಳೆಡೆಗೆ ನೀಡಿದ.
"ಇದು ನಿನಗಾಗಿ! ಬೇಕಿದ್ದರೆ ಇದರ ಸಣ್ಣ ಗಿಡವೊಂದನ್ನು ಕೊಡುತ್ತೇನೆ, ನಿನ್ನ ಮನೆಯ ಹೂದೋಟದಲ್ಲೂ ನೆಟ್ಟು ಬೆಳೆಸು. ಅದನ್ನು ಹೇಗೆ ಆರೈಕೆ ಮಾಡಬೇಕೆಂದು ನಾನು ಹೇಳಿಕೊಡುತ್ತೇನೆ."
ಆ ಹೂವನ್ನು ಕೈಗೆ ತೆಗೆದುಕೊಳ್ಳುವಾಗ ಶ್ರೀಗೌರಿಯ ಕೈಗಳು ಸಣ್ಣಗೆ ನಡುಗಿದವು. ಆದರೆ, ಈ ಬಾರಿ ಅದು ಭಯದಿಂದಾಗಿರಲಿಲ್ಲ... ಸುಧರ್ಮನ ಬೆರಳುಗಳು ಅವಳ ಕೈಗಳನ್ನು ಸ್ಪರ್ಶಿಸಿದಾಗ, ಅವಳ ದೇಹದಲ್ಲಿ ಮಿಂಚೊಂದು ಹರಿದಂತಾಯಿತು. ಮನಸ್ಸಿನಲ್ಲಿ ಯಾವುದೋ ಹೊಸ ಭಾವನೆಯನ್ನುರಳಿಸುತ್ತಾ ಅವಳು ಅವನನ್ನು ನೋಡಿದಳು. ಆ ಶಾಂತ ಕಣ್ಣುಗಳಲ್ಲಿ ತನಗಾಗಿರುವ ಕಾಳಜಿ ಮತ್ತು ಪ್ರೀತಿ ಹೊಳೆಯುತ್ತಿರುವುದನ್ನು ಅವಳು ಕಂಡಳು. ಯಾವ ಪುರುಷನ ಮೇಲೆಯೂ ಮೂಡದ ಅಪೂರ್ವ ಅನುರಾಗವೊಂದು ಅವಳ ಮನಸ್ಸಿನಲ್ಲಿ ಆಗತಾನೇ ಅರಳತೊಡಗಿತು.
ಆದರೆ, ಶ್ರೀಗೌರಿಗೆ ತಿಳಿಯದ ಒಂದು ದೊಡ್ಡ ರಹಸ್ಯ ಸುಧರ್ಮನ ಒಳಗಿತ್ತು! ಅವಳು ಆ ಊರಿಗೆ ವಾಸ್ತವ್ಯ ಬದಲಾಯಿಸಿದಂದೇ, ದಾರಿಯಂಚಿನಲ್ಲಿ ಸುಧರ್ಮ ಅವಳನ್ನು ಕಂಡಿದ್ದ.
ಮೊದಲ ನೋಟದಲ್ಲೇ ಅವಳ ಮುಗ್ಧ ಸೌಂದರ್ಯ ಅವನ ಮನಸ್ಸಿನಲ್ಲಿ ಒಲವಿನ ಬೀಜವನ್ನು ಬಿತ್ತಿತ್ತು. ಫಲ ಪುಷ್ಪ ಪ್ರದರ್ಶನದಲ್ಲಿ ಹಳದಿ ಗುಲಾಬಿ ಗಿಡಗಳನ್ನು ಖರೀದಿಸಿದ್ದು ಸುಧರ್ಮನೇ ಆಗಿದ್ದ. ಆ ಗಿಡದ ಮೂಲಕವಾದರೂ ಅವಳ ಪರಿಚಯವಾಗಬೇಕು ಎಂಬ ಹಂಬಲ ಅವನದ್ದು.
ಶ್ರೀಗೌರಿಯ ಸರಳ ನಡೆನುಡಿ, ಮುಗ್ಧ ಚೆಲುವನ್ನು ಕಂಡು ಅವಳನ್ನೇ ತನ್ನ ಹೃದಯದೊಡತಿಯನ್ನಾಗಿ ಮಾಡಬೇಕೆಂಬ ಅಭಿಲಾಷೆಯಿಂದ ಶ್ರೀಗೌರಿಯ ಮನೆಗೆ ಹೋಗಿ ಅವಳ ತಾಯ್ತಂದೆಯರ ಬಳಿ ವಿಚಾರಿಸಿದಾಗಲೇ ಅವಳ ಹೂವುಗಳ ಮೇಲಿನ ಪ್ರೀತಿ ಮತ್ತು ಗಂಡಸರ ಮೇಲಿನ ಭಯ ಅವನಿಗೆ ತಿಳಿದಿದ್ದು.
'ಅವಳಾಗಿ ಒಪ್ಪಿದರೆ ತಮಗೆ ಯಾವುದೇ ಅಭ್ಯಂತರವೂ ಇಲ್ಲ' ಎಂದು ಅವರು ಹೇಳಿದಾಗ ಸುಧರ್ಮ ಅವಳನ್ನು ಮನದೊಳಗೆ ಪ್ರತಿಷ್ಠಿಸಿ ಒಳಗೊಳಗೇ ಆರಾಧಿಸತೊಡಗಿದ್ದ.
ಹೂವಿನ ಮೇಲಿನ ಪ್ರೀತಿಯಿಂದ ಅವಳು ಒಂದಲ್ಲ ಒಂದು ದಿನ ತನ್ನ ಬಳಿಗೆ ಬರಬಹುದು ಎಂಬ ನಿರೀಕ್ಷೆ ಅವನಿಗಿತ್ತು. ಅವಳ ಭಯವನ್ನು ಹೋಗಲಾಡಿಸುತ್ತೇನೆ ಎಂದು ಅವಳ ಹೆತ್ತವರಿಗೆ ಭರವಸೆ ಕೊಟ್ಟ ಅವನು, ಹಳದಿ ಗುಲಾಬಿ ಹೂವಿನ ಮೂಲಕ ಅವಳ ಜೊತೆ ಮಾತಿಗಾರಂಭಿಸಿ ಮುಂದೇ ಕೆಲವೇ ತಿಂಗಳುಗಳಲ್ಲಿ ಅವಳ ಮನಸ್ಸಿನಲ್ಲಿ ಭದ್ರವಾದ ಸ್ಥಾನ ಗಳಿಸಿಬಿಟ್ಟಿದ್ದ.
ಸುಂದರವಾದ ಹೂವಿನಷ್ಟೇ ಸೊಬಗಿನ ಅವನ ಮನಸ್ಸಿನ ಪ್ರೀತಿ ಅವಳೆದೆಯಲ್ಲಿಯೂ ಪುಟ್ಟ ಗಿಡವಾಗಿ ಚಿಗುರಿ ಹಬ್ಬಿ ನಿಧಾನವಾಗಿ ಮೊಗ್ಗೊಡೆದು ಹೂವಾಗಿ ಅರಳಿತು.
ಗುಲಾಬಿಗಿಂತಲೂ ಸುಂದರವಾದ ಪ್ರೀತಿಯನ್ನು ನೀಡಿದ ಆ ಹೂದೋಟದೊಡೆಯನಿಗೆ ಅವಳ ಮನಸ್ಸು ಸಂಪೂರ್ಣವಾಗಿ ಅರ್ಪಿತವಾಗಿತ್ತು....! ಮುಂದೆ ಕೆಲವೇ ದಿನಗಳಲ್ಲಿ ಆ ಹೂದೋಟ ಹಾಗೂ ಆ ಹೂದೋಟದ ಒಡೆಯನ ಹೃದಯದೊಡತಿಯಾಗಿದ್ದಳು ಶ್ರೀಗೌರಿ.
- ಪ್ರಸನ್ನಾ ವಿ. ಚೆಕ್ಕೆಮನೆ

