ಬೆಂಗಳೂರು: ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ ನಿರಂತರ ನೃತ್ಯ ಶಾಲೆಯ ವತಿಯಿಂದ ಆಯೋಜಿಸಿದ್ದ ‘ನೂಪುರ ನರ್ತನ’ ಭರತನಾಟ್ಯ ಕಾರ್ಯಕ್ರಮದಲ್ಲಿ ಐವರು ವಿದ್ಯಾರ್ಥಿನಿಯರು ಮೊದಲ ಬಾರಿಗೆ ಗೆಜ್ಜೆ ಕಟ್ಟಿ ರಂಗಾರೋಹಣ ಮಾಡುವ ಮೂಲಕ ಶಾಸ್ತ್ರೀಯ ನೃತ್ಯಲೋಕಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿದರು. ನಾಟ್ಯಾಚಾರ್ಯ ಗುರುದಂಪತಿಗಳಾದ ವಿದ್ವಾನ್ ಸೋಮಶೇಖರ್ ಚುಡನಾಥ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವು ಕಲಾತ್ಮಕ ವೈಭವ ಮತ್ತು ಶಿಸ್ತಿನ ನೃತ್ಯಪ್ರದರ್ಶನಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ನಿರಂತರ ನೃತ್ಯ ಶಾಲೆಯ ವಿದ್ಯಾರ್ಥಿನಿಯರಾದ ಕು. ಗಾರ್ಗಿ, ಕು. ಸಾಂಚಿತ ಜಿ. ಭಟ್, ಕು. ಬೆನಿಶಾ ಶೆಟ್ಟಿ, ಕು. ಅದ್ವಿತ ರಾಜ್ ಹಾಗೂ ಕು. ಶುಭಾಂಗಿ ಚಟ್ಟೋಪಾಧ್ಯಾಯ ಅವರು ತಮ್ಮ ಮೊದಲ ಸಾರ್ವಜನಿಕ ಭರತನಾಟ್ಯ ಪ್ರದರ್ಶನದ ಮೂಲಕ ಆತ್ಮವಿಶ್ವಾಸ, ಲಯಬದ್ಧತೆ ಹಾಗೂ ಭಾವಪೂರ್ಣ ಅಭಿನಯದಿಂದ ಗಮನ ಸೆಳೆದರು.
ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನ್ನಮಾಚಾರ್ಯರ ‘ಶ್ರೀಮನ್ನಾರಾಯಣ’, ಶಿವನ ಪ್ರದೋಷ ತಾಂಡವವನ್ನು ಬಿಂಬಿಸುವ ಶಿವಕೃತಿ, ‘ತೊಡೆಯ ಮಂಗಳಂ’, ಮುತ್ತುಸ್ವಾಮಿ ದೀಕ್ಷಿತರ ‘ಕಂಜದಳಾಯತಾಕ್ಷಿ’, ‘ಗೋವರ್ಧನ ಗಿರಿಧಾರ’, ಪುರಂದರ ದಾಸರ ‘ಹನುಮಂತ ದೇವ ನಮೋ’ ಹಾಗೂ ಡಾ. ಎಂ. ಬಾಲಮುರಳೀಕೃಷ್ಣ ಅವರ ಜನಪ್ರಿಯ ‘ಬೃಂದಾವನಿ ತಿಲ್ಲಾನ’ ಸೇರಿದಂತೆ ವೈವಿಧ್ಯಮಯ ನೃತ್ಯಪ್ರಸ್ತುತಿಗಳು ಪ್ರೇಕ್ಷಕರ ಮನಗೆದ್ದವು.
ಕಾರ್ಯಕ್ರಮಕ್ಕೆ ವಿದುಷಿ ಶ್ರೀಮತಿ ಭಾರತಿ ವೇಣುಗೋಪಾಲ್ ಗಾಯನದಲ್ಲಿ, ವಿದ್ವಾನ್ ಜಿ. ಎಸ್. ನಾಗರಾಜ್ ಮೃದಂಗದಲ್ಲಿ ಹಾಗೂ ವಿದ್ವಾನ್ ದೀಪಕ್ ಹೆಬ್ಬಾರ್ ವಂಶಿಯಲ್ಲಿ ಸಾಥ್ ನೀಡಿ ಪ್ರದರ್ಶನದ ಕಲಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿದರು.
ಬಹುಮುಖ ಪ್ರತಿಭೆ ಡಾ. ಲಕ್ಷ್ಮೀ ರೇಖಾ ಹಾಗೂ ವಿದ್ವಾನ್ ಡಾ. ಸಾಗರ್ ಟಿ. ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಗುರುಗಳ ಸಮರ್ಪಿತ ತರಬೇತಿ, ವಿದ್ಯಾರ್ಥಿನಿಯರ ಪ್ರತಿಭೆ ಮತ್ತು ನಿರಂತರ ನೃತ್ಯ ಶಾಲೆಯ ಕಲಾಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರು, ಭಾರತೀಯ ಶಾಸ್ತ್ರೀಯ ನೃತ್ಯದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ಗುಣಮಟ್ಟದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

