ಹಳ್ಳಿಯಲ್ಲಿರುವ ಜನ ಮನಸ್ಸಿನಿಂದ ಆಗರ್ಭ ಶ್ರೀಮಂತರು. ಹಳ್ಳಿ ಹಸಿರಾಗಿ ಮಿಂಚಬೇಕಾದರೆ, ಅಲ್ಲಿ ಭತ್ತದ ಗದ್ದೆಗಳು ಕಂಗೊಳಿಸಬೇಕಾದರೆ, ಕಲ್ಮಶವಿಲ್ಲದೇ ನದಿ ಸದಾ ಹರಿಯುತ್ತಿರಬೇಕಾದರೆ ಅಲ್ಲಿನ ಜನ ಹಳ್ಳಿಯ ಮೇಲೆ ಇಟ್ಟಿರುವ ಪ್ರೀತಿ ಪ್ರಮುಖ ಪಾತ್ರ ವಹಿಸುತ್ತದೆ
ಬೆಳಗಾದರೆ ಸಾಕು ಪೂರ್ವದಲ್ಲೆಲ್ಲಾ ಬಂಗಾರದ ಹೊಂಬಣ್ಣವನ್ನು ಚೆಲ್ಲಿ ದಟ್ಟ ಬೆಟ್ಟಗಳ ನಡುವೆ ನುಸುಳಿ ಮಂಜಿನ ಹೊ0ಗೆಯನ್ನು "ಉಫ್" ಎನಿಸಿ ದಿನಕರ ಉದಯವಾಗುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಕೋಳಿಗಳು ಪ್ರಪಂಚಕ್ಕೆ ಕೂಗಿ ಹೇಳಲು ಶುರುಮಾಡುತ್ತದೆ. ಇತ್ತ ಚಿಲಿಪಿಲಿ ಸದ್ದು ಮಾಡುತ್ತಾ ಪುಟ್ಟ ಹಕ್ಕಿಗಳು ಗೂಡಿನಿಂದ ತಲೆಯೆತ್ತಿ ಸುತ್ತ ನೋಡಲು ಶುರುಮಾಡುತ್ತವೆ. ಗದ್ದೆ ಕಡೆ ಕಣ್ಣು ಹಾಯಿಸಿದರೆ ಕೊಕ್ಕರೆಗಳೆಲ್ಲ ಒಂಟಿ ಕಾಲಲ್ಲಿ ನಿಂತು ಧ್ಯಾನಸ್ತರಾಗಿರುತ್ತವೆ, ಕರುಗಳೆಲ್ಲ "ಅಂಬ" ಎನ್ನುತ್ತ ಹಾಲು ಕುಡಿಯಲು ತಾಯಿ ದನವನ್ನು ಕಾಣಲು ಓಡುತ್ತಿರುತ್ತವೆ .
ಹಳ್ಳಿಯ ಜೀವನ ಊಹೆಗೂ ಮೀರಿದಂತದ್ದು. ಸರಳತೆಯನ್ನೇ ಮೈಗೂಡಿಸಿಕೊಂಡು ಬದುಕುತ್ತಿರುವ ಹಳ್ಳಿಯ ಜನ ದುಡಿಮೆಯೇ ದೇವರು ಎಂದು ಭಾವಿಸಿ ಜೀವಿಸುತ್ತಾರೆ. ಆಡಂಬರದ ಬದುಕಿಲ್ಲ, ಎತ್ತರವಾದ ಕಟ್ಟಡವಿಲ್ಲ, ವಾಹನದ ಕಪ್ಪು ಹೊಗೆ ಇಲ್ಲ, ಲಾರಿ ಬಸ್ಗಳಿಗೆ ಹೋಗುವಷ್ಟು ದಾರಿಯಿಲ್ಲ, ಡ್ರೈನೇಜ್ ಸಮಸ್ಯೆ ಇಲ್ಲ, ಇದಕ್ಕಿಂತ ಇನ್ನೇನು ಇರಬೇಕು. ನೆಮ್ಮದಿಯ ಜೀವನಕ್ಕೆ ಇಷ್ಟಿದ್ದರೆ ಸಾಕು.
ಹಳ್ಳಿ ಅಂದರೆ ಒಂದು ಚಿತ್ರಣ ಕಣ್ಮುಂದೆ ಬಂದೇ ಬರುತ್ತದೆ ಅದೇ ಎತ್ತಿನ ಗಾಡಿ. ಈಗೆಲ್ಲ ಸಿಟಿಗಳಲ್ಲಿ ಕಾರು ಬಸ್ ಎಂಬ ಬಗೆಬಗೆಯ ಗಾಡಿ ಇದೆ ಆದರೆ ಮೊದಲಿನ ಕಾಲದಲ್ಲಿ ಹಳ್ಳಿಗಳಲ್ಲಿ ಎತ್ತಿನಗಾಡಿಯೇ ಮದುವೆಗೂ ಮುಂಜಿಗೂ ಅದೇ ತೇರು ಅದೇ ಕಾರು ಅದೇ ಎಲ್ಲವೂ. ಹಳ್ಳಿಯ ಗದ್ದೆಯಲ್ಲಿ ಒಟ್ಟು ಗೂಡಿ ಊಟ ಸವಿಯುವ ಖುಷಿ ಅದು ಸ್ವರ್ಗಕ್ಕೂ ಮಿಗಿಲು. ಅಷ್ಟೇ ಅಲ್ಲ ಇಲ್ಲಿ ಸಿಗುವ ಸೀಕ್ರೆಟ್ ಮತ್ತೆಲ್ಲೂ ಸಿಗಲು ಸಾಧ್ಯವೇ ಇಲ್ಲ ಅದು ಸತ್ಯವೋ ಸುಳ್ಳೋ ಅಥವಾ ಏನೋ. ಆದರೆ ಸೀಕ್ರೆಟ್ ಮಾತ್ರ ತಪ್ಪಿದ್ದಲ್ಲ.
ಹಳ್ಳಿಯಲ್ಲಿಯೇ ಹುಟ್ಟಿ ಹಳ್ಳಿಯಲ್ಲಿಯೇ ಬೆಳೆಯುವ ಹಳ್ಳಿಯ ಮಕ್ಕಳು ಮಾತ್ರ ಬಲ್ಲರು ಹಳ್ಳಿಯ ಸೊಬಗು. ಪುಣ್ಯವಂತರಾದ ರೈತರು ಹುಟ್ಟಿ ಇತರರಿಗೆ ಅನ್ನ ನೀಡುವ ಕಾಯಕವನ್ನು ಕೈಗೆತ್ತಿಗೊಳ್ಳುವ ಪುಣ್ಯ ಸ್ಥಳ ಈ ಹಳ್ಳಿ,,= ಸಿಟಿಯವರು ಎಷ್ಟು ಮುಂದುವರೆದರು ತಂತ್ರಜ್ಞಾನದಲ್ಲಿ ಎಷ್ಟು ಪಳಗಿದರು ಕೃತಕ ಹಳ್ಳಿ ಸೃಷ್ಟಿಸಲಾರರು. ಹಳ್ಳಿಯ ಸೊಬಗ ಆಸ್ವಾದಿಸಲಾರರು.
- ಹರ್ಷಿತ ಶಿಶಿಲ



