ಶಾರದಾ, ವಿವೇಕಾನಂದ ಹಾಗೂ ಶ್ರೀ ರಾಮಕುಂಜೇಶ್ವರ ಸಂಸ್ಥೆಗಳಿಗೆ ಸಮಗ್ರ ಚಾಂಪಿಯನ್
ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಹಾಗೂ ವಿವೇಕಾನಂದ ಪದವಿಪೂರ್ವ ವಿದ್ಯಾಲಯ ಇದರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಕಾಲೇಜು ಆವರಣದಲ್ಲಿನ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವು ನಡೆಯಿತು.
ಕ್ರೀಡಾಕೂಟದ ಅಂತಿಮ ಅಂಕಗಳ ಪಟ್ಟಿಯ ಆಧಾರದ ಮೇಲೆ ವಿವಿಧ ವಯೋಮಾನದ ವಿಭಾಗಗಳಲ್ಲಿ ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು, ವಿವೇಕಾನಂದ ಪದವಿಪೂರ್ವ ಕಾಲೇಜು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಸಮಗ್ರ ತಂಡ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಪಡೆದುಕೊಂಡಿತು.
19 ವರ್ಷದೊಳಗಿನ ಬಾಲಕರ ವಯೋಮಾನದ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು 56 ಅಂಕಗಳೊಂದಿಗೆ ಪ್ರಥಮ ಹಾಗೂ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು 51 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು 95 ಅಂಕಗಳೊಂದಿಗೆ ಪ್ರಥಮ ಹಾಗೂ ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ, ಪುತ್ತೂರು 21 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು.
ಪ್ರೌಢಶಾಲಾ ಮತ್ತು ಪ್ರಾಥಮಿಕ ವಿಭಾಗದ 14 ವರ್ಷ ಹಾಗೂ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ, ರಾಮಕುಂಜ ಪ್ರಥಮ ಸ್ಥಾನ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಪ್ರಥಮ ಸ್ಥಾನ, ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ ಪುಣಚ ಹಾಗೂ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ ದ್ವಿತೀಯ ಸ್ಥಾನ ಪಡೆಯಿತು.
ವೈಯಕ್ತಿಕ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಪುಣಚ ಶ್ರೀದೇವಿ ಪ್ರೌಢಶಾಲೆಯ ತ್ರಿಶಾ ಎಮ್. ಸಿ. (14 ವರ್ಷದೊಳಗಿನ ವಯೋಮಾನ), ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಷಣ್ಮಿತಾ (17 ವರ್ಷದೊಳಗಿನ ವಯೋಮಾನ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆತ್ಮಿ ಕೆ. ಎಲ್. (17 ವರ್ಷದೊಳಗಿನ ವಯೋಮಾನ) ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿನಯ್ (17 ವರ್ಷದೊಳಗಿನ ವಯೋಮಾನ) ತಲಾ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದರು. 19 ವರ್ಷದೊಳಗಿನ ವಯೋಮಾನದ ವಿಭಾಗದಲ್ಲಿ ಸಾತ್ವಿ ಯತೀಶ್ ಪೂಜಾರಿ ಶಾರದಾ ಪದವಿಪೂರ್ವ ಕಾಲೇಜು, ಮಂಗಳೂರು, ಲಿಖಿತ್ ಎನ್. ನರೇಂದ್ರ ಪದವಿಪೂರ್ವ ಕಾಲೇಜು, ತೆಂಕಿಲ, ಜಿ.ಎಮ್. ಕೀರ್ತಿ, ವಿವೇಕಾನಂದ ಪದವಿಪೂರ್ವ ಕಾಲೇಜು ನೆಹರು ನಗರ, ಪುತ್ತೂರು ಹಾಗೂ ಅದ್ವಿತ್ ವಿ. ಯಾದವ್ ಶಾರದಾ ಪದವಿಪೂರ್ವ ಕಾಲೇಜು, ಮಂಗಳೂರು ಇವರು ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿಕೊಂಡಿರುತ್ತಾರೆ.
ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯ ನಿರ್ವಹಣಾ ಅಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ , ದೇವಿಚರಣ್ ರೈ. ಎಮ್. ಪ್ರಾಂಶುಪಾಲರು ವಿವೇಕಾನಂದ ಪದವಿಪೂರ್ವ ಕಾಲೇಜು, ರವಿಶಂಕರ್ ದೈಹಿಕ ನಿರ್ದೇಶಕರು, ವಿವೇಕಾನಂದ ಪದವಿಕಾಲೇಜು ಹಾಗೂ ಸುಧಾಕರ್ ಶೆಟ್ಟಿ ದೈಹಿಕ ನಿರ್ದೇಶಕರು, ಶಾರದಾ ಪದವಿಪೂರ್ವ ಕಾಲೇಜು ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


