ಮಂಗಳೂರು: ಸಮಾಜ ಒಗ್ಗೂಡುವುದರಿಂದ ಬರಬಹುದಾದ ಸಕಲ ಅನಾಹುತಗಳನ್ನು ಎದುರಿಸುವ ಬೃಹತ್ ಶಕ್ತಿ ಮೂಡುತ್ತದೆ. ಅದರಲ್ಲೂ ಜಗತ್ತಿಗೆ ಮಾರ್ಗದರ್ಶನ ನೀಡಬಲ್ಲ ವಿಪ್ರ ಸಮೂಹವು ತನ್ನ ಹಿರಿಯರು ಸಾಧಿಸಿ ತೋರಿಸಿದ 'ಬ್ರಹ್ಮ ತೇಜಸ್ಸಿನ ಬಲ'ವನ್ನು ಯುವ ಪೀಳಿಗೆಗೆ ಯಥಾವತ್ತಾಗಿ ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಸಂಸ್ಕಾರದ ಬಗೆಗಿನ ಚಿಂತನೆ ಇಂದಿನ ಅತ್ಯಗತ್ಯ ಹಾಗೂ ತುರ್ತು ಅನಿವಾರ್ಯತೆಯಾಗಿದೆ ಎಂದು ಎಡನೀರು ಸಂಸ್ಥಾನದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಕರೆ ನೀಡಿದರು.
ಅವರು ಕೊಡಿಕಲ್‌ನ ವಿಪ್ರ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.
30-40 ರ ಆಸುಪಾಸಿನ ಯುವಕರೇ ನಮ್ಮ ಸಮಾಜದ ಆಶಾಕಿರಣ. ಅವರನ್ನು ಸಂಘಟಿತರನ್ನಾಗಿ ಮಾಡಬೇಕಾಗಿದೆ. ಆಗ ಮಾತ್ರ ನಾವು ಯಶಸ್ವೀ ವಿಪ್ರರಾಗಿ ವಿಶ್ವದ ಮುಂದಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ಕೊಡಿಕಲ್ ವಿಪ್ರ ವೇದಿಕೆಯು ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿರುವ ಕಾರ್ಯಗಳು ಅತ್ಯಂತ ಅನುಕರಣೀಯವಾಗಿದ್ದು, ಮಠವು ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸದಾ ನಿಮ್ಮೊಂದಿಗಿರುತ್ತದೆ" ಎಂದು ಶ್ರೀಗಳು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಮುಂದಿನ ತಿಂಗಳು ನಡೆಯಲಿರುವ ವೇದಿಕೆಯ ‘ದಶಮಾನೋತ್ಸವ ಸಮಾರೋಪ ಸಮಾರಂಭ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ವೇದಿಕೆಯ ಗೌರವಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿಗಳಾದ ಶ್ರೀ ಜಯರಾಮ ಪದಕಣ್ಣಾಯರು ಮಾತನಾಡಿ, ಪೂಜ್ಯ ಶ್ರೀಗಳು ಬಿಜಯಂಗೈದು ಆಶೀರ್ವಚನ ನೀಡಿರುವುದರಿಂದ ನಮ್ಮ ವೇದಿಕೆಗೆ ಆನೆಬಲ ಬಂದಂತಾಗಿದೆ. ಇನ್ನು ಮುಂದೆಯೂ ನಾವು ಮತ್ತಷ್ಟು ಉತ್ಸಾಹದಿಂದ ಸಮಾಜಮುಖಿ ಕಾರ್ಯಗಳಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯ ಸಂಸ್ಥಾಪಕರಾದ ವೇ|| ಮೂ|| ವಿಶ್ವ ಕುಮಾರ್ ಜೋಯಿಸ್ ಹಾಗೂ ಶ್ರೀಮತಿ ವೃಂದಾ ದಂಪತಿಗಳು ಶ್ರೀಗಳ ಪಾದಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದರು.
ವೇದಿಕೆಯ ಸದಸ್ಯರ ಮಕ್ಕಳಾದ ಕು. ಧಾತ್ರಿ, ಕು. ಸಿಂಚನ ಹಾಗೂ ಮಾ. ವಿಕ್ರಮ್ ಅವರ ಸಾಧನೆಯನ್ನು ಗುರುತಿಸಿ ಪೂಜ್ಯ ಶ್ರೀಗಳು ನಗದು, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಅನುಗ್ರಹಿಸಿದರು. ಶ್ರೀಮತಿ ವಿದ್ಯಾ ಗಣೇಶ ರಾವ್ ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ವಾಚಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಮುಖ ಪ್ರಾಯೋಜಕರು ಹಾಗೂ ಗಣ್ಯರಾದ ಶ್ರೀಮತಿ ಭಾರತಿ ಮತ್ತು ರಾಮಮೂರ್ತಿ ಭಟ್, ಶ್ರೀಮತಿ ಅಪರ್ಣಾ ಮತ್ತು ಅನಂತ ಪದ್ಮನಾಭ ಉಪಾಧ್ಯಾಯ, ಶ್ರೀಮತಿ ಗಂಗಾಲಕ್ಷ್ಮಿ ಮತ್ತು ಪುರುಷೋತ್ತಮ ಭಟ್, ಶ್ರೀ ಜಯರಾಮ ಪದಕಣ್ಣಾಯ, ಶ್ರೀಮತಿ ಪ್ರಭಾವತಿ ಮಡಿ, ಉಪಾಧ್ಯಕ್ಷರಾದ ತೆಕ್ಕೆಕೆರೆ ವಿಶ್ವೇಶ್ವರ ಭಟ್ ಮತ್ತು ಶ್ರೀಮತಿ ದಾಕ್ಷಾಯಣಿ, ಹಾಗೂ ಶ್ರೀ ಶ್ರೀಧರ ಹೊಳ್ಳ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದ ಆರಂಭ ಮತ್ತು ಉತ್ತರಾರ್ಧದಲ್ಲಿ ಶ್ರೀಮತಿ ಸೀತಾಲಕ್ಷ್ಮಿ ಅವರ ನೇತೃತ್ವದಲ್ಲಿ 'ಶ್ರೀ ಹಯಗ್ರೀವ ಭಜನಾ ಮಂಡಳಿ'ಯವರಿಂದ ಭಕ್ತಿಪೂರ್ವಕ ಸಂಕೀರ್ತನಾ ಸೇವೆ ನಡೆಯಿತು. ಶ್ರೀ ನಿಧೀಶ್ ಅಲೆವೂರಾಯರು ವೇದಘೋಷದೊಂದಿಗೆ ಸ್ವಸ್ತಿವಾಚನ ನೆರವೇರಿಸಿದರು.
ವೇದಿಕೆಯ ಅಧ್ಯಕ್ಷರಾದ ವರ್ಕಾಡಿ ರವಿ ಅಲೆವೂರಾಯರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥಾಪಕರಾದ ಶ್ರೀ ಶ್ರೀಧರ ಹೊಳ್ಳ (ಭರತಾಂಜಲಿ) ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಶ್ರೀ ಕಿಶೋರ್ ಕೃಷ್ಣ ಧನ್ಯವಾದ ಸಮರ್ಪಿಸಿದರು. ಭಕ್ತಾಭಿಮಾನಿಗಳು ಹಾಗೂ ವಿಪ್ರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



