ನನ್ನ ಹುಟ್ಟು ಮತ್ತು ಬೆಳವಣಿಗೆಯೆಲ್ಲಾ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ. ಪಿಯುಸಿವರೆಗಿನ ವಿದ್ಯಾಭ್ಯಾಸವನ್ನು ನನ್ನ ಹೆತ್ತೂರಿನಲ್ಲೇ ಮುಗಿಸಿದ್ದೆ. ಉನ್ನತ ಶಿಕ್ಷಣಕ್ಕಾಗಿ ಪಕ್ಕದ ಊರಾದ ಜಮಖಂಡಿಯ ಕಾಲೇಜೊಂದರಲ್ಲಿ ಬಿ.ಎ. ಪದವಿಗೂ ಸೇರಿದ್ದೆ. ಆದರೆ, ಅನಿರೀಕ್ಷಿತವಾಗಿ ನನ್ನ ಬದುಕಿಗೊಂದು ಹೊಸ ತಿರುವು ಸಿಕ್ಕಿತು; ಅದೇ ಶಿವಮೊಗ್ಗದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ಕಲಿಯುವ ಅದ್ಭುತ ಅವಕಾಶ. ಈಗಾಗಲೇ ಜಮಖಂಡಿಯಲ್ಲಿ ಒಂದು ವರ್ಷ ಕಳೆದಿದ್ದರೂ, ಈ ಉತ್ತಮ ಅವಕಾಶವನ್ನ ಕೈಚೆಲ್ಲಬಾರದೆಂಬ ದೃಢ ನಿರ್ಧಾರದಿಂದ, ಒಂದು ವರ್ಷದ ಶ್ರಮ ಮುರಿದರೂ ಪರವಾಗಿಲ್ಲವೆಂದು ಶಿವಮೊಗ್ಗಕ್ಕೆ ಹೆಜ್ಜೆ ಇಟ್ಟೆ. ಮತ್ತೆ ಮೊದಲ ವರ್ಷದಿಂದಲೇ ಪದವಿ ಶಿಕ್ಷಣವನ್ನು ಆರಂಭಿಸಿದೆ. ಇಂದು ಹಿಂತಿರುಗಿ ನೋಡಿದಾಗ, ನನ್ನ ಜೀವನದಲ್ಲಿ ನಾನು ಕೈಗೊಂಡ ಅತ್ಯುತ್ತಮ ಮತ್ತು ಅತ್ಯಂತ ಹೆಮ್ಮೆಯ ನಿರ್ಧಾರ ಎಂದರೆ ಈ ಕಾಲೇಜಿಗೆ ಸೇರಿದ್ದು ಮಾತ್ರ.
ನಾನು ಪದವಿಯಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳು ಇಂಗ್ಲಿಷ್ ಸಾಹಿತ್ಯ ಮತ್ತು ಮನಃಶಾಸ್ತ್ರ (Psychology) ಬಿ.ಎ ವಿಭಾಗದಲ್ಲಿ ಇವೆರಡೂ ಅತ್ಯಂತ ಅರ್ಥಪೂರ್ಣ ಹಾಗೂ ಪರಸ್ಪರ ಪೂರಕವಾದ ವಿಷಯಗಳೆಂಬುದು ನನ್ನ ಗಾಢ ನಂಬಿಕೆ.
ಹೊಸ ಹೊಸ ಆಸೆಗಳು, ಕಣ್ಣು ತುಂಬಾ ಕನಸುಗಳು ಮತ್ತು ಮನಸ್ಸು ತುಂಬಾ ನಿರೀಕ್ಷೆಗಳ ಭಾರ ಹೊತ್ತು ಶಿವಮೊಗ್ಗದ ಆ ಹೊಸ ಪರಿಸರಕ್ಕೆ ನಾನು ಕಾಲಿಟ್ಟಾಗ, ಅಲ್ಲಿನ ಎಲ್ಲವೂ ನನಗೆ ಅಪರಿಚಿತವಾಗಿದ್ದವು. ಹೊಸ ಕಾಲೇಜು, ಕಣ್ಣೆದುರು ಸುಳಿಯುತ್ತಿದ್ದ ಹೊಸ ಮುಖಗಳು, ಶಿಕ್ಷಕರು ಹಾಗೂ ಜೊತೆಯಲ್ಲೇ ಕಲಿಯಬೇಕಿದ್ದ ಸಹಪಾಠಿಗಳು—ಎಲ್ಲವೂ ಒಂದು ನಿಗೂಢ ಲೋಕದಂತೆ ಭಾಸವಾಗುತ್ತಿತ್ತು. ಮನಸ್ಸಿನ ಒಂದು ಮೂಲೆಯಲ್ಲಿ ಅಪರಿಚಿತತೆಯ ಸಣ್ಣದೊಂದು ಆತಂಕ, ಭೀತಿ ಮನೆಮಾಡಿತ್ತು. ಆದರೆ, ಆ ತಳಮಳದೊಂದಿಗೆ ನಾನು ಕಾಲೇಜಿನ ಮೊದಲ ದಿನದಂದು ತರಗತಿಯೊಳಗೆ ಇಟ್ಟ ಹೆಜ್ಜೆ, ನನ್ನ ಬದುಕಿನಲ್ಲಿ ಎಂದಿಗೂ ಮರೆಯಲಾಗದ ಒಂದು ಸುಂದರ ಹಾಗೂ ಸವಿನಯ ದಿನವಾಗಿ ದಾಖಲಾಗಿಬಿಟ್ಟಿತು!
ಅನಿವಾರ್ಯ ಕಾರಣಗಳಿಂದಾಗಿ ನಾನು ಮೊದಲ ಒಂದು ತಿಂಗಳ ಕಾಲ ನಡೆದ ಪರಿಚಯ ತರಗತಿಗಳನ್ನು ಕಳೆದುಕೊಂಡಿದ್ದೆ. ಹಾಗಾಗಿ, ನಾನು ನೇರವಾಗಿ ಪ್ರವೇಶಿಸಿದ್ದು ಪಠ್ಯದ ಗಂಭೀರ ಲೋಕಕ್ಕೆ. ಅಂದು ನನಗದು ಮೊದಲ ದಿನದ ಮೊದಲ ತರಗತಿ; ಅದು ಇಂಗ್ಲಿಷ್ ಅವಧಿ. ಆ ತರಗತಿಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಮೇಡಂ, ಪ್ರಸಿದ್ಧ ಕವಯಿತ್ರಿ ಮಾಯಾ ಏಂಜೆಲೋ ಅವರ Still I Rise ಕವಿತೆಯನ್ನು ಬೋಧಿಸಲು ಆರಂಭಿಸಿದರು. ಅವರ ಬೋಧನಾ ಶೈಲಿ ಅದೆಷ್ಟು ಆಕರ್ಷಕವಾಗಿತ್ತೆಂದರೆ, ಪದಗಳ ಹಿಂದಿದ್ದ ಮೌನವೂ ನನಗೆ ಅರ್ಥವಾಗತೊಡಗಿತು. ಹಿಂದೆಲ್ಲ ನಾನು ಕೇಳಿದ್ದ, ಓದಿದ್ದ ಗದ್ಯ-ಪದ್ಯಗಳೆಲ್ಲವೂ ಬಹುಪಾಲು ಪಿತೃಪ್ರಧಾನತೆಯ ಚೌಕಟ್ಟಿನಲ್ಲೇ ಸಿದ್ದಗೊಂಡ ಧ್ವನಿಗಳಾಗಿದ್ದವು. ಆದರೆ ಅಂದು, ಆ ತರಗತಿಯಲ್ಲಿ ಕೇಳಿದ ಧ್ವನಿ ತೀರಾ ಭಿನ್ನವಾಗಿತ್ತು.
ಅದು ಕೇವಲ ಕವಿತೆಯಾಗಿರಲಿಲ್ಲ; ಹೆಣ್ಣೊಬ್ಬಳ ಅಂತರಂಗದ ಆಳವಾದ ಆಲೋಚನೆಗಳು, ಆಕೆಯ ಮನದ ತಲ್ಲಣಗಳು ಮತ್ತು ಬದುಕಿನ ಸಂಕಷ್ಟಗಳೆಲ್ಲವನ್ನೂ ದಾಟಿ, ಸ್ವಾತಂತ್ರ್ಯದ ಮುಕ್ತ ಹಾದಿಗೆ ತನ್ನನ್ನು ತಾನು ತಳ್ಳಿಕೊಳ್ಳುವ ಅದ್ಭುತ ಚೇತನದ ಹಾರಾಟವಾಗಿತ್ತು. ಶಿಕ್ಷಕರು ಆ ಪದ್ಯದ ಆಳವನ್ನು ಅಷ್ಟೇ ಮನೋಜ್ಞವಾಗಿ, ಹೃದಯಸ್ಪರ್ಶಿಯಾಗಿ ವಿವರಿಸಿದರು.
ಅವರ ಆ ಕಾವ್ಯಾತ್ಮಕ ಬೋಧನೆ ನನ್ನೊಳಗಿನ ಸುಪ್ತ ಚಿಂತನೆಗಳನ್ನು ಬಡಿದೆಬ್ಬಿಸಿತು. ಹೆಣ್ಣಿನ ಅಸ್ಮಿತೆಯನ್ನು, ಆಕೆಯ ಅದಮ್ಯ ಚೇತನವನ್ನು ಕಾವ್ಯದ ಮೂಲಕ ಗ್ರಹಿಸಿದ ಆ ಕ್ಷಣ, ನನ್ನ ಇಡೀ ಆಲೋಚನಾ ಕ್ರಮಕ್ಕೆ ಒಂದು ಹೊಸ ತಿರುವನ್ನು ನೀಡಿತು. ಭವಿಷ್ಯದ ಸಾಹಿತ್ಯಿಕ ಒಲವಿಗೆ ಮುನ್ನುಡಿ ಬರೆದ ಆ ಮೊದಲ ದಿನ, ನನ್ನ ಬದುಕಿನ ನೆನಪಾಗಿ ಎಂದಿಗೂ ಹಸಿರಾಗಿಯೇ ಉಳಿಯುತ್ತದೆ.
ನನ್ನ ಕಾಲೇಜು ಇತರ ಕಾಲೇಜುಗಳಿಗಿಂತ ತೀರಾ ಭಿನ್ನವಾದದ್ದು. ಇಲ್ಲಿನ ವಾತಾವರಣವೇ ಒಂದು ಸಾಹಿತ್ಯಿಕ ಹೊಸಲೋಕದಂತೆ ಭಾಸವಾಗುತ್ತಿತ್ತು. ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಮುಗಿಸುವುದಕ್ಕೆ ಮಾತ್ರ ಇಲ್ಲಿನ ಶಿಕ್ಷಣ ಸೀಮಿತವಾಗಿರಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ನಾನು ಅನುಭವಿಸಿದ ಸಾಹಿತ್ಯಿಕ ಶಿಬಿರಗಳು ಅಸಂಖ್ಯಾತ. ವಿಶೇಷವಾಗಿ, ಕನ್ನಡ ರಂಗಭೂಮಿಯ ಹೆಮ್ಮೆಯ ಕೇಂದ್ರವಾದ ‘ನೀನಾಸಂ' ಗೆ ಶಿಬಿರಾರ್ಥಿಯಾಗಿ ಹೋಗುವ ಭಾಗ್ಯ ಸಿಕ್ಕಿದ್ದು ನನ್ನ ಬದುಕಿನ ಮರೆಯಲಾಗದ ರಂಗ ಅನುಭವ. ಹತ್ತು ಹಲವು ಸಾಹಿತ್ಯಿಕ ಕಾರ್ಯಕ್ರಮಗಳು, ಅಭಿನಯ, ನಿರೂಪಣೆ, ಜೊತೆಗೆ ಅನೇಕ ಕಲಿಕೆಗಳು ನನ್ನ ಜೊತೆಯಾಗಿವೆ.
ಭಯವನ್ನು ದೂರಮಾಡಿ ಆತ್ಮವಿಶ್ವಾಸ ತುಂಬಿದ ಸ್ಪರ್ಧೆಗಳು ಮತ್ತು ವಿದ್ಯಾರ್ಥಿಗಳಲ್ಲಿ ಒತ್ತಡ ಮೂಡಿಸದ ಇಲ್ಲಿನ ಪರೀಕ್ಷಾ ಪದ್ಧತಿ ನಮ್ಮನ್ನು ಸೃಜನಶೀಲರನ್ನಾಗಿ ರೂಪಿಸಿದವು. ಇಲ್ಲಿನ ಪ್ರತಿಯೊಬ್ಬ ಶಿಕ್ಷಕರು ಕೇವಲ ಬೋಧಕರಲ್ಲ, ವಿದ್ಯಾರ್ಥಿ ಸ್ನೇಹಿ ಮಾರ್ಗದರ್ಶಕರು. ತಮ್ಮ ವಿಷಯಗಳಲ್ಲಿ ಅಪ್ರತಿಮ ಪಾಂಡಿತ್ಯವುಳ್ಳ ಇವರಿಂದ ಜ್ಞಾನ ಪಡೆದದ್ದೇ ನಮ್ಮ ಸೌಭಾಗ್ಯ. ಕನ್ನಡ ಸಾಹಿತ್ಯ ಲೋಕದ ಧೃವತಾರೆ, ಪ್ರಖ್ಯಾತ ಚಿಂತಕರಾದ ಡಾ. ರಾಜೇಂದ್ರ ಚೆನ್ನಿ ಸರ್ ಅವರ ಮುಖಾಮುಖಿ ಪಾಠ ಕೇಳುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ಧನ್ಯತೆ. ಅವರಲ್ಲದೆ, ನಾಡಿನ ಹೆಸರಾಂತ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು ಕಾಲೇಜಿಗೆ ಆಗಮಿಸಿ, ದಿನಗಟ್ಟಲೆ ನಮಗೆ ಬೋಧನೆ ಮಾಡುತಿದ್ದ ಆ ದಿನಗಳು ಜ್ಞಾನದ ಅಮೃತ ಘಳಿಗೆಗಳಾಗಿದ್ದವು.
ಇನ್ನು ನಮ್ಮ ಹೆಮ್ಮೆಯ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಮೇಡಂ ಅವರ ಬಗ್ಗೆ ಬರೆಯಲು ಹೊರಟರೆ ಪದಗಳೇ ಸಾಲದಾಗುತ್ತವೆ. ನಾನೆಂದೂ ಕಂಡಿರದ ಮೇರು ವ್ಯಕ್ತಿತ್ವ ಅವರದ್ದು. ಅಕ್ಕರೆ, ಅಪಾರ ಕಾಳಜಿ ಮತ್ತು ತಾಯಿಯ ಮಮತೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತನ್ನ ಸ್ವಂತ ಮಗುವಿನಂತೆ ಕಾಣುವ ಅವರ ಹೃದಯವಂತಿಕೆಗೆ ಸಾಟಿಯೇ ಇಲ್ಲ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜು ನೀಡಿರುವ ಆದ್ಯತೆ ಅನನ್ಯವಾದದ್ದು. ಅದಕ್ಕೆ ಅತ್ಯುತ್ತಮ ಉದಾಹರಣೆ ನಮ್ಮ ಕಾಲೇಜಿನಲ್ಲಿರುವ ಮೆಂಟರ್ಸ್ ವ್ಯವಸ್ಥೆ ಬೇರೆ ಯಾವುದೇ ಪದವಿ ಕಾಲೇಜುಗಳಲ್ಲೂ ಕಾಣ ಸಿಗದ ಈ ಅದ್ಭುತ ವ್ಯವಸ್ಥೆಯು, ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಸೂಕ್ತ ಕೌನ್ಸಿಲಿಂಗ್ ಮತ್ತು ಮಾರ್ಗದರ್ಶನ ನೀಡುತ್ತದೆ. ಈ ಮೆಂಟರ್ಸ ವ್ಯವಸ್ಥೆಯಲ್ಲಿಯೇ ನಾನೊಬ್ಬ ಉತ್ತಮ ಶಿಕ್ಷಕರನ್ನು ಮೆಂಟರ್ ಆಗಿ ಪಡೆದುಕೊಂಡೆ, ಬಿಸಿಲುನಾಡಿನಿಂದ ಮಲೆನಾಡಿನ ಹೊಂದಾಣಿಕೆಗೆ ಆದ ಅದಷ್ಟೋ ಅಡೆತಡೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸೋತಾಗ ಸಾಂತ್ವಣ ಹೇಳಿ ನನ್ನ ಮೂರು ವರ್ಷದ ಡಿಗ್ರಿಯನ್ನು ಯಾವುದೇ ಅಡತಡೆಯಿಲ್ಲದೇ ಮುಗಿಸಲು ಮುಖ್ಯ ಕಾರಣಿಭೂತರಲ್ಲಿ ನನ್ನ ಮೆಂಟರ್ ಮೊದಲಿಗರು. ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ಮಾಡದೆ, ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ.
ಬನಹಟ್ಟಿಯಿಂದ ಶಿವಮೊಗ್ಗಕ್ಕೆ ಬಂದ ನನ್ನ ಬದುಕಿಗೆ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು ಹೊಸ ಆಯಾಮವನ್ನು ನೀಡಿದೆ. ಸಾಹಿತ್ಯಿಕ ಒಲವು, ಮಾನವೀಯ ಮೌಲ್ಯಗಳು ಹಾಗೂ ಬದುಕನ್ನು ಪ್ರೀತಿಸುವ ಕಣ್ಣುಗಳನ್ನು ಕೊಟ್ಟ ನನ್ನ ಹೆಮ್ಮೆಯ ಕಾಲೇಜಿಗೆ ಮತ್ತು ನನ್ನೆಲ್ಲಾ ಗುರು ವೃಂದಕ್ಕೆ ನಾನು ಸದಾ ಋಣಿ.
- ಸಂಗೀತ ಬುದಿನಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



