ನವದೆಹಲಿ: ಕರ್ನಾಟಕದ ಉಡುಪಿಯ ಜಗದ್ಗುರು ಶ್ರೀಮಧ್ವಾಚಾರ್ಯರ ಪರಂಪರೆಯ ಐತಿಹಾಸಿಕ ಎಂಟು ಮಠಗಳಲ್ಲೊಂದಾದ ಶ್ರೀ ಪೇಜಾವರ ಅಧೋಕ್ಷಜ ಮಠದ 34ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಈ ಬಾರಿಯ ತಮ್ಮ 39ನೇ ಚಾತುರ್ಮಾಸ್ಯ ವ್ರತವನ್ನು ದೇಶದ ರಾಜಧಾನಿ ನವದೆಹಲಿಯಲ್ಲಿ ನಡೆಸಲು ಸಂಕಲ್ಪಿಸಿದ್ದಾರೆ.
ಶ್ರೀಗಳು ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಸಮಸ್ತ ದೆಹಲಿಯ ಕ್ಷೇಮ, ಸಮೃದ್ಧಿ ಮತ್ತು ಸುಭಿಕ್ಷೆಗಾಗಿ ಈ ಬೃಹತ್ ಧಾರ್ಮಿಕ ಸತ್ರ ಆಯೋಜನೆಗೊಂಡಿದೆ.
ಬರುವ ಪರಾಭವ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆ ಅಂದರೆ 2026ರ ಜುಲೈ 29 ಬುಧವಾರದಿಂದ ಆರಂಭಗೊಂಡು, ಭಾದ್ರಪದ ಶುದ್ಧ ಚತುರ್ದಶೀ ಅಂದರೆ 2026ರ ಸೆಪ್ಟೆಂಬರ್ 26 ಶನಿವಾರದವರೆಗೆ ಈ ಪವಿತ್ರ ವ್ರತವು ಜರುಗಲಿದೆ. ನವದೆಹಲಿಯ ವಸಂತ ಕುಂಜ್‌ನಲ್ಲಿರುವ ಶ್ರೀಮಠದ ಶಾಖೆ ಹಾಗೂ ಅಂಗಸಂಸ್ಥೆಯಾದ 'ಶ್ರೀ ವೇದವ್ಯಾಸ ಗುರುಕುಲಂ, ಶ್ರೀ ಕೃಷ್ಣ ಧಾಮ' ಈ ಮಹತ್ಕಾರ್ಯಕ್ಕೆ ಸಾಕ್ಷಿಯಾಗಲಿದ್ದು, ಎರಡು ತಿಂಗಳ ಕಾಲ ದೆಹಲಿಯಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಹೊಳೆ ಹರಿಯಲಿದೆ.
ದೈನಂದಿನ ಕಾರ್ಯಕ್ರಮಗಳ ವೈಭವ:
ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಸಂಸ್ಥಾನ ಪೂಜೆ ಮತ್ತು ಶ್ರೀ ಕೃಷ್ಣ ಮಂತ್ರ ಹೋಮಗಳು ಜರುಗಲಿವೆ. ತದನಂತರ ಕಲಶಾಭಿಷೇಕ ಹಾಗೂ ಶ್ರೀ ಕೃಷ್ಣನಿಗೆ ಶಾಸ್ತ್ರ ಪಾಠಗಳು ನಡೆಯಲಿದ್ದು, ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಇರಲಿದೆ. ಮಧ್ಯಾಹ್ನ 4 ಗಂಟೆಯಿಂದ 5:30ರ ವರೆಗೆ ಭಕ್ತರಿಗೆ ಶ್ರೀಪಾದಂಗಳವರ ಸಂದರ್ಶನ ಮತ್ತು ಆಶೀರ್ವಾದ ಪಡೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6 ರಿಂದ 9 ರ ವರೆಗೆ ಭಜನೆ, ಸಂವಾದ ಹಾಗೂ ಗಣ್ಯರಿಂದ ಉಪನ್ಯಾಸಗಳು ನಡೆಯಲಿದ್ದು, ವಿದ್ವಾಂಸರಿಂದ ಭಾಗವತ, ರಾಮಾಯಣ, ಸರ್ವಮೂಲ, ಮಹಾಭಾರತ, ಭಗವದ್ಗೀತೆ ಮುಂತಾದ ಪವಿತ್ರ ಗ್ರಂಥಗಳ ನಿರಂತರ ಪಾರಾಯಣ ಜರುಗಲಿದೆ.
ಇವುಗಳ ಜೊತೆಗೆ ವಿಶೇಷ ದಿನಗಳಂದು 3 ದಿನಗಳ ಶ್ರೀ ಕೃಷ್ಣಾಷ್ಟಮೀ ಮಹೋತ್ಸವ, ಶ್ರೀ ಗಣೇಶ ಚತುರ್ಥಿ ಉತ್ಸವ, ದೇಶದ ವಿವಿಧ ಭಾಗಗಳ ಸಾಧು-ಸಂತರ ಸಮಾಗಮದ 'ಸಂತ ಸಂಗಮ', ಮಹಿಳೆಯರಿಗಾಗಿ 'ಮಾತೃ ಶಕ್ತಿ ಸಂಗಮ', ಯುವ ಸಮಾಗಮ ಹಾಗೂ ಪರಿಸರ ಜಾಗೃತಿ ಮತ್ತು ಉಚಿತ ಆರೋಗ್ಯ ಶಿಬಿರಗಳಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಜುಲೈ 29ರಂದು ಭವ್ಯ ಶೋಭಾಯಾತ್ರೆಯೊಂದಿಗೆ ಚಾತುರ್ಮಾಸ್ಯಕ್ಕೆ ಚಾಲನೆ ಸಿಗಲಿದ್ದು, ಸೆಪ್ಟೆಂಬರ್ 26ರಂದು ಸಮಾರೋಪ ಸಮಾರಂಭ ಮತ್ತು ಶ್ರೀ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
ಅಪರೂಪದ ಸಾಧಕ ಸಂತ ಶ್ರೀ ವಿಶ್ವಪ್ರಸನ್ನತೀರ್ಥರು:
ಕೇವಲ 23ನೇ ವಯಸ್ಸಿನಲ್ಲಿ 'ಯತಿಕುಲ ಚಕ್ರವರ್ತಿ', 'ಪದ್ಮವಿಭೂಷಣ' ಪುರಸ್ಕೃತರಾದ ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದ ಶ್ರೀಗಳು ಪ್ರಸ್ತುತ 62ನೇ ವಯಸ್ಸಿನಲ್ಲಿದ್ದಾರೆ. ವೇದ, ವೇದಾಂತ, ತರ್ಕ, ಜ್ಯೋತಿಷ್ಯ, ಸಂಗೀತ ಸೇರಿದಂತೆ ಅನೇಕ ಶಾಸ್ತ್ರಗಳಲ್ಲಿ ಅಗಾಧ ವಿದ್ವತ್ತು ಹೊಂದಿರುವ ಇವರು, ಭಾಷಾ ಪ್ರವೀಣರೂ ಆಗಿದ್ದಾರೆ. ಪ್ರಸ್ತುತ ಶ್ರೀಗಳು ದೇಶದ ಅತ್ಯಂತ ಮಹತ್ವದ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅತ್ಯಂತ ಗೌರವಾನ್ವಿತ ಟ್ರಸ್ಟಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗೋಸಂರಕ್ಷಣೆ ಮತ್ತು ಪರಿಸರ ಕಾಳಜಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಶ್ರೀಗಳು ಕಳೆದ 35 ವರ್ಷಗಳಿಂದ 6 ಬೃಹತ್ ಗೋಶಾಲೆಗಳ ಮೂಲಕ ಸುಮಾರು 3000 ಗೋವುಗಳನ್ನು ಪೋಷಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಾರತದಾದ್ಯಂತ ಶ್ರೀ ಪೇಜಾವರ ಮಠದ 200ಕ್ಕೂ ಹೆಚ್ಚು ಶಾಖೆಗಳು, ಸಂಸ್ಕೃತ ಗುರುಕುಲಗಳು, ಆಸ್ಪತ್ರೆಗಳು ಮತ್ತು ವಿದ್ಯಾಪೀಠಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ವಿಶೇಷವೆಂದರೆ, ಶ್ರೀಗಳು ಕಳೆದ 30 ವರ್ಷಗಳಲ್ಲಿ ರಾಮೇಶ್ವರದಿಂದ ಬದರೀನಾಥದವರೆಗೆ ನೂರಾರು ತೀರ್ಥ ಕ್ಷೇತ್ರಗಳನ್ನು ಪಾದಯಾತ್ರೆಯ ಮೂಲಕವೇ ಸಂದರ್ಶಿಸಿದ್ದು, 28,000 ಕಿಲೋಮೀಟರ್‌ಗಿಂತಲೂ ಅಧಿಕ ದೂರದ ಪಾದಯಾತ್ರೆ ನಡೆಸಿ ವರ್ತಮಾನ ಭಾರತದಲ್ಲಿ ಚಾರಿತ್ರಿಕ ದಾಖಲೆ ಬರೆದ ಅಪರೂಪದ ಸಂತರಾಗಿದ್ದಾರೆ.
ಗಣ್ಯರನ್ನೊಳಗೊಂಡ ಭವ್ಯ ಚಾತುರ್ಮಾಸ ಸೇವಾ ಸಮಿತಿ:
ರಾಜಧಾನಿಯಲ್ಲಿ ನಡೆಯುವ ಈ ಬೃಹತ್ ಧಾರ್ಮಿಕ ಮತ್ತು ಸಾಮಾಜಿಕ ಸತ್ರದ ಯಶಸ್ವಿ ನಿರ್ವಹಣೆಗಾಗಿ ದೇಶದ ಅತ್ಯುನ್ನತ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರನ್ನೊಳಗೊಂಡ ಪ್ರಭಾವಿ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಅಧ್ಯಕ್ಷರಾಗಿ ಅಂತಾರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಅಲೋಕ್ ಕುಮಾರ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಖ್ಯ ಪೋಷಕರಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸಂಸದರಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ, ಮಾನ್ಯ ದೆಹಲಿ ಮುಖ್ಯಮಂತ್ರಿಗಳು ಮತ್ತು ಶ್ರೀಮತಿ ರೇಖಾ ಗುಪ್ತಾ ಇದ್ದಾರೆ.
ಪೋಷಕರಾಗಿ ಕೇಂದ್ರ ಸಚಿವರುಗಳಾದ ಎಚ್. ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಹರ್ಷ ಮಲ್ಲೋತ್ರಾ; ಸಂಸದರುಗಳಾದ ತರುಣ್ ಚುಗ್, ಬಿ. ವೈ. ರಾಘವೇಂದ್ರ, ತೇಜಸ್ವಿ ಸೂರ್ಯ, ಬಾನ್ಸುರಿ ಸ್ವರಾಜ್, ರಾಮ್ ವೀರ್ ಸಿಂಗ್ ಬಿಧುರಿ; ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ, ದೆಹಲಿ ಸಚಿವ ಕಪಿಲ್ ಮಿಶ್ರಾ, ನವದೆಹಲಿ ಮೇಯರ್ ಪರ್ವೇಶ್ ವಾಹಿ, ಮಾಜಿ ಕೇಂದ್ರ ಸಚಿವೆ ಸಾಧ್ವಿ ಉಮಾ ಭಾರತಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಸಮಿತಿಯ ಮುಖ್ಯ ಕಾರ್ಯದರ್ಶಿಯಾಗಿ ದೆಹಲಿಯ ಸಿಎಸ್‌ಯು ಕುಲಪತಿಗಳಾದ ಡಾ. ಶ್ರೀನಿವಾಸ್ ವರಖೇಡಿ ಹಾಗೂ ಆಡಳಿತಾಧಿಕಾರಿಯಾಗಿ ನಿವೃತ್ತ ನಾಗರಿಕ ಸೇವಾ ಅಧಿಕಾರಿ ರಾಕೇಶ್ ಗೌರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಐತಿಹಾಸಿಕ ಧರ್ಮಸತ್ರದಲ್ಲಿ ಸನಾತನಧರ್ಮ ನಿಷ್ಠರು ಮತ್ತು ಭಗವದ್ಭಕ್ತರು ತಮ್ಮ ಸಕುಟುಂಬ ಸಮೇತರಾಗಿ ಆಗಮಿಸಿ, ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ರಾಮವಿಠಲಕೃಷ್ಣ ದೇವರ ಹಾಗೂ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಪೇಜಾವರ ಮಠದ ದಿವಾನರು ಹಾಗೂ ಚಾತುರ್ಮಾಸ ಸೇವಾ ಸಮಿತಿ ವಿನಂತಿಸಿದೆ. ವಿವಿಧ ಸೇವೆಗಳ ಬುಕ್ಕಿಂಗ್ ಮತ್ತು ಮಾಹಿತಿಗಾಗಿ ದೆಹಲಿ ಗುರುಕುಲದ ನಿರ್ದೇಶಕರಾದ ಡಾ. ವಿಠೋಭ ಆಚಾರ್ಯ (9449671353) ಅಥವಾ ಜಿ. ವಾಸುದೇವ ಭಟ್ (9845895136) ಅವರನ್ನು ಸಂಪರ್ಕಿಸಬಹುದಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


