'ಬದಲಾದ ಕಂದು ವರ್ಣದಲ್ಲಿ, ಉದ್ದ ಉದ್ದನೆಯ ಒಣ ಹುಲ್ಲುಗಳು ಹಸಿ ಮಣ್ಣಿನಿಂದ ಸ್ಥಾಪಿತಗೊಂಡಿರುವ ಗೋಡೆಗಳ ಮೇಲ್ಭಾಗಕ್ಕೆ ಆಸರೆಯಾಗುವಂತೆ ಹೊತ್ತು ಮಲಗಿದಂತಿದ್ದು, ದೂರದ ಕಣ್ಣಿಗೆ ಒಂದು ರೀತಿಯ ಅಣಬೆಯಂತೆ ಕಂಡು ಮಾನವನ ಸ್ವಾಸ್ಥ್ಯಕ್ಕೆ ಬಲು ಸಹಾಯಕಾರಿಯಾಗಿದ್ದ ಅಂದಿನ ಆ ವಾಸಸ್ಥಾನವೇ 'ಗುಡಿಸಲು'.
ಹಲವಾರು ವರ್ಷಗಳ ಹಿಂದೆ ಮಾನವ ಸಮೂಹವು ತಮ್ಮೆಲ್ಲ ಸುಖಭೋಗಗಳನ್ನ ಅನುಭವಿಸುತ್ತಿದ್ದು ಅತಿ ಕಡಿಮೆ ವಿಸ್ತೀರ್ಣದ, ಒಂದು ಸಣ್ಣ ಗುಡಿಸಲಿನಲ್ಲಿ. ಅತ್ಯಂತ ಸರಳತೆಯ ಜೊತೆಗೆ ಬಹಳ ಆನಂದದಿಂದ ಗುಡಿಸಲಿನಲ್ಲಿ ತಮ್ಮ ಜೀವನವನ್ನು ಸಾಗಿಸಿ ತಮ್ಮ ದೇಹಕ್ಕೆ ಯಾವುದೇ ರೀತಿಯ ಆರೋಗ್ಯದ ಬಗೆಗೆ ಸವಾಲನ್ನು ಎದುರಿಸಿದೇ ಹಲವು ವರ್ಷಗಳ ತನಕ ಬಾಳನ್ನ ನಡೆಸುತ್ತಿದ್ದರು.
ವರುಷದ ಮಳೆರಾಯನ ಆರ್ಭಟದ ಕಾಲದಲ್ಲಿ ನೀರಿನ ಹನಿಗಳು ಗುಡಿಸಲಿನ ಒಳ ಹೊಕ್ಕರೂ ಕೂಡ, ಚಳಿಗಾಲದ ಸಂದರ್ಭದಲ್ಲಿ ತಂಪಿನ ಅನುಭವವು ತೀವ್ರವಾಗಿದ್ದರೂ, ಇಂದಿನ ಟೆರೆಸ್ ನ ಮನೆಗೆ ಹೋಲಿಸಿದರೆ ನೂರು ಪಟ್ಟು ಈ ಗುಡಿಸಲು ಉತ್ತಮಕಾರಿಯಾಗಿದೆ. ಈ ಟೆರೆಸ್ ಸದಾ ನಮಗೆ ಮಳೆ ಅಥವಾ ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಬಾಹ್ಯ ರೂಪದಲ್ಲಿ ಸೌಕರ್ಯಕ್ಕೆ ಯೋಗ್ಯವೆನಿಸಿದರೂ ನಮ್ಮ ಆರೋಗ್ಯದ ಸ್ಥಿತಿಗೆ ನಿಜಕ್ಕೂ ವಿರುದ್ಧವಾಗಿದೆ. ನಾವು ಧರಿಸುವ ಉಡುಪು ಇಡೀ ಓದ್ದೆಯಾಗುವಂತಹ ಅನುಭವವನ್ನು ಬೇಸಿಗೆಕಾಲದಲ್ಲಂತೂ ಪಡೆದೆ ಪಡೆದಿರುತ್ತೇವೆ. ಆದರೆ ಇವೆಲ್ಲವೂ ಟೆರೆಸ್ ನಂತಹ ಮನೆಗಳಲ್ಲಿ ಇವುಗಳನ್ನ ಅನುಭವಿಸಬಹುದು, ಸದಾ ತಂಪಿನಿಂದ ಇರುವ ಗುಡಿಸಲಿನಲ್ಲಿ ಅಲ್ಲ.
ಇವೆಲ್ಲವೂ ಗುಡಿಸಿನಲ್ಲಿ ಬದುಕನ್ನ ಸಾಗಿಸುತ್ತಿದ್ದ ಜನರ ಅನುಭವದ ಸಾರವಾಗಿದ್ದು, ದುರದೃಷ್ಟವಶಾತ್ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಇವು ಕಣ್ಮರೆಯಾಗಿ ಹೋಗಿಬಿಟ್ಟಿದೆ. ಇಂದಿನ ಕಾಲದಲ್ಲಿ ಗುಡಿಸಲನ್ನು, ಕೇವಲ ಯಾವುದೋ ಒಂದು ಹಳೆಯಕಾಲದ ಪ್ರದರ್ಶನಾಲಯದಲ್ಲಿ ಕಾಣಬಹುದಾಗಿದೆ ಅಷ್ಟೆ.ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹಲವು ಆವಿಷ್ಕಾರಗಳೊಂದಿಗಿನ ಘಟ್ಟದಲ್ಲಿ ,ಜನರು ತಮ್ಮ ಬಾಳಿನ ಸ್ಥಿತಿಯನ್ನು ಅತಿಯಾದ ಸೌಲಭ್ಯಗಳಿಗೆ ಆಕರ್ಷಿತರಾಗುತ್ತಿದ್ದು, ಹಿಂದಿನ ಸಂಸ್ಕೃತಿಯನ್ನೆಲ್ಲವನ್ನ ಕೂಡ ಮರೆತು ಬಿಟ್ಟಿದ್ದಾರೆ.
ಪ್ರಸ್ತುತ ಕಾಲದ ಪ್ರತಿಯೊಬ್ಬನ ಜೀವನಶೈಲಿಯು ಬಲು ವಿಚಿತ್ರಕಾರಿಯಾಗಿದ್ದು, ತಮಗೆ ವಾಸಿಸಲು ಅವಶ್ಯ ಇರುವ ಜಾಗಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ದೊಡ್ಡ ಅರಮನೆಯಂತಹ ಮನೆಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಅದಲ್ಲದೆ ಇಂದಿನ ಕಾಲಘಟ್ಟದಲ್ಲಿ ರಚನೆಗೊಳ್ಳುವ ತಮ್ಮ ಮನೆಯನ್ನ ಸ್ಪರ್ಧಾತೀತವಾಗಿಯೂ ಮಾಡಿಕೊಳ್ಳುತ್ತಿದ್ದಾರೆ. ಅಂದರೆ 'ತಮ್ಮ ಮನೆ ಬೇರೆಯವರ ಮನೆಗಿಂತ ದೊಡ್ಡದಾಗಿರಬೇಕು, ಎಷ್ಟು ಖರ್ಚಾದರೂ ಪರವಾಗಿಲ್ಲ' ಎಂದು ಯೋಚಿಸುವ ಮೂಲಕ ಇಂದಿನ ಜನರು ಬಲು ಮೂಢರಾಗಿಬಿಟ್ಟಿದ್ದಾರೆ.
ಭದ್ರತೆಯ ಹಾಗೂ ಬಾಳಿಕೆಯ ಗ್ಯಾರಂಟಿಯನ್ನು ಕಾಂಕ್ರೀಟ್ ನಿಂದ ನಿರ್ಮಾಣಗೊಳ್ಳುವ ಟೆರೀಸ್ಸ್ ಮನೆಗಳು ನೀಡಿದರೂ ಕೂಡ, ಆರೋಗ್ಯಯುತ ತಂಪನ್ನ ನೀಡುವುದೇ ಗುಡಿಸಲಾಗಿದೆ. ಮಣ್ಣು, ಒಣಗಿದ ಹುಲ್ಲು ಹಾಗೂ ಮರಗಳಿಂದ ನಿರ್ಮಿತಗೊಳ್ಳುವ ಈ ಗುಡಿಸಲು ಸ್ವಾಸ್ಥ್ಯ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತದೆ.
ಆಧುನಿಕ ಮನೆಗಳು ಹಾಗೂ ಗುಡಿಸಲುಗಳ ಆಯ್ಕೆಯು ನಮ್ಮ ಸೌಲಭ್ಯಕ್ಕೆ ಅನುಗುಣವಾಗಿರದೆ, ಆರೋಗ್ಯದ ದೃಷ್ಟಿಯಿಂದಲೂ ಆಯ್ಕೆ ಮಾಡೋಣ. ಇಂದಿನ ಯುಗದಲ್ಲಿ ನಮಗೆ ಬೃಹತ್ ಮನೆಗಳ ನಿರ್ಮಿಸುವ ಅನಿವಾರ್ಯತೆ ಇದ್ದರೂ, ಒಂದು ಸಣ್ಣ ಗುಡಿಸಲನ್ನು ನಮ್ಮ ಮನೆಯ ಸಮೀಪದಲ್ಲಿ ಕಟ್ಟುವ ಮೂಲಕ ತಮ್ಮ ಸುಸ್ಥಿರ ಜೀವನವನ್ನ ವೃದ್ಧಿಸೋಣ..!
- ಕೆ ಎನ್ ಧನುಷ್, ದಿಡುಪೆ


