ಪುತ್ತೂರು: ಸ್ವಾಮಿ ವಿವೇಕಾನಂದ ಹಾಗೂ ಶ್ರೀ ನಾರಾಯಣ ಗುರುಗಳ ಪ್ರಭಾವ ಭಾರತದಾದ್ಯಂತ ವ್ಯಾಪಿಸಿದೆ. ಸಾಮಾಜಿಕ ಸುಧಾರಣೆಯಲ್ಲಿ ವಿವೇಕಾನಂದರ ಸ್ಥಾನ ಅತ್ಯಂತ ಪ್ರಮುಖವಾಗಿದೆ. ಅವರ ಚಿಂತನೆಗಳು ಭಾರತದ ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತವೆ. ಎಲ್ಲರ ಮನೋಚಿಂತನೆಗಳನ್ನು ಒಗ್ಗೂಡಿಸುವ ದೃಷ್ಟಿಯನ್ನು ಹೊಂದಿದ್ದವರಲ್ಲಿ ವಿವೇಕಾನಂದರು ಪ್ರಮುಖರು. ನಾರಾಯಣ ಗುರುಗಳು ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಮಾಜದ ಮುನ್ನಡೆಗೆ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು. ಜ್ಞಾನವೇ ಜೀವನದ ಮೂಲ ಬೆಳಕು ಎಂಬ ಸಂದೇಶವನ್ನು ಅವರು ಸಾರಿದರು. ಅವರು ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಮಹತ್ವದ ಕೊಡುಗೆ ನೀಡಿದರು. ಕಾಲ ಎಷ್ಟೇ ಮುಂದುವರಿದರೂ ಇವರಿಬ್ಬರ ಚಿಂತನೆಗಳು ಎಂದಿಗೂ ಪ್ರಸ್ತುತವಾಗಿರುತ್ತವೆ ಎಂದು ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸರಕಾರಿ ಮಹಾವಿದ್ಯಾಲಯ ಕಾಸರಗೋಡಿನ ಪ್ರಾಧ್ಯಾಪಕ ಪ್ರೊ. ರತ್ನಾಕರ ಮಲ್ಲಮೂಲೆ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು, ಪುತ್ತೂರು ಇದರ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಐಕ್ಯೂಎಸಿ, ವಿವೇಕಾನಂದ ಅಧ್ಯಯನ ಕೇಂದ್ರ 'ವಿವೇಕ ಸ್ಮೃತಿ ಸಂಚಿಕೆ–30' ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಮಕೃಷ್ಣ ಮಠ, ಮಂಗಳೂರು ವಿವೇಕ ವಾಣಿ 57 ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 'ವಿವೇಕದ ಬೆಳಕು – ವಿವೇಕಾನಂದ ಹಾಗೂ ನಾರಾಯಣ ಗುರು ತತ್ವಮೀಮಾಂಸೆ' ವಿಷಯದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ಮತ್ತು ನಾರಾಯಣ ಗುರುಗಳು ರಾಷ್ಟ್ರದ ಉನ್ನತಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಮಹನೀಯರು. ಅಜ್ಞಾನ ಮತ್ತು ಅಂಧಕಾರದಲ್ಲಿದ್ದ ಸಮಾಜಕ್ಕೆ ಜ್ಞಾನದ ಬೆಳಕು ನೀಡಿದ ನಾರಾಯಣ ಗುರುಗಳ ಕೊಡುಗೆ ಅಪಾರವಾಗಿದೆ. ಇಂದಿನ ವಿದ್ಯಾರ್ಥಿಗಳು ಈ ಮಹನೀಯರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ಸಂಯೋಜಕ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗಡೆ ಸ್ವಾಗತಿಸಿ, ವಿವೇಕಾನಂದ ಮಹಾವಿದ್ಯಾಲಯದ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ವಂದಿಸಿ, ದ್ವಿತೀಯ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಕೌಸಲ್ಯ ಎನ್. ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


