ಮಂಗಳೂರು: ಇಲ್ಲಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ ಎಪ್ಪತ್ತು ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದು, ಈ ಎರಡೂ ಸಂಸ್ಥೆಗಳ ವೈದ್ಯರುಗಳ ಸೇವಾ ಕೈಂಕರ್ಯವನ್ನು ಸ್ಮರಿಸಿದ ವಿಶೇಷ ಕ್ಷಣವಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ತಜ್ಞರುಗಳಾದ ಡಾ.ಆರ್.ಎಲ್.ಕಾಮತ್, ಡಾ.ಎಸ್.ಆರ್.ನಾಯಕ್, ಡಾ.ಅಶ್ಫಾಕ್, ಡಾ.ಸುರೇಶ್ ಶೆಟ್ಟಿ, ಡಾ.ಶ್ರದ್ಧಾ ಶೆಟ್ಟಿ, ಡಾ.ಪ್ರಿಯಾ ಬಲ್ಲಾಳ್, ಡಾ.ಅನುಪಮಾ ಸುರೇಶ್, ಡಾ.ನಿಖಿಲ್ ಶೆಟ್ಟಿ, ಡಾ.ಭಾರತಿ ರಾವ್, ಡಾ.ಸಂತೋಷ್ ರೈ, ಡಾ.ರಂಜನ್, ಡಾ.ಸುಮೇಶ್ ರಾವ್, ಡಾ.ನೂತನ್ ಕಾಮತ್, ಡಾ.ಸುಚೇತಾ ರಾವ್, ಡಾ. ಪುಂಡಲೀಕ ಬಾಳಿಗಾ, ಡಾ.ಶ್ರದ್ಧಾ ಪೂಜಾರಿ, ಡಾ.ಜಗದೀಶ್, ಡಾ.ದಯಾನಂದ್, ಡಾ.ಸದಾನಂದ ಪೂಜಾರಿ ಅವರನ್ನು ಗೌರವಿಸಲಾಯಿತು.
ಸನ್ಮಾನಿಸಲ್ಪಟ್ಟ ಕೆ.ಎಂ.ಸಿ. ಡೀನ್ ಡಾ.ಬಿ.ಉನ್ನಿಕೃಷ್ಣನ್ ಮಾತನಾಡಿ, ಕೆ.ಎಂ.ಸಿ.ಯ ವೈದ್ಯರುಗಳ ಸೇವೆಯನ್ನು ಗುರುತಿಸಿರುವುದಕ್ಕಾಗಿ ಲೇಡಿಗೋಷನ್ ಆಡಳಿತಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಲೇಡಿಗೋಷನ್ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಮಾತನಾಡಿ, ತಾಯಿ ಮಗುವಿನ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರಿ ಹಾಗೂ ಕೆ.ಎಂ.ಸಿ. ವೈದ್ಯರುಗಳ ಅಪರಿಮಿತ ಸೇವೆಯ ಋಣವನ್ನು ತೀರಿಸುವ ಅಪೂರ್ವ ಅವಕಾಶ ಇದಾಗಿದ್ದು ತಾಯಿ ಮರಣವನ್ನು ಇತ್ತೀಚಿನ ಐದು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಇಂದು ಸನ್ಮಾನಿತಗೊಂಡ ಈ ಎಲ್ಲಾ ಹಿರಿಯ ವೈದ್ಯರುಗಳು ಕಾರಣೀಕರ್ತರಾಗಿದ್ದು ಇಂತಹ ಮೌಲ್ಯಯುತವಾದ ಸೇವೆ ಅಜರಾಮರವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಲೇಡಿಗೋಷನ್ ಸಿಬ್ಬಂದಿಗಳು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್.ಅವರನ್ನು ಸನ್ಮಾನಿಸಿದರು.
ಸೀಮಾ ಸ್ವಾಗತಿಸಿ, ಅಂಬಿಕಾ ಅವರು ಪ್ರಸ್ತಾವನೆಗೈದರು. ಜ್ಯೋತಿ ಪ್ರಭಾ ಹಾಗೂ ಶ್ರೀಮತಿ ಜಯಲಕ್ಷ್ಮಿ ನಿರೂಪಿಸಿ, ಲವಿನಾ ವಂದಿಸಿದರು.


