ಮಂಗಳೂರು: ಇಲ್ಲಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆಯನ್ನು ಸಂಪ್ರದಾಯಬದ್ಧವಾಗಿ ಅತಿಥಿಗಳ ಪಾದ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಸುನೀತಾ ಮಡಿ ನಿವೃತ್ತ ಶಿಕ್ಷಕರು ಶಾರದಾ ವಿದ್ಯಾಲಯ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ; ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಕ ಹಾಗೂ ಗುರುತಿಸುವ ಮಾರ್ಗದರ್ಶಕ. ಬಾಲ್ಯದಿಂದಲೇ ಗುರುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ, ನಮ್ಮ ಗುರಿಯನ್ನು ತಲುಪಲು ಪ್ರೇರೇಪಿಸುತ್ತಾರೆ ಎಂದರು.
ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಾವಿರಾರು ಶಿಕ್ಷಕರೊಂದಿಗೆ ಕೆಲಸ ಮಾಡಿರುವುದಾಗಿ ಹಾಗೂ ಹಲವು ತಲೆಮಾರುಗಳ ವಿದ್ಯಾರ್ಥಿಗಳನ್ನು ಕಂಡಿರುವುದಾಗಿ ಹೇಳಿದರು. ಇಂದಿಗೂ ತಾವು ಹೊಸ ವಿಷಯಗಳನ್ನು ಕಲಿಯುತ್ತಿರುವ ಜೀವನ ಪರ್ಯಂತದ ವಿದ್ಯಾರ್ಥಿನಿಯೇ ಆಗಿದ್ದೇನೆ ಎಂದು ತಿಳಿಸಿ, "ಕುತೂಹಲವನ್ನು ಎಂದಿಗೂ ಕಳೆದುಕೊಳ್ಳಬೇಡಿ, ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ" ಎಂಬ ಸಂದೇಶ ನೀಡಿದರು.
ವಿದ್ಯಾರ್ಥಿಗಳಿಗೆ "ಹಣವನ್ನು ಬೆನ್ನಟ್ಟಬೇಡಿ; ಜ್ಞಾನವನ್ನು ಬೆನ್ನಟ್ಟಿ" ಎಂದು ಸಲಹೆ ನೀಡಿದರು. ಪ್ರೌಢಶಾಲೆಯ ನಂತರ ವೃತ್ತಿ ಆಯ್ಕೆ ಮಾಡುವ ಮುನ್ನ ತಮ್ಮ ಆಸಕ್ತಿಯನ್ನು ಮೊದಲು ಕಂಡುಕೊಳ್ಳಬೇಕು. ಯಾವ ವಿಷಯದ ಬಗ್ಗೆ ಹೆಚ್ಚು ಕಾಳಜಿ ಮತ್ತು ಆಸಕ್ತಿ ಹೊಂದಿದ್ದೀರೋ ಅದನ್ನೇ ಜೀವನದ ಗುರಿಯಾಗಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ನಮಗೆ ಸಂಸ್ಕಾರ ಕೊಟ್ಟ ತಂದೆ ತಾಯಿಯರಿಗೆ, ಶಾಲೆಯಲ್ಲಿ ವಿದ್ಯೆಯನ್ನು ಹೇಳಿಕೊಟ್ಟ ಶಿಕ್ಷಕರು ಎಲ್ಲರ ಪಾದ ಪೂಜೆ ಮಾಡುವ ಮೂಲಕ ಅವರಿಗೆ ಗೌರವವನ್ನು ಸೂಚಿಸುತ್ತೇವೆ. ಇದು ನಮ್ಮ ದೇಶದ ಸನಾತನ ಸಂಪ್ರದಾಯವಾಗಿದೆ. ನಮ್ಮ ದೇಶದಲ್ಲಿ ಗುರುಗಳಿಗೆ ವಿಶೇಷವಾದ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ನಾವೆಲ್ಲರೂ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗೋಣ ಎಲ್ಲರಿಗೂ ಗುರುಪೂರ್ಣಿಮಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಸುನೀತಾ ಮಡಿ ಅವರಿಗೆ ವಿದ್ಯಾರ್ಥಿ ಸಂಘದ ನಾಯಕ ಅಭಿದೇವ್, ನಾಯಕಿ ದೇವರ್ಣಿನಿ ಪಾದ ಪೂಜೆಯನ್ನು ಮಾಡುವುದರೊಂದಿಗೆ ಅವರಿಂದ ಆಶೀರ್ವಾದವನ್ನು ಪಡೆದುಕೊಂಡರು. ಸುದೀರ್ಘ 33 ವರ್ಷಗಳಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಕ್ಕಾಗಿ ಸುನೀತಾ ಮಡಿ ಅವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ಗುರುಬಳಗದ ವತಿಯಿಂದ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಮತ್ತು ಶಿಕ್ಷಕ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅದಿತಿ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕ ಶರಣಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ರುಚಿಕ ಕಾರ್ಯಕ್ರಮವನ್ನು ನಿರೂಪಿಸಿ, ರಿಯಾ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


