ಸಮಾಜಮುಖಿ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಬಳ್ಳಾರಿ: ರೆಕ್ಸರ್ ವೆಲ್ಫೇರ್ ಫೌಂಡೇಶನ್ ವ್ಯವಸ್ಥಾಪಕ ಅಧ್ಯಕ್ಷ ರಂಜಿತ್ ಸಿಂಗು ರಾಥೋಡ್ ಅವರ ಜನ್ಮದಿನದ ಅಂಗವಾಗಿ, ಬಳ್ಳಾರಿಯಲ್ಲಿ ಫೌಂಡೇಶನ್‌ನ ಫ್ರಾಂಚೈಸಿ ಹೊಂದಿರುವ ಕೆ. ವೆಂಕಪ್ಪ ಶೆಟ್ಟಿ ಅವರ ನೇತೃತ್ವದಲ್ಲಿ ನಗರದ ಹಳೆ ಬಸ್ ನಿಲ್ದಾಣ ಸಮೀಪದ ಅಂಬೇಡ್ಕರ್ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಗಿರಿ ಎಂಟರ್‌ಪ್ರೈಸಸ್ ಕಚೇರಿಯಲ್ಲಿ 'ಅನ್ನಪೂರ್ಣ ಯೋಜನೆ' ಅಡಿಯಲ್ಲಿ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಮಾಸಿಕ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ವಕೀಲ ವೆಂಕಟೇಶ್ ಯಾದವ್ ಹಾಗೂ ಪ್ರತಿಭಾ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ರವಿಚಂದ್ರ ಉದ್ಘಾಟಿಸಿ ಫಲಾನುಭವಿಗಳಿಗೆ ರೇಷನ್ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ದುರ್ಬಲ ವರ್ಗಗಳ ನೆರವಿಗೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಆಹಾರ ಭದ್ರತೆ ಒದಗಿಸುವ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಲಿವೆ ಎಂದರು. ಸಮಾಜದ ಪ್ರತಿಯೊಬ್ಬರೂ ಇಂತಹ ಸೇವಾ ಕಾರ್ಯಗಳಿಗೆ ಕೈಜೋಡಿಸಿ, ಅಗತ್ಯವಿರುವವರು ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ರೆಕ್ಸರ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಬಡ ಹಾಗೂ ನಿರ್ಗತಿಕ ಕುಟುಂಬಗಳ ನೆರವಿಗಾಗಿ 'ಅನ್ನಪೂರ್ಣ ಯೋಜನೆ' ಅಡಿಯಲ್ಲಿ ನಿರಂತರವಾಗಿ ಮಾಸಿಕ ರೇಷನ್ ಕಿಟ್ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಫೌಂಡೇಶನ್ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಗಿರಿ ಯಾದವ್, ಕೆ. ವೆಂಕಪ್ಪ ಶೆಟ್ಟಿ, ಗೊಲ್ಲ ಬಸವರೆಡ್ಡಿ, ಮಹದೇವಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲಿಕಾರ್ಜುನ ಸೇರಿದಂತೆ ಫೌಂಡೇಶನ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.


