ದುಡಿದವನಿಗೆ ಗೊತ್ತು ಅನ್ನದ ಬೆಲೆ

Upayuktha
0

   



ನ್ನವು ಕೇವಲ ಆಹಾರವಲ್ಲ; ಅದು ರೈತನ ಬೆವರು, ತಂದೆ-ತಾಯಿಯ ಪರಿಶ್ರಮ ಮತ್ತು ದುಡಿಮೆಯ ಪ್ರತೀಕವಾಗಿದೆ. ಸ್ವತಃ ದುಡಿದು ಸಂಪಾದಿಸಿದಾಗ ಮಾತ್ರ ಒಂದು ಅಗುಳಿನ ಮಹತ್ವ, ಒಂದು ರೂಪಾಯಿಯ ಮೌಲ್ಯ ಮತ್ತು ಜೀವನದ ಜವಾಬ್ದಾರಿ ನಿಜವಾಗಿ ಅರ್ಥವಾಗುತ್ತದೆ.

ಸುಖ-ಸಂಪತ್ತಿನಲ್ಲಿ ಬೆಳೆದವರಿಗೆ ಅನ್ನದ ಬೆಲೆ ಹೆಚ್ಚಾಗಿ ತಿಳಿದಿರುವುದಿಲ್ಲ. ಏಕೆಂದರೆ ಅವರಿಗೆ ಬೇಕಾದಾಗ ಮನೆಯಲ್ಲಿರುವ ತಾಯಿ ಪ್ರೀತಿಯಿಂದ ಬಿಸಿ ಬಿಸಿ ಊಟವನ್ನು ಬಡಿಸುತ್ತಾಳೆ. ಆದರೆ ಹಲವರು ಹೊಟ್ಟೆತುಂಬ ತಿನ್ನದೆ ಅನ್ನವನ್ನು ವ್ಯರ್ಥ ಮಾಡುತ್ತಾರೆ. ಅವರು ಬಿಸಾಡುವ ಒಂದು ಅಗುಳು ಅನ್ನವೇ ಮತ್ತೊಬ್ಬ ಹಸಿದವನಿಗೆ ಒಂದು ಹೊತ್ತಿನ ಊಟವಾಗಿರಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ.

ಮನೆಯಲ್ಲಿ ತಂದೆ-ತಾಯಿಯ ನೆರಳಿನಲ್ಲಿ ಇದ್ದಾಗ ಜೀವನದ ಕಷ್ಟಗಳು ಹೆಚ್ಚಾಗಿ ಕಾಣಿಸುವುದಿಲ್ಲ. ಆದ್ದರಿಂದ ಅನ್ನದ ಮೌಲ್ಯವೂ, ದುಡಿಮೆಯ ಬೆಲೆಯೂ ಅರ್ಥವಾಗುವುದಿಲ್ಲ. ಆದರೆ ಒಮ್ಮೆ ಸ್ವತಃ ದುಡಿಯಲು ಆರಂಭಿಸಿದಾಗ ಜೀವನದ ನಿಜವಾದ ಕಷ್ಟಗಳು ತಿಳಿಯುತ್ತವೆ. ತಾನು ಬೆವರು ಸುರಿಸಿ ಸಂಪಾದಿಸಿದ ಹಣದಿಂದ ಊಟ ಮಾಡಿದಾಗ ಪ್ರತಿಯೊಂದು ಅಗುಳಿನ ಬೆಲೆ ಅರಿವಾಗುತ್ತದೆ. ಹಿಂದೆ ವ್ಯರ್ಥ ಮಾಡಿದ ಅನ್ನ ನೆನಪಾಗಿ ಪಶ್ಚಾತ್ತಾಪವೂ ಉಂಟಾಗುತ್ತದೆ.

ಮನೆಯಲ್ಲಿದ್ದಾಗ ಯಾವುದೇ ಚಿಂತೆಯಿಲ್ಲದೆ ಬೇಕಾದದ್ದನ್ನೆಲ್ಲ ಪಡೆದು ತಿನ್ನುವ ಅಭ್ಯಾಸ ಇರುತ್ತದೆ. ಕೆಲವೊಮ್ಮೆ ಕೋಪದಲ್ಲಿ ಅನ್ನವನ್ನು ವ್ಯರ್ಥ ಮಾಡುವುದು, ತಾಯಿ ಊಟಕ್ಕೆ ಕರೆದರೂ ಸಮಯಕ್ಕೆ ಹೋಗದೇ ನಂತರ ಊಟ ಮಾಡುವುದು ಸಾಮಾನ್ಯವೆನಿಸುತ್ತದೆ. ಆದರೆ ಸ್ವತಃ ದುಡಿಯಲು ಹೋದಾಗ ಇವೆಲ್ಲದರ ಮೌಲ್ಯ ಬಹಳ ಬೇಗ ತಿಳಿಯುತ್ತದೆ. ಏಕೆಂದರೆ ಎಲ್ಲರ ಜೀವನ ಒಂದೇ ರೀತಿಯಾಗಿರುವುದಿಲ್ಲ. ದುಡಿಮೆ ಮಾಡುವಾಗ ಪ್ರತಿಯೊಂದು ಪರಿಸ್ಥಿತಿಗೂ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು.
ಮನೆಯಿಂದ ದೂರ ಹೋಗಿ, ಬಾಡಿಗೆ ಮನೆಯಲ್ಲಿ ವಾಸ ಮಾಡಿ, ಸ್ವಂತ ದುಡಿಮೆಯ ಹಣದಿಂದ ಜೀವನ ನಡೆಸಿದಾಗ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ. ಊಟ ಹೇಗಿದ್ದರೂ ಅದನ್ನು ದೂರುವ ಪರಿಸ್ಥಿತಿ ಇರುವುದಿಲ್ಲ. ನಾವು ಬಯಸಿದ ಆಹಾರವನ್ನು ಪ್ರತಿದಿನ ತಿನ್ನಲು ಸಾಧ್ಯವಾಗುವುದಿಲ್ಲ. ಏಕೆಂದರೆ ದುಡಿದು ಸಂಪಾದಿಸಿದ ಪ್ರತಿಯೊಂದು ರೂಪಾಯಿಯೂ ಅಮೂಲ್ಯವಾಗಿರುತ್ತದೆ. ಆಗಲೇ ತಂದೆ-ತಾಯಿ ಎಷ್ಟು ಕಷ್ಟಪಟ್ಟು ದುಡಿದು ನಮ್ಮನ್ನು ಸಾಕಿದ್ದಾರೆ ಮತ್ತು ಅವರ ಹಣವನ್ನು ನಾವು ಎಷ್ಟು ನಿರ್ಲಕ್ಷ್ಯದಿಂದ ವ್ಯರ್ಥ ಮಾಡಿದ್ದೆವು ಎಂಬ ಅರಿವು ಮೂಡುತ್ತದೆ.

ದುಡಿಮೆ ಮನುಷ್ಯನಲ್ಲಿ ಶಿಸ್ತು, ಜವಾಬ್ದಾರಿ, ಆತ್ಮವಿಶ್ವಾಸ ಮತ್ತು ವಿನಯವನ್ನು ಬೆಳೆಸುತ್ತದೆ. ಯಾವುದೇ ಕೆಲಸ ಚಿಕ್ಕದು ಅಥವಾ ದೊಡ್ಡದು ಎಂಬ ಭೇದವಿಲ್ಲದೆ ಪ್ರಾಮಾಣಿಕವಾಗಿ ದುಡಿಯುವುದು ಜೀವನದ ದೊಡ್ಡ ಗುಣವಾಗಿದೆ. ಒಮ್ಮೆ ದುಡಿಮೆಯ ಮೌಲ್ಯ ಅರಿತ ಮನುಷ್ಯ ತನ್ನ ಜವಾಬ್ದಾರಿಯನ್ನು ತಿಳಿದುಕೊಳ್ಳುತ್ತಾನೆ. ತಾನು ತಿನ್ನುವ ಪ್ರತಿಯೊಂದು ಅಗುಳಿನ ಬೆಲೆಯನ್ನು ಗೌರವಿಸುತ್ತಾನೆ. ಶ್ರಮದ ಮೌಲ್ಯವನ್ನು ಅರಿತು ಜೀವನವನ್ನು ಜವಾಬ್ದಾರಿಯಿಂದ ನಡೆಸುತ್ತಾನೆ. ಆದ್ದರಿಂದಲೇ "ದುಡಿದವನಿಗೇ ಗೊತ್ತು ಅನ್ನದ ಬೆಲೆ" ಎಂಬ ಮಾತು ಸದಾಕಾಲಕ್ಕೂ ಸತ್ಯವಾಗಿದೆ.

- ರಮ್ಯಾ ನಾಯ್ಕ್, 
ಪತ್ರಿಕೋದ್ಯಮ ವಿಭಾಗ, 
ಎಸ್. ಡಿ. ಎಂ. ಉಜಿರೆ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top