ಅಭಿನಯ ಜೀವನ ಕೌಶಲ್ಯ; ಎಲ್ಲ ಕ್ಷೇತ್ರಗಳಲ್ಲೂ ಅಗತ್ಯ: ವಿವೇಕ್ ಆಳ್ವ

Upayuktha
0

  




ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ) ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ರಂಗಭೂಮಿ, ಸಿನಿಮಾ, ಧಾರಾವಾಹಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವವರಿಗಾಗಿ ಆಯೋಜಿಸಲಾದ ಎರಡು ದಿನಗಳ ಅಭಿನಯ ಸೂಕ್ಷ್ಮತೆಗಳ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಚಾಲನೆ ದೊರೆಯಿತು.

 

ಕೇಂದ್ರದ ನಿರ್ದೇಶಕ ಡಾ. ಜೀವನ್ರಾಮ್ ಸುಳ್ಯರವರ ಮಾರ್ಗದರ್ಶನದಲ್ಲಿ ಜುಲೈ 6 ಮತ್ತು 7ರಂದು ನಡೆಯಲಿರುವ ಕಾರ್ಯಾಗಾರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

 

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಅಭಿನಯವು ಕೇವಲ ರಂಗಭೂಮಿ ಅಥವಾ ಸಿನಿಮಾಕ್ಕೆ ಸೀಮಿತವಾಗಿಲ್ಲ. ಶಿಕ್ಷಕರು, ವೃತ್ತಿಪರರು, ಆಡಳಿತಗಾರರು ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಪರಿಣಾಮಕಾರಿ ಅಭಿವ್ಯಕ್ತಿಗೆ ಅಭಿನಯದ ಕೌಶಲ್ಯ ಅತ್ಯಗತ್ಯ. ಇಂದಿನ ಯುವಜನರಲ್ಲಿ ದೇಹದ ಚಲನವಲನವು ಸಹಜತೆಯನ್ನು ಕಳೆದುಕೊಂಡು ಬಿಗಿತ ಹೆಚ್ಚಾಗಿದೆ. ಅದನ್ನು ನಿವಾರಿಸಿ ದೇಹಭಾಷೆ, ಆತ್ಮವಿಶ್ವಾಸ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಪ್ರತಿಭೆಯ ಜೊತೆಗೆ ಪ್ಯಾಷನ್, ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಹಾಗೂ ಅಭಿರುಚಿಯೂ ಮುಖ್ಯ ಎಂದು ಹೇಳಿದರು.

 

ಡಾ. ಜೀವನ್ರಾಮ್ ಸುಳ್ಯರವರು ಅತ್ಯುತ್ತಮ ತರಬೇತುದಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ರಂಗಕಲೆಯ ಎಲ್ಲಾ ಆಯಾಮಗಳನ್ನು ವ್ಯವಸ್ಥಿತವಾಗಿ ಕಲಿಯಲು ಕಾರ್ಯಾಗಾರ ಉತ್ತಮ ವೇದಿಕೆಯಾಗಿದ್ದು, ತರಗತಿ ಕೊಠಡಿಯಲ್ಲಿ ದೊರೆಯುವ ಸೈದ್ಧಾಂತಿಕ ಕಲಿಕೆಗೆ ಹೋಲಿಸಿದರೆ ಪ್ರಾಯೋಗಿಕ ಅನುಭವದಿಂದ ಹತ್ತು ಪಟ್ಟು ಹೆಚ್ಚಿನ ಅರಿವು ದೊರೆಯುತ್ತದೆ ಎಂದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಬೆಳವಣಿಗೆಯಲ್ಲಿ ಡಾ. ಜೀವನ್ರಾಮ್ ಸುಳ್ಯ ರವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.

 

ಕಾರ್ಯಾಗಾರದ ನಿರ್ದೇಶಕ ಡಾ. ಜೀವನ್ರಾಮ್ ಸುಳ್ಯ ಮಾತನಾಡಿ, ಅಭಿನಯವು ವೈಯಕ್ತಿಕ ಪ್ರದರ್ಶನವಲ್ಲ, ಅದು ಸಮೂಹದೊಂದಿಗೆ ಬೆಳೆಯುವ ಕಲೆಯಾಗಿದೆ. ಕಲಾವಿದನು ಯಾವ ಪಾತ್ರವನ್ನು ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ದೇಹಭಾಷೆ, ಧ್ವನಿ ನಿಯಂತ್ರಣ, ಭಾವಾಭಿವ್ಯಕ್ತಿ, ಪಾತ್ರ ವಿಶ್ಲೇಷಣೆ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ ಎಂದರು.

 

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಟಕವೆಂದರೆ ಕೇವಲ ರಂಗಭೂಮಿಗೆ ಸೀಮಿತವಾದ ಕಲೆಯಲ್ಲ. ಬದುಕಿನಲ್ಲಿ ಪ್ರತಿಯೊಬ್ಬರೂ ತಮ್ಮ ಭಾವನೆ, ಆಲೋಚನೆ ಮತ್ತು ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುವುದನ್ನು ಕಲಿಯಬೇಕು. ನಿಟ್ಟಿನಲ್ಲಿ ಅಭಿನಯ ತರಬೇತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಲೆಯನ್ನು ಕೇವಲ ನೋಡುವವರಾಗದೆ ಅದನ್ನು ಆಸ್ವಾದಿಸುವವರಾಗಬೇಕು. ರಂಗಭೂಮಿ ಭಾಷಾ ಪ್ರೌಢಿಮೆ, ಅಭಿವ್ಯಕ್ತಿ, ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲ್ಯಗಳನ್ನು ವೃದ್ಧಿಸುತ್ತದೆ ಎಂದರು.

 

ಎರಡು ದಿನಗಳ ಕಾರ್ಯಾಗಾರದಲ್ಲಿ ರಂಗಭೂಮಿ, ಸಿನಿಮಾ, ಧಾರಾವಾಹಿ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಲು ಅಗತ್ಯವಾದ ಮೂಲಭೂತ ಮತ್ತು ಉನ್ನತ ಮಟ್ಟದ ಅಭಿನಯ ತಂತ್ರಗಳನ್ನು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ.

 

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದಿವ್ಯಾ ಭಂಡಾರಿ ಇದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top