ಇವರಿಬ್ಬರು ಮೆಚ್ಚುವಂತೆ ಬದುಕಿಬಿಡು ಸಾಕು...

Upayuktha
0

 



ವರಿಬ್ಬರು ಮೆಚ್ಚುವಂತೆ ಬದುಕಿಬಿಡು ಸಾಕು... ಎಂಬ ಮಾತನ್ನು ನಾವು ಆಗಾಗ ಕೇಳುತ್ತೇವೆ ಆದರೆ ಆ ಇಬ್ಬರು ಯಾರು? ದೇವರು ಮತ್ತು ಗುರುನಾ? ತಂದೆ-ತಾಯಿಯಾ? ಗೆಳೆಯ-ಗೆಳತಿಯರಾ? ಗಂಡ-ಹೆಂಡತಿಯಾ? ಅತ್ತೆ-ಮಾವನಾ? ಅಥವಾ ಸಮಾಜನಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಮನಸಿನಲ್ಲಿ ಗೊಂದಲದ ಕೋಲಾಹಲ ಏಳುವುದು ಖಚಿತ. 

ಸ್ವಲ್ಪ ನಿಧಾನವಾಗಿ ಸಂಯಮದಿಂದ ಯೋಚನೆ ಮಾಡಿ. ತಂತ್ರಜ್ಞಾನ ಬದಲಾದಂತೆ ಜನರು ಬದಲಾಗುತ್ತಿದ್ದಾರೆ ನಿಜ. ಜೊತೆಗೆ ಬಯಕೆ, ಬೇಡಿಕೆ, ತೋರಿಕೆ, ಮೆಚ್ಚಿಸುವಿಕೆ ಎಲ್ಲವೂ ನಿರಂತರ ಹರಿಯುವ ನೀರಿನಂತೆ ಸಾಗುತ್ತಿದೆ. ಸಾಗಲಿ ಬೇಡ ಅನ್ನೋರಾರು. ದೇವರೇ ಕೇಳಿಸಿಕೊಳ್ಳಲು ಪರದಾಡುವಷ್ಟು ಬಯಕೆಯ ಜೊತೆಗೆ ಬೇಡಿಕೆಯ ಬುತ್ತಿಯನ್ನು ಅವನೆದುರಿಗೆ ಇಡುತ್ತಿದ್ದೇವೆ, ಕೊಟ್ಟಿದ್ದಕೆ ಕೃತಜ್ಞತೆಯ ಬದಲು ಮತ್ತಷ್ಟು ಬೇಡಿಕೆಯ ಸರಮಾಲೆಗಳೇ ಹೆಚ್ಚಾಗಿವೆ. ನಮ್ಮದಲ್ಲದಿದ್ದರೂ ನಮ್ಮದಾಗಿಸಿಕೊಳ್ಳುವ ಹಂಬಲದಿಂದ, ಎಲ್ಲರೆದುರೂ ಭಿನ್ನವಾಗಿ ಕಾಣಬೇಕು ಎಂಬ ವ್ಯಾಮೋಹದಿಂದ ಸಾಲ-ಸೂಲ ಮಾಡಿ ಬೇಕು ಬೇಡಗಳೆಲ್ಲವನ್ನೂ ಖರೀದಿಸಿ ಜನರಿಗೆ ತೋರಿಸುತ್ತಾ ತಿರುಗಾಡುತ್ತಿದ್ದೇವೆ. ಹಿರಿಯರು ಹೇಳಿದ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ನಾಣ್ಣುಡಿಯನ್ನು ಮರೆತ ನಾವುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಬ್ಬರನ್ನು ನೋಡಿ ಇಂದು ಬದುಕುತ್ತಿದ್ದೇವೆ. ಜೀವನ ನಮ್ಮದಾದರೂ ಬದುಕಿನ ಪಯಣ ಮಾತ್ರ ಇನ್ನೊಬ್ಬರ ತೋರ್ಪಡಿಕೆಗೆ ಎನ್ನುವಂತಾಗಿದೆ.

ತಂತ್ರಜ್ಞಾನ ಬೆಳೆದಂತೆ ಜಗತ್ತು ಅಂಗೈ ಗಾತ್ರಕ್ಕೆ ಬಂದು ತಲುಪಿದೆ. ಇರಲಾರದ ಬಯಕೆಗಳ ಮೊಳಕೆ ಒಡೆಯಲು ಇದೂ ಒಂದು ಕಾರಣವೇ. ಹಾಗಾದರೆ ಈ ತಂತ್ರಜ್ಞಾನವೇ ನಮಗೆ ಸಮಸ್ಯೆಯಾಗಿದೆಯೇ? ನಮ್ಮ ಮನೋಭಾವನೆ ಬದಲಾಗಿದೆ. ನಮ್ಮನ್ನು ನೋಡಿ ಜನರು ಹೊಗಳಬೇಕು, ನಮ್ಮನ್ನು ನೋಡಿ ಹೊಟ್ಟೆಕಿಚ್ಚುಪಡಬೇಕು, ನಮ್ಮ ಯಶಸ್ಸಿನ ಬಗ್ಗೆ ಎಲ್ಲರೂ ಮಾತನಾಡಬೇಕು ಎಂಬ ಆಸೆಗಳು ನಿಧಾನವಾಗಿ ನಮ್ಮ ಜೀವನದ ಗುರಿಯಾಗುತ್ತಿವೆ. ಕೇವಲ ಗುರಿಯಾಗಿ ಉಳಿದಿಲ್ಲ ಎಂದೂ ತೀರದ ದಾಹಗಳಾಗಿ ಬದಲಾಗುತ್ತಿವೆ. ಇವೆಲ್ಲವೂ ಜೀವನದ ಗುರಿಗಳೆಂದರೆ ದೇವರು ಮುಗುಳು ನಗುತ್ತಾನೆ. 

ಇಂದು ಒಬ್ಬರು ಹೊಗಳಿದರೆ ಸಾಕು ಅಂದುಕೊಳ್ಳುವ ನಾವು ನಾಳೆಗೆ ಮತ್ತೊಬ್ಬರ ಮೆಚ್ಚುಗೆಯನ್ನು ಹುಡುಕುತ್ತೇವೆ. ಜನರ ಅಭಿಪ್ರಾಯಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಅವರ ಮೆಚ್ಚುಗೆಯ ಮೇಲೆ ಜೀವನ ಕಟ್ಟಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಇರುವ ನೆಮ್ಮದಿ ಹಾರಿ ಹೋಗದೇ ಇರುವುದಿಲ್ಲ. ಇತರರನ್ನು ಮೆಚ್ಚಿಸಲು ಹೋಗಿ ಅನೇಕರು ತಮ್ಮನ್ನು ತಾವೇ ಕಳೆದುಕೊಂಡಿದ್ದಾರೆ. ಕೆಲವರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವರು ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಏಕೆಂದರೆ ಇತರರನ್ನು ಮೆಚ್ಚಿಸುವ ಪ್ರಯತ್ನಕ್ಕೆ ಅಂತ್ಯವೇ ಇಲ್ವಲ್ಲ .

ಹಾಗಾದರೆ ಜನ, ಸಮಾಜ ಯಾರು ಬೇಡವಾದರೆ ಯಾರನ್ನ ಮೆಚ್ಚಿಸಬೇಕು. ಮೊದಲನೆಯವರು ನೀವು. ನಿಮ್ಮ ಮನಸ್ಸು ನಿಮ್ಮನ್ನು ಮೆಚ್ಚಬೇಕು. ನಿಮ್ಮ ಬದುಕಿನ ಬಗ್ಗೆ ನಿಮಗೆ ಹೆಮ್ಮೆ ಇರಬೇಕು. ರಾತ್ರಿ ಮಲಗುವಾಗ ನೆಮ್ಮದಿಯಿಂದ ನಿದ್ರಿಸುವಷ್ಟು ಪ್ರಾಮಾಣಿಕವಾಗಿ ಬದುಕಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಎರಡನೆಯವರು ನಿಮ್ಮ ಅಂತರಾತ್ಮ. ಯಾವುದೇ ತಪ್ಪು ಮಾಡದೆ, ಯಾರಿಗೂ ನೋವುಂಟು ಮಾಡದೆ, ನಿಮ್ಮ ಮೌಲ್ಯಗಳನ್ನು ಉಳಿಸಿಕೊಂಡು ಬದುಕಿದರೆ ನಿಮ್ಮ ಅಂತರಾತ್ಮವೇ ನಿಮ್ಮನ್ನು ನೋಡಿ ಖುಷಿ ಪಡುತ್ತದೆ. ಜೊತೆಗೆ ಹೆತ್ತವರು. ಹೆತ್ತಿದ್ದಕ್ಕೂ ಸಾರ್ಥಕವಾಯಿತು ಅನ್ನುವ ಭಾವನೆ ಅವರಲ್ಲಿ ಮೂಡುತ್ತದೆ. 

ಜನರ ಮೆಚ್ಚುಗೆ ಕ್ಷಣಿಕ. ಇವತ್ತು ಅಧಿಕಾರ, ಹಣ, ಆಸ್ತಿ ನಿನ್ನ ಹಿಂದಿದ್ದರೆ ನೀನು ಭ್ರಷ್ಟಾಚಾರ, ಕೊಲೆ, ದರೋಡೆ ಮಾಡಿದರು ನಿನ್ನ ಹಿಂದೆ ಹೆಚ್ಚಿಲ್ಲ ಅಂದ್ರು ನಾಲ್ಕಜನ ಖಂಡಿತ ಇರುತ್ತಾರೆ. ನಿನ್ನಿಂದೆ ಏನು ಇಲ್ಲಾ ಅಂದಾಗ ಇಂದು ನಿನ್ನ ಜೊತೆಗಿದ್ದವರೇ ನಾಳೆ ನಿನ್ನನ್ನು ಟೀಕಿಸುವ ಮಟ್ಟಕ್ಕೆ ಏರುತ್ತಾರೆ. ಆದರೆ ಆತ್ಮಸಂತೋಷ ಮತ್ತು ಅಂತರಂಗದ ನೆಮ್ಮದಿ ಜೀವನಪೂರ್ತಿ ಜೊತೆಯಾಗಿರುತ್ತದೆ. ಆದ್ದರಿಂದ ಇತರರಿಗಾಗಿ ಮುಖವಾಡ ಧರಿಸಿ ಬದುಕುವುದಕ್ಕಿಂತ, ನಿಜವಾದ ವ್ಯಕ್ತಿತ್ವದೊಂದಿಗೆ ಬದುಕುವುದು ಶ್ರೇಷ್ಠ. ಜೀವನದಲ್ಲಿ ಒಳ್ಳೆಯತನ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಆತ್ಮಗೌರವವನ್ನು ಕಾಪಾಡಿಕೊಂಡು ಬದುಕಿದರೆ ದೇವರೂ ಸಂತೋಷಪಡುತ್ತಾನೆ, ಸಮಾಜವೂ ಅವನನ್ನು ಗೌರವಿಸುತ್ತದೆ. ಅದರ ಹಿಂದೆ ಓಡುವ ಅಗತ್ಯವಿಲ್ಲ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ಮೆಚ್ಚುಗೆ ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಬದುಕಿನಲ್ಲಿ ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ ಮಾಡುವುದಕ್ಕಿಂತ, ನಮ್ಮ ಮನಸ್ಸು ಮತ್ತು ನಮ್ಮ ಅಂತರಾತ್ಮ ಎಂಬ ಆ ಇಬ್ಬರನ್ನು ಮೆಚ್ಚಿಸುವಂತೆ ಬದುಕಿಬಿಟ್ಟರೆ ಸಾಕು. ಅದೇ ನಿಜವಾದ ಯಶಸ್ಸು, ಅದೇ ನೆಮ್ಮದಿಯ ಜೀವನ.

- ಗಂಗಾ ನೀಲಪ್ಪ ಅಮಾತೆಪ್ಪನವರ 
ಪತ್ರಿಕೋದ್ಯಮ ವಿದ್ಯಾರ್ಥಿನಿ 
ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top