ಕಾಡಿನಿಂದ ನಾಡಿನತ್ತ ಮುಖ ಮಾಡಿದ 'ಕೋಳಿಜುಟ್ಟು' ಹಣ್ಣು: ಪಶ್ಚಿಮ ಘಟ್ಟದ ಪೌಷ್ಟಿಕ ನಿಧಿ

Upayuktha
0

 



ಧುನಿಕ ಸೂಪರ್ ಮಾರ್ಕೆಟ್‌ಗಳ ಕೌಂಟರ್‌ಗಳಲ್ಲಿ ವಿದೇಶಗಳಿಂದ ಆಮದಾದ ಆಕರ್ಷಕ ಹಣ್ಣುಗಳು ನಮ್ಮ ಗ್ರಾಹಕರನ್ನು ಸೆಳೆಯುತ್ತಿವೆ. ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿದ ಇಂತಹ ಹಣ್ಣುಗಳು ಆರೋಗ್ಯಕ್ಕೆ ತರುವ ಅಪಾಯ ಒಂದೆಡೆಯಾದರೆ, ನಮ್ಮದೇ ಹಿತ್ತಲ ಹಾಗೂ ಕಾಡಿನ ನೈಸರ್ಗಿಕ ಹಣ್ಣುಗಳು ಮೂಲೆಗುಂಪಾಗುತ್ತಿರುವುದು ಇನ್ನೊಂದೆಡೆ. ಅಂದು ಗಿಡದಲ್ಲೇ ನೈಸರ್ಗಿಕವಾಗಿ ಮಾಗುತ್ತಿದ್ದ ಹಣ್ಣುಗಳು ಸತ್ತ್ವ ನೀಡುತ್ತಿದ್ದವು; ಇಂದು ಕೃತಕ ಹಣ್ಣುಗಳು ದೇಹದಲ್ಲಿ ವ್ಯಾಧಿಗಳನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ, ನಮ್ಮ ಪಶ್ಚಿಮ ಘಟ್ಟದ ಜೀವವೈವಿಧ್ಯದ ಒಡಲಲ್ಲಿ ಅಡಗಿರುವ ಅಪರೂಪದ ಕಾಡು ಹಣ್ಣುಗಳ ಮಹತ್ವವನ್ನು ಮರುಪರಿಶೀಲಿಸಬೇಕಾದ ಗಂಭೀರ ಅಗತ್ಯವಿದೆ.


ಬದುಕಿನ ಪ್ರತಿಯೊಂದು ಯಶಸ್ಸಿಗೂ ವಿದ್ಯೆ, ದುಡಿಮೆ ಮತ್ತು ತಾಳ್ಮೆ ಹೇಗೆ ಮೂಲಾಧಾರವೋ, ಹಾಗೆಯೇ ದೇಹದ ಸ್ವಾಸ್ಥ್ಯಕ್ಕೆ ನಿಸರ್ಗದತ್ತ ಆಹಾರವೇ ಪರಮೌಷಧ. ಈ ಸಾಲಿನಲ್ಲಿ ನಿಲ್ಲುವ ಪಶ್ಚಿಮ ಘಟ್ಟದ ವಿಶಿಷ್ಟ ಕೊಡುಗೆಯೇ 'ಕೋಳಿಜುಟ್ಟು' ಹಣ್ಣು. ಕನ್ನಡದಲ್ಲಿ ಕೋಳಿಜುಟ್ಟು, ಕೋಳಿ ಕುಕ್ಕೆ ಅಥವಾ ಮೈಂದಪುಳಿ ಎಂದೂ, ಮಲಯಾಳಂನಲ್ಲಿ ಮೂಟ್ಟಿಪಳಂ ಅಥವಾ ಮೂಟ್ಟಿಪುಳಿ ಎಂದೂ ಕರೆಯಲ್ಪಡುವ ಈ ಹಣ್ಣಿನ ಸಸ್ಯಶಾಸ್ತ್ರೀಯ ಹೆಸರು Baccaurea courtallensis. ಭಾರತದ ಪಶ್ಚಿಮ ಘಟ್ಟಗಳ ದಟ್ಟ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವ ಈ ವೃಕ್ಷ ಸಂಪತ್ತು ತನ್ನ ಅಪರೂಪದ ಜೈವಿಕ ಗುಣದಿಂದಲೇ ಗಮನ ಸೆಳೆಯುತ್ತದೆ.


ಸಾಮಾನ್ಯವಾಗಿ ಸಸ್ಯಗಳು ಕೊಂಬೆಗಳಲ್ಲೋ, ಚಿಗುರೆಲೆಗಳ ಸಂದಿಯಲ್ಲೋ ಹೂ ಬಿಟ್ಟು ಕಾಯಿ ಕಚ್ಚುವುದನ್ನು ನಾವು ಕಾಣುತ್ತೇವೆ. ಆದರೆ ಕೋಳಿಜುಟ್ಟು ಮರದ ವೈಶಿಷ್ಟ್ಯವೇ ಬೇರೆ. ಸಸ್ಯವಿಜ್ಞಾನದಲ್ಲಿ ‘ಕೌಲಿಫ್ಲೋರಸ್’ (Cauliflorous) ಎಂದು ಕರೆಯಲಾಗುವ ಪ್ರಕ್ರಿಯೆಯಲ್ಲಿ, ಇದರ ಹೂವು ಮತ್ತು ಹಣ್ಣುಗಳು ನೇರವಾಗಿ ಮರದ ಕಾಂಡ ಹಾಗೂ ಬುಡದಲ್ಲೇ ಸೃಷ್ಟಿಯಾಗುತ್ತವೆ. ಆಗಸ್ಟ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಈ ಮರದ ಬೂದು ಬಣ್ಣದ ತೊಗಟೆಯ ಮೇಲಿನ ಗಂಟುಗಳಿಂದ ರಕ್ತಗೆಂಪು ಬಣ್ಣದ ಹೂವುಗಳು ಹೊರಹೊಮ್ಮುತ್ತವೆ. ಮುಂದೆ ಜೂನ್-ಜುಲೈ ವೇಳೆಗೆ ಇವು ಗಾಢ ಕೆಂಪು (ಕ್ರಿಮ್ಸನ್) ಬಣ್ಣದ ಹಣ್ಣಿನ ಬೃಹತ್ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡಕ್ಕೇ ಕೆಂಪು ಹಾಸು ಹೊದಿಸಿದಂತೆ ಕಂಗೊಳಿಸುತ್ತವೆ. ಒಂದೊಂದು ಗೊಂಚಲಿನಲ್ಲಿ ಸುಮಾರು 25 ರಿಂದ 50 ಹಣ್ಣುಗಳು ಅಡಕವಾಗಿರುತ್ತವೆ.


ಈ ಹಣ್ಣುಗಳು ಕೇವಲ ನೋಡುವುದಕ್ಕಷ್ಟೇ ಸುಂದರವಾಗಿರುವುದಲ್ಲ, ಕಾಡಿನ ಸಸ್ಯ-ಪ್ರಾಣಿ ಆಹಾರ ಸರಪಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನೂ ವಹಿಸುತ್ತವೆ. ಪಶ್ಚಿಮ ಘಟ್ಟದ ವಿಶಿಷ್ಟ ಪ್ರಾಣಿಗಳಾದ ನೀಲಗಿರಿ ಲಂಗೂರ್‌ಗಳು, ಸಿಂಹಬಾಲದ ಕೋತಿಗಳು ಹಾಗೂ ಕಾಡಾನೆಗಳಿಗೆ ಇದು ಅತ್ಯಂತ ಇಷ್ಟದ ಆಹಾರ.


ಮನುಷ್ಯನ ಆಹಾರ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಕೋಳಿಜುಟ್ಟು ಹಣ್ಣಿಗೆ ವಿಶೇಷ ಸ್ಥಾನವಿದೆ. ಇದರ ಗಟ್ಟಿಯಾದ ಕೆಂಪು ಸಿಪ್ಪೆಯನ್ನು ಸುಲಿದರೆ ಒಳಗೆ ರಸಭರಿತವಾದ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ತಿರುಳು ಸಿಗುತ್ತದೆ. ಸಿಹಿ ಮತ್ತು ಹುಳಿಯ ಸಮ್ಮಿಶ್ರಣವಾಗಿರುವ ಈ ತಿರುಳಿನಲ್ಲಿ ವಿಟಮಿನ್ 'ಸಿ' ಹಾಗೂ ನಾರಿನಾಂಶ (ಫೈಬರ್) ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ತೂಕ ಇಳಿಸಲು ಬಯಸುವವರಿಗೆ ಕಡಿಮೆ ಕ್ಯಾಲರಿ ಹೊಂದಿರುವ ಈ ಹಣ್ಣು ಉತ್ತಮ ಪೂರಕ. ಪೂರ್ತಿ ಮಾಗದ ಕಾಯಿಗಳನ್ನು ಉಪ್ಪಿನಕಾಯಿ, ಸಾಂಪ್ರದಾಯಿಕ ಸಾರು, ಚಟ್ನಿ ಹಾಗೂ ತಂಪು ಪಾನೀಯಗಳ (Squash) ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬುಡಕಟ್ಟು ವೈದ್ಯ ಪದ್ಧತಿಯಲ್ಲಿ ಇದರ ತೊಗಟೆಯ ಕಷಾಯವನ್ನು ಚರ್ಮದ ಗಾಯ ಶಮನಕ್ಕೆ ಹಾಗೂ ಬೇರುಗಳನ್ನು ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಳಸುವ ಉಲ್ಲೇಖಗಳಿವೆ.


ಕಾಡಿನ ದಟ್ಟ ಅರಣ್ಯಕ್ಕಷ್ಟೇ ಸೀಮಿತವಾಗಿದ್ದ ಈ ಅಪರೂಪದ ಹಣ್ಣನ್ನು ಕೃಷಿ ಭೂಮಿಗೆ ತಂದು ಯಶಸ್ಸು ಕಂಡ ಉದಾಹರಣೆಗಳು ಈಗ ಕರಾವಳಿಯಲ್ಲಿ ಕಾಣಸಿಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಬಿಳಿನೆಯ ವಾಸ್ತು ತಜ್ಞ ಎಸ್. ಪ್ರಸಾದ್ ಮುನಿಯಂಗಳ ಅವರು ತಮ್ಮ ತೋಟದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಹೆಚ್ಚಿನ ನಿರ್ವಹಣೆ ಇಲ್ಲದೆಯೇ ಬೆಳೆದ ಈ ಗಿಡಗಳು ಕೇವಲ ಮೂರೇ ವರ್ಷಗಳಲ್ಲಿ ಸಮೃದ್ಧವಾಗಿ ಹಣ್ಣು ನೀಡಲು ಆರಂಭಿಸಿದ್ದು, ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿವೆ.


ದುರದೃಷ್ಟವಶಾತ್, ಅತಿಯಾದ ಅರಣ್ಯ ನಾಶ ಹಾಗೂ ಭೌಗೋಳಿಕ ಸೀಮಿತತೆಯಿಂದಾಗಿ 'ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘ' (IUCN) ತನ್ನ ಕೆಂಪು ಪಟ್ಟಿಯಲ್ಲಿ ಈ ತಳಿಯನ್ನು 'ಅಳಿವಿನಂಚಿನಲ್ಲಿರುವ ಹತ್ತಿರದ ತಳಿ' (Near Extinction) ಎಂದು ವರ್ಗೀಕರಿಸಿದೆ. ನೈಸರ್ಗಿಕವಾಗಿ ಬೀಜದಿಂದ ಅಥವಾ ಕಸಿ ಗಿಡಗಳ ಮೂಲಕ ನೆಟ್ಟು ಫಲ ಪಡೆಯಲು 4 ರಿಂದ 6 ವರ್ಷಗಳು ಬೇಕಾಗುತ್ತವೆ. ನಮ್ಮ ನಾಡಿನ ಅಪರೂಪದ ಜೀವವೈವಿಧ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾಡು ಹಣ್ಣುಗಳನ್ನು ಪ್ರತಿಯೊಬ್ಬರೂ ತಮ್ಮ ಹಿತ್ತಲು ಹಾಗೂ ತೋಟಗಳಲ್ಲಿ ಬೆಳೆಸಿ ಪೋಷಿಸುವುದು ಇಂದಿನ ತುರ್ತು ಅಗತ್ಯ.


- ಕುಮಾರ್ ಪೆರ್ನಾಜೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top