ವಾರ್ಡ್ ನಂಬರ್ 5ರ ತಗಾರಿಗಲ್ಲಿಯಲ್ಲಿ ಕಬ್ಬಿಣದ ವಿದ್ಯುತ್ ಕಂಬ ಬೀಳುವ ಅಪಾಯ; ಹೆಸ್ಕಾಂ, ಪುರಸಭೆ ನಿದ್ರೆ
ಅಥಣಿ: ಅದು ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶ. ಪ್ರತಿನಿತ್ಯ ನೂರಾರು ಜನರು ಬಂದು ಹೋಗುವ ಕಾಯಿಪಲ್ಲೆ ಮಾರುಕಟ್ಟೆ. ಆದರೆ, ಅಲ್ಲಿ ದಿನನಿತ್ಯ ಸಾರ್ವಜನಿಕರು ಹಾಗೂ ಸಣ್ಣ ವ್ಯಾಪಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವ ಭಯದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ವಾರ್ಡ್ ನಂಬರ್ 5ರ ತಗಾರಿಗಲ್ಲಿಯ ಡಿಸಿಸಿ ಬ್ಯಾಂಕ್ ಹಾಗೂ ಓಂಕಾರ್ ಕಿರಾಣಿ ಜನರಲ್ ಸ್ಟೋರ್ ಎದುರಿಗಿರುವ ಕಾಯಿಪಲ್ಲೆ ಮಾರ್ಕೆಟ್‌ನ ‘24’ ನಂಬರ್‌ನ ಕಬ್ಬಿಣದ ವಿದ್ಯುತ್ ಕಂಬ ತಳಭಾಗದಲ್ಲಿ ಸಂಪೂರ್ಣವಾಗಿ ತುಂಡಾಗಿದೆ. ತುಕ್ಕು ಹಿಡಿದು ಮುರಿದುಬಿದ್ದಿರುವ ಈ ಕಂಬವನ್ನು ಕಂಡರೂ ಕಾಣದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಬದ ಕೆಳಗೇ ಕಾಯಿಪಲ್ಲೆ ವ್ಯಾಪಾರ!
ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ, ಈ ಅಪಾಯಕಾರಿ ಕಬ್ಬಿಣದ ಕಂಬದ ತಳಭಾಗವು ಪೂರ್ಣ ಪ್ರಮಾಣದಲ್ಲಿ ತುಂಡಾಗಿ ನಿಂತಿದೆ. ವಿಶೇಷವೆಂದರೆ, ಇದೇ ಮುರಿದ ಕಂಬದ ಕೆಳಗೆ ಬಡ ಕಾಯಿಪಲ್ಲೆ ವ್ಯಾಪಾರಿಗಳು ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ. ಸಣ್ಣ ಗಾಳಿ ಅಥವಾ ಧಕ್ಕೆ ತಗಲಿದರೂ ಈ ಕಂಬ ನೆಲಕ್ಕುರುಳುವ ಸಾಧ್ಯತೆಯಿದ್ದು, ಭಾರಿ ಜನಸಂದಣಿ ಇರುವ ಸ್ಥಳದಲ್ಲೇ ಈ ಕಂಟಕ ಎದುರಾಗಿದೆ.
"ಅನಾಹುತವಾದರೆ ಯಾರು ಹೊಣೆ?"– ಜನರ ಹಿಡಿಶಾಪ:
ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಹೆಸ್ಕಾಂ (HESCOM) ಮತ್ತು ಪುರಸಭೆ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ. "ಯಾವುದೇ ಮುನ್ಸೂಚನೆ ಇಲ್ಲದೆ ಕಂಬ ಬಿದ್ದು ಪ್ರಾಣಹಾನಿಯಾದರೆ ಅದಕ್ಕೆ ಯಾರು ಜವಾಬ್ದಾರರು? ಇಲಾಖೆಗೆ ಮುಂಜಾಗ್ರತಾ ಕ್ರಮ ವಹಿಸಲು ಏನು ಅಡ್ಡಿ?" ಎಂದು ಸಾರ್ವಜನಿಕರು ದೃಶ್ಯಾವಳಿಯಲ್ಲಿ ನೇರವಾಗಿ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
ಜನಪ್ರತಿನಿಧಿಗಳು, ಆಡಳಿತ ಎಚ್ಚೆತ್ತುಕೊಳ್ಳುವುದೇ?
ಇನ್ನಾದರೂ ಹೆಸ್ಕಾಂ ಅಧಿಕಾರಿಗಳು, ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಗಂಭೀರ ಸಮಸ್ಯೆಯನ್ನು ತಕ್ಷಣವೇ ಪರಿಶೀಲಿಸಬೇಕಾಗಿದೆ. ಈ ಬಲಿಪೀಠದಂತಿರುವ ಕಬ್ಬಿಣದ ಕಂಬವನ್ನು ತಕ್ಷಣ ತೆರವುಗೊಳಿಸಿ, ಹೊಸ ಸಿಮೆಂಟ್ ಕಂಬವನ್ನು ಅಳವಡಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡುತ್ತಾರೋ ಅಥವಾ ದುರಂತ ಸಂಭವಿಸುವವರೆಗೂ ಕಾಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಮಹೇಶ್ ಶರ್ಮಾ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


